ADVERTISEMENT

ಅಧ್ಯಾತ್ಮದ ಇನ್ನೊಂದು ದಾರಿ

ವಿಶಾಖ ಎನ್.
Published 28 ಏಪ್ರಿಲ್ 2012, 19:30 IST
Last Updated 28 ಏಪ್ರಿಲ್ 2012, 19:30 IST
ಅಧ್ಯಾತ್ಮದ ಇನ್ನೊಂದು ದಾರಿ
ಅಧ್ಯಾತ್ಮದ ಇನ್ನೊಂದು ದಾರಿ   

ಗೆಳೆಯರೆಲ್ಲಾ ಕುಳಿತು ಸೆಕ್ಸ್ ಬಗ್ಗೆ ಚರ್ಚಿಸುತ್ತಿದ್ದರು. ಅವರ ಮಧ್ಯೆ ವಿದ್ಯುತ್ ಜಾಮ್‌ವಾಲ್ ಪ್ರವೇಶವಾಯಿತು. `ಜೀಸಸ್ ಭೂಮಿಗೆ ಹೇಗೆ ಬಂದ ಗೊತ್ತೇ~ ಎಂಬ ಧಾರ್ಮಿಕವೂ ತಾತ್ವಿಕವೂ ಆದ ಪ್ರಶ್ನೆಯನ್ನು ಆತ ತೇಲಿಬಿಟ್ಟ. ಚರ್ಚೆಯ ದಿಕ್ಕೇ ಬದಲಾಯಿತು. ಪಡ್ಡೆ ಹುಡುಗರೆಲ್ಲಾ ಪೋಲಿ ಮಾತನ್ನು ಬಿಟ್ಟು ಅಧ್ಯಾತ್ಮ ಚಿಂತನೆಯತ್ತ ಹೊರಳಿದರು.

ಶಿಸ್ತಿನಿಂದ ಬೆಳೆದ ವಿದ್ಯುತ್‌ಗೆ ಅಪ್ಪ-ಅಮ್ಮನ ಪ್ರೀತಿ ಇತ್ತು. ಮಾತು ಅಪ್ಪಿತಪ್ಪಿಯೂ ಹಾದಿತಪ್ಪುತ್ತಿರಲಿಲ್ಲ. ಹೀಗಿರುವಾಗ ಒಂದಿಷ್ಟು ತರಲೆಗಳು ಸಹವಾಸಕ್ಕೆ ಹಚ್ಚಿಕೊಂಡರು. ನಿಧನಿಧಾನವಾಗಿ ಪೋಲಿತನದ ರುಚಿ ಈ ಹುಡುಗನಿಗೂ ಹತ್ತಿತ್ತು. ಪೋಲಿತನವನ್ನು ಅಧ್ಯಾತ್ಮದ ಚೌಕಟ್ಟಿಗೆ ಒಳಪಡಿಸಿ ಹೇಳುವುದರಲ್ಲಿ ಈ ಹುಡುಗ ನಿಸ್ಸೀಮನಾದ. ಆಪ್ತ ಸ್ನೇಹಿತರು `ಪೋಲಿ ಗುರು~ ಎಂಬ ಅಡ್ಡಹೆಸರಿಡುವಷ್ಟು ಅವನು ಈ ವಿಷಯದಲ್ಲಿ ಹೆಸರಾಗಿಹೋದ.

ಹೀಗೇ ಯಾವುದೋ ಹುಡುಗಿಗೆ ಕೆಟ್ಟದಾಗಿ ಕೀಟಲೆ ಮಾಡಿದ. ಅಪ್ಪನಿಗೆ ಗೊತ್ತಾಯಿತು. ಅಪ್ಪ ಕೆನ್ನೆಗೆ ಬಾರಿಸಿದ್ದೇ ಗಿರ‌್ರನೆ ಎರಡು ಸುತ್ತು ತಿರುಗಿ ಕೆಳಕ್ಕೆ ಬಿದ್ದ. ನಡೆದ ಘಟನೆಯನ್ನು ತನ್ನ ಆಧ್ಯಾತ್ಮ ಚಿಂತನೆಯಲ್ಲಿ ಪಾಲ್ಗೊಳ್ಳುವ ಸ್ನೇಹಿತರಲ್ಲಿ ಹೇಳಿಕೊಂಡ.
 
ಅವರು ಹೀಗೆ ಶಿಳ್ಳೆಕ್ಯಾತನಂತೆ ಇದ್ದರೆ ಒಂದು ಏಟನ್ನೂ ತಡೆದುಕೊಳ್ಳಲಾಗುವುದಿಲ್ಲ ಎಂದು ಹೇಳಿದವರೇ ಸೀದಾ ಜಿಮ್‌ಗೆ ಕರೆದೊಯ್ದರು. ಹುಡುಗನಿಗೆ ಅಲ್ಲಿ ಹೆಸರಿಗೆ ತಕ್ಕಂತೆಯೇ ವಿದ್ಯುತ್ ಸಂಚಾರವಾಯಿತು. ಕೃಶದೇಹ ಹೊಸ ಆಕಾರ ಪಡೆದುಕೊಂಡಿತು. ನರಗಳು ಉಬ್ಬಿನಿಂತವು. ಭುಜಬಲ ಅಂಗಿಯಿಂದ ಕಿತ್ತು ಹೊರಬರಲು ಹವಣಿಸುತ್ತಿದೆಯೇ ಎಂಬಂತಾಯಿತು.

ದೇಹಾಕಾರದ ಜೊತೆಗೆ ವಿದ್ಯುತ್‌ನ ಮನಸ್ಸಿನಾಕಾರವೂ ಬದಲಾಯಿತು. ಅವನ ಸುತ್ತ ಹುಡುಗಿಯರು ಠಳಾಯಿಸಲಾರಂಭಿಸಿದರು. ಮೊದಮೊದಲು ಅವರಿಗೂ ಪೋಲಿ ಅಧ್ಯಾತ್ಮದ ಮಾತುಗಳನ್ನು ಉಣಬಡಿಸಿದ.
 
ಮೂವರು ಹುಡುಗಿಯರು ಕೆನ್ನೆಗೆ ಬಾರಿಸಿ ಹೋದರು. ನಾಲ್ಕನೆಯವಳು ಮುತ್ತುಕೊಟ್ಟಳು. ವಿದ್ಯುತ್ ಅದನ್ನೇ ಪ್ರೀತಿ ಎಂದು ಭಾವಿಸಿದ. ತಿಂಗಳುಗಟ್ಟಲೆ ಅವಳನ್ನು ಹಚ್ಚಿಕೊಂಡ. ಅವಳು ತೆಕ್ಕೆಗೆ ಸಿಕ್ಕಾಗ ಅವನು ಸ್ವರ್ಗವಾಸಿ. ದಿನಗಟ್ಟಲೆ ಸಿಗದೇಹೋದಾಗ ಪರಮ ವಿರಹಿ. ನಡುರಾತ್ರಿಯಲ್ಲಿ ಅವಳು ಮಿಸ್‌ಕಾಲ್ ಕೊಟ್ಟರೂ ಅವಳಿದ್ದಲ್ಲಿಗೆ ಓಡಿಹೋಗುತ್ತಿದ್ದ.
 
ಒಂದು ಸಲ ಅವನ ಹುಚ್ಚಾಟ ಪತ್ತೆಹಚ್ಚಲು ಅವನ ಅಪ್ಪನೇ ಹಿಂಬಾಲಿಸಿಕೊಂಡು ಹೋಗಿದ್ದುಂಟು. ಅಪರಾತ್ರಿಯಲ್ಲಿ ಆ ಹುಡುಗಿ ಐಸ್‌ಕ್ರೀಮ್ ಕೇಳಿದಳೆಂದು ಅವನು ಅದನ್ನು ಕೊಡಿಸಿದ್ದ. ಅವಳು ಐಸ್‌ಕ್ರೀಮ್ ಸವಿಯುವುದನ್ನೇ ನೋಡುತ್ತಾ ಮುಗ್ಧನಂತೆ ನಿಂತಿದ್ದ. ಅವನ ಅಪ್ಪನಿಗೆ ಏನೂ ಹೇಳಲು ತೋಚಿರಲಿಲ್ಲ.

ಹೀಗೆ ವಿದ್ಯುತ್ ಪ್ರೀತಿಯಲ್ಲಿ ಮೈಮರೆತಾಗ ವಯಸ್ಸಿನ್ನೂ ಹದಿನೆಂಟು. ಹುಡುಗಿ ಅವನಿಗಿಂತ ದೊಡ್ಡ ಪ್ರಾಯದವಳು. ಪ್ರೇಮದ ಕ್ಷಣಗಳ ಗುಂಗು ಹತ್ತಿಸಿಕೊಂಡಿರುವಾಗಲೇ ಇದ್ದಕ್ಕಿದ್ದಂತೆ ಆ ಹುಡುಗಿ ಕೈಕೊಟ್ಟು ಹೋದಳು. ತಕ್ಷಣಕ್ಕೆ ಬೇಸರವಾದರೂ ವಿದ್ಯುತ್ ದೀರ್ಘಕಾಲ ಖಿನ್ನನಾಗಲಿಲ್ಲ. ಮತ್ತೆ ಜಿಮ್‌ಗೆ ಹೋದ.

ಹುಡುಗಿಯ ಮೇಲಿದ್ದ ಸಿಟ್ಟನ್ನೆಲ್ಲಾ ಕಸರತ್ತಿನ ಮೂಲಕ ಹೊರಹಾಕಿದ. ದೇಹ ಮತ್ತೆ ಹುರಿಗಟ್ಟಿತು. ಇನ್ನೊಬ್ಬಳು ಹುಡುಗಿ ಹತ್ತಿರ ಬಂದಾಗ, ನಯವಾಗಿಯೇ ಅವಳನ್ನು ತಿರಸ್ಕರಿಸಿ ಜೋರಾಗಿ ನಕ್ಕು ಅವಳನ್ನು ದಂಗುಬಡಿಸಿದ.

ಪ್ರಾಯದ ಹಿತ್ತಲು, ಯೌವನದ ಹೊಸ್ತಿನಲ್ಲಿರುವಾಗ ವಿದ್ಯುತ್‌ಗೆ ಕೊರೆಯುವಂಥ ಕಂಠ ಸಿಕ್ಕಿತು. ಕಾಯ ನೀಳವಾಗಿತ್ತು. ದೇಹದ ನರಗಳೆಲ್ಲಾ ಬಿಗಿಯಾಗಿದ್ದವು. ಅಧ್ಯಾತ್ಮ ಚಿಂತನೆಗೆ ತಾತ್ಕಾಲಿಕ ವಿರಾಮ. ಪ್ರೇಮ ನಿವೇದನೆಯಿಂದ ವ್ಯಕ್ತಿ ಈಗ ಬಲು ದೂರ.

ಏನಾದರೂ ಆಗಬೇಕೆಂದುಕೊಳ್ಳುವಾಗಲೇ ರ‌್ಯಾಂಪ್ ಹತ್ತಿ ಇನ್ನೊಂದಿಷ್ಟು ಜನರ ಹೊಟ್ಟೆ ಉರಿಸಿದ್ದೂ ಆಯಿತು. ಅವಕಾಶ ಹುಡುಕಿಕೊಂಡು ಬಂತು. ಬಾಲಿವುಡ್ ಬಾಗಿಲು ತಂತಾನೇ ತೆರೆದುಕೊಂಡಿತು. ವಿದ್ಯುತ್ ಖಳನಟನಾದ. ಬಾಲಿವುಡ್‌ನಲ್ಲಿ ಇತ್ತೀಚೆಗೆ ಖಳನಟರೂ ನಾಯಕನಂತೆಯೇ ಗಟ್ಟಿ ಮೈ ಇರುವವರೇ ಆಗಬೇಕು. ಹಾಗಾಗಿ ವಿದ್ಯುತ್‌ಗೆ ಅಲ್ಲಿ ಕೆಂಪುಹಾಸು.

`ಫೋರ್ಸ್~ ಹಿಂದಿ ಚಿತ್ರಕ್ಕೆ 500 ಜನರನ್ನು ಹಿಂದಿಕ್ಕಿ ಆಯ್ಕೆಯಾದ ಮೇಲೆ ವಿದ್ಯುತ್ ತೆಲುಗು, ತಮಿಳು ಚಿತ್ರಗಳಲ್ಲಿ ಪುಂಖಾನುಪುಂಖವಾಗಿ ಅವಕಾಶ ಗಿಟ್ಟಿಸಿದ್ದಾರೆ.

ವಿದ್ಯುತ್ ಈಗ ಸುರಸುಂದರ ಖಳನಟನಾದ್ದರಿಂದ ಇನ್ನಷ್ಟು ಹುಡುಗಿಯರು ತೆಕ್ಕೆಗೆ ಬರಲು ಹವಣಿಸುತ್ತಾರೆ. `ಹುಡುಗಿಯರನ್ನು ಮಾತಿನಿಂದಷ್ಟೇ ಅರ್ಥ ಮಾಡಿಕೊಳ್ಳಲು ಸಾಧ್ಯವಿಲ್ಲ. ಅವರನ್ನು ದೇಹಕ್ಕೆ ಆನಿಸಿಕೊಳ್ಳಬೇಕು. ಉಸಿರಿಗೆ ಉಸಿರು ತಾಕಬೇಕು. ಕಣ್ಣುಗಳು ಮಾತಾಡಬೇಕು. ಕೂದಲುಗಳು ಗಾಳಿಗೆ ಹಾರಾಡುವ ಸುಖ ಉಣ್ಣಬೇಕು.

ತುಟಿಗಳನ್ನು ಏಕಾಏಕಿ ಬೆಸೆಯದೆ ಕೆಲವು ನಿಮಿಷ ಸುಮ್ಮನೆ ಮಾತಾಡಬೇಕು. ಒಂದಿಷ್ಟು ಮೌನವೂ ಬೇಕು. ಇಷ್ಟೆಲ್ಲಾ ಆದಮೇಲೂ ನಾವು ಮುಂದುವರಿಯಬಹುದಾದರೆ ಪ್ರೇಮ ಸಂಭವಿಸುವ ಅಪಾಯವಿದೆ ಎಂದೇ ಅರ್ಥ. ಆ ಅಪಾಯ ಬೇಡವಾದರೆ ಹುಡುಗಿಗೆ ಕಿವಿಮಾತು ಹೇಳಿ, ಸುಮ್ಮನಾಗಿಬಿಡಿ. ಇಲ್ಲವೇ ಸುರಕ್ಷಿತ ಸೆಕ್ಸ್ ನಿಮ್ಮದಾಗಿಸಿಕೊಳ್ಳಿ.

ಆಗ ಮನಸ್ಸು ಪ್ರಫುಲ್ಲವಾಗುತ್ತದೆ. ಮಾಡುವ ಕೆಲಸದಲ್ಲಿ ಮನಸ್ಸು ನೆಡುತ್ತದೆ...~ ಎಂಬುದು ಆಧುನಿಕ ಪೋಲಿ ಅಧ್ಯಾತ್ಮ ಚಿಂತಕ ವಿದ್ಯುತ್ ನುಡಿಮುತ್ತುಗಳು. ಅಂದಹಾಗೆ, ಆ ಚಿಂತಕನಿಗೆ ಕರೀನಾ ಕಪೂರ್ ಹಾಗೂ ಪ್ರಿಯಾಂಕಾ ಚೋಪ್ರಾ ಅಂದರೆ ವಿದ್ಯುತ್ ಸಂಚಾರವಾಗುತ್ತದಂತೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.