ADVERTISEMENT

ಎಲ್ಲಾ ಪ್ರೇಮಿಗಳಿಗಾಗಿ!

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2012, 19:30 IST
Last Updated 23 ಫೆಬ್ರುವರಿ 2012, 19:30 IST

ಪ್ರೀತಿ ಎಂದರೆ ಹುಡುಗ ಹುಡುಗಿಯರ ನಡುವಿನ ಬೆಸುಗೆಗೆ ಸೀಮಿತವಲ್ಲ. ಗೆಳೆಯರ ನಡುವಿನ ಪ್ರೀತಿ, ತಂದೆತಾಯಿ ಮೇಲಿನ ಪ್ರೀತಿ, ಸಹೋದ್ಯೋಗಿಗಳ ಮೇಲಿನ ಪ್ರೀತಿ... ಎಲ್ಲ ಸಂಬಂಧಗಳಲ್ಲಿಯೂ ಪ್ರೀತಿ ಅಡಗಿರುತ್ತದೆ. ಅದನ್ನು ಪ್ರೇಮಿಗಳಿಗೆ ಮೀಸಲಿಡುವುದು ಸರಿಯಲ್ಲ..~ ಹೀಗೆ `ಪ್ರೇಮಿಗಳ ದಿನ~ದಂದು ಪುಟ್ಟ ಭಾಷಣ ಮಾಡಿದರು ನಿರ್ದೇಶಕ ಸಂತೋಷ್‌ಕುಮಾರ್.

ಆದರೆ ಅವರು ಮಾಡಹೊರಟಿರುವುದು ಪ್ರೇಮಿಗಳ ಚಿತ್ರ. ಅದಕ್ಕೆ ಹೆಸರಿಟ್ಟಿರುವುದು `ಪ್ರೇಮಿಗಳ ದಿನ~ವೆಂದು. ಅದಕ್ಕೆ ಮುಹೂರ್ತ ನೆರವೇರಿಸಿದ್ದು ಸಹ ಪ್ರೇಮಿಗಳ ದಿನದಂದೇ. ಅವರ ಭಾಷಣಕ್ಕೂ ಚಿತ್ರದಲ್ಲಿ ತೋರಿಸಲು ಹೊರಟಿರುವುದಕ್ಕೂ ಸಂಬಂಧವಿಲ್ಲ. ಇದು ಅವರು ಮೊದಲ ಬಾರಿಗೆ ಆ್ಯಕ್ಷನ್ ಕಟ್ ಹೇಳುತ್ತಿರುವ ಚಿತ್ರ.

ದಯಾಳ್ ಜೊತೆ ಸಹಾಯಕರಾಗಿ ಕೆಲಸ ಮಾಡಿದ ಅನುಭವ ಅವರ ಜೊತೆಗಿದೆ.
ಚಿತ್ರದಲ್ಲಿ ಎರಡು ಜೋಡಿಗಳಿವೆ. ರಾಕೇಶ್ ಅಡಿಗ ಮತ್ತು ತ್ರಿಲೋಕ್ ಚಿತ್ರದ ನಾಯಕರು. ರೂಪಾ ಹಾಸ್ಯಗಾರ್ ಮತ್ತು ರೂಪಾ ನಟರಾಜ್ ನಾಯಕಿಯರು. ಇದರಲ್ಲಿ ಕಾಲೇಜು ಹುಡುಗರ ಸ್ನೇಹ, ಪ್ರೀತಿ ಜೊತೆಗೆ ಯುವಜೋಡಿಯ ಕಥೆ ಚಿತ್ರದಲ್ಲಿ ಬೆರೆತಿದೆ ಎಂದರು ಸಂತೋಷ್‌ಕುಮಾರ್. ಚಿತ್ರದಲ್ಲಿ ಯುವಪ್ರೇಮಿಗಳಿಗೆ ಹಳೆ ಜೋಡಿಯೊಂದು ಎದುರಾಗುತ್ತದೆ. ಅವರಿಬ್ಬರು 25 ವರ್ಷದ ತಮ್ಮ ಹಿಂದಿನ ಕಥೆಯನ್ನು ಬಿಚ್ಚಿಡುತ್ತಾರೆ ಎಂದು ಹೇಳಿದರು.

 ಚಿತ್ರದಲ್ಲಿ ಐದು ಹಾಡು ಮೂರು ಹೊಡೆದಾಟದ ದೃಶ್ಯಗಳಿವೆ. ಇದು ಮಾಸ್ ಮತ್ತು ಕ್ಲಾಸ್ ಎರಡೂ ವರ್ಗಕ್ಕೆ ಹಿಡಿಸುವ ಚಿತ್ರ ಎಂಬುದು ಅವರ ಅಭಿಪ್ರಾಯ.

ಒಂದು ನವಿರು ಪ್ರೇಮಕಥೆಯ ಚಿತ್ರಕ್ಕೆ ನಾಯಕನಾಗುತ್ತಿರುವುದು ಸಂತಸ ತಂದಿದೆ ಎಂದು ಸಂಭ್ರಮಿಸಿದರು ನಟ ರಾಕೇಶ್ ಅಡಿಗ. ನಿರ್ದೇಶಕ ಸಂತೋಷ್ ಅವರ ಸಿನಿಮಾ ಪ್ರೀತಿಯ ಬಗ್ಗೆ ರಾಕೇಶ್ ಮೆಚ್ಚುಗೆಯ ಮಾತನ್ನಾಡಿದರು.

ಭರತ್ ಮೊದಲ ಬಾರಿಗೆ ಚಿತ್ರದ ಹಾಡುಗಳಿಗೆ ಸ್ವರ ಹೆಣೆಯುತ್ತಿದ್ದಾರೆ. ಮೂಲತಃ ಗಾಯಕರಾದ ಅವರು ಅನಿರೀಕ್ಷಿತವಾಗಿ ಸಂಗೀತ ನಿರ್ದೇಶಕನ ಪಟ್ಟ ದೊರೆತಿರುವುದರ ಬಗ್ಗೆ ಸಂತಸ ವ್ಯಕ್ತಪಡಿಸಿದರು. ಎಲ್ಲಾ ಹಾಡುಗಳನ್ನೂ ಕನ್ನಡದ ಗಾಯಕರಿಂದಲೇ ಹಾಡಿಸಲಾಗುತ್ತಿದೆ ಎಂದರು. ಬೆಂಗಳೂರು, ಮಂಗಳೂರು, ಕೇರಳ, ಮಡಿಕೇರಿಗಳಲ್ಲಿ ಚಿತ್ರೀಕರಣ ನಡೆಯಲಿದೆ.                                        

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.