ADVERTISEMENT

ಖಳನ ಪಾತ್ರಗಳೇ ಇಷ್ಟ...

ಎಚ್.ಎಸ್.ರೋಹಿಣಿ
Published 24 ಜನವರಿ 2013, 19:59 IST
Last Updated 24 ಜನವರಿ 2013, 19:59 IST
ಖಳನ ಪಾತ್ರಗಳೇ ಇಷ್ಟ...
ಖಳನ ಪಾತ್ರಗಳೇ ಇಷ್ಟ...   

`ಖಳನಾಗಿ ನಟಿಸುವುದೇ ನನಗಿಷ್ಟ'. ನಟ ನಾರಾಯಣ ಸ್ವಾಮಿ ಅವರ ಮಾತಿನಲ್ಲಿ ಅಬ್ಬರ ಇರಲಿಲ್ಲ, ಸ್ಪಷ್ಟತೆಯಿತ್ತು. ಆರಂಭದಿಂದಲೂ ಋಣಾತ್ಮಕ ಪಾತ್ರಗಳಲ್ಲೇ ಗುರುತಿಸಿಕೊಂಡು ಬಂದಿರುವ ಅವರಿಗೆ ಸಿನಿಮಾದಲ್ಲಾಗಲೀ, ಕಿರುತೆರೆಯಲ್ಲಾಗಲೀ ಖಳನಾಗಿ ಅಬ್ಬರಿಸುವುದೇ ಇಷ್ಟವಂತೆ.

`ಸಾಯೋವರೆಗೂ ನನಗೆ ಅವಕಾಶಗಳು ಸಿಗಬೇಕು. ನನ್ನದು ಬಣ್ಣ ಮಾಸಿದ ಬದುಕಾಗಬಾರದು. ಇದುವರೆಗೆ ಹೇಗೆ ಇಷ್ಟವಾಗಿದ್ದ ಪಾತ್ರಗಳನ್ನೇ ಆರಿಸಿ ಅಭಿನಯಿಸಿರುವೆನೋ ಆ ಸ್ವಾತಂತ್ರ್ಯ ಮುಂದೆಯೂ ಹಾಗೇ ಇರಬೇಕು' ಎನ್ನುವ ಅವರು 140 ಧಾರಾವಾಹಿಗಳಿಗೆ ಬಣ್ಣ ಹಚ್ಚಿದವರು.

ಡಿಪ್ಲೊಮಾ ಓದಿರುವ ಸ್ವಾಮಿ ಸ್ವಲ್ಪ ದಿನ ಟೊಯೊಟ ಕಂಪನಿಯಲ್ಲಿ ಕೆಲಸ ಮಾಡಿದ್ದರಂತೆ. ಆದರೆ ಚಿಕ್ಕಂದಿನಿಂದ ಇದ್ದ ಸಿನಿಮಾ ವ್ಯಾಮೋಹ ಅವರನ್ನು ಚಿತ್ರರಂಗಕ್ಕೆ ಎಳೆದು ತಂದಿದೆ. ಬೆಂಗಳೂರಿನವರಾದ ಸ್ವಾಮಿ ಸಿನಿಮಾ ಮೂಲಕ ಬಂದು ಕಿರುತೆರೆಯಲ್ಲಿ ಅವಕಾಶ ಕಂಡುಕೊಂಡವರು.

`ಅಪಾರ್ಟ್‌ಮೆಂಟ್' ಧಾರಾವಾಹಿ ಮೂಲಕ ಕಿರುತೆರೆಗೆ ಪರಿಚಿತರಾದ ಅವರ ಮೊದಲ ಸಿನಿಮಾ `ಚೆಲುವೆ ಒಂದು ಹೇಳ್ತೀನಿ'. ಪ್ರಸ್ತುತ ಸಿನಿಮಾ - ಕಿರುತೆರೆ ಎರಡೂ ದೋಣಿಗಳಲ್ಲಿ ಪಯಣಿಸುತ್ತಿರುವ ಅವರು- `ಸ್ಟೋರಿ ಕತೆ', `ರಾಗಿಣಿ ಐಪಿಎಸ್', `ಇನ್ಸ್‌ಪೆಕ್ಟರ್' ಸಿನಿಮಾಗಳಲ್ಲಿ ಖಳನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಜೊತೆಗೆ `ಭಾಗ್ಯವಂತರು', `ಗಾಳಿಪಟ', `ಬಣ್ಣದ ಬುಗುರಿ' ಧಾರಾವಾಹಿಗಳಿಗೂ ಬಣ್ಣ ಹಚ್ಚಿದ್ದಾರೆ.

`ಊಲಾಲಾ', `ಕಿಚ್ಚ', `ಕಿಚ್ಚಹುಚ್ಚ', `ಆಸ್ಕರ್', `ಅಲೆಮಾರಿ', `ದಂಡುಪಾಳ್ಯ' ಮುಂತಾದ ಸಿನಿಮಾಗಳಲ್ಲಿ ನಟಿಸಿರುವ ಸ್ವಾಮಿ, `ಒಂದು ಪ್ರೀತಿಯ ಕಥೆ' ಚಿತ್ರದಲ್ಲಿ ನಾಯಕನಾಗಿಯೂ ಕಾಣಿಸಿಕೊಂಡರು.

`ಗುಪ್ತಗಾಮಿನಿ' ಧಾರಾವಾಹಿಯ ಆಕಾಶ್ ಪಾತ್ರ ಕಿರುತೆರೆಯಲ್ಲಿ ಅವರಿಗೆ ಬ್ರೇಕ್ ನೀಡಿತು. `ಬಣ್ಣ ಹಚ್ಚಿ 23 ವರ್ಷವಾಯಿತು. `ರಾಬಿನ್ ಗುಡ್‌ಫೆಲೋ', `ಕಾಳಿದಾಸ' ನಾಟಕಗಳ ಪಾತ್ರಗಳಲ್ಲಿ ನಟಿಸುತ್ತಿದ್ದ ದಿನಗಳು ಇನ್ನೂ ನೆನಪಿವೆ' ಎಂದು ನೆನಪುಗಳನ್ನು ಮೆಲುಕು ಹಾಕುವ ಅವರಿಗೆ ಗಡಿ ಇಲ್ಲದಂತೆ ನಟಿಸುವ ನೆಗೆಟಿವ್ ಪಾತ್ರಗಳ ಕಡೆ ತುಡಿತ.

ಭರತನಾಟ್ಯ ಕಲಾವಿದೆ ಮತ್ತು ನಟಿ ದೀಪಾ, ಸ್ವಾಮಿ ಅವರ ಸಂಗಾತಿ. `ಶ್ಯಾಡೋಸ್' ಎಂಬ ಹೆಸರಿನ ನೃತ್ಯತಂಡವನ್ನೂ ರೂಪಿಸಿಕೊಂಡಿರುವ ಸ್ವಾಮಿ ಅದನ್ನು ತಮ್ಮ ಸೋದರನೊಂದಿಗೆ ನಿರ್ವಹಿಸುತ್ತಿದ್ದಾರೆ. ವನ್ಯಜೀವಿ ಛಾಯಾಗ್ರಹಣ ಅವರ ಆಸಕ್ತಿಯ ಇನ್ನೊಂದು ಕ್ಷೇತ್ರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.