ADVERTISEMENT

ಕುದುರೆ ಗಾಡಿಗಳನ್ನು ನಿಷೇಧಿಸಿ: ರಾಮ್‌ಪಾಲ್

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2013, 19:59 IST
Last Updated 5 ಏಪ್ರಿಲ್ 2013, 19:59 IST

ಮುಂಬೈ ನಗರದಲ್ಲಿ ಭಾರದ ವಸ್ತುಗಳನ್ನು ಸಾಗಿಸಲು ಕುದುರೆಗಾಡಿಗಳನ್ನು ಬಳಸುವುದನ್ನು ನಿಷೇಧಿಸಬೇಕೆಂದು ಹೇಳುವ ಮೂಲಕ ನಟ ಅರ್ಜುನ್ ರಾಮ್‌ಪಾಲ್ ಪ್ರಾಣಿ ದಯಾಸಂಘ ಪೆಟಾಕ್ಕೆ ಬೆಂಬಲ ಸೂಚಿಸಿದ್ದಾರೆ. ಈ ಸಂಬಂಧ 40ರ ಹರೆಯದ ರಾಮ್‌ಪಾಲ್ ಅವರು ಮುಂಬೈ ನಗರದ ಪಾಲಿಕೆ ಆಯುಕ್ತರಿಗೆ ಪತ್ರ ಬರೆದಿದ್ದಾರೆ.

`ಮುಂಬೈನ ನಾಗರಿಕನಾಗಿ ಹಾಗೂ ಪ್ರಾಣಿಗಳ ಕುರಿತು ಅಪಾರ ಕಾಳಜಿವುಳ್ಳವನಾಗಿ ಪೆಟಾದ ಸಾಮಾಜಿಕ ಕಾಳಜಿಗೆ ನನ್ನ ಧ್ವನಿ ಸೇರಿಸುತ್ತಿದ್ದೇನೆ. ಭಾರದ ವಸ್ತುಗಳನ್ನು ಸಾಗಿಸಲು ಕುದುರೆಗಳನ್ನು ಬಳಸುವುದನ್ನು ತಕ್ಷಣವೇ ಸ್ಥಗಿತಗೊಳಿಸಬೇಕು.

ಇಂಥದ್ದೊಂದು ಅದ್ಭುತ ಹಾಗೂ ಸುಂದರ ಪ್ರಾಣಿಯನ್ನು ಇಷ್ಟೊಂದು ಕ್ರೂರವಾಗಿ ನಡೆಸಿಕೊಳ್ಳುವುದು ಅಪರಾಧ. ಈ ಸಲುವಾಗಿ ಮುಂಬೈ ನಾಗರಿಕರು ಕುದುರೆಗಾಡಿಗಳನ್ನು ನಿಷೇಧಿಸಲು ಮುಂದೆ ಬರಬೇಕು' ಎಂದು ಅರ್ಜುನ್ ಕೋರಿಕೊಂಡಿದ್ದಾರೆ.

ಈ ಸಂಬಂಧ ಜ. 15ರಂದು ಪೆಟಾ ಹೂಡಿದ್ದ ಮೊಕದ್ದಮೆಯಲ್ಲಿ ನಗರದಲ್ಲಿರುವ 53 ಕುದುರೆಗಾಡಿಗಳಲ್ಲಿ ಕೇವಲ 18 ಮಾತ್ರ ಅಧಿಕೃತ ಎಂಬ ಸಂಗತಿ ಬಯಲಾಗಿತ್ತು. ಇದೇ ರೀತಿ ದೆಹಲಿಯಲ್ಲೂ ಕುದುರೆ ಗಾಡಿಗಳನ್ನು ನಿಷೇಧಿಸುವಂತೆ ಹಾಗೂ ಪ್ರಾಣಿಗಳ ಹಿತ ಕಾಪಾಡುವಂತೆ ಅಲ್ಲಿನ ಪಾಲಿಕೆ ಆಯುಕ್ತರಿಗೂ ಪತ್ರವನ್ನು ಬರೆಯಲಾಗಿತ್ತು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.