ADVERTISEMENT

ಅಳಿಯನ ಮೇಲೆ ‘ಎಂದೆಂದೂ..’ ಪ್ರೀತಿ

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2014, 19:30 IST
Last Updated 6 ಮಾರ್ಚ್ 2014, 19:30 IST

ಅದು ರೀಮೇಕ್‌ ಆಗಿದ್ದಕ್ಕೇನೋ, ಮಾತು ಮತ್ತೆ ಮತ್ತೆ ಮೂಲ ಚಿತ್ರದತ್ತಲೇ ತಿರುಗುತ್ತಿತ್ತು. ತಮಿಳಿನ ‘ಎಂಗೆಯುಮ್‌ ಎಪ್ಪೊಡುಮ್‌’ ಸಿನಿಮಾದ ರೀಮೇಕ್‌ ‘ಎಂದೆಂದೂ ನಿನಗಾಗಿ’ ಹಾಡುಗಳ ಆಡಿಯೊ ಬಿಡುಗಡೆ ಸಮಾರಂಭದಲ್ಲಿ ಮಾತಾಡಿದ ಎಲ್ಲರೂ ಮೂಲ ಚಿತ್ರವನ್ನು ನೆನದಿದ್ದೇ ನೆನದಿದ್ದು. ಮೂಲಚಿತ್ರದ ಹಾಗೆ ಬಂದಿದೆಯೋ, ಅದಕ್ಕಿಂತ ಹೆಚ್ಚೋ ಎಂಬ ಕುತೂಹಲ ಎಲ್ಲರಲ್ಲಿತ್ತು.

ಹಾಡುಗಳ ಸೀಡಿ ಬಿಡುಗಡೆ ಮಾಡಿದ ನಟ ಶಿವರಾಜಕುಮಾರ್‌, ತಮಿಳು ಚಿತ್ರ ನೋಡಿ ತುಂಬಾ ಇಷ್ಟಪಟ್ಟಿದ್ದಾಗಿ ಹೇಳಿಕೊಂಡರು. ಕಲಾವಿದರ ಆಯ್ಕೆ ಇಲ್ಲೂ ತುಂಬ ಚೆನ್ನಾಗಿದೆ ಎಂಬ ಪ್ರಶಂಸೆ ಅವರದು. ‘ಈ ಸಿನಿಮಾ ಎಂದೆಂದೂ ನಿನಗಾಗಿ. ಆದರೆ ನಾನು ಎಂದೆಂದೂ ನಿಮಗಾಗಿ. ನೀವು ಕರೆದಾಗಲೆಲ್ಲ ಬರುತ್ತೇನೆ; ನನ್ನ ಕೈಲಾದ ನೆರವು ಮಾಡುತ್ತೇನೆ’ ಎಂದ ಶಿವಣ್ಣ, ಬಿಡುಗಡೆ ದಿನ ಚಿತ್ರತಂಡದೊಡನೆ ಸಿನಿಮಾ ನೋಡುವ ಭರವಸೆ ಕೊಟ್ಟರು.

ತಮ್ಮ ತಂಗಿಯ ಮಗ ವಿವೇಕ್‌ ಈ ಸಿನಿಮಾದೊಂದಿಗೆ ಚಿತ್ರರಂಗದ ಪಯಣ ಆರಂಭಿಸಿದ ಖುಷಿ ರವಿಚಂದ್ರನ್‌ ಅವರದು. ‘ಸ್ವಲ್ಪ ಮಟ್ಟಿಗೆ ನನ್ನನ್ನೇ ಹೋಲುವ ವಿವೇಕ್‌ ನಮ್ಮ ಕುಟುಂಬದಿಂದ ಬಂದಿರುವ ನಾಲ್ಕನೇ ಕುಡಿ. ಆತನನ್ನು ಬೆಂಬಲಿಸಿ’ ಎಂದು ಮನವಿ ಮಾಡಿದರು. ನಮ್ಮ ಸುತ್ತಮುತ್ತಲಿನ ಘಟನೆಗಳನ್ನೇ ಒಳಗೊಂಡ ಹಾಗೂ ಯುವಪೀಳಿಗೆಗೆ ಒಳ್ಳೆಯ ಸಂದೇಶ ಕೊಡುವ ಸಿನಿಮಾ ಇದು ಎಂಬುದು ಅವರ ಬಣ್ಣನೆ.

‘ಖಾಯಿಲೆ... ಖಾಯಿಲೆ’ ಎಂಬ ಹಾಡು ಹಿಟ್‌ ಆಗುವುದು ಖಚಿತ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದು, ಸಂಗೀತ ನಿರ್ದೇಶಕ ವಿ.ಹರಿಕೃಷ್ಣ. ಇದರ ನಾಲ್ಕು ಹಾಡುಗಳಿಗೆ ಅವರು ಸಂಗೀತ ಸಂಯೋಜಿಸಿದ್ದಾರೆ. ‘ಮೂಲ ತಮಿಳು ಸಿನಿಮಾ ನೋಡಿ ಇಷ್ಟಪಟ್ಟಿದ್ದೆ. ಅದರಂತೆಯೇ ಇದೂ ಮೂಡಿಬಂದಿದೆ’ ಎಂದು ಶ್ಲಾಘಿಸಿದರು. ಯೋಗರಾಜ ಭಟ್ಟರ ಜತೆ ಸೇರಿ ಚಿತ್ರಕ್ಕೆ ಹಾಡು ಬರೆದ ಎ.ಪಿ. ಅರ್ಜುನ್, ಇದಕ್ಕೆಲ್ಲ ಹರಿಕೃಷ್ಣ ಒತ್ತಡವೇ ಕಾರಣ ಎಂಬ ಗುಟ್ಟು ಬಿಟ್ಟುಕೊಟ್ಟರು.

ಮೊದಲ ಬಾರಿಗೆ ನಾಯಕನಾಗಲಿರುವ ವಿವೇಕ್‌ ಹಾಗೂ ಇನ್ನೊಬ್ಬ ನಾಯಕ ಅನೀಶ್‌ ಹೆಚ್ಚೇನೂ ಮಾತಾಡಲಿಲ್ಲ. ರವಿಚಂದ್ರನ್‌ ಹಾಗೂ ಶಿವರಾಜ್ ಕುಮಾರ್‌ ಸಿನಿಮಾಗಳನ್ನು ನೋಡುತ್ತಲೇ ಬೆಳೆದ ಮಹೇಶ ರಾವ್‌, ತಮ್ಮ ನಿರ್ದೇಶನದ ಐದನೇ ಸಿನಿಮಾದ ಹಾಡುಗಳ ಸೀಡಿ ಬಿಡುಗಡೆಗೆ ಅವರಿಬ್ಬರೂ ಬಂದಿರುವುದಕ್ಕೆ ಸಂತೋಷದಲ್ಲಿ ಮುಳುಗಿದ್ದರು.

ಸಿಂಧು ಲೋಕನಾಥ್‌ ಅನೀಶ್‌ ಜತೆ ನಾಯಕಿಯಾಗಿ ನಟಿಸುತ್ತಿರುವ ಮೂರನೇ ಸಿನಿಮಾ ಇದು. ತಮಿಳು ಚಿತ್ರ ಇಷ್ಟವಾಗಿದ್ದರಿಂದ ಅದರ ರಿಮೇಕ್‌ನಲ್ಲಿ ಪಾತ್ರ ಯಾವುದೆಂದೂ ಕೇಳದೇ ‘ಒಕೆ’ ಅಂದರಂತೆ. ‘ತಮಿಳಿನಲ್ಲಿ ಅಂಜಲಿ ಮಾಡಿದ್ದ ಪಾತ್ರವಿದು. ಸಹಜವಾಗಿಯೇ ಪ್ರೇಕ್ಷಕರು ನನ್ನ ಹಾಗೂ ಅಂಜಲಿ ಅಭಿನಯವನ್ನು ಹೋಲಿಕೆ ಮಾಡುತ್ತಾರೆ. ನನ್ನ ಅಭಿನಯ ಹೇಗಿದೆಯೆಂದು ಜನರೇ ಹೇಳಬೇಕು’ ಎಂದರು ದೀಪಾ ಸನ್ನಿಧಿ.

ಸಮಾರಂಭದ ಆಕರ್ಷಣೆಯಾಗಿದ್ದ ಸಿಂಧು ಲೋಕನಾಥ್‌ ಹಾಗೂ ದೀಪಾ ಸನ್ನಿಧಿ, ಪೈಪೋಟಿಗೆ ಬಿದ್ದವರಂತೆ ಸಣ್ಣ ಸ್ಕರ್ಟ್‌ ಧರಿಸಿ ಹಾಜರಾಗಿದ್ದರು. ಎತ್ತರದ ವೇದಿಕೆಯಲ್ಲಿ ಹಾಕಿದ್ದ ಕುರ್ಚಿಯಲ್ಲಿ ಸರಿಯಾಗಿ ಕುಳಿತುಕೊಳ್ಳಲು ಅವರಿಬ್ಬರೂ ಕಷ್ಟಪಡುತ್ತಿದ್ದುದು ಎದ್ದು ಕಾಣುವಂತಿತ್ತು! 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.