ADVERTISEMENT

ಕಲ್ಕಿ ಯುಗಳ: ಪ್ರೇಮವೂ ಪುರಾಣವೂ...

​ಪ್ರಜಾವಾಣಿ ವಾರ್ತೆ
Published 14 ಜನವರಿ 2016, 19:30 IST
Last Updated 14 ಜನವರಿ 2016, 19:30 IST
ಕಲ್ಕಿ ಯುಗಳ: ಪ್ರೇಮವೂ ಪುರಾಣವೂ...
ಕಲ್ಕಿ ಯುಗಳ: ಪ್ರೇಮವೂ ಪುರಾಣವೂ...   

ಕಿರುತೆರೆ ವೀಕ್ಷಕರಿಗೆ ಎರಡು ಹೊಸ ಧಾರಾವಾಹಿಗಳನ್ನು ನೀಡಲು ‘ಕಲ್ಕಿ’ ಕನ್ನಡ ಮನರಂಜನಾ ವಾಹಿನಿ ಸಿದ್ಧವಾಗಿದೆ. ಬಾಲಾ ಸುರೇಶ್ ನಿರ್ದೇಶನದ ಪೌರಾಣಿಕ, ಸಾಮಾಜಿಕ ಕಥೆಯುಳ್ಳ ‘ಅಮ್ನೋರು’ ಹಾಗೂ ಕೈಲಾಶ್ ಮಳವಳ್ಳಿ ನಿರ್ದೇಶನದ ‘ನೀ ಇರಲು ಜೊತೆಯಲ್ಲಿ’ ಧಾರಾವಾಹಿಗಳು ಕಳೆದ ಸೋಮವಾರದಿಂದ (ಜ.11) ಪ್ರಸಾರವಾಗುತ್ತಿವೆ.

ಧಾರಾವಾಹಿ ನಿರ್ದೇಶನದಲ್ಲಿ ಬಾಲಾ ಸುರೇಶ್ ಅವರದ್ದು ಮೂವತ್ತು ವರ್ಷಗಳ ಅನುಭವ. ‘ಅಮ್ನೋರು’ ಅವರ ಎರಡನೇ ಪೌರಾಣಿಕ ಧಾರಾವಾಹಿ. ಇದರಲ್ಲಿ ಕೇವಲ ದೇವರು, ಭಕ್ತಿ ಅಷ್ಟೇ ಅಲ್ಲದೇ ನಮ್ಮ ದೇಶದ ಆಯುರ್ವೇದ, ಹಿಮಾಲಯ ತಪಸ್ವಿಗಳ ಸಾಧನೆ ಮುಂತಾದ ಅಂಶಗಳನ್ನೂ ನಿರ್ದೇಶಕರು ವಿವರವಾಗಿ ಹೇಳಿದ್ದಾರೆ. ಅನೇಕ ಪೌರಾಣಿಕ ಧಾರಾವಾಹಿಗಳಲ್ಲಿ ಇರುವಂತೆಯೇ ದುಷ್ಟಶಕ್ತಿಯ ಮೇಲೆ ದೈವೀಶಕ್ತಿ ಗೆಲುವು ಸಾಧಿಸುವ ಕಥೆಯನ್ನು ಇಲ್ಲೂ ಕಾಣಬಹುದು. ಇಲ್ಲೊಂದು ತ್ರಿಕೋನ ಪ್ರೇಮಕಥೆಯೂ ಇದೆ.

ಈಗಾಗಲೇ ಹಲವು ಧಾರಾವಾಹಿಗಳಲ್ಲಿ ಕಾಣಿಸಿಕೊಂಡ ನಿಶ್ಚಿತಾ ಗೌಡ ದೇವಿಯ ಪಾತ್ರದಲ್ಲಿ ಕಾಣಿಸಿಕೊಂಡರೆ ಹೊಸ ಕಲಾವಿದರಾದ ಶಿಲ್ಪಾ ಮತ್ತು ಅಭಿಷೇಕ್ ಮುಖ್ಯಪಾತ್ರದಲ್ಲಿದ್ದಾರೆ. ದೇವರನ್ನು ವಿರೋಧಿಸದೆಯೇ ಮೌಢ್ಯ ಆಚರಣೆಗಳನ್ನು ವಿರೋಧಿಸುತ್ತ, ತಾನು ಮಾಡಿದ್ದೇ ಸರಿ ಎನ್ನುವ ಪಾತ್ರ ಅಭಿಷೇಕ್ ಅವರದ್ದು. ಕೇವಲ ಮನರಂಜನೆ ಅಲ್ಲದೆ ಅನೇಕ ತಿಳಿವಳಿಕೆಯ ಅಂಶಗಳೂ ಈ ಧಾರಾವಾಹಿಯಲ್ಲಿವೆ ಎಂಬುದು ತಂಡದ ಅನಿಸಿಕೆ. ‘ಅಮ್ನೋರು’ ಧಾರಾವಾಹಿಯಲ್ಲಿ ಶೇ 20ರಷ್ಟು ಗ್ರಾಫಿಕ್ ಬಳಕೆಯಾಗಲಿದೆ. ಈ ಧಾರಾವಾಹಿ ಸೋಮವಾರದಿಂದ ಶುಕ್ರವಾರದವರೆಗೆ ಪ್ರತಿ ರಾತ್ರಿ 8 ಗಂಟೆಗೆ ಪ್ರಸಾರವಾಗುತ್ತದೆ.

ಇನ್ನು ತನ್ನ ನಿರ್ದೇಶನದ ‘ನೀ ಇರಲು ಜೊತೆಯಲ್ಲಿ’ ಧಾರಾವಾಹಿಗೆ ಮೂರ್ನಾಲ್ಕು ತಿಂಗಳುಗಳಿಂದ ಸಿದ್ಧತೆ ನಡೆಸಿದ್ದಾಗಿ ಹೇಳಿದರು ಕೈಲಾಶ್. ‘ಕೌಟುಂಬಿಕ ಹಿನ್ನೆಲೆಯುಳ್ಳ ಸುಂದರ ಪ್ರೇಮಕಥೆಯನ್ನು ಅಚ್ಚುಕಟ್ಟಾಗಿ ತೋರಿಸುವ ಪ್ರಯತ್ನ ಅವರದಂತೆ. ಕಥೆ ಹಾಗೂ ಚಿತ್ರಕಥೆ ಬರೆದ ಆರ್.ಜಿ. ಶೇಖರ್, ‘ವಿಧಿಯ ಕೈಗೊಂಬೆಗಳಾಗೋ ಪ್ರೀತ್ಸೋ ಜೀವಿಗಳ ಪ್ರೀತಿಯ ಸಂಘರ್ಷ’ ಎಂದು ಕಥೆಯ ಬಗ್ಗೆ ವಿವರಿಸಿದರು. ನಾವು ಪ್ರೀತಿಸುವವರು ನಮ್ಮ ಜೊತೆಯಲ್ಲಿ ಇದ್ದಾಗ ನಮ್ಮಲ್ಲಿ ಮೂಡುವ ರಾಗವೇ ‘ನೀ ಇರಲು ಜೊತೆಯಲ್ಲಿ’ ಎಂದು ಶೀರ್ಷಿಕೆಯನ್ನು ಸಮರ್ಥಿಸಿಕೊಂಡರು ಶೇಖರ್.

ಕಥಾನಾಯಕಿಯಾಗಿ ಮಧು ಮತ್ತು ಕಥಾನಾಯಕನಾಗಿ ಅರುಣ್ ಮೊದಲ ಬಾರಿ ಕ್ಯಾಮೆರಾ ಎದುರಿಸುತ್ತಿದ್ದಾರೆ. ಶ್ರೀಮಂತ ಕುಟುಂಬದ ಕಲ್ಲು ಹೃದಯದ ಹುಡುಗನಾಗಿ ಅರುಣ್ ಮತ್ತು ಮಗುವಿಗಾಗಿ ಏನೆಲ್ಲ ಕಷ್ಟಗಳನ್ನು ಸಹಿಸಿಕೊಳ್ಳುವ ನಾಯಕಿಯಾಗಿ ಮಧು ಬಣ್ಣಹಚ್ಚಿದ್ದಾರೆ. ಆದರೆ ಪತ್ರಿಕಾಗೋಷ್ಠಿಯಲ್ಲಿ ಇವರೆಲ್ಲರಿಗಿಂತ ಹೆಚ್ಚಾಗಿ ಗಮನ ಸೆಳೆಯುತ್ತಿದ್ದುದು ಪುಟಾಣಿ ಹಿತ. ಒಂದೇ ಮನೆಯಲ್ಲಿದ್ದರೂ ಅಪರಿಚಿತರಂತೆ ಇರುವ ನಾಯಕ–ನಾಯಕಿಯನ್ನು ಹತ್ತಿರ ತರುವ ಈ ಮಗು ಕಥೆಯಲ್ಲಿ ಎಲ್ಲರಿಗಿಂತ ಮಹತ್ವದ ಪಾತ್ರ ವಹಿಸುತ್ತದೆ ಎನ್ನುತ್ತಾರೆ ನಿರ್ದೇಶಕರು. ಈ ಧಾರಾವಾಹಿ ಸೋಮವಾರದಿಂದ ಶುಕ್ರವಾರದವರೆಗೆ ಪ್ರತಿ ರಾತ್ರಿ 8.30ಕ್ಕೆ ಪ್ರಸಾರವಾಗುತ್ತದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.