ADVERTISEMENT

ಜಾತ್ಯಾತೀತ ಸರ್ಕಾರ ಆಯ್ಕೆ ಮಾಡಿ: ಕೆಪಿಆರ್‌ಎಸ್‌ ಅಧ್ಯಕ್ಷ ಬಯ್ಯಾರೆಡ್ಡಿ

​ಪ್ರಜಾವಾಣಿ ವಾರ್ತೆ
Published 3 ಏಪ್ರಿಲ್ 2019, 13:15 IST
Last Updated 3 ಏಪ್ರಿಲ್ 2019, 13:15 IST

ಕೋಲಾರ: ‘ಎಂ.ಎಸ್.ಸ್ವಾಮಿನಾಥನ್ ಆಯೋಗದ ವರದಿ ಅನ್ವಯ ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ ಖಾತರಿ ಕಾಯ್ದೆ ಮತ್ತು ರೈತಪರ ನೀತಿ ಜಾರಿಗೆ ಕೇಂದ್ರದಲ್ಲಿ ಜಾತ್ಯಾತೀತ ಸರ್ಕಾರವನ್ನು ಆಯ್ಕೆ ಮಾಡಬೇಕು’ ಎಂದು ಕರ್ನಾಟಕ ಪ್ರಾಂತ ರೈತ ಸಂಘ (ಕೆಪಿಆರ್‌ಎಸ್‌) ಅಧ್ಯಕ್ಷ ಜಿ.ಸಿ.ಬಯ್ಯಾರೆಡ್ಡಿ ಹೇಳಿದರು.

ಇಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ದೇಶವು ರಾಜಕೀಯ, ಸೈದ್ಧಾಂತಿಕ ಬಿಕ್ಕಟ್ಟು ಎದುರಿಸುತ್ತಿದೆ. ವ್ಯಕ್ತಿಗಿಂತ ತತ್ವ, ಸಿದ್ಧಾಂತ, ನೀತಿ ಆಧಾರದಲ್ಲಿ ಹಾಗೂ ಸಂವಿಧಾನದ ಘನತೆ ಎತ್ತಿ ಹಿಡಿಯುವ ದೃಷ್ಟಿಕೋನದಲ್ಲಿ ಚುನಾವಣೆ ನೋಡಬೇಕು ಎಂಬುದು ಸಂಘದ ಆಶಯ’ ಎಂದರು.

‘ಇಂದು ಸಂವಿಧಾನಕ್ಕೆ ಗಂಡಾಂತರ ಎದುರಾಗಿದೆ. ಸಂವಿಧಾನ ರಕ್ಷಿಸುವ ನಿಟ್ಟಿನಲ್ಲಿ ಚುನಾವಣೆಯಲ್ಲಿ ಮತದಾರರು ರಾಜಕೀಯವಾಗಿ ಪ್ರಬುದ್ಧ ತೀರ್ಮಾನ ತೆಗೆದುಕೊಳ್ಳಬೇಕು. ಕೃಷಿ ಉತ್ಪನ್ನಗಳಿಗೆ ಸೂಕ್ತ ಬೆಲೆ ಸಿಗದೆ ನಿತ್ಯವೂ ರೈತರ ಆತ್ಮಹತ್ಯೆಗಳಾಗುತ್ತಿವೆ. ರಾಜ್ಯದಲ್ಲಿ ಜೆಡಿಎಸ್– ಕಾಂಗ್ರೆಸ್ ಮೈತ್ರಿ ಸರ್ಕಾರ ಬಂದ ನಂತರ 2 ಸಾವಿರಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ’ ಎಂದು ಕಳವಳ ವ್ಯಕ್ತಪಡಿಸಿದರು.

ADVERTISEMENT

‘ಕೃಷಿ ಉತ್ಪನ್ನಗಳಿಗೆ ಸೂಕ್ತ ಮಾರುಕಟ್ಟೆ ಕಲ್ಪಿಸುವ ಕೆಲಸ ಆಗಿಲ್ಲ. ಸ್ವಾಮಿನಾಥನ್ ವರದಿಯನ್ವಯ ಬೆಂಬಲ ಬೆಲೆ ಖಾತರಿ ಮತ್ತು ಋಣ ಮುಕ್ತ ಕಾಯ್ದೆ ಬಗ್ಗೆ ಸಂಸತ್ತಿನಲ್ಲಿ ಚರ್ಚಿಸಲು ವಿಶೇಷ ಅಧಿವೇಶನ ಕರೆಯುವಂತೆ ಒತ್ತಾಯಿಸಿ ಲಕ್ಷಾಂತರ ರೈತರು ಸಂಸತ್ ಎದುರು ಪ್ರತಿಭಟನೆ ಮಾಡಿದರೂ ಕೇಂದ್ರ ಸರ್ಕಾರದ ಪ್ರತಿನಿಧಿಗಳು ರೈತ ಪ್ರತಿನಿಧಿಗಳನ್ನು ಕರೆದು ಮಾತನಾಡುವ ಸೌಜನ್ಯ ತೋರಲಿಲ್ಲ’ ಎಂದು ಟೀಕಿಸಿದರು.

ಇತಿಹಾಸವಿದೆ: ‘ಕೋಲಾರ ಜಿಲ್ಲೆಯಲ್ಲಿ ಎಡ ಚಳವಳಿ ಹಾಗೂ ದಲಿತ ಚಳವಳಿಗೆ ಇತಿಹಾಸವಿದೆ. ದಲಿತ ಚಳವಳಿಯ ಮುಂಚೂಣಿ ನಾಯಕರು ಬಿಜೆಪಿ ಪರ ಕೆಲಸ ಮಾಡುತ್ತಿದ್ದಾರೆ. ಆ ನಾಯಕರು ಸಂವಿಧಾನ ಗೌರವಿಸುವುದಾದರೆ ಮತ್ತು ರಕ್ಷಣೆಗೆ ಬದ್ಧರಾಗಿದ್ದರೆ ಬಿಜೆಪಿ ವಿರುದ್ಧ ಕೆಲಸ ಮಾಡಬೇಕು’ ಎಂದು ಮನವಿ ಮಾಡಿದರು.

‘ಜೆಡಿಎಸ್ ಶಾಸಕ ಕೆ.ಶ್ರೀನಿವಾಸಗೌಡ ತಮಗೆ ತೊಂದರೆ ಆಯಿತೆಂಬ ಕಾರಣಕ್ಕೆ ಸಂಸದ ಮುನಿಯಪ್ಪ ವಿರುದ್ದ ಆಕ್ರೋಶ ವ್ಯಕ್ತಪಡಿಸುತ್ತಿರುವುದು ಗಮನಕ್ಕೆ ಬಂದಿದೆ. ಶಾಸಕರಿಗೆ ರಾಜಕೀಯವಾಗಿ ಸಮಸ್ಯೆ ಇದ್ದರೆ ಅದನ್ನು ಮನೆಯಲ್ಲಿ ಕುಳಿತು ಬಗೆಹರಿಸಿಕೊಳ್ಳಲಿ. ಕ್ಷೇತ್ರವನ್ನು ಕೋಮುವಾದಿ ಶಕ್ತಿಗಳ ಕೈಗೆ ಒಪ್ಪಿಸಬಾರದು’ ಎಂದು ಸಲಹೆ ನೀಡಿದರು.

ನಿರ್ಧಾರ ಕೈಗೊಳ್ಳುತ್ತೇವೆ: ‘ಸಂಸದ ಮುನಿಯಪ್ಪರ ಇಷ್ಟು ವರ್ಷಗಳ ಸಾಧನೆ, ಕಾರ್ಯವೈಖರಿ ಬಗ್ಗೆ ಚರ್ಚಿಸುವುದಿಲ್ಲ. ಮನೆಗೆ ಬೆಂಕಿ ಬಿದ್ದಾಗ ನಂದಿಸಲು ಶುದ್ಧ ನೀರನ್ನೇ ಹುಡುಕಿಕೊಂಡು ಹೋಗಲಾಗದು. ಕೊಳಚೆ ನೀರಾದರೂ ಸರಿ, ಅದನ್ನೇ ಬಳಸಿ ಬೆಂಕಿ ನಂದಿಸಲು ಪ್ರಯತ್ನಿಸುವಂತೆ ಕ್ಷೇತ್ರದಲ್ಲಿ ಜಾತ್ಯಾತೀತ ಶಕ್ತಿಗಳನ್ನು ಬೆಂಬಲಿಸಬೇಕು. ಈ ಸಂಬಂಧ ಮೂರ್ನಾಲ್ಕು ದಿನದಲ್ಲಿ ಸಂಘಟನೆಯ ಸಭೆ ನಡೆಸಿ ನಿರ್ಧಾರ ಕೈಗೊಳ್ಳುತ್ತೇವೆ’ ಎಂದು ವಿವರಿಸಿದರು.

ಕೆಪಿಆರ್‌ಎಸ್‌ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಟಿ.ಎಂ.ವೆಂಕಟೇಶ್, ಉಪಾಧ್ಯಕ್ಷ ಪಿ.ಆರ್.ನವೀನ್‌ಕುಮಾರ್‌, ಸಹ ಕಾರ್ಯದರ್ಶಿ ವಿ.ನಾರಾಯಣರೆಡ್ಡಿ, ತಾಲ್ಲೂಕು ಘಟಕದ ಅಧ್ಯಕ್ಷ ಕೃಷ್ಣೇಗೌಡ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.