ADVERTISEMENT

23 ಕ್ಷೇತ್ರದಲ್ಲಿ ಬಿಜೆಪಿಗೆ ಬೆಂಬಲ: ಆರ್‌ಪಿಐ ರಾಜ್ಯ ಘಟಕದ ಅಧ್ಯಕ್ಷ ವೆಂಕಟಸ್ವಾಮಿ

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2019, 12:17 IST
Last Updated 5 ಏಪ್ರಿಲ್ 2019, 12:17 IST

ಕೋಲಾರ: ‘ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಕೆ.ಎಚ್‌.ಮುನಿಯಪ್ಪ ಅವರನ್ನು ಸೋಲಿಸುವುದೇ ನಮ್ಮ ಗುರಿ. ಇದು ತಮ್ಮ ಕೊನೆಯ ಚುನಾವಣೆ ಎಂದು ಮುನಿಯಪ್ಪರೇ ಹೇಳಿರುವಂತೆ ಅವರ ರಾಜಕೀಯ ಬದುಕು ಅಂತ್ಯಗೊಳಿಸುತ್ತೇವೆ’ ಎಂದು ರಿಪಬ್ಲಿಕನ್‌ ಪಾರ್ಟಿ ಆಫ್‌ ಇಂಡಿಯಾ (ಆರ್‌ಪಿಐ) ರಾಜ್ಯ ಘಟಕದ ಅಧ್ಯಕ್ಷ ಎಂ.ವೆಂಕಟಸ್ವಾಮಿ ಹೇಳಿದರು.

ಇಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಪಕ್ಷದ 14 ಅಂಶಗಳ ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಿ ಮಾತನಾಡಿ, ‘ಕೋಲಾರ, ಬೆಂಗಳೂರು ಗ್ರಾಮಾಂತರ, ಬೆಳಗಾವಿ, ಚಿಕ್ಕೋಡಿ ಮತ್ತು ಬಾಗಲಕೋಟೆ ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗಿದೆ. ಉಳಿದ 23 ಕ್ಷೇತ್ರಗಳಲ್ಲಿ ಬಿಜೆಪಿಗೆ ಬೆಂಬಲ ನೀಡುತ್ತೇವೆ’ ಎಂದರು.

‘ಮುನಿಯಪ್ಪ ಕ್ಷೇತ್ರದಲ್ಲಿ ಯಾವುದೇ ಅಭಿವೃದ್ಧಿ ಕೆಲಸ ಮಾಡಿಲ್ಲ. ಈ ಬಾರಿ ಮತ್ತೆ ಅವರನ್ನು ಆಯ್ಕೆ ಮಾಡಿದರೆ ಕ್ಷೇತ್ರವು ಅಭಿವೃದ್ಧಿಯಲ್ಲಿ ಮತ್ತಷ್ಟು ಹಿಂದುಳಿಯುತ್ತದೆ. ರಾಮನಗರ ಕ್ಷೇತ್ರದ ಅಭಿವೃದ್ಧಿಯಲ್ಲಿ ಕಾಲು ಭಾಗದಷ್ಟು ಅಭಿವೃದ್ಧಿ ಕೋಲಾರದಲ್ಲಿ ಆಗಿಲ್ಲ’ ಎಂದು ಕಿಡಿಕಾರಿದರು.

ADVERTISEMENT

‘ಭ್ರಷ್ಟ ಅಧಿಕಾರಿಗಳನ್ನು ಜೈಲಿಗೆ ಕಳುಹಿಸುವುದರಲ್ಲಿ ನಿಪುಣರಾಗಿರುವ ಮತ್ತು ಪ್ರಚಾರವಿಲ್ಲದೆ ಜನ ಸೇವೆಗೆ ಮುಂದಾಗಿರುವು ವೆಂಕಟೇಶಪ್ಪ ಅವರನ್ನು ಕೋಲಾರ ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿಸಿದ್ದೇವೆ. ಮತದಾರರು ಪಕ್ಷವನ್ನು ಬೆಂಬಲಿಸುತ್ತಾರೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ದೊಡ್ಡ ದುರಂತ: ‘ಕೋಮುವಾದ, ಜಾತಿವಾದ ಜನರನ್ನು ಕಾಡುತ್ತಿದೆ. ಕೋಮುವಾದಕ್ಕಿಂತಲೂ ಜಾತಿವಾದ ಹೆಚ್ಚು ಅಪಾಯಕಾರಿ. ಜೆಡಿಎಸ್ ಹೆಸರಿಗೆ ಮಾತ್ರ ಜಾತ್ಯತೀತ ಪಕ್ಷ. ಆದರೆ, ಆ ಪಕ್ಷದಲ್ಲಿ ಜಾತೀಯತೆ ತುಂಬಿ ತುಳುಕುತ್ತಿದೆ. ರಾಜ್ಯದಲ್ಲಿ ಮೈತ್ರಿ ಸರ್ಕಾರ ರಚಿಸಿರುವುದಕ್ಕಿಂತ ದೊಡ್ಡ ದುರಂತ ಮತ್ತೊಂದಿಲ್ಲ’ ಎಂದು ಲೇವಡಿ ಮಾಡಿದರು.

‘ಕುಟುಂಬ ರಾಜಕಾರಣ ಮಿತಿ ಮೀರಿದ್ದು, ಈ ಬಾರಿ ದೇವೇಗೌಡರು ಮತ್ತು ಅವರ ಮೊಮ್ಮಕ್ಕಳು ಗೆದ್ದರೆ ಪ್ರಜಾಪ್ರಭುತ್ವದ ಕಗ್ಗೊಲೆಯಾದಂತೆ. ಹೀಗಾಗಿ ಆ ಮೂರೂ ಮಂದಿ ಸೋಲಬೇಕು. ಕಾಂಗ್ರೆಸ್‌ ಪಕ್ಷದಲ್ಲಿ ಬಂಡಾಯ ಜೋರಾಗಿದ್ದು, ರಾಹುಲ್ ಗಾಂಧಿ ಪ್ರಧಾನಿ ಅಭ್ಯರ್ಥಿಯೇ ಅಲ್ಲ’ ಎಂದು ಕುಟುಕಿದರು.

‘ಸಂವಿಧಾನ ಬದಲಾವಣೆ ವಿಚಾರವಾಗಿ ಮಾತನಾಡಿದವರೇ ಕ್ಷಮೆ ಕೇಳಿದ್ದಾರೆ. ಪ್ರಧಾನಿ ಮೋದಿ ಎಲ್ಲಾ ವರ್ಗಗಳನ್ನು ಸಮನಾಗಿ ಕಂಡು ಅಭಿವೃದ್ಧಿಗೆ ಶ್ರಮಿಸುತ್ತಿರುವ ಹಿನ್ನೆಲೆಯಲ್ಲಿ ಬಿಜೆಪಿಗೆ ಬೆಂಬಲ ನೀಡುತ್ತಿದ್ದೇವೆ’ ಎಂದು ಸ್ಪಷ್ಟಪಡಿಸಿದರು.

ಪಕ್ಷದ ಅಭ್ಯರ್ಥಿ ವೆಂಕಟೇಶಪ್ಪ, ಪದಾಧಿಕಾರಿಗಳಾದ ಜಿ.ಎಸ್.ವೆಂಕಟರಾಜು, ಬಾಬು, ವೆಂಕಟರಣಪ್ಪ, ಸರಸ್ವತಮ್ಮ, ಶಶಿಕಲಾ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.