ADVERTISEMENT

ಅಪ್ಪಯ್ಯನ ಬೇಸರ!

ಅಮಿತ್ ಎಂ.ಎಸ್.
Published 4 ಏಪ್ರಿಲ್ 2012, 19:30 IST
Last Updated 4 ಏಪ್ರಿಲ್ 2012, 19:30 IST

ನಟ ಶ್ರೀನಗರ ಕಿಟ್ಟಿ ಮುಖದಲ್ಲಿ ಬೇಸರದ ಕಳೆ ಆವರಿಸಿದೆ. ಎಸ್. ನಾರಾಯಣ್ ನಿರ್ದೇಶನದಲ್ಲಿ ಅವರು ನಟಿಸಿರುವ `ಅಪ್ಪಯ್ಯ~ ನಿರೀಕ್ಷೆ ಮೂಡಿಸಿರುವ, ಬಿಡುಗಡೆಯಾಗಬೇಕಿರುವ ಚಿತ್ರ.
 
ಕಿಟ್ಟಿ ಮತ್ತು ಪತ್ನಿ ಭಾವನಾ ನಿರ್ಮಿಸಿರುವ ಮಕ್ಕಳ ಸಿನಿಮಾ `ಬಾಲ್‌ಪೆನ್~ ಮೇ ತಿಂಗಳ ಮೊದಲ ವಾರದಲ್ಲಿ ತೆರೆಕಾಣಲು ಸಿದ್ಧವಾಗಿದೆ. ಈ ಎರಡು ಸಂಭ್ರಮದ ಘಳಿಗೆ ನಡುವೆಯೂ ಅವರಲ್ಲಿ ನೋವು ತುಂಬಿಕೊಳ್ಳಲು ಕಾರಣ ಎಸ್.ನಾರಾಯಣ್.

ನಿರ್ಮಾಪಕ-ನಿರ್ದೇಶಕ ಎಸ್. ನಾರಾಯಣ್ ಇನ್ನು ಮುಂದೆ ಚಿತ್ರ ಮಾಡುವುದಿಲ್ಲ ಎಂದು ಘೋಷಿಸಿರುವುದು ಚರ್ಚೆಯಲ್ಲಿರುವ ಸುದ್ದಿ. ತಮ್ಮ ಈ ನಿರ್ಧಾರಕ್ಕೆ ಅವರು ನೀಡಿರುವ ಕಾರಣಗಳಲ್ಲಿ ನಾಯಕರ ಅಸಹಕಾರವೂ ಒಂದು. ಈ ಕಾರಣವೇ ಕಿಟ್ಟಿ ಅಸಮಾಧಾನಕ್ಕೆ ಮೂಲ.

ನಾರಾಯಣ್ ಚಿತ್ರರಂಗದಿಂದ ಬೇಸತ್ತುಕೊಂಡು ಅದರಿಂದ ಹಿಂದೆ ಸರಿಯಲು ನಿರ್ಧರಿಸಿದ್ದರೆ ಈ ರೀತಿ ಬಹಿರಂಗವಾಗಿ ಹೇಳಿಕೊಳ್ಳಬಾರದಿತ್ತು. ಸಿನಿಮಾ ಮಾಡದೇ ಸುಮ್ಮನಿರಬಹುದಾಗಿತ್ತು. ಅವರು ತೀರ್ಮಾನ ತೆಗೆದುಕೊಂಡ ಸಮಯವೂ ಸರಿಯಲ್ಲ ಎನ್ನುತ್ತಾರೆ ಕಿಟ್ಟಿ.
 
ನಾಯಕರು ಸರಿಯಾಗಿ ಸಹಕರಿಸುತ್ತಿಲ್ಲ ಎಂದರೆ ನಾನು ಅಥವಾ `ಮುಂಜಾನೆ~ಯಲ್ಲಿ ಗಣೇಶ್ ಕೆಟ್ಟದಾಗಿ ವರ್ತಿಸಿದ್ದಾರೆ ಎಂದು ಜನರು ತಪ್ಪಾಗಿ ಅರ್ಥೈಸಿಕೊಳ್ಳುತ್ತಾರೆ. ಅವರ ಕೆಲಸಕ್ಕೆ ನಮ್ಮಿಂದ ಎಂದೂ ತೊಂದರೆಯಾಗಿಲ್ಲ. ಸಮಯಕ್ಕೆ ಸರಿಯಾಗಿ ಚಿತ್ರೀಕರಣಕ್ಕೆ ಹಾಜರಾಗಿದ್ದೇನೆ. ಚಿತ್ರದಲ್ಲಿ ಬದ್ಧತೆಯಿಂದ ತೊಡಗಿಕೊಂಡಿದ್ದೇನೆ. ಹೀಗಿದ್ದೂ ನಾರಾಯಣ್ ಈ ರೀತಿ ಹೇಳಿಕೆ ನೀಡಿರುವುದು ಸರಿಯಲ್ಲ ಎನ್ನುವುದು ಅವರ ಬೇಸರ.

`ಅಪ್ಪಯ್ಯ~ ಚಿತ್ರದ ಬಿಡುಗಡೆಗೆ ಇನ್ನೂ ಸಮಯವಿದೆ. ಪ್ರಚಾರ ಕಾರ್ಯಗಳೂ ನಡೆಯಬೇಕಿದೆ. ಹೀಗಿರುವಾಗ ಎಸ್. ನಾರಾಯಣ್ ಅವರ ಈ ನಡವಳಿಕೆ ಚಿತ್ರದ ಮೇಲೆ ಮಾತ್ರವಲ್ಲ ತಮ್ಮ ಮೇಲೂ ಪರಿಣಾಮ ಬೀರಲಿದೆ ಎಂಬುದು ಕಿಟ್ಟಿ ಕಳವಳ.

ಸತತ ಸೋಲುಗಳಿಂದ ಕಂಗೆಟ್ಟಿರುವ ಎಸ್.ನಾರಾಯಣ್ ಚಿತ್ರ ನಿರ್ದೇಶನಕ್ಕೆ ವಿದಾಯ ಹೇಳಿರುವುದಕ್ಕೆ ಕಾರಣಗಳು ಹಲವು. ಅಪಾರ ಭರವಸೆ ಇಟ್ಟುಕೊಂಡಿದ್ದ `ಶೈಲು~ ಅಷ್ಟೇನೂ ಯಶ ಕಾಣಲಿಲ್ಲ. ಅದರ ಬೆನ್ನಲ್ಲೇ ಮತ್ತೆ ಗಣೇಶ್‌ರನ್ನು ಹಾಕಿಕೊಂಡು ತೆರೆಗೆ ತಂದ `ಮುಂಜಾನೆ~ ಜನರಿಗೆ ಮುಂಜಾವಿನ ಪುಳಕ ನೀಡಲಿಲ್ಲ. ಮಗ ಪಂಕಜ್‌ರನ್ನು ನಾಯಕನನ್ನಾಗಿ ಬೆಳೆಸುವ ಪ್ರಯತ್ನಗಳೂ ಕೈ ಹಿಡಿಯಲಿಲ್ಲ.
 
ಹಾಗೆಂದು ನಾರಾಯಣ್ ಖಾಲಿ ಕುಳಿತಿರಲಿಲ್ಲ. ಶ್ರೀನಗರ ಕಿಟ್ಟಿ ಮತ್ತು ಭಾಮಾ ನಟಿಸಿರುವ `ಅಪ್ಪಯ್ಯ~ ಚಿತ್ರೀಕರಣವನ್ನೂ ಅಷ್ಟೇ ವೇಗವಾಗಿ ನಡೆಸಿ, `ಚೌಡಯ್ಯ~ಕ್ಕೂ ತರಾತುರಿಯಲ್ಲಿಯೇ ಆ್ಯಕ್ಷನ್ ಕಟ್ ಹೇಳಲು ಪ್ರಾರಂಭಿಸಿದ್ದರು.
 
ಲಕ್ಷ್ಮೀ ನರಸಿಂಹ, ನೆನಪಿದೆಯಾ ಓ ಗೆಳತಿ, ದೊಡ್ ಮನುಷ್ಯ, ದಾಂಡಿಗ, ಹೀಗೆ ನಾರಾಯಣ್ ಕುಲುಮೆಯಿಂದ ಹೊರಬರಬೇಕಾದ ಚಿತ್ರಗಳ ದೀರ್ಘ ಪಟ್ಟಿಯೇ ಇದೆ. ಜನರಿಗೆ ಬೇಡವಾಗಿದ್ದೇನೆಂದು ನಾರಾಯಣ್ ನೋವಿನಿಂದ ಚಿತ್ರರಂಗದಿಂದ ದೂರಸರಿಯಲು ಹೊರಟಿರುವುದರಿಂದ ಈ ಚಿತ್ರಗಳ ಗತಿ ಡೋಲಾಯಮಾನ.

ಯಾರಾದರೂ ಅವಕಾಶ ಕೊಟ್ಟರೆ ನಟಿಸುತ್ತೇನೆ ಅಷ್ಟೇ ಎಂದು ಹೇಳಿದ್ದಾರೆ. ಅವರ ನಿರ್ಧಾರದಿಂದ ಅವರನ್ನೇ ನೆಚ್ಚಿಕೊಂಡಿದ್ದವರ ಬದುಕು ಅತಂತ್ರವಾಗಿದ್ದರೆ, ಅವರ ಮಗ ಪಂಕಜ್ ಸಿನಿಮಾ ಭವಿಷ್ಯವೂ ತೂಗೂಯ್ಯಾಲೆಯಲ್ಲಿದೆ. ಮೊದಲ ಬಾರಿಗೆ ಮಾತೃ ಸಂಸ್ಥೆಯ ಹೊರಗಿನ ಬ್ಯಾನರ್‌ನಲ್ಲಿ ನಟಿಸುತ್ತಿರುವ `ರಣ~ ಪಂಕಜ್ ಭವಿಷ್ಯವನ್ನು ನಿರ್ಧರಿಸಲಿದೆ.

ನಾರಾಯಣ್ ಚಿತ್ರರಂಗದಿಂದ ದೂರವಾದರೆ ಮುಂದೇನು ಎಂಬ ಪ್ರಶ್ನೆಗಳಿಗೆ ಉತ್ತರ ಕಿರುತೆರೆಯಲ್ಲಿ ಸಿಗುವ ಸಾಧ್ಯತೆಗಳಿವೆ. ಕಿರುತೆರೆ ಅವರಿಗೆ ಹೊಸತಲ್ಲ. `ಪಾರ್ವತಿ~, `ಭಾಗೀರಥಿ~, `ಸುಮತಿ~, `ಅಂಬಿಕಾ~ ಧಾರಾವಾಹಿಗಳ ಮೂಲಕ ಜನಪ್ರಿಯತೆ ಗಳಿಸಿದ್ದ ನಾರಾಯಣ್ ಬೆಳ್ಳಿತೆರೆಯಿಂದ ಮತ್ತೊಮ್ಮೆ ಕಿರುತೆರೆಯತ್ತ ಹೆಜ್ಜೆ ಹಾಕುತ್ತಿದ್ದಾರೆ ಎನ್ನಲಾಗುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.