ADVERTISEMENT

ಪುತ್ರನ ಸೋಲಿನ ಭೀತಿಯಿಂದ ಸಿಎಂ ಹುಚ್ಚರಂತೆ ಹೇಳಿಕೆ ನೀಡುತ್ತಿದ್ದಾರೆ: ಯಡಿಯೂರಪ್ಪ

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2019, 14:01 IST
Last Updated 12 ಏಪ್ರಿಲ್ 2019, 14:01 IST
ಗಜೇಂದ್ರಡದಲ್ಲಿ ಶುಕ್ರವಾರ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಮಾತನಾಡಿದರು
ಗಜೇಂದ್ರಡದಲ್ಲಿ ಶುಕ್ರವಾರ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಮಾತನಾಡಿದರು   

ಗಜೇಂದ್ರಗಡ: ‘ಮಂಡ್ಯದಲ್ಲಿ ಸುಮಲತಾ ವಿರುದ್ಧ ಪುತ್ರ ನಿಖಿಲ್‌ ಸೋಲುವ ಸೂಚನೆ ಸಿಕ್ಕಿರುವುದರಿಂದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಹುಚ್ಚರಂತೆ ಹೇಳಿಕೆ ನೀಡುತ್ತಿದ್ದಾರೆ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿದರು.

ಇಲ್ಲಿ ಹಾವೇರಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶಿವಕುಮಾರ ಉದಾಸಿ ಅವರ ಪರವಾಗಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.

‘ಕುಮಾರ ಸ್ವಾಮಿ ಅವರು ರಾಹುಲ್ ಗಾಂಧಿ ಕೃಪೆಯಿಂದ ಸಿಎಂ ಆಗಿದ್ದೀನಿ ಎನ್ನುತ್ತಾರೆ, ಇದರಿಂದಲೇ ಸ್ಪಷ್ಟವಾಗುತ್ತದೆ ಅವರಿಗೆ ರಾಜ್ಯದ ಜನತೆಯ ಮೇಲೆ ವಿಶ್ವಾಸ ಇಲ್ಲವೆಂದು. ಮುಂದೆ ಜನರು ಇವರನ್ನು ಮನೆಗೆ ಕಳುಹಿಸಲು ತಿರ್ಮಾನಿಸಿದ್ದಾರೆ’ ಎಂದರು.

ADVERTISEMENT

‘ಇಡೀ ದೇಶದಲ್ಲಿ ಬಿಜೆಪಿ ಪರ ಅಲೆಯಿದೆ. ರಾಜ್ಯದಲ್ಲಿ ಬಿಜೆಪಿ 22 ಸೀಟುಗಳನ್ನು ಗೆಲ್ಲುವುದು ನಿಶ್ಚಿತ. ಶಿವಕುಮಾರ ಉದಾಸಿ ಅವರು ಸಂಸದರಾಗಿ ಮಾಡಿರುವ ಕೆಲಸಗಳಿಂದ ಅವರ ಗೆಲುವು ಖಚಿತವಾಗಿದ್ದು, ಎಷ್ಟು ಲಕ್ಷ ಅಂತರದಿಂದ ಗೆಲ್ಲುತ್ತಾರೆ ಎಂಬುದನ್ನು ಮಾತ್ರ ನಾವು ನೋಡಬೇಕಿದೆ’ ಎಂದರು.

‘ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ ಬಂದರೆ ಮಹಿಳೆಯರಿಗೆ ವಿಧಾನಸಭೆ ಹಾಗೂ ಲೋಕಸಭೆಯಲ್ಲಿ ಶೇ 33 ಮಿಸಲಾತಿ ನೀಡಲಾಗುವುದು. ಸಣ್ಣ ರೈತರಿಗೆ ನೀಡಲಾಗುವ ₹ 6 ಸಾವಿರವನ್ನು ಎಲ್ಲ ವರ್ಗದ ರೈತರಿಗೂ ಅನ್ವಯಿಸುವ ಚಿಂತನೆ ನಡೆಸಿದ್ದಾರೆ. ದೇಶದಲ್ಲಿ 60 ಸಾವಿರ ಕಿ.ಮೀ ರಸ್ತೆ ಅಭಿವೃದ್ಧಿಪಡಿಸುವ ಸಂಕಲ್ಪ ಮಾಡಿದ್ದಾರೆ. ಹೀಗಾಗಿ ಕಾರ್ಯಕರ್ತರು ಕಾಂಗ್ರೆಸ್ ಹಾಗೂ ಜೆಡಿಎಸ್‌ನವರ ಮತಗಳೂ ಸಹ ಬಿಜೆಪಿಗೆ ಬರುವಂತೆ ಜನರ ಮನವೊಲಿಸಬೇಕು’ ಎಂದರು.

, ‘ಮೈತ್ರಿ ಪಕ್ಷದಲ್ಲಿ ನಾಮುಂದು ತಾಮುಂದು ಎಂದು ಪರಸ್ಪರರ ಬೆನ್ನಿಗೆ ಚೂರಿ ಹಾಕಲು ಕಾಯುತ್ತಿದ್ದಾರೆ. ಜೆಡಿಎಸ್ ಮೊದಲು ಅಪ್ಪ-ಮಕ್ಕಳ ಪಕ್ಷವಾಗಿತ್ತು. ಆದರೆ ಈಗ ಅಪ್ಪ–ಮಕ್ಕಳು, ಮೊಮ್ಮಕ್ಕಳು, ಸೊಸೆಯಂದಿರ ಪಕ್ಷವಾಗಿ ಹೊರಹೊಮ್ಮಿದೆ’ ಎಂದುಜಗದೀಶ ಶೆಟ್ಟರ್‌ ವ್ಯಂಗ್ಯವಾಡಿದರು.

‘ಮಂಡ್ಯದಲ್ಲಿ ಸುಮಲತಾ ವಿರುದ್ದ ಮಗ ಸೋಲುತ್ತಾನೆಂದು ಕುಮಾರಸ್ವಾಮಿ ಅವರು ಮಂಡ್ಯ ಬಿಟ್ಟು ಬರುತ್ತಿಲ್ಲ. ಅಲ್ಲದೆ ಮಾಧ್ಯಮದವರ ಮೇಲೆ ಬೆದರಿಕೆ ಹಾಕುತ್ತಿದ್ದಾರೆ. ರಾಜ್ಯದಲ್ಲಿ 22ಕ್ಕೂ ಹೆಚ್ಚು, ದೇಶದಲ್ಲಿ 300ಕ್ಕೂ ಹೆಚ್ಚು ಸೀಟುಗಳನ್ನು ಬಿಜೆಪಿ ಗೆಲ್ಲಲಿದೆ’ ಎಂದರು.

‘ಶಿವಕುಮಾರ ಉದಾಸಿ ಅವರು ಈ ಚುನಾವಣೆಯಲ್ಲಿ ಗೆಲ್ಲುವ ಮೂಲಕ ಹ್ಯಾಟ್ರಿಕ್ ಸಾಧಿಸಲಿದ್ದಾರೆ. ಶಾಸಕ ಎಚ್‌.ಕೆ.ಪಾಟೀಲ ಅವರು ಚುನಾವಣೆಯಲ್ಲಿ ಈಗಾಗಲೇ ಒಮ್ಮೆ ಸೋಲಿನ ರುಚಿ ನೋಡಿದ್ದಾರೆ. ಈ ಬಾರಿ ಅವರ ಅಣ್ಣ ಡಿ.ಆರ್.ಪಾಟೀಲ ಅವರಿಗೂ ಸೋಲಿನ ರುಚಿ ತಿಳಿಯಲಿ ಎಂದು ಕಷ್ಟಪಟ್ಟು ಟಿಕೆಟ್‌ ಕೊಡಿಸಿದ್ದಾರೆ’ ಎಂದು ಶಾಸಕ ಕಳಕಪ್ಪ ಬಂಡಿ ಕುಟುಕಿದರು.

ಶಿವಕುಮಾರ ಉದಾಸಿ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸಿ.ಸಿ.ಪಾಟೀಲ, ಎಸ್.ವಿ.ಸಂಕನೂರ, ನಿಂಗಪ್ಪ ಕೆಂಗಾರ, ತಿಮ್ಮಣ್ಣ ವನ್ನಾಲ, ಹೊನ್ನುಸಾ ದಾನಿ, ರವಿ ಬಿದರೂರ, ರವಿ ದಂಡಿನ, ಎಂ.ಎಸ್.ಕರಿಗೌಡ್ರ, ಅಶೋಕ ನವಲಗುಂದ, ಅಶೋಕ ವನ್ನಾಲ, ಭಾಸ್ಕರ ರಾಯಬಾಗಿ, ಅಮರೇಶ ಬಳಿಗೇರ, ಮೋಹನಸಾ ರಾಯಬಾಗಿ, ರಾಜೇಂದ್ರ ಘೋರ್ಪಡೆ, ಸಿದ್ದಣ್ಣ ಬಳಿಗೇರ, ಆರ್.ಕೆ.ಚವ್ಹಾಣ, ಬಿ.ಎಂ.ಸಜ್ಜನರ, ಪುರಸಭೆ ಸದಸ್ಯರಾದ ಕನಕಪ್ಪ ಅರಳಿಗಿಡದ, ರೂಪ್ಲೇಶ ರಾಠೋಡ, ಸುಭಾಸ ಮ್ಯಾಗೇರಿ, ಲಿಲಾವತಿ ಸವಣೂರು, ಲಿಲಾವತಿ ವನ್ನಾಲ, ಸುಜಾತಾಬಾಯಿ ಶಿಂಗ್ರಿ, ವಿಜಯಾ ಮಳಗಿ, ಕೌಸರಬಾನು ಹುನಗುಂದ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.