ADVERTISEMENT

ಉದ್ಯಮಿಗಳ ಆರ್ಥಿಕ ಮಟ್ಟ ದುಪ್ಪಟ್ಟು: ಕೇಂದ್ರದ ವಿರುದ್ಧ ರೆಹಮಾನ್ ಖಾನ್ ಆರೋಪ

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2019, 14:45 IST
Last Updated 9 ಏಪ್ರಿಲ್ 2019, 14:45 IST
ರೆಹಮಾನ್‌ ಖಾನ್‌
ರೆಹಮಾನ್‌ ಖಾನ್‌   

ಹಾಸನ: ನರೇಂದ್ರ ಮೋದಿ ಪ್ರಧಾನಿಯಾದ ನಂತರ ಉದ್ಯಮಿಗಳ ಆರ್ಥಿಕ ಮಟ್ಟ ದುಪ್ಪಟ್ಟಾಗಿದ್ದು, ಬ್ಯಾಂಕಿಂಗ್ ವ್ಯವಸ್ಥೆ ಸಂಪೂರ್ಣ ಹಾಳಾಗಿದೆ ಎಂದು ಕಾಂಗ್ರೆಸ್‌ ಹಿರಿಯ ಮುಖಂಡ ಕೆ. ರೆಹಮಾನ್ ಖಾನ್ ಆರೋಪಿಸಿದರು.

ಕೇಂದ್ರ ಸರ್ಕಾರ ಬಂಡವಾಳಶಾಹಿಗಳಿಗೆ ಹಣ ಸಂದಾಯ ಮಾಡುತ್ತಿದೆ. ಉದ್ಯಮಿಗಳ ಮನೆ, ಕಚೇರಿ ಮೇಲೆ ಆದಾಯ ತೆರಿಗೆ ಇಲಾಖೆ ಹಾಗೂ ಜಾರಿ ನಿರ್ದೇಶನಾಲಯದ ದಾಳಿಯೂ ನಡೆಯುತ್ತಿಲ್ಲ. ಬಿಜೆಪಿಗೆ ಸಹಾಯ ಮಾಡುವ ಕಂಪನಿಗಳ ಮಾಲೀಕರನ್ನು ಬೆಳೆಸಲಾಗುತ್ತಿದೆ. ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ ದೇಶ ಅಭಿವೃದ್ಧಿ ಪಥದಲ್ಲಿ ಸಾಗುತ್ತಿತ್ತು. ಅಮೆರಿಕಾ ಅಧ್ಯಕ್ಷ ಬರಾಕ್ ಒಬಾಮ ಆರ್ಥಿಕ ಸಲಹೆ ಪಡೆದಿರುವ ಉದಾಹರಣೆ ಇದೆ. ಪ್ರಸ್ತುತ ಬ್ಯಾಂಕಿಂಗ್ ವ್ಯವಸ್ಥೆ ಸಂಪೂರ್ಣ ಹಾಳಾಗಿದೆ’ ಎಂದು ಸುದ್ದಿಗೋಷ್ಠಿಯಲ್ಲಿ ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದರು.

ದೇಶದ ಹಿತದೃಷ್ಟಿಯಿಂದ ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ಜನರು ಮೋದಿ ಸರ್ಕಾರವನ್ನು ವಿಶ್ಲೇಷಣೆ ಮಾಡಬೇಕಿದೆ. ಅಧಿಕಾರಕ್ಕೆ ಬರುವ ಮುನ್ನ ನೀಡಿದ ಆಶ್ವಾಸನೆಗಳೂ ಈಡೇರಿಲ್ಲ. ಈ ಚುನಾವಣೋತ್ತರ ಪ್ರಣಾಳಿಕೆಯಲ್ಲಿ ನೀಡಿದ ಹಳೆಯ ಆಶ್ವಾಸನೆಗಳನ್ನೇ ಈ ಬಾರಿಯೂ ಮುಂದುವರೆಸಿದ್ದಾರೆ. ಮೊದಲು ದೇಶದ ಐಕ್ಯತೆ ಮುಖ್ಯ. ಇಂದು ಕಾಶ್ಮೀರದಲ್ಲಿ ಏನಾಗುತ್ತಿದೆ ಎಂದು ಪ್ರಶ್ನಿಸಿದರು.

ADVERTISEMENT

ದೇಶದಲ್ಲಿ ಆತಂಕ ಮತ್ತು ಅಭದ್ರತೆ ಕಾಡುವಂತೆ ಮಾಡುವುದು ಎನ್‌ಡಿಎ ಸರ್ಕಾರದ ಉದ್ದೇಶ. ಸ್ವಾಭಾವಿಕವಾಗಿ ಭಯದ ವಾತಾವರಣ ಸಷ್ಟಿಸುತ್ತಿದ್ದಾರೆ. ಇದು ದೇಶಕ್ಕೆ ಒಳ್ಳೆಯದಲ್ಲ. ಕಾಂಗ್ರೆಸ್ 70 ವರ್ಷಗಳಿಂದ ಏನೂ ಮಾಡಿಲ್ಲ ಎಂದು ಟೀಕೆ ಮಾಡಲಾಗುತ್ತಿದೆ. ಬಡವರಿಗೆ ಸಹಾಯ ಮಾಡುವ ಪ್ರಣಾಳಿಕೆ ರೂಪಿಸಲಾಗಿದೆ ಎಂದು ತಿಳಿಸಿದರು.

ಭಾರತದ ಯಾವುದೇ ಪ್ರಧಾನಿಗೂ ಪ್ರಪಂಚದಲ್ಲಿ ಗೌರವ ಸಿಗುತ್ತದೆ. ನಾನು ಎರಡು ದಶಕ ರಾಜ್ಯಸಭೆ ಸದಸ್ಯನಾಗಿದ್ದ ಅವಧಿಯಲ್ಲಿ ಇಂತಹ ಪ್ರಧಾನಿಯನ್ನು ನೋಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಮೋದಿ ಯಾರಿಗೂ ಮಾತನಾಡಲು ಅವಕಾಶ ಕೊಡುವುದಿಲ್ಲ. ರಾಜ್ಯಸಭೆ ಮತ್ತು ಲೋಕಸಭೆಯಲ್ಲಿ ಯಾವುದೇ ಪ್ರಶ್ನೆಗೆ ಸರಿಯಾದ ಉತ್ತರ ನೀಡಿಲ್ಲ. ದೇಶದ ಪ್ರಧಾನಿಯನ್ನು ಯಾರೂ ಪ್ರಶ್ನಿಸಬಾರದೆ? ಭಾಷಣ ಮಾಡುವುದರಲ್ಲಿ ಮೋದಿ ಅವರನ್ನ ಮೀರಿಸುವವರು ಯಾರೂ ಇಲ್ಲ. ಒಂದು ವೇಳೆ ಅವರು ವಕೀಲರಾಗಿದ್ದರೆ ಹೈ ಕೋರ್ಟ್ ಹಾಗೂ ಸುಪ್ರೀಂ ಕೋರ್ಟ್‌ ಪ್ರಕರಣಗಳನ್ನು ನಿರಾಯಾಸವಾಗಿ ಗೆಲ್ಲುತ್ತಿದ್ದರು’ ಎಂದು ವ್ಯಂಗ್ಯವಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.