ADVERTISEMENT

ಗಾಯಕಿ ಸೋನಾಲ್!

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2013, 19:59 IST
Last Updated 22 ಫೆಬ್ರುವರಿ 2013, 19:59 IST

ನಟಿ ಸೋನಾಲ್ ಚೌಹಾಣ್ ಇದೀಗ ಗಾಯನದೆಡೆಗೂ ಆಸಕ್ತಿ ಹೊರಳಿಸಿದ್ದಾರೆ. ತಮ್ಮ ಮುಂಬರುವ ಚಿತ್ರ `3ಜಿ'ನಲ್ಲಿ ಹಾಡೊಂದಕ್ಕೆ ಅವರು ದನಿಯಾಗಿದ್ದಾರೆ. ಹಾಡಲು ಅವಕಾಶ ನೀಡಿದ ಸಂಗೀತ ಸಂಯೋಜಕ ಮಿಥುನ್ ಕುರಿತು ಸೋನಾಲ್ ಹೊಗಳಿಕೆಯ ಮಹಾಪೂರವನ್ನೇ ಹರಿಸಿದರು.

`ಹಾಡುವುದು ತುಂಬಾ ಒಳ್ಳೆಯ ಅನುಭವ. ನನ್ನನ್ನು ಹಾಡಲು ಪ್ರೋತ್ಸಾಹಿಸಿದ ಮಿಥುನ್‌ಗೆ ಧನ್ಯವಾದ. ಅವರ ಸಂಗೀತವೆಂದರೆ ನನಗೆ ತುಂಬಾ ಇಷ್ಟ. ಯಾವುದೇ ಕ್ಷೇತದಲ್ಲೂ ಪ್ರೋತ್ಸಾಹ ಎಷ್ಟರ ಮಟ್ಟಿಗೆ ಅವಶ್ಯಕತೆ ಇದೆ ಎಂಬುದು ನನಗೆ ಅರಿವಾಗಿದೆ. ಏಕೆಂದರೆ ನಾನು ಶಾಸ್ತ್ರೀಯವಾಗಿ ಸಂಗೀತವನ್ನು ಕಲಿತವಳಲ್ಲ. ಮಿಥುನ್ ಪ್ರೋತ್ಸಾಹ ಇಲ್ಲದೇ ಇದ್ದಿದ್ದರೆ ಹಾಡಲು ಸಾಧ್ಯವಾಗುತ್ತಿರಲಿಲ್ಲವೇನೋ' ಎಂದು ಚಿತ್ರದ ಆಡಿಯೊ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದರು.

`ಮಿಥುನ್ ನನ್ನಲ್ಲಿ ನಂಬಿಕೆ ಇಟ್ಟಿದ್ದರು. ನನಗೆ ಹಾಡಲು ಪ್ರಯತ್ನಿಸುವಂತೆ ಹೇಳಿದರು. ಇಂತಹ ಅಪೂರ್ವ ಅವಕಾಶ ನೀಡಿದ್ದಕ್ಕೆ ಎಲ್ಲರ ಮುಂದೆಯೂ ಧನ್ಯವಾದ ಹೇಳಲೇಬೇಕು' ಎನ್ನುತ್ತಾ, `ನನಗೆ ಸಂಗೀತವೆಂದರೆ ಪಂಚಪ್ರಾಣ' ಎಂದು ಸಂತೋಷದಿಂದ ನುಡಿದರು.
3ಜಿ ಚಿತ್ರದಲ್ಲಿ `ಕೈಸೆ ಬತಾ' ಎಂಬ ಹಾಡನ್ನು ಸೋನಾಲ್ ಹಾಡಿದ್ದಾರೆ. ಸೋನಾಲ್ ಮಾತ್ರವಲ್ಲ, ಮಿಥುನ್ ಕೂಡ ಅವರ ಬಗ್ಗೆ ಹೊಗಳುತ್ತಲೇ ಮಾತಿಗೆ ಇಳಿದಿದ್ದರು.

`ಸೋನಾಲ್ ಹಾಡಲು ಸಾಧ್ಯವಾಗಿದೆ ಎಂದಾದರೆ, ಅದರ ಖ್ಯಾತಿ ಕೂಡ ಆಕೆಗೇ ಸಲ್ಲಬೇಕು. ಏಕೆಂದರೆ ಮೈಕ್ ಮುಂದೆ ನಿಂತು ಹಾಡಲು ಸಾಕಷ್ಟು ಧೈರ್ಯ ಬೇಕು. ಸಂಗೀತ ನಿರ್ದೇಶಕ ಹಾಡುತ್ತಿರುವವರ ಪ್ರತಿಯೊಂದು ಉಸಿರನ್ನೂ ಗಮನಿಸುತ್ತಾನೆ. ಆದರೆ ಸೊನಾಲ್ ಹಾಡುವಾಗ ತಪ್ಪುಗಳನ್ನು ನಾನು ಹೇಳಲೇಬೇಕಿರಲಿಲ್ಲ, ಆ ತಪ್ಪುಗಳು ಅವರೇ ಕಂಡುಕೊಳ್ಳುತ್ತಿದ್ದರು. ಯಾರೂ ಪರಿಪೂರ್ಣರಾಗಲು ಸಾಧ್ಯವಿಲ್ಲ. ಆದರೆ ಅವರ ಪ್ರಯತ್ನಕ್ಕೆ ನಿಜಕ್ಕೂ ಬೆಂಬಲ ನೀಡಲೇಬೇಕು' ಎಂದರು. 

ಈ ಹಿಂದೆ ನಟರಾದ ಅಕ್ಷಯ್ ಕುಮಾರ್, ಅದಿತಿ ರಾವ್ ಹೈದರಿ, ಆಯುಷ್ಮಾನ್ ಖುರಾನಾ, ಶಾರುಖ್ ಖಾನ್, ಅಮೀರ್ ಖಾನ್, ಅಮಿತಾಬ್ ಬಚ್ಚನ್ ಹೀಗೆ ಹಲವು ನಟರೂ ಮೈಕ್‌ಹಿಡಿದಿದ್ದರು. ಪ್ರಿಯಾಂಕಾ ಚೋಪ್ರಾ ಇವರೆಲ್ಲರಿಗಿಂತ ಸ್ವಲ್ಪ ಮುಂದೆ ಹೋಗಿ ಅವರ `ಇನ್ ಮೈ ಸಿಟಿ' ಹಾಡನ್ನೂ ಬಿಡುಗಡೆ ಮಾಡಿದ್ದರು. ಇದೀಗ ಆ ಸಾಲಿಗೆ ಸೊನಾಲ್ ಸೇರಿಕೊಂಡಿದ್ದಾರೆ.

ಹಾರರ್ ಚಿತ್ರ `3ಜಿ' ಮಾರ್ಚ್ 15ಕ್ಕೆ ಸೆಟ್ಟೇರಲಿದ್ದು, ನೀಲ್ ನಿತಿನ್ ಮುಖೇಶ್ ಮುಖ್ಯ ಪಾತ್ರದಲ್ಲಿದ್ದಾರೆ. ಶೀರ್ಶಕ್ ಆನಂದ್ ಮತ್ತು ಶಾಂತನು ರೇ ಛಬ್ಬೀರ್ ನಿರ್ದೇಶಿಸುತ್ತಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.