ADVERTISEMENT

ಕೇಸರಿಭಾತ್ ಪ್ರಿಯೆ ಪಥ್ಯ ಪರಿಣತೆ

​ಪ್ರಜಾವಾಣಿ ವಾರ್ತೆ
Published 21 ಜೂನ್ 2012, 19:30 IST
Last Updated 21 ಜೂನ್ 2012, 19:30 IST
ಕೇಸರಿಭಾತ್ ಪ್ರಿಯೆ ಪಥ್ಯ ಪರಿಣತೆ
ಕೇಸರಿಭಾತ್ ಪ್ರಿಯೆ ಪಥ್ಯ ಪರಿಣತೆ   

ಓದಿದ್ದು ಪೌಷ್ಠಿಕ ಆಹಾರಕ್ಕೆ ಸಂಬಂಧಿಸಿದ ವಿಷಯ. ಪೌಷ್ಠಿಕಾಂಶಯುಕ್ತ ಆಹಾರದ ಬಗ್ಗೆ ತಿಳಿವಳಿಕೆಯೂ ಜಾಸ್ತಿ. ಆದರೆ ಈಕೆಗೆ ಈಗ ಕೇಸರಿಭಾತ್ ವ್ಯಾಮೋಹ; ದಿನಕ್ಕೆ ಮೂರು ಮೂರು ಬಾರಿ ತಿನ್ನುವಷ್ಟು! ಈ ವ್ಯಾಮೋಹ ಹಿಡಿದದ್ದು ಕರ್ನಾಟಕಕ್ಕೆ ಬಂದ ಕೆಲವೇ ದಿನಗಳಲ್ಲಿ.

ಜಗ್ಗೇಶ್ ಮೊದಲ ಬಾರಿಗೆ ಆ್ಯಕ್ಷನ್ ಕಟ್ ಹೇಳುತ್ತಿರುವ `ಗುರು~ ಚಿತ್ರದಲ್ಲಿ ನಾಯಕ ಗುರುರಾಜ್‌ಗೆ ನಾಯಕಿ ರಶ್ಮಿ ಗೌತಮ್.

ತೆಲುಗಿನ ಹಲವು ಧಾರಾವಾಹಿ ಮತ್ತು ತಮಿಳು ಚಿತ್ರವೊಂದರಲ್ಲಿ ನಟಿಸಿರುವ ಈಕೆಗಿದು ಮೊದಲ ಕನ್ನಡ ಚಿತ್ರ. ಹುಟ್ಟೂರು ಆಂಧ್ರಪ್ರದೇಶದ ವಿಶಾಖಪಟ್ಟಣ. ಆದರೆ ಸ್ಯಾಂಡಲ್‌ವುಡ್‌ಗೆ ಬಂದಿದ್ದೇ ಕೇಸರಿಭಾತ್ ರುಚಿಗೆ ಮಾರುಹೋಗಿದ್ದಾರೆ. ಕನ್ನಡ ಮಣ್ಣಿಗೆ ಕಾಲಿಟ್ಟು ಹತ್ತು ದಿನಗಳಲ್ಲೇ ಆರು ಕೆ.ಜಿ. ತೂಕ ಹೆಚ್ಚಾಗಿದೆಯಂತೆ. ಅದಕ್ಕೆ ಕಾರಣ ಅದೇ ಕೇಸರಿಭಾತ್... ದಿನವೂ ಮೂರು ಪ್ಲೇಟ್! ಚಿತ್ರದ ಮುಹೂರ್ತದಂದೂ ಮಲ್ಲೇಶ್ವರಂನ ಹಳ್ಳಿಮನೆಯಿಂದ ಜಗ್ಗೇಶ್ ತರಿಸಿದ್ದ ಕೇಸರಿಭಾತನ್ನು ಮೂರು ಬಾರಿ ಹಾಕಿಸಿಕೊಂಡು ತಿಂದರಂತೆ ರಶ್ಮಿ.

ADVERTISEMENT

ವಿಶೇಷವೆಂದರೆ ಈಕೆ ಆಹಾರ ಮತ್ತು ಪೌಷ್ಠಿಕತೆ ವಿಷಯದಲ್ಲಿ ಪದವಿ ಪಡೆದ ಪಥ್ಯಶಾಸ್ತ್ರಜ್ಞೆ! ಕೇಸರಿಭಾತ್ ತಯಾರಿಕೆಯ ವಿಧಾನವನ್ನು ತಿಳಿದುಕೊಂಡಿರುವ ರಶ್ಮಿ ವಿಶಾಖಪಟ್ಟಣದ ತಮ್ಮ ಮನೆಗೂ ಇಲ್ಲಿಂದಲೇ ಕೇಸರಿಭಾತ್ ಒಯ್ಯಲಿದ್ದಾರಂತೆ. ಅವರ ಮಾತೂ ಕೇಸರಿಭಾತ್‌ನಷ್ಟೇ ಸಿಹಿ. ಕಿರುತೆರೆ ಕಾರ್ಯಕ್ರಮಗಳ ಮೂಲಕ ತೆಲುಗಿನಲ್ಲಿ ಮನೆಮಾತಾಗಿರುವ ರಶ್ಮಿಯನ್ನು ಬಣ್ಣದ ಲೋಕಕ್ಕೆ ಪರಿಚಯಿಸಿದ್ದು ತಮಿಳು ಚಿತ್ರರಂಗ. `ಕಂಡಿಯನ್~ ಮೊದಲ ಚಿತ್ರ. ಆಗಲೂ ಕನ್ನಡ ಚಿತ್ರರಂಗದ ಬಗ್ಗೆ ವಿಶೇಷ ಒಲವು. ಹೀಗಾಗಿ ಇಲ್ಲಿನ ನಟ ನಟಿಯರ ಬಗ್ಗೆ ಒಂದಷ್ಟು ಜ್ಞಾನವೂ ಇದೆ. ತಮಗೆ ಮಾದರಿಯಾಗಿರುವ ನಟ ನಟಿಯರು ಮುಹೂರ್ತದ ಸಂದರ್ಭ ಮಾತನಾಡಲು ಸಿಕ್ಕಿದ್ದಕ್ಕೆ ಖುಷಿಯಾಗಿದ್ದಾರೆ.

`ಗುರು~ ಮೂಲಕ ತಮ್ಮ ವೃತ್ತಿ ಬದುಕಿಗೆ ಗಟ್ಟಿ ತಳಹದಿ ಸಿಗಲಿದೆ ಎನ್ನುವ ಭರವಸೆ ಅವರದು. ಚಿತ್ರದಲ್ಲಿ ವೈದ್ಯೆಯ ಪಾತ್ರ. ಜಗ್ಗೇಶ್ ತಮ್ಮ ಪಾತ್ರದಲ್ಲಿ ಬಯಸುವ ಗುಣಮಟ್ಟದ ನಟನೆಯನ್ನು ನೀಡುವ ವಿಶ್ವಾಸ ಅವರದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.