ADVERTISEMENT

`ಅಂದರ್...' ದುಂದುಭಿ

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2013, 19:59 IST
Last Updated 4 ಏಪ್ರಿಲ್ 2013, 19:59 IST

`ಅಂದರ್ ಬಾಹರ್' ತೆರೆ ಕಾಣುತ್ತಿದೆ. ಕೇವಲ ರಾಜ್ಯದಲ್ಲಿ ಮಾತ್ರವಲ್ಲ, ಹೊರ ರಾಜ್ಯಗಳಲ್ಲಿ ಕೂಡ. ಆಂಧ್ರಪ್ರದೇಶದ ಯೆಮ್ಮಿಗನೂರು, ಅದೋನಿ ಹಾಗೂ ತಮಿಳುನಾಡಿನ ಹೊಸೂರಿನಲ್ಲಿ ಇದಕ್ಕಾಗಿ ಚಿತ್ರಮಂದಿರಗಳನ್ನು ಕಾದಿರಿಸಲಾಗಿದೆ. ಅದು ನಟ ಶಿವರಾಜ್‌ಕುಮಾರ್ ಅಭಿಮಾನಿಗಳ ಸಂಘಟನೆ `ಶಿವು ಅಡ್ಡಾ'ದ ಪರಿಶ್ರಮದ ಫಲ. ಅಂತರ್ಜಾಲದಲ್ಲಿಯೂ ಈ ಸಂಬಂಧ ಪ್ರಚಾರ ನಡೆದಿದೆ. ನಿರ್ದೇಶಕ ಫಣೀಶ್ ಕಣ್ಣಲ್ಲಿ ಕಾತರ ತುಂಬಿಕೊಂಡೇ ಇದನ್ನೆಲ್ಲಾ ಹೇಳುತ್ತಿದ್ದರು.

ಕಲ್ಪನೆಗೂ ಮೀರಿ ಅತ್ಯುತ್ತಮವಾಗಿ ಚಿತ್ರ ಮೂಡಿಬಂದಿದೆ. ಅರುಂಧತಿ ನಾಗ್, ಶ್ರೀನಾಥ್ ಮುಂತಾದವರ ಮಾರ್ಗದರ್ಶನ ಉತ್ತಮ ಚೌಕಟ್ಟು ಒದಗಿಸಿದೆ ಎಂಬ ತೃಪ್ತಿ ಅವರಿಗೆ.

ಚಿತ್ರಕ್ಕಾಗಿ ದುಡಿದ ನಟ ವರ್ಗ ಹಾಗೂ ತಾಂತ್ರಿಕ ವರ್ಗವನ್ನು ಶಿವರಾಜ್‌ಕುಮಾರ್ ಬಹುವಾಗಿ ಶ್ಲಾಘಿಸಿದರು,ಅರುಂಧತಿ ನಾಗ್, ಇಮ್ರಾನ್, ರವಿವರ್ಮ, ಥ್ರಿಲ್ಲರ್ ಮಂಜು ಮುಂತಾದವರ ಶ್ರಮ ಚಿತ್ರಕ್ಕೆ ಉತ್ತಮ ಕೊಡುಗೆ ನೀಡಿದೆಯಂತೆ. ನಟ ಚಸ್ವಾ ಅವರು ಚಿತ್ರದಲ್ಲಿ ಖಳನ ಪಾತ್ರ ಪೋಷಿಸುತ್ತಿದ್ದಾರೆ. ಅವರ ಕಂಠವನ್ನು ವಜ್ರಮುನಿ ಅವರ ಕಂಠಕ್ಕೆ ಹೋಲಿಸಿದ ಶಿವಣ್ಣ ಕನ್ನಡ ಚಿತ್ರರಂಗಕ್ಕೆ ಉತ್ತಮ ನಟನೊಬ್ಬ ದಕ್ಕಿದಂತಾಗಿದೆ ಎಂದು ಮೆಚ್ಚಿಕೊಂಡರು.

ಚಸ್ವಾ ಕೂಡ ಈ ಮಾತನ್ನು ವಿನೀತರಾಗಿ ಸ್ವೀಕರಿಸಿದರು. ಅವರಿಗೆ ಶಿವರಾಜ್ ಜತೆಗಿನ ಅಭಿನಯ ಹೂವಿನ ಜತೆ ನಾರೂ ಸ್ವರ್ಗ ಸೇರಿದಂತೆ ಭಾಸವಾಗಿದೆ. ನೃತ್ಯ, ಅಭಿನಯ ಹಾಗೂ ಹೊಡೆದಾಟಗಳಲ್ಲಿ ಶಿವಣ್ಣನವರ ಶಕ್ತಿ ಕುರಿತು ಅವರಿಗೆ ಮೆಚ್ಚುಗೆಯ ಭಾವ. ಅವರ ಪಾತ್ರದ ಹೆಸರು ಸತ್ಯ. ಈಗಾಗಲೇ `ಸಿದ್ಲಿಂಗು' ಚಿತ್ರದ ಜಮಾಲ್ ಆಗಿ ಮನೆಮಾತಾದ ಚಸ್ವಾ `ಅಂದರ್ ಬಾಹರ್' ಬಗ್ಗೆ ಹೆಚ್ಚಿನ ನಿರೀಕ್ಷೆ ಇಟ್ಟುಕೊಂಡಿದ್ದಾರಂತೆ. ಶೇಖರ್ ಚಂದ್ರ ಅವರ ಛಾಯಾಗ್ರಹಣ ಹಾಗೂ ಇದೇ ಮೊದಲ ಬಾರಿಗೆ ಸಂಗೀತ ನಿರ್ದೇಶಿಸಿರುವ ವಿಜಯ್ ಪ್ರಕಾಶ್‌ರಿಂದಾಗಿ ಚಿತ್ರಕ್ಕೆ ಹೊಸ ಕಳೆ ಬಂದಿದೆಯಂತೆ.

ಶಿವಣ್ಣನ ಪತ್ನಿಯಾಗಿ ಕಾಣಿಸಿಕೊಳ್ಳುತ್ತಿರುವುದು ನಟಿ ಪಾರ್ವತಿ. ನಿರ್ದೇಶಕರ ಸಾಹಿತ್ಯ ಹಾಗೂ ರಂಗಭೂಮಿಯ ಗೀಳನ್ನು ಹೊಗಳುತ್ತಲೇ ಅವರು ಕನ್ನಡ ಚಿತ್ರರಂಗ ಮತ್ತೆ ಸುವರ್ಣ ದಿನಗಳನ್ನು ಕಾಣಬೇಕು ಎಂದು ಕೋರಿಕೊಂಡರು. ತಾಯ್ನಾಡು ಕೇರಳದಲ್ಲಿಯೂ ಚಿತ್ರ ಬಿಡುಗಡೆಯಾಗಲಿ ಎಂಬ ಹಾರೈಕೆಯೂ ಅವರ ಮಾತಿನಲ್ಲಿತ್ತು. ಶಿವರಾಜ್‌ಕುಮಾರ್ ಅವರಿಂದ ನಟನೆಯ ಕೌಶಲ್ಯ ಕಲಿತ ಬಗೆಯನ್ನು ವಿವರಿಸಿದರು.

ನಿರ್ಮಾಪಕರಲ್ಲಿ ಒಬ್ಬರಾದ ರಜನೀಶ್ ಇನ್ನೂ ಒಂದು ಹೆಜ್ಜೆ ಮುಂದುಹೋಗಿ ಅಮೆರಿಕ ಹಾಗೂ ಆಸ್ಟ್ರೇಲಿಯಾದಲ್ಲಿ ಚಿತ್ರ ಬಿಡುಗಡೆ ಮಾಡುವ ಉತ್ಸಾಹದಲ್ಲಿದ್ದಾರೆ. ಮತ್ತೊಬ್ಬ ನಿರ್ಮಾಪಕ ಪ್ರಸಾದ್ ಈ ಸಂದರ್ಭದಲ್ಲಿ ಹಾಜರಿದ್ದರು.

ಅಪ್ಲಿಕೇಷನ್ ಪ್ರಚಾರ
ಶಿವು ಅಡ್ಡಾ ತಂಡ ಚಿತ್ರದ ಪ್ರಚಾರಕ್ಕಾಗಿ ಹೊಸ ಸಾಹಸ ಮಾಡುತ್ತಿದೆ. ಮೊಬೈಲ್ ಅಪ್ಲಿಕೇಷನ್ ಬಳಸಿಕೊಂಡು ಚಿತ್ರ ಕುರಿತಂತೆ ಸಮಗ್ರ ಮಾಹಿತಿ ನೀಡುತ್ತಿದೆ. ಆಂಡ್ರಾಯ್ಡ ಮೊಬೈಲ್ ಫೋನ್ ಬಳಕೆದಾರರು ಇದನ್ನು ಉಚಿತವಾಗಿ ಡೌನ್‌ಲೌಡ್ ಮಾಡಿಕೊಳ್ಳಬಹುದು. ತಾರಾಗಣ, ತಂತ್ರಜ್ಞರು, ಹಾಡು, ಟ್ರೇಲರ್ ತುಣುಕುಗಳು ಅಪ್ಲಿಕೇಷನ್‌ನಲ್ಲಿ ಇರಲಿವೆ. ಅಲ್ಲದೆ ಫೇಸ್‌ಬುಕ್, ಯೂಟ್ಯೂಬ್, ಟ್ವಿಟರ್ ಲಿಂಕ್‌ಗಳನ್ನೂ ಇಲ್ಲಿ ನೀಡಲಾಗಿದೆ.

ಅಂದರ್ ಬಾಹರ್ ಏಕೆ ನೋಡಬೇಕು ಎಂಬುದಕ್ಕೆ 9 ವಿನೂತನ ಅಂಶಗಳನ್ನು ಅಪ್ಲಿಕೇಷನ್‌ನಲ್ಲಿ ಸೇರಿಸಲಾಗಿದೆ. ಪ್ರತಿ ಊರಿನ ಚಿತ್ರಮಂದಿರಗಳ ಮಾಹಿತಿ, ಟಿಕೆಟ್ ಬುಕ್ಕಿಂಗ್ ವ್ಯವಸ್ಥೆಯೂ ಉಂಟು. ಅಪ್ಲಿಕೇಷನ್ ಅನ್ನು ಶಿವರಾಜ್‌ಕುಮಾರ್ ಅವರಿಗೆ ಅರ್ಪಿಸಲಾಗಿದೆ ಎಂದು `ಶಿವು ಅಡ್ಡಾ'ದ ಸದಸ್ಯ ನರೇನ್ ತಿಳಿಸಿದರು.

ADVERTISEMENT

ಫಣೀಶ್ ಹೊಸ ಸಾಹಸ
ಫಣೀಶ್ ಹೊಸ ಚಿತ್ರದ ಕುರಿತಂತೆ ನಟ ಶಿವರಾಜ್‌ಕುಮಾರ್ ಗುಟ್ಟು ಬಿಚ್ಚಿಟ್ಟರು. ಚಿತ್ರದ ಹೆಸರು `ರೈತ' ಎಂದು. ಬೇಸಾಯಗಾರನ ಕಾಳಜಿಯ ಸುತ್ತ ಹೆಣೆಯಲಾಗುವ ಚಿತ್ರವಂತೆ ಇದು. ಶಿವಣ್ಣನೇ ಚಿತ್ರದ ನಾಯಕ. `ಭೂಮಿತಾಯಿಯ ಚೊಚ್ಚಲ ಮಗ' ಸೇರಿದಂತೆ ಕೆಲವು ಚಿತ್ರಗಳಲ್ಲಿ ಶಿವಣ್ಣ ಈಗಾಗಲೇ ಮಣ್ಣಿನ ಮಗನಾಗಿ ಕಾಣಿಸಿಕೊಂಡಿದ್ದಾರೆ. ಆದರೆ ಹೊಸ ಚಿತ್ರದಲ್ಲಿ ರೈತರ ಈ ಕಾಲದ ಸಮಸ್ಯೆಯನ್ನು ಹೇಳಲಾಗುತ್ತಿದೆಯಂತೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.