ADVERTISEMENT

ನೀರಿಲ್ಲದೆ ಅನಾಥವಾದ ಬುಕ್ಕಾಪಟ್ಟಣ; ಮತದಾನದಿಂದ ಹೊರಗುಳಿಯಲು ಜನರ ಚಿಂತನೆ

ಜನಪ್ರತಿನಿಧಿಗಳ ವಿರುದ್ಧ ಅಸಮಾಧಾನ

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2019, 10:48 IST
Last Updated 9 ಏಪ್ರಿಲ್ 2019, 10:48 IST
   

ತುಮಕೂರು: ‘ಶಿರಾ ತಾಲ್ಲೂಕಿನ ಬುಕ್ಕಾಪಟ್ಟಣ ಹೋಬಳಿಯಲ್ಲಿ 30 ಕಿ.ಮೀ ಉದ್ದದ ಭದ್ರಾ ಮೇಲ್ದಂಡೆ ಯೋಜನೆಯ ಕಾಲುವೆ ಹಾದುಹೋಗಿದೆ. ಆದರೆ ಹೋಬಳಿಯ ಯಾವುದೇ ಕೆರೆಗಳಿಗೆ ಭದ್ರಾ ನೀರು ಹರಿಸುವ ಪ್ರಸ್ತಾಪ ಇಲ್ಲಿಯವರೆಗೂ ಆಗಿಲ್ಲ. ಹೋಬಳಿಯ ಜನರಿಗೆ ಅನ್ಯಾಯವಾಗಿದೆ. ಆದ್ದರಿಂದ ಈ ಲೋಕಸಭಾ ಚುನಾವಣೆಯಲ್ಲಿ ನಾವು ಏಕೆ ಮತಚಲಾಯಿಸಬೇಕು ಎನ್ನುವ ಚಿಂತನೆ ಮಾಡುತ್ತಿದ್ದೇವೆ’ ಎಂದು ಸಾಮಾಜಿಕ ಹೋರಾಟಗಾರ ಆರ್.ವಿ.ಪುಟ್ಟಕಾಮಣ್ಣ ನುಡಿದರು.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಇಲ್ಲಿನ ರೈತರು ಕಂಗಾಲಾಗಿದ್ದಾರೆ. ಗುಳೆ ಹೋಗುತ್ತಿದ್ದಾರೆ. ಈ ಬಗ್ಗೆ ನಮ್ಮ ಜನಪ್ರತಿನಿಧಿಗಳಿಗೆ ಕಾಳಜಿ ಇದ್ದಂತಿಲ್ಲ’ ಎಂದು ದೂರಿದರು.

ಹಲವಾರು ವರ್ಷಗಳಿಂದ ಜಿಲ್ಲೆಯಲ್ಲಿ ಮಳೆ-ಬೆಳೆ ಇಲ್ಲದೆ ರೈತರು ಕಂಗಾಲಾಗಿದ್ದಾರೆ. ತೋಟಗಳು ಒಣಗುತ್ತಿವೆ. ಕೆರೆ-ಕಟ್ಟೆಗಳು ಬತ್ತಿವೆ. ಜನ-ಜಾನುವಾರುಗಳಿಗೆ ಕುಡಿಯುವ ನೀರಿಗೆ ತೊಂದರೆ ಆಗಿದೆ. ಇಲ್ಲಿ ಶಾಶ್ವತ ನೀರಾವರಿ ಯೋಜನೆಗಳಿಲ್ಲ’ ಎಂದರು.

ADVERTISEMENT

30 ವರ್ಷ ಕಳೆದರೂ ಭದ್ರಾ ಮೇಲ್ದಂಡೆ ಯೋಜನೆ ಕಾರ್ಯ ಪೂರ್ಣಗೊಂಡಿಲ್ಲ. ನಿಜಲಿಂಗಪ್ಪ ಅವರ ಕನಸು ಕನಸಾಗಿಯೇ ಉಳಿದಿದೆ. ಮತ್ತೊಂದು ಕಡೆ ಹೇಮಾವತಿ ಜಲಾಶಯದಿಂದ ನಿಗದಿಯಾದ 25 ಟಿಎಂಸಿ ಅಡಿ ನೀರನ್ನು ಜಿಲ್ಲೆಯ ಕೆರೆಗಳಿಗೆ ಹರಿಸಲು ನಮ್ಮ ಜನಪ್ರತಿನಿಧಿಗಳಿಗೆ ಸಾಧ್ಯವಾಗಿಲ್ಲ. ಕಪಿಲೆ ನೀರು ಹೋಗುವಂತಹ ಕಾಲುವೆ ಮಾಡಿ 25 ಟಿಎಂಸಿ ಅಡಿ ನೀರು ಪಡೆದುಕೊಳ್ಳಲು ಹೇಗೆ ಸಾಧ್ಯ. ಇತ್ತೀಚೆಗೆ ಹೇಮಾವತಿ ಕಾಲುವೆ ಅಲ್ಪಸ್ವಲ್ಪ ವಿಸ್ತರಣೆ ಆಗಿದೆ. ಅದೂ ಇನ್ನೂ ಪೂರ್ಣಗೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಯೋಜನೆಗಳನ್ನು ಸಕಾಲಕ್ಕೆ ಪೂರ್ಣಗೊಳಿಸಬೇಕು ಎಂಬ ಜವಾಬ್ದಾರಿ ಸರ್ಕಾರಕ್ಕಾಗಲೀ, ಜನಪ್ರತಿನಿಧಿಗಳಿಗಾಗಲೀ ಇಲ್ಲ. ಆದ್ದರಿಂದ ಪ್ರಸ್ತುತ ಲೋಕಸಭಾ ಚುನಾವಣೆಯಲ್ಲಿ ಮತ ಚಲಾಯಿಸಬೇಕೆ ಎನ್ನುವ ಬಗ್ಗೆ ಹೋಬಳಿಯ ಪ್ರಮುಖರು ಮತದಾರರೊಂದಿಗೆ ಮಾತನಾಡುವರು. ನಂತರ ನಮ್ಮ ಮುಂದಿನ ಕಾರ್ಯಯೋಜನೆ ರೂಪಿಸುತ್ತೇವೆ’ ಎಂದು ನುಡಿದರು.

ಜಿಲ್ಲಾ ಶಾಶ್ವತ ನೀರಾವರಿ ಹೋರಾಟ ಸಮಿತಿ ಕಾರ್ಯದರ್ಶಿಗಳಾದ ಬಿ.ಆರ್.ರಘುರಾವ್, ಶಿರಾ ಅಭಿವೃದ್ಧಿ ವೇದಿಕೆ ಗೌರವಾಧ್ಯಕ್ಷ ವೈ.ಜಿ.ಕಾಂತವೀರಯ್ಯ, ಅಧ್ಯಕ್ಷ ವೈ.ಸಿ.ಶಾಂತರಾಜಯ್ಯ, ಸದಸ್ಯರಾದ ಕೆ.ಲಿಂಗಪ್ಪ, ಜಿಲ್ಲಾ ರೈಲ್ವೆ ಹೋರಾಟ ಕ್ರಿಯಾ ಸಮಿತಿ ಕಾರ್ಯದರ್ಶಿ ಎಂ.ಆರ್.ರಂಗನಾಥ್, ಶಿರಾ ತಾಲ್ಲೂಕು ರೈತ ಸಂಘದ ಅಧ್ಯಕ್ಷ ಬಿ.ಕೆ.ಲಕ್ಷ್ಮಣಗೌಡ ಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.