ADVERTISEMENT

ಕಾಲ್ಗೆಜ್ಜೆ ನಾದ ಬಂಗಾರು ಮೇಳ

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2011, 18:30 IST
Last Updated 3 ಫೆಬ್ರುವರಿ 2011, 18:30 IST
ಕಾಲ್ಗೆಜ್ಜೆ ನಾದ ಬಂಗಾರು ಮೇಳ
ಕಾಲ್ಗೆಜ್ಜೆ ನಾದ ಬಂಗಾರು ಮೇಳ   

ಅಚ್ಚುಕಟ್ಟು ನಿರೂಪಣೆ.ಅಚ್ಚುಕಟ್ಟು ಅಭಿನಯ.      ಪರಿಣಾಮಕಾರಿ ಸಂಗೀತ.
‘ಕಾಲ್ಗೆಜ್ಜೆ’ ಸಿನಿಮಾದ ಪ್ರಥಮ ಪ್ರದರ್ಶನ ನೋಡಿದ ಉದ್ಯಮದ ಪ್ರತಿನಿಧಿನಗಳ ಮೊದಲ ಪ್ರತಿಕ್ರಿಯೆಯಿದು. ಹಿರಿಯ ನಿರ್ದೇಶಕರಾದ ಪಿ.ಎಚ್.ವಿಶ್ವನಾಥ್, ನಾಗತಿಹಳ್ಳಿ ಚಂದ್ರಶೇಖರ್, ಎಸ್.ಮಹೇಂದರ್, ಸಂಗೀತ ನಿರ್ದೇಶಕ ಹಂಸಲೇಖಾ ಸೇರಿದಂತೆ ಚಿತ್ರರಂಗದ ಅನೇಕರು ‘ಕಾಲ್ಗೆಜ್ಜೆ’ ನೋಡಿದರು, ಚಿತ್ರತಂಡದ ಬೆನ್ನು ತಟ್ಟಿದರು.

ಬಂಗಾರು ‘ಕಾಲ್ಗೆಜ್ಜೆ’ ಚಿತ್ರದ ನಿರ್ದೇಶಕ. ಮಹೇಂದರ್ ಗರಡಿಯಲ್ಲಿ ಪಳಗಿರುವ ಅವರು ಮಹತ್ವಾಕಾಂಕ್ಷೆಯಿಂದ ಮಾಡಿರುವ ಚಿತ್ರ ‘ಕಾಲ್ಗೆಜ್ಜೆ’. ಶಿಷ್ಯನ ಮೇಲಿನ ವಾತ್ಸಲ್ಯ ಹಾಗೂ ಕಾಳಜಿ ಮಹೇಂದರ್ ಅವರ ಮಾತುಗಳಲ್ಲಿ ವ್ಯಕ್ತವಾಗುತ್ತಿತ್ತು. ಕಾಲ್ಗೆಜ್ಜೆಯನ್ನು ಮೆಚ್ಚಿಕೊಂಡ ಮಹೇಂದರ್ ಹೇಳಿದ್ದು- ‘ಎಲ್ಲ ಒಳ್ಳೆಯ ಸಿನಿಮಾಗಳಲ್ಲೂ ಕರೆಕ್ಷನ್ ಎನ್ನುವುದು ಇದ್ದೇ ಇರುತ್ತದೆ. ಬಾಲಿವುಡ್‌ನ ಟೈಟಾನಿಕ್ ಚಿತ್ರ ಕೂಡ ಪರಿಷ್ಕಾರಕ್ಕೆ ಹೊರತಲ್ಲ’ ಎಂದು ಸೂಚ್ಯವಾಗಿ ಹೇಳಿದರು.

‘ಒಳ್ಳೆಯ ಚಿತ್ರಗಳನ್ನು ಮಾಡಿದರಷ್ಟೇ ಸಾಲದು. ಅವುಗಳನ್ನು ಜನರಿಗೆ ತಲುಪಿಸುವ ಪ್ರಯತ್ನವೂ ಅತ್ಯಂತ ಮುಖ್ಯವಾದುದು’ ಎನ್ನುವ ಮಹೇಂದರ್ ಮಾತುಗಳಲ್ಲಿ ಸದಭಿರುಚಿಯ ಚಿತ್ರಗಳ ಬಗ್ಗೆ ಕಾಳಜಿಯಿತ್ತು.

ಹಂಸಲೇಖಾ ಅವರಿಗೆ ಗಂಧರ್ವ ಅವರ ಸಂಗೀತ ಇಷ್ಟವಾದಂತಿತ್ತು. ‘ಗಂಧರ್ವ ಇನ್ನಷ್ಟು ಒಳ್ಳೆಯ ಅವಕಾಶಗಳಿಗೆ ಅರ್ಹರು’ ಎಂದವರು ಪ್ರಶಂಸೆಯ ಮಾತುಗಳನ್ನಾಡಿದರು.

ಅನುಭವಿ ನಿರ್ಮಾಪಕ ಎಸ್.ವಿ.ಬಾಬು ‘ಕಾಲ್ಗೆಜ್ಜೆ’ ಚಿತ್ರದ ಬಿಡುಗಡೆಯ ಜವಾಬ್ದಾರಿ ಹೊತ್ತಿದ್ದಾರೆ. ಆ ಕಾರಣದಿಂದಲೇ ಸಿನಿಮಾದ ಬಿಡುಗಡೆ ತುಸು ಸಲೀಸಾಗಿದೆ. ಸಿನಿಮಾ ಬಿಡುಗಡೆಯ ಸಂಕಷ್ಟಗಳ ಬಗ್ಗೆ ಮಾತನಾಡಿದ ಬಾಬು- ‘ಒಂದು ಸಿನಿಮಾದಲ್ಲಿ, ನಿರ್ಮಾಣ ಎನ್ನುವುದು ಶೇ.25ರಷ್ಟು ಭಾಗ. ಉಳಿದ ಮುಕ್ಕಾಲು ಪಾಲು ಮಾರ್ಕೆಟಿಂಗ್ ಹಾಗೂ ತೆರೆಕಾಣಿಸುವ ಪ್ರಕ್ರಿಯೆಗಳಾಗಿರುತ್ತವೆ’ ಎಂದರು.

ಅಂದಹಾಗೆ, ವಿಶ್ವಾಸ್, ರೂಪಿಕಾ, ಅನಂತನಾಗ್, ಸುಮಿತ್ರಾ, ತಬಲಾ ನಾಣಿ, ನೀನಾಸಂ ಅಶ್ವಥ್ ಮುಂತಾದವರು ತಾರಾಗಣದಲ್ಲಿರುವ ‘ಕಾಲ್ಗೆಜ್ಜೆ’ ಚಿತ್ರ ಇಂದು (ಜ.4) ತೆರೆಕಾಣುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT