ಮತ್ತೊಂದು ಮಹಿಳಾ ಪ್ರಧಾನ ಚಿತ್ರಕ್ಕೆ ಚಾಲನೆ ಸಿಕ್ಕಿದೆ. ಮಹೇಶ್ ಚಿನ್ಮಯ್ ಈ ಚಿತ್ರದ ನಿರ್ದೇಶಕರು. ಸಿನಿಮಾದ ಶೀರ್ಷಿಕೆ ಇನ್ನೂ ಅಂತಿಮಗೊಂಡಿಲ್ಲ. ಕಥೆ ಸಿದ್ಧಪಡಿಸಲು ಮಹೇಶ್ ಚಿನ್ಮಯ್ ಒಂದು ವರ್ಷ ಸಮಯ ತೆಗೆದುಕೊಂಡಿದ್ದಾರಂತೆ. ಹಲವು ಸ್ವಾಮೀಜಿಗಳನ್ನು ಭೇಟಿ ಮಾಡಿ ಮಾಹಿತಿ– ಸಲಹೆ ಪಡೆದಿದ್ದಾರಂತೆ. ಈ ಸ್ವಾಮೀಜಿಗಳ ಸಲಹೆ ಏಕೆ? ಎನ್ನುವ ಪ್ರಶ್ನೆ ಮುಂದಿಟ್ಟರೆ– ‘ಅದನ್ನು ಹೇಳಿದರೆ ಕಥೆಯ ಸುಳಿವು ಬಿಟ್ಟುಕೊಟ್ಟಂತೆ ಆಗುತ್ತದೆ’ ಎಂದು ಮಹೇಶ್ ಜಾರಿಕೊಂಡರು.
ಚಿತ್ರದಲ್ಲಿ ಭಾರತದ ಇತಿಹಾಸ ಮತ್ತು ಮಹಿಳೆಯರಿಗೆ ಅರಿವು ಮೂಡಿಸುವ ಸನ್ನಿವೇಶಗಳು ಇರುತ್ತವೆಯಂತೆ. ಮಡಿಕೇರಿ, ಬಾಗಲಕೋಟೆ, ಬ್ಯಾಡಗಿ, ಹುಬ್ಬಳ್ಳಿಯಲ್ಲಿ 35 ದಿನಗಳ ಕಾಲ ಚಿತ್ರೀಕರಣ ನಡೆಸಲು ನಿರ್ದೇಶಕರು ಯೋಜನೆ ಹಾಕಿಕೊಂಡಿದ್ದಾರೆ. ನಾಯಕ ಮುಗ್ಧ ರೈತನ ಮಗ. ತಂಗಿಯ ಸಲುವಾಗಿ ನಗರಕ್ಕೆ ಬಂದು ಅವಳಿಗಾಗಿ ಏನೇನು ಮಾಡುತ್ತಾನೆ ಮತ್ತು ಮಹಿಳೆಯರಿಗೆ ರಕ್ಷಣೆ ಕೊಡುವಲ್ಲಿ ಯಾವ ರೀತಿ ಪಾತ್ರವಹಿಸುತ್ತಾನೆ ಎನ್ನುವುದು ಚಿತ್ರದ ತಿರುಳು.
ಬ್ಯಾಡಗಿಯ ನಾರಾಯಣ್ ಚಿತ್ರದ ನಾಯಕ. ಕುಂದಾಪುರದ ರೇಷ್ಮಾ ಕಾಂಚನ್ ಹಳ್ಳಿ ಹುಡುಗಿಯ ಪಾತ್ರಕ್ಕೆ ಬಣ್ಣ ಹಚ್ಚುತ್ತಿದ್ದಾರೆ. ಮಹಾರಾಜ್ ಐದು ಹಾಡುಗಳಿಗೆ ರಾಗ ಸಂಯೋಜಿಸುತ್ತಿದ್ದಾರೆ. ರಾಣೇಬೆನ್ನೂರಿನ ಟಿ. ಉಮೇಶ್ ಚಿತ್ರದ ನಿರ್ಮಾಪಕರು. ಶೋಭರಾಜ್, ಕಿಲ್ಲರ್ ವೆಂಕಟೇಶ್, ನಯನಾ, ಶ್ರುತಿನಾಯ್ಡು, ಕೆಂಪೇಗೌಡ, ಕುರಿ ಪ್ರತಾಪ್ ತಾರಾಗಣದಲ್ಲಿ ಇದ್ದಾರೆ. ಚಿತ್ರದುರ್ಗದ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ, ನಟ ಧರ್ಮ ಕೀರ್ತಿರಾಜ್ ಮತ್ತಿತರರು ಚಿತ್ರೀಕರಣಕ್ಕೆ ಚಾಲನೆ ಸಿಕ್ಕ ಸಂದರ್ಭದಲ್ಲಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.