ADVERTISEMENT

ಕಲ್ಪನೆ ಇಲ್ಲದ ಖಯಾಲಿ

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2011, 19:30 IST
Last Updated 17 ಫೆಬ್ರುವರಿ 2011, 19:30 IST

‘ನನಗೆ ಕಲ್ಪನೆಗಳು ಕಡಿಮೆ. ಸುತ್ತಮುತ್ತ ನಡೆಯುವ ಅಥವಾ ನನ್ನ ಜೀವನದಲ್ಲೇ ನಡೆದಂಥ ಘಟನೆಗಳನ್ನಿಟ್ಟುಕೊಂಡು ಚಿತ್ರ ಮಾಡೋದು ಖಯಾಲಿ. ಮೂರು ವರ್ಷಗಳ ನಂತರ ನಿರ್ದೇಶನ ಮಾಡಿದ್ದೀನಿ ಅಂದರೆ ಅದು ಗ್ಯಾಪ್ ಫಿಲ್ ಮಾಡೋದಕ್ಕಂತಲ್ಲ. ಒಳ್ಳೆ ಅವಕಾಶ ಬಂತು, ಮಾಡಿದೆ. ಇಷ್ಟುದಿನ ಹಳ್ಳಿ ಸಿನಿಮಾ ಮಾಡ್ತಿದ್ದೆ. ಆದರೆ ‘ವೀರಬಾಹು’ ಹಾಗಲ್ಲ. ಕೇವಲ ಬ್ಯಾಕ್‌ಡ್ರಾಪ್‌ಗಷ್ಟೇ ಮೇಲುಕೋಟೆಯನ್ನು ಬಳಸಿಕೊಳ್ಳಲಾಗಿದೆ’ ನಿರ್ದೇಶಕ ಮಹೇಂದರ್ ಮಂದಬೆಳಕಿನಲ್ಲಿ  ‘ವೀರಬಾಹು’ ಬಗ್ಗೆ ಮಾತನಾಡುತ್ತಿದ್ದರು.

‘ಲವ್ ಸಬ್ಜೆಕ್ಟ್, ಪಕ್ಕಾ ಕಮರ್ಷಿಯಲ್. ಒಳ್ಳೆಯ ಸಿನಿಮಾ ಅಂತ ಧೈರ್ಯದಿಂದ ಹೇಳ್ತೀನಿ. ನನ್ನತನ ಉಳಿಸಿಕೊಂಡು ಈ ಚಿತ್ರ ಮಾಡಿದ್ದೀನಿ. . ವಿಜಿ ಚಿತ್ರಗಳ ಮೂಡೇ ಬೇರೆ. ಅವನು ಒರಟ. ಆದರೆ ಅಷ್ಟೇ ಸೂಕ್ಷ್ಮ ಹೃದಯಿ. ಭಾವನಾತ್ಮಕ ವಿಷಯಗಳು ಎದುರಾದಾಗ ಗಳಗಳನೆ ಅತ್ತುಬಿಡುತ್ತಾನೆ. ಆಕ್ಷನ್ ಮತ್ತು ಲವ್ ಎರಡನ್ನೂ ಬ್ಲೆಂಡ್ ಮಾಡಿ ಟ್ರೆಡೀಷನಲ್ ಬ್ಯಾಕ್‌ಗ್ರೌಂಡ್‌ನಲ್ಲಿ ಈ ಚಿತ್ರ ಮಾಡಲಾಗಿದೆ. ನಿರ್ಮಾಪಕರು ಕೇಳಿದಷ್ಟು ಸವಲತ್ತು ಕೊಟ್ಟಿದ್ದಾರೆ’ ಎಂದಾಗ ಮುಖದಲ್ಲಿ ಸಂತೃಪ್ತಭಾವ ಹರಡಿತ್ತು.

ನಿರ್ಮಾಪಕ ಸಂದೇಶ್ ನಾಗರಾಜ್, ‘ಅವರವರ ಚಿತ್ರಗಳನ್ನು ಅವರವರು ಹೊಗಳೋದು ಕಾಮನ್. ಚಿತ್ರ ಹೇಗಿದೆ ಅನ್ನೋದನ್ನ ಪ್ರೇಕ್ಷಕರೇ ನೋಡಿ ನಿರ್ಧರಿಸಲಿ. ಇದೇ ವಾರ ‘ಮೇನಕಾ’ ಚಿತ್ರಮಂದಿರದಲ್ಲಿ ಬಿಡುಗಡೆ ಮಾಡಲಾಗತ್ತೆ. ನಿಧಾನಕ್ಕೆ ದುಡ್ಡು ಬರಲಿ ಅನ್ನೋ ಆಶಯ ಅಷ್ಟೇ. ಈವರೆಗೆ ಮಾಡಿದ ಚಿತ್ರಗಳಿಗಿಂತ ಇದು ಜಾಸ್ತಿ ಬಜೆಟ್‌ನ ಚಿತ್ರ. ಮತ್ತೆ... ಈ ಚಿತ್ರದ ಫೈಟ್‌ಸೀನ್‌ಗಳಲ್ಲಿ ಮಾಡಿದ ಹಾಗೆ ವಿಜಯ್ ಯಾವುದೇ ಚಿತ್ರಗಳಲ್ಲಿಯೂ ಈವರೆಗೆ ಮಾಡಿರಲಿಕ್ಕಿಲ್ಲ. ಸುಮ್‌ಸುಮ್ನೆ ನೆಗೆಯೋದು, ಹಾರೋದು ಯಾವುದೂ ಇಲ್ಲಿಲ್ಲ... ಎಲ್ಲವೂ ಸಹಜವಾಗಿ, ಸಂದರ್ಭಕ್ಕೆ ಅನುಗುಣವಾಗಿದೆ’.

‘ಇತ್ತೀಚೆಗೆ ಒಳ್ಳೇ ಸಿನಿಮಾಗಳು ಅಂತ ನಿರ್ಧರಿಸೋದೇ ಕಷ್ಟ ಆಗ್ತಿದೆ. ಜನಕ್ಕೆ ಯಾವ ರೀತಿ ಚಿತ್ರಗಳು ಬೇಕು ಅನ್ನೋದೇ ಗೊತ್ತಾಗ್ತಿಲ್ಲ. ಮಾರ್ನಿಂಗ್ ಶೋಗಳಿಗೆ ಜನ ಬರ್ತಿಲ್ಲ. ‘ಒಲವೇ ಮಂದಾರ’ ಒಳ್ಳೇ ಸಿನಿಮಾ ಅಂದ್ರು. ಆದರೆ ಚಿತ್ರಮಂದಿರಗಳು ಖಾಲಿ ಹೊಡೀತಿವೆ. ಅಲ್ಪ ಬಂಡವಾಳ ಹಾಕಿದವರು ಗೆಲ್ತಿದಾರೆ. ಹೆಚ್ಚು ಬಂಡವಾಳ ಹೂಡಿದವರು ಸೋಲ್ತಿದಾರೆ’ ಎಂದು ‘ಮುಂಗಾರು ಮಳೆ’ಯನ್ನು ಉದಾಹರಿಸಿ ಮಾತು ಮುಗಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.