ADVERTISEMENT

ಎಲ್ಲಾ ಶಿವಮಯವೋ...

ಕೆ.ನರಸಿಂಹ ಮೂರ್ತಿ
Published 19 ಜನವರಿ 2012, 19:30 IST
Last Updated 19 ಜನವರಿ 2012, 19:30 IST
ಎಲ್ಲಾ ಶಿವಮಯವೋ...
ಎಲ್ಲಾ ಶಿವಮಯವೋ...   

`ಇದೆಲ್ಲವೂ ಸಾಧ್ಯವಾಗಿದ್ದು ಆ ಶಿವನಿಂದಲೇ~ ಎಂದರು ಶಿವರಾಜಕುಮಾರ್.
ಕೆಜಿಎಫ್‌ನ ಸೈಯನೈಡ್ ಗುಡ್ಡಗಳ ನಡುವಿನ ಬಯಲಿನಲ್ಲಿ ಅವರು ಕುಳಿತಿದ್ದ ಸ್ಥಳದಿಂದ ಕೊಂಚ ದೂರದಲ್ಲಿ ಬೃಹತ್ ಶಿವನ ಮೂರ್ತಿಯ ಸೆಟ್ ಇತ್ತು. ಆಗಷ್ಟೇ ಅಲ್ಲಿ ಅವರು `ಶಿವ~ ಸಿನಿಮಾದ ಕ್ಲೈಮ್ಯಾಕ್ಸ್ ದೃಶ್ಯದಲ್ಲಿ ಅಭಿನಯಿಸಿ ಬಂದಿದ್ದರು.

ಐದು ದಿನದ ಹಿಂದಷ್ಟೇ ಫೈಟ್ ದೃಶ್ಯದಲ್ಲಿ ಪಾಲ್ಗೊಳ್ಳುವಾಗ ಅವರ ಬಲಪಾದ ಹೊರಳಿ ಊದಿಕೊಂಡಿತ್ತು. ಏನೇ ಔಷಧಿ ಹಚ್ಚಿದರೂ ಊತವಿಳಿದಿರಲಿಲ್ಲ. ಆದರೆ ಅಂಥ ನೋವಿನಲ್ಲೆ ಮತ್ತೆ ಮಾರನೇ ದಿನ ಶೂಟಿಂಗ್‌ನಲ್ಲಿ ತೊಡಗಲು ಆ ಶಿವ ಶಕ್ತಿಯೇ ಕಾರಣ ಎಂಬುದು ಅವರ ನಂಬಿಕೆ. `ಈಗ ಏನು ಮಾಡ್ತಿದೀನೋ ಅದೆಲ್ಲಕ್ಕೂ ಕಾರಣ ಪವರ್ ಆಫ್ ಶಿವ~ ಎಂದು ಅವರು ಆ ಕಡೆಗೆ ಕೈದೋರಿದರು. ಶಿವ ಶಿವನನ್ನೇ ನಂಬಿದ ಕಥೆ ಇದು.

ಬಯಲ ಸುತ್ತಲಿನ ಗುಡ್ಡಗಳ ಮೇಲೆ ಪೌರಾಣಿಕ ಎಂಬಂತೆ ಕಾಣುವ ಕಪ್ಪು ಗೋಪುರಗಳಿದ್ದವು. ಕಳೆದ ವಾರ ಶೂಟಿಂಗ್‌ಗೆಂದು ಅಲ್ಲಿಗೆ ಬಂದಿದ್ದ ಅವರ ಜೊತೆಗೆ 150 ಕಲಾವಿದರಿದ್ದರು.

ಬಿಸಿಲಿಗೆ ಚುರುಗುಟ್ಟುತ್ತಿದ್ದ ಸೈಯನೈಡ್ ಗುಡ್ಡಗಳ ನಡುವೆ ಏಳುವ ಅಪಾರ ದೂಳನ್ನು ಲೆಕ್ಕಿಸದೆ ಕುಳಿತಿದ್ದ ಅವರು ಸಿನಿಮಾದ ಬಗ್ಗೆ, ನಿರ್ದೇಶಕರ ಮೇಲೆ ಅಪಾರ ವಿಶ್ವಾಸ ವ್ಯಕ್ತಪಡಿಸಿದರು. `ಫ್ಲಾಷ್‌ಬ್ಯಾಕ್ ಸೇರಿದಂತೆ ಸಿನಿಮಾದ ಪ್ರತಿ ಎಪಿಸೋಡ್ ಕೂಡ ಸ್ಪೆಷಲ್ ಆಗಿದೆ.
 
1999ರಲ್ಲಿ ಬಂದ ಎಕೆ 47 ಸಿನಿಮಾದ ನಿರ್ದೇಶಕ ಓಂಪ್ರಕಾಶ್ ಮತ್ತು ಶಿವ ಸಿನಿಮಾದ ಓಂಪ್ರಕಾಶ್ ನಡುವೆ ಅಪಾರ ವ್ಯತ್ಯಾಸವಿದೆ. ಹೀಗಾಗಿ ಇದು ಪ್ರತಿ ಫ್ರೇಮ್‌ನಲ್ಲೂ ಸ್ಟೈಲಿಷ್ ಆಗಿರುವ ಸಿನಿಮಾ. ನನಗೆ ಖುಷಿ ಕೊಟ್ಟಿದೆ. ಹೋಪ್ ಇದೆ~ ಎಂದು ಹುಬ್ಬೇರಿಸಿದರು ಶಿವಣ್ಣ. ಅವರ ಪಕ್ಕದ್ಲ್ಲಲೇ ಕುಳಿತಿದ್ದ ಓಂಪ್ರಕಾಶ್ ಹೆಮ್ಮೆ-ಸಂಕೋಚ ಮಿಶ್ರಿತ ನಗು ನಕ್ಕರು.

ಶಿವಣ್ಣ ಮುಂದುವರಿಸಿದರು: ಕೆಜಿಎಫ್ ನನಗೆ ಲಕ್ಕಿ ಲೊಕೇಶನ್. ಈ ಕ್ಲೈಮಾಕ್ಸ್ ದೃಶ್ಯವನ್ನು ಸಕಲೇಶಪುರದಲ್ಲಿ ಚಿತ್ರಿಸಬೇಕೆಂದುಕೊಂಡಿದ್ದೆವು. ಆದರೆ ಕತೆಗೆ ಒತ್ತು ಕೊಟ್ಟು ಇಲ್ಲೇ ನಡೀತಿದೆ. 6ನೇ ಬಾರಿ ಇಲ್ಲಿಗೆ ನಾನು ಬರ‌್ತಿರೋದು. ಗಂಡುಗಲಿ, ಸಾರ್ವಭೌಮ, ಅಣ್ಣ-ತಂಗಿ, ರಾಕ್ಷಸ, ಬಂಧು-ಬಳಗ ಬಳಿಕ ಈಗ ಶಿವ ಸಿನಿಮಾಗಾಗಿ ಬಂದಿರುವೆ ಎಂದರು.
ಡ್ಯಾನಿ ಜೊತೆಗಿನ ಫೈಟ್, ಸಾಹಸ ನಿರ್ದೇಶಕ ಕೆ.ಡಿ.ವೆಂಕಟೇಶ್ ಕೈಚಳಕದಲ್ಲಿ ಬಂದಿರುವ ರೋಪ್ ಶಾಟ್, ಚೇಸಿಂಗ್ ದೃಶ್ಯಗಳೆಲ್ಲವೂ ಅವರಿಗೆ ಖುಷಿ ಕೊಟ್ಟಿವೆ. ಯೋಗರಾಜಭಟ್ಟರು ಬರೆದಿರುವ ಒಂದು ಹಾಡನ್ನು ಶಿವಣ್ಣ ಹಾಡಿರುವುದು ಸಿನಿಮಾದ ಮತ್ತೊಂದು ವಿಶೇಷ.

`ಫುಟ್‌ಪಾತ್ ಇರೋದು ನಡೆಯೋಕೆ ಹೊರತು ಬದುಕು ನಡೆಸೋಕೆ ಅಲ್ಲ~ ಎಂಬುದೇ ಸಿನಿಮಾದ ಸಂದೇಶ. ಫಿಲಾಸಫಿ - ಎಂಟರ್‌ಟೇನ್‌ಮೆಂಟ್ ಎರಡನ್ನೂ ಒಟ್ಟಿಗೇ ನೀಡೋದು ನಮ್ಮ ಗುರಿ ಎಂದರು ನಿರ್ದೇಶಕ ಓಂಪ್ರಕಾಶ್. ಕಾಲೇಜು ವಿದ್ಯಾರ್ಥಿಯಂತೆ ಕಾಣುತ್ತಿದ್ದ ಅವರ ಟೀಶರ್ಟ್ ಮೇಲೆ ಹಿಯರ್ ಕಮ್ಸ ಸಕ್ಸಸ್ ಎಂಬ ಸಾಲಿತ್ತು.

ಶಿವಣ್ಣ ಜೊತೆಗೆ ತಮ್ಮದು ನಾಲ್ಕನೇ ಸಿನಿಮಾ. 100 ಸಿನಿಮಾ ಮೂಲಕ ಅವರು ಒಂದು ಇನ್ನಿಂಗ್ಸ್ ಮುಗಿಸಿದ್ದಾರೆ. ಶಿವ ಹೊಸ ಇನ್ನಿಂಗ್ಸ್‌ನ ಮೊದಲ ಸಿನಿಮಾ. ಮೇಲಾಗಿ ದೊಡ್ಡ ಕಮರ್ಷಿಯಲ್ ಸಿನಿಮಾ. ಹೀಗಾಗಿ ತುಂಬಾ ಖುಷಿಯಾಗಿದೆ ಎಂದರು ಓಂಪ್ರಕಾಶ್.

`ನಿರ್ಮಾಪಕರು ಕೇಳಿದ್ದೆಲ್ಲವನ್ನೂ ಕೊಟ್ಟಿದ್ದಾರೆ~ ಎಂದು ನಟ, ನಿರ್ದೇಶಕರಿಬ್ಬರೂ ಒಕ್ಕೊರಲಿನಲ್ಲಿ ಹೇಳಿದಾಗ ನಿರ್ಮಾಪಕ ಶ್ರೀಕಾಂತ್ ಮೌನ ನಗೆ ನಕ್ಕರು. `ಮಳವಳ್ಳಿ ಬ್ರದರ್ಸ್~ ಪಾತ್ರ ಮಾಡ್ತಿರೋ ಬುಲೆಟ್ ಪ್ರಕಾಶ್ ಮತ್ತು ಶೋಭರಾಜ್ ಜೊತೆಗಿದ್ದರು.

ಕೊನೆ ಮಾತು: 
ಈಗಿನ ಸನ್ನಿವೇಶದಲ್ಲಿ ಓವರ್ ಆ್ಯಕ್ಟಿಂಗ್ ಮಾಡೋದು ಕಷ್ಟ. ಅದನ್ನು ಇಲ್ಲಿ ಮಾಡಿಲ್ಲ. ಹೀಗಾಗಿಯೇ ಬಾಲಿವುಡ್ ಸೇರಿದಂತೆ ಯಾವುದೇ ಭಾಷೆಯ ಸಿನಿಮಾದ ಜೊತೆಗೂ ಶಿವ ಸಿನಿಮಾ ಪೈಪೋಟಿ ನೀಡಲಿದೆ ಎಂದು ಮಾತು ಮುಗಿಸಿದರು ಶಿವಣ್ಣ. ಆ ಮಾತಿನಲ್ಲಿ ದೇವ ಶಿವನ ಪ್ರಭಾವ ಕಾಣಲಿಲ್ಲ. ಹೀರೋ ಶಿವ ಮಾತ್ರ ಹೊಳೆದ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.