ADVERTISEMENT

ತಮ್ಮನ ಪರ ಸೂರಜ್‌ ಮತಬೇಟೆ

ಬಾಯಿ ಚಪಲಕ್ಕೆ ಮಾತನಾಡುವವರಿಗೆ ಉತ್ತರಿಸುವ ಅಗತ್ಯವಿಲ್ಲ

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2019, 13:42 IST
Last Updated 8 ಏಪ್ರಿಲ್ 2019, 13:42 IST

ಹಾಸನ: ಮೈತ್ರಿ ಕೂಟದ ಅಭ್ಯರ್ಥಿ ಪ್ರಜ್ವಲ್‌ ರೇವಣ್ಣ ಪರವಾಗಿ ಅಣ್ಣ ಡಾ.ಸೂರಜ್ ರೇವಣ್ಣ ಅವರು ಶಾಂತಿಗ್ರಾಮ ಹೋಬಳಿಯ ವಿವಿಧ ಹಳ್ಳಿಗಳಲ್ಲಿ ಸಂಚರಿಸಿ, ಮತಯಾಚಿಸಿದರು.

ಶಾಂತಿ ಗ್ರಾಮದ ಸೌಮ್ಯಕೇಶವ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಪಾದಯಾತ್ರೆ ನಡೆಸಿ, ಮೈತ್ರಿ ಅಭ್ಯರ್ಥಿ ಬೆಂಬಲಿಸುವಂತೆ ಮನವಿ ಮಾಡಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಸೂರಜ್, ‘ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್‌ಗೆ ಪೂರಕ ವಾತಾವರಣ ಇದೆ. ಅಧಿಕಾರ ಇದ್ದಾಗ ಸಂಸದ ಎಚ್.ಡಿ.ದೇವೇಗೌಡರು, ತಂದೆ ರೇವಣ್ಣ ಅವರು, ಮಾಡಿರುವ ಹಲವು ಅಭಿವೃದ್ಧಿ ಕಾರ್ಯ ನೋಡಿ ಜನರು ಕೈ ಹಿಡಿಯಲಿದ್ದಾರೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ADVERTISEMENT

‘ಕಡೂರು ಸೇರಿದಂತೆ ಎಲ್ಲೆಡೆ ಪೂರಕವಾದ ವಾತಾವರಣವಿದೆ. ಅಧಿಕ ಮತಗಳ ಅಂತರದಿಂದ ಪ್ರಜ್ವಲ್‌ ಜಯಗಳಿಸುವರು. ಹಿರಿಯರು ನನಗೆ ಹೊಳೆನರಸೀಪುರ ಮತ್ತು ಹಾಸನ ನಗರದ ಜವಾಬ್ದಾರಿ ವಹಿಸಿದ್ದಾರೆ. ಈಗಾಗಲೇ ಎಲ್ಲಾ ಕಡೆ ಸುತ್ತಾಡಿ, ಒಂಬತ್ತು ತಿಂಗಳ ಅವಧಿಯಲ್ಲಿ ಜಿಲ್ಲೆಯಲ್ಲಿ ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳ ಬಗ್ಗೆ ಮತದಾರರಿಗೆ ಮನವರಿಕೆ ಮಾಡಲಾಗುತ್ತಿದೆ’ ಎಂದು ವಿವರಿಸಿದರು.

ಇದೇ ವೇಳೆ ತಮ್ಮ ಕುಟುಂಬ ಸದಸ್ಯರ ವಿರುದ್ಧ ಟೀಕೆ ಮಾಡುತ್ತಿರುವವರಿಗೆ ತಿರುಗೇಟು ನೀಡಿದ ಸೂರಜ್, ‘ಕೆಲವರು ಅವರವರ ಬಾಯಿ ಚಪಲಕ್ಕೆ ಮಾತನಾಡುತ್ತಾರೆ. ಅದಕ್ಕೆ ಉತ್ತರ ಕೊಡುವ ಅಗತ್ಯವಿಲ್ಲ. ಯಾರು ಏನು ಬೇಕಾದರೂ ಮಾತನಾಡಲಿ, ಅದಕ್ಕೆ ಕಿವಿಗೊಡದೆ ಅಭಿವೃದ್ಧಿ ಮುಂದಿಟ್ಟು ಜನರ ಬಳಿ ಹೋಗುತ್ತಿದ್ದೇವೆ’ ಎಂದು ಸ್ಪಷ್ಟಪಡಿಸಿದರು.

ನಂತರ ಶಾಂತಿಗ್ರಾಮ, ಮಡೆನೂರು, ಜಾಗರವಳ್ಳಿ ಪಂಚಾಯಿತಿಯ ಸುಮಾರು 30ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಬಿರುಸಿನ ಪ್ರಚಾರ ನಡೆಸಿದ ಅವರು, ಜಿಲ್ಲೆ ಮತ್ತಷ್ಟು ಅಭಿವೃದ್ಧಿ ಕಾಣಬೇಕಾದರೆ ತಾತ ದೇವೇಗೌಡರಿಗೆ ನೀಡಿದಂತೆ ಪ್ರಜ್ವಲ್‌ಗೂ ಬೆಂಬಲ ನೀಡಿ ಎಂದು ಮನವಿ ಮಾಡಿದರು.

ಅಮ್ಮನಗುಡಿ ಕೊಪ್ಪಲು, ಕೆರೆ ಮುಂದಲ ಕೊಪ್ಪಲು, ರಂಗನಾಥಪುರ, ಮಡೆನೂರು, ಸಣ್ಣ ಚಾಕನಹಳ್ಳಿ, ದೊಡ್ಡ ಚಾಕನಹಳ್ಳಿಯಲ್ಲಿ ಸೂರಜ್ ಮತಯಾಚನೆ ಮಾಡಿದರು.

ಮುಖಂಡರಾದ ಪಟೇಲ್ ಶಿವರಾಂ, ಹುಡಾ ಅಧ್ಯಕ್ಷ ಕೆ.ಎಂ.ರಾಜೇಗೌಡ, ಜಿಲ್ಲಾ ಪಂಚಾಯಿತಿ ಸದಸ್ಯ ಹನುಮೇಗೌಡ, ವಕ್ತಾರ ಹೊಂಗೆರೆ ರಘು , ತಾಲ್ಲೂಕು ಘಟಕದ ಅಧ್ಯಕ್ಷ ಎಸ್.ದ್ಯಾವೇಗೌಡ, ತಾಲ್ಲೂಕು ಪಂಚಾಯಿತಿ ಸದಸ್ಯ ಸುರೇಂದ್ರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.