ADVERTISEMENT

ಚುನಾವಣೆ ಸಂದರ್ಭದಲ್ಲಿ ಮಾತ್ರಬರುವವನು ರಾಜಕಾರಣಿ; ಉಪೇಂದ್ರ

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2019, 14:59 IST
Last Updated 13 ಏಪ್ರಿಲ್ 2019, 14:59 IST
ಉಪೇಂದ್ರ
ಉಪೇಂದ್ರ   

ಕಲಬುರ್ಗಿ: ‘ಚುನಾವಣೆ ಸಂದರ್ಭದಲ್ಲಿ ಮಾತ್ರ ಬರುವವನು ರಾಜಕಾರಣಿ. ಗೆದ್ದ ನಂತರ ಪ್ರಜೆಗಳ ಸಂಪರ್ಕದಲ್ಲಿ ನಿರಂತರವಾಗಿ ಇರುವವನು ಪ್ರಜಾಕಾರಣಿ’ ಎಂದು ಉತ್ತಮ ಪ್ರಜಾಕೀಯ ಪಕ್ಷ (ಯುಪಿಪಿ)ದ ರಾಜ್ಯ ಘಟಕದ ಅಧ್ಯಕ್ಷ, ಚಲನಚಿತ್ರ ನಟ ಉಪೇಂದ್ರ ಮನವಿ ಮಾಡಿದರು.

ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಬಳ್ಳಾರಿ ಹೊರತುಪಡಿಸಿ ರಾಜ್ಯದ 27 ಕ್ಷೇತ್ರಗಳಲ್ಲಿ ಪ್ರಜಾಕೀಯ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲಾಗಿದೆ. ತೋಳ್ಬಲ, ಹಣಬಲ, ಜಾತಿಬಲವಿಲ್ಲದೆ ರಾಜಕೀಯ ಪ್ರವೇಶ ಸಾಧ್ಯವೇ ಇಲ್ಲ ಎನ್ನುವಷ್ಟರ ಮಟ್ಟಿಗೆ ವ್ಯವಸ್ಥೆ ಕೆಟ್ಟು ಹೋಗಿದೆ. ಹೀಗಾಗಿ ಯುವಕರು ಚುನಾವಣೆಯಲ್ಲಿ ಸ್ಪರ್ಧಿಸಲು ಮುಂದೆ ಬರುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

‘ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನಿಸಿ, ಲಿಖಿತ ಪರೀಕ್ಷೆ ಮತ್ತು ಸಂದರ್ಶನಗಳ ಮೂಲಕ ಪಕ್ಷದ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದೆ. ರಾಜಕಾರಣದಲ್ಲಿ ವೃತ್ತಿಪರತೆ ತರಲು ಪಕ್ಷವನ್ನು ಸ್ಥಾಪಿಸಿದ್ದೇನೆ. ಪಕ್ಷದ ಅಭ್ಯರ್ಥಿಗಳಿಗೆ ಸಮವಸ್ತ್ರವನ್ನು ಕಡ್ಡಾಯಗೊಳಿಸಲಾಗಿದೆ. ಅವರು ಗೆದ್ದ ಬಳಿಕ ಸಂಸದರಾಗುವುದಿಲ್ಲ, ಮತ ಹಾಕಿದವರ ಕೆಲಸಗಾರರಾಗುತ್ತಾರೆ. ಜನರ ಸಮಸ್ಯೆಗಳಿಗೆ ಸ್ಪಂದಿಸದಿದ್ದರೆ ಅವರನ್ನು ಪಕ್ಷದಿಂದ ಹೊರಹಾಕಲಾಗುವುದು’ ಎಂದು ತಿಳಿಸಿದರು.

ADVERTISEMENT

‘ದೇಶದ ಶೇ 80ರಷ್ಟು ಜನರು ದುರ್ಬಲರಾಗಿದ್ದಾರೆ. ಶೇ 20ರಷ್ಟು ಜನರು ಮಾತ್ರ ಪ್ರಬಲರಾಗಿದ್ದಾರೆ. ಹೀಗಾಗಿ ದುರ್ಬಲರು ಪ್ರಬಲರ ಸುತ್ತ ಗಿರಕಿಹೊಡೆಯಬೇಕಾಗಿದೆ. ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಏನೆಲ್ಲ ಬದಲಾವಣೆಗಳಾಗಿವೆ. ಆದರೆ, ರಾಜಕೀಯದಲ್ಲಿ ಮಾತ್ರ ಏನೂ ಬದಲಾಗಿಲ್ಲ’ ಎಂದರು.

‘ಪ್ರತಿಪಕ್ಷಗಳ ಬಗ್ಗೆ ಏನು ಹೇಳುತ್ತೀರಿ’ ಎಂಬ ಪ್ರಶ್ನೆಗೆ, ‘ಪ್ರತಿಪಕ್ಷಗಳ ಬಗ್ಗೆ ಯೋಚನೆ ಮಾಡಿದರೆ ಅದು ರಾಜಕೀಯ. ಪ್ರಜೆಗಳ ಬಗ್ಗೆ ಯೋಚನೆ ಮಾಡಿದರೆ ಅದು ಪ್ರಜಾಕೀಯ. ನಮ್ಮದು ರಾಜಕೀಯ ಪಕ್ಷವಲ್ಲ; ಪ್ರಜಾಕೀಯ ಪಕ್ಷ’ ಎಂದು ಉತ್ತರಿಸಿದರು.

‘ಗುಲಬರ್ಗಾ’ ಲೋಕಸಭಾ ಕ್ಷೇತ್ರದ ಪಕ್ಷದ ಅಭ್ಯರ್ಥಿ ಮಹೇಶ ಲಂಬಾಣಿ ಮಾತನಾಡಿ, ‘ನಾನು ರೈತನ ಮಗ. ಎಂ.ಎ ಓದಿದ್ದು, ಪಿಎಚ್.ಡಿ ಮಾಡುತ್ತಿದ್ದೇನೆ. ನನಗೆ ಟಿಕೆಟ್ ಸಿಕ್ಕಿರುವುದು ನನ್ನ ಸೌಭಾಗ್ಯ. ಗೆಲುವು–ಸೋಲು  ಏನೇ ಇರಲಿ ಈ ಭಾಗದ ಜನರ ಜತೆ ನಿರಂತರವಾಗಿ ಸಂಪರ್ಕ ಇಟ್ಟುಕೊಂಡು ಅವರ ಸೇವೆ ಮಾಡುತ್ತೇನೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.