ADVERTISEMENT

ಗಣಿತದ ಮೇಷ್ಟ್ರ ನೆನಪಿನ ಬುತ್ತಿ

​ಪ್ರಜಾವಾಣಿ ವಾರ್ತೆ
Published 24 ಮೇ 2012, 19:30 IST
Last Updated 24 ಮೇ 2012, 19:30 IST

ಮೈಸೂರಿನ ನ್ಯೂ ಕಾಂತರಾಜ ಅರಸ್ ರಸ್ತೆ. ಇಳಿ ಸಂಜೆಯ ರಂಗು ನಗರವನ್ನು ಮೆಲ್ಲಗೆ ಅಪ್ಪಿಕೊಳ್ಳುತ್ತಿತ್ತು. ಎಂಬತ್ತು ವರ್ಷದ ಹಿರಿಯರೊಬ್ಬರು ಮೆಲ್ಲನೆ ಹೆಜ್ಜೆ ಹಾಕುತ್ತಾ ಸಾಗುತ್ತಿದ್ದರು. ಸನಿಹದಲ್ಲೇ ಒಂದರ ಹಿಂದೆ ಒಂದರಂತೆ ಮೂರು ವಾಹನಗಳು ಭರ‌್ರೆಂದು ಸಾಗಿದವು. ಏನಾಯಿತೋ ಏನೋ, ಮರುಕ್ಷಣವೇ ಅವು ಹಿಂತಿರುಗಿದವು.

ಒಂದು ವಾಹನವಂತೂ ಆ ವಯೋವೃದ್ಧರ ದಾರಿಗೆ ಅಡ್ಡವಾಗಿ ನಿಂತಿತು. ತಮ್ಮ ದಾರಿಗೆ ಅಡ್ಡ ನಿಂತ ವಾಹನದ ಚಾಲಕನಿಗೆ ಹಿರಿಯರು ಗ್ರಹಚಾರ ಬಿಡಿಸಿದರು. ಚಾಲಕ ತಬ್ಬಿಬ್ಬು. ಸಪ್ಪೆಮೋರೆ ಹಾಕಿಕೊಂಡ ಆತ, ಒಳಗೆ ಕುಳಿತಿದ್ದ ವ್ಯಕ್ತಿಯತ್ತ ನೋಡಿದ. ಕಾರಿನ ಹಿಂಭಾಗದಲ್ಲಿ ಕುಳಿತಿದ್ದ ವ್ಯಕ್ತಿ ನಿಧಾನವಾಗಿ ಕೆಳಗಿಳಿದರು. `ಸಾರ್, ನಾನು ನಿಮ್ಮ ಶಿಷ್ಯ, ಗುರುತಾಗಲಿಲ್ಲವೇ~ ಎಂದು ನಡುರಸ್ತೆಯಲ್ಲಿ ಗುರುವನ್ನು ಅಪ್ಪಿಕೊಂಡರು. ಗುರುವಿಗೂ ಖುಷಿ, ಜೊತೆಗೆ ಆಶ್ಚರ್ಯ. ಅರೆಕ್ಷಣ, ಗುರುಶಿಷ್ಯರ `ಧನ್ಯಮಿಲನ~ಕ್ಕೆ ಕಾಂತರಾಜ ಅರಸು ರಸ್ತೆಯೂ ರೋಮಾಂಚನಗೊಂಡಿರಬೇಕು.

ನಡುರಸ್ತೆಯಲ್ಲಿ ಗುರುವನ್ನು ಅಪ್ಪಿಕೊಂಡ ಶಿಷ್ಯನ ಹೆಸರು ಅಮರನಾಥ್ ಅಲಿಯಾಸ್ ಅಂಬರೀಷ್! ಗುರು, ಕೆ.ಆರ್.ಕೃಷ್ಣಸ್ವಾಮಿ ರಾವ್.

`ಎಲ್ಲೋ ನಿನ್ನ ಹೆಂಡತಿ ಸುಮಲತಾ~- ಗುರುವಿನ ಪ್ರಶ್ನೆ. ಅಂಬರೀಷ್ ಅರ್ಧಾಂಗಿ ವಾಹನದ ಒಳಗೇ ಇದ್ದರು.

`ನಡಿಯಿರಿ, ಎಲ್ಲರೂ ಮನೆಗೆ ಹೋಗೋಣ~. ಗುರುವಿನ ಮಾತು ಆಹ್ವಾನವೂ ಹೌದು, ಆದೇಶವೂ ಹೌದು. ಗುರು-ಶಿಷ್ಯರ ಪರಸ್ಪರ ಪ್ರೀತಿ, ಅಭಿಮಾನ ವಿನಿಮಯ ದೃಶ್ಯದ ಮುಂದುವರಿದ ಭಾಗ ಗುರುವಿನ ಮನೆಗೆ ಶಿಫ್ಟ್ ಆಯಿತು.

`ಇವರನ್ನು ನನ್ನ ಜನ್ಮದಲ್ಲಿ ಮರೆಯುವುದಿಲ್ಲ~ ಎಂದು ಗುರುವಿನ ಕುರಿತು ಸುಮಲತಾ ಅವರಿಗೆ ಅಂಬರೀಷ್ ಹೇಳಿದರು. ಹೀಗೇ, ಉಭಯಕುಶಲೋಪರಿ ನಡೆಯುತ್ತಿರುವಾಗ, ಅಭಿಮಾನಿಗಳು ಗುರುಮನೆಗೂ ಮುತ್ತಿಗೆ ಹಾಕಿದರು. ಆನಂತರ ಅಂಬರೀಷ್ ಅಲ್ಲಿಂದ ಕಾಲ್ಕಿತ್ತರು.
 
ಒಂದು ತಿಂಗಳ ಹಿಂದೆಯಷ್ಟೇ ನಡೆದ ಶಿಷ್ಯನ ಭೇಟಿಯನ್ನು ನೆನಪಿಸಿಕೊಳ್ಳುವಾಗ ಕೃಷ್ಣಸ್ವಾಮಿ ಮೇಷ್ಟ್ರ ಮುಖದಲ್ಲಿ ಹೊಳಪಿತ್ತು. ಅಂಬರೀಷ್ ಮೈಸೂರಿನ ಶಾರದಾ ವಿಲಾಸ ಹೈಸ್ಕೂಲ್‌ನಲ್ಲಿ ವಿದ್ಯಾರ್ಥಿಯಾಗಿದ್ದಾಗ, ಅಲ್ಲಿ ಕೆ.ಆರ್.ಕೆ (ಕೆ.ಆರ್.ಕೃಷ್ಣಸ್ವಾಮಿ ರಾವ್) ಮೇಷ್ಟ್ರು ಗಣಿತ ಪಾಠ ಮಾಡುತ್ತಿದ್ದರು. ಕೆ.ಆರ್.ಕೆ ಎಂದರೆ ಆಗ ವಿದ್ಯಾರ್ಥಿಗಳ ಪಾಲಿಗೆ ಸಿಂಹಸ್ವಪ್ನ!

ಹೈಸ್ಕೂಲ್‌ನಲ್ಲಿ ಅಮರನಾಥ್ (ಅಂಬರೀಷ್) ಹೇಗಿದ್ದ ಎನ್ನುವುದನ್ನು ಮೇಷ್ಟ್ರು ಮಬ್ಬು ಮಬ್ಬಾಗಿ ನೆನಪಿಸಿಕೊಂಡರು.

“ಆತನ ಹೆಸರು ಅಮರನಾಥ್, ತುಂಬಾ ತುಂಟನಾಗಿದ್ದ. ಚೇಷ್ಟೆ ಅಂದ್ರೆ ಚೇಷ್ಟೆ. ಶಾಲೆಯಲ್ಲಿ ಪ್ರಾರ್ಥನೆ ಮಾಡುವಾಗ ತನ್ನ ಹಿಂದೆ-ಮುಂದೆ, ಅಕ್ಕಪಕ್ಕ ನಿಂತಿದ್ದವರಿಗೆ ಚೇಷ್ಟೆ ಮಾಡಿ ತಮಾಷೆ ನೋಡುತ್ತಿದ್ದ. ತರಗತಿಯಲ್ಲಿಯೂ ಅಷ್ಟೆ. ತುಂಬಾ ತುಂಟತನ. ಆದರೆ, ಅವನ ತುಂಟತನ ನಿಯಂತ್ರಿಸಿ ಪಾಠ ಮಾಡುವ ಕಲೆ ನನಗೆ ಗೊತ್ತಿತ್ತು. ಅಮರನಾಥ್ ಕೊನೆ ಬೆಂಚಿನ ಗಿರಾಕಿ. ಆದರೆ, ನಾನು ಅವನನ್ನು ಮಧ್ಯದ ಬೆಂಚ್‌ನಲ್ಲಿ ಕೂರಿಸಿ ಪಾಠ ಹೇಳುತ್ತಿದ್ದೆ. ಅವನಿಗೆ ಅಷ್ಟು ಚಿಕ್ಕ ವಯಸ್ಸಿಗೇ ಗೆಳೆಯರ ದೊಡ್ಡ ಬಳಗವೇ ಇತ್ತು. ಗೆಳೆಯರ ಗುಂಪು ಸದಾ ಸುತ್ತುವರೆದಿರುತ್ತಿತ್ತು. ನಾನು ಆಗಾಗ ಅವರನ್ನು ಬೈದು ಓಡಿಸುತ್ತಿದ್ದೆ.

ಯಾರಿಗೂ ಹೆದರದ ತುಂಟ ಹುಡುಗ ಅಮರನಾಥ ಓದಿನ ಕಡೆ ಹೆಚ್ಚು ಆಸಕ್ತಿ ಕೊಡಲಿಲ್ಲ. ಸದಾ ಗೆಳೆಯರೊಂದಿಗೆ ಇರುತ್ತಿದ್ದ. ಇದು ತಂದೆ ಹುಚ್ಚೇಗೌಡರಿಗೆ ಗೊತ್ತಿತ್ತು. ಹೀಗೇ ಬಿಟ್ಟರೆ ತಮ್ಮ ಮಗ ಎಸ್‌ಎಸ್‌ಎಲ್‌ಸಿ ಪಬ್ಲಿಕ್ ಪರೀಕ್ಷೆಯನ್ನು ಪಾಸು ಮಾಡುವುದಿಲ್ಲ ಎನ್ನುವುದು ಅವರ ಮನಸ್ಸಿಗೆ ಬಂದಿತು.
 
ಆ ಕೂಡಲೇ ಅವರಿಗೆ ನೆನಪಾದ ಮೊದಲ ಮತ್ತು ಕೊನೆಯ ಹೆಸರು ನನ್ನದು. ನಾನಾಗ ರಾಮಸ್ವಾಮಿ ಸರ್ಕಲ್ ಬಳಿ ಬಾಡಿಗೆ ಮನೆಯಲ್ದ್ದ್‌ದೆ. ಅಲ್ಲಿಗೆ ಹುಚ್ಚೇಗೌಡರು ತಮ್ಮ ಮಗ ಅಮರನಾಥನನ್ನು ಎಳೆದುಕೊಂಡು ಬಂದರು. `ಮೇಷ್ಟ್ರೆ, ಹೇಗಾದರೂ ಮಾಡಿ ಇವನು ಎಸ್‌ಎಸ್‌ಎಲ್‌ಸಿ ಪಾಸಾಗುವಂತೆ ಮಾಡಬೇಕು~ ಎಂದು ವಿನಂತಿಸಿಕೊಂಡರು”.

ಹುಚ್ಚೇಗೌಡರ ಮಗ ಅಮರನಾಥ್ `ಕೇರಾಫ್ ಕೆ.ಆರ್.ಕೆ~ ಆದುದನ್ನು ನೆನಪಿಸಿಕೊಂಡ ಮೇಷ್ಟ್ರು ನಕ್ಕರು. ಅಂದಹಾಗೆ, ಕೆ.ಆರ್.ಕೆ ಅತೀ ಶಿಸ್ತಿಗೆ ಮತ್ತು ಕೋಪಕ್ಕೆ ಹೆಸರಾದವರು. ಆದರೆ, ಅವರ ಅಂತಃಕರಣವೂ ದೊಡ್ಡದು. ಶಿಷ್ಯಂದಿರನ್ನು ಶಿಕ್ಷಿಸುವುದು ಅವರಿಗೆ ಗೊತ್ತಿತ್ತು, ಹಾಗೆಯೇ ಪ್ರೀತಿಸುವುದು ಕೂಡ. ನಾಲ್ಕು ತಿಂಗಳು ಅಮರನಾಥ್‌ಗೆ ಕೆ.ಆರ್.ಕೆ ಮನೆಯೇ ವಾಸಸ್ಥಾನವಾಯಿತು.

“ಜಮಖಾನ ಇಲ್ಲವೇ ಬೆಡ್‌ಶೀಟ್ ಹಾಸಿ ಕೂರುತ್ತಿದ್ದೆವು. ಪಾಠದ ವಿಷಯದಲ್ಲಿ ನಾನು ಬಲು ಕಟ್ಟುನಿಟ್ಟು. ನಾಲ್ಕು ಬಾರಿಸಿಯೇ ಪಾಠ ಹೇಳುತ್ತಿದ್ದೆ. ಪ್ರತಿಯೊಂದನ್ನೂ ಕಂಠಪಾಠ ಮಾಡಿಸುತ್ತಿದ್ದೆ. ರಾತ್ರಿಯೂ ನನ್ನ ಮನೆಯಲ್ಲಿಯೇ ಉಳಿಸಿಕೊಳ್ಳುತ್ತಿದ್ದೆ. ಆತ ನನ್ನ ಪಕ್ಕದಲ್ಲಿ ಮಲಗುತ್ತಿದ್ದ. ಅದು ಬೇಸಿಗೆ ಕಾಲವಾದ್ದರಿಂದ ಪ್ಯಾಂಟು, ಶರ್ಟ್ ಗಳನ್ನು ಕಿತ್ತು ಬಿಸಾಡಿ ಚೆಡ್ಡಿಯಲ್ಲಿ ಮಲಗುತ್ತಿದ್ದೆವು...”

ಎಸ್‌ಎಸ್‌ಎಲ್‌ಸಿ ಫಲಿತಾಂಶ ಬಂದಾಗ ಅಮರನಾಥ್ `ಫಸ್ಟ್ ಕ್ಲಾಸ್~ನಲ್ಲಿ ಪಾಸಾಗಿದ್ದ! ಇದು ಸ್ವತಃ ಅಮರನಾಥ್, ಸಬ್ ರಿಜಿಸ್ಟ್ರಾರ್ ಆಗಿದ್ದ ತಂದೆ ಹುಚ್ಚೇಗೌಡ ಮತ್ತು ಕುಟುಂಬ ಮತ್ತು ಗುರು ಕೆ.ಆರ್.ಕೆ ಗೆ ಖುಷಿತಂದಿತ್ತು. ಆದರೆ ಇದೇ ಖುಷಿ ಮುಂದೆ ಉಳಿಯಲೇ ಇಲ್ಲ. ಏಕೆಂದರೆ ಅಮರನಾಥ್ ಪಿಯುಸಿ ಪಾಸ್ ಮಾಡಲೇ ಇಲ್ಲ.

ಸುಮಾರು ನಾಲ್ಕೂವರೆ ದಶಕಗಳ ಹಿಂದಿನ ಘಟನೆಗಳನ್ನು
ಕೆ.ಆರ್.ಕೆ ತಮ್ಮ ನೆನಪಿನ ಆಲ್ಬಂನಿಂದ ತೆಗೆಯುತ್ತಾ ಪುಳಕಗೊಂಡರು. ಈಗ ಅಂಬರೀಷ್ ರೂಪದಲ್ಲಿ ಬೆಳೆದುನಿಂತಿರುವ ತಮ್ಮ ಶಿಷ್ಯ ಅಮರನಾಥ್ ಬಗ್ಗೆ ಮೇಷ್ಟ್ರಿಗೆ ಬೆರಗು ಹಾಗೂ ಅಭಿಮಾನ. ಅಂದಹಾಗೆ, ಮೇಷ್ಟ್ರು ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ತಾಲ್ಲೂಕು ಕಿಕ್ಕೇರಿಯವರು. ಅವರಿಗೆ ಮಂಡ್ಯ ಜಿಲ್ಲೆ ಬಗ್ಗೆ ಅಪಾರ ಅಭಿಮಾನ. ಆದ್ದರಿಂದಲೇ ತಮ್ಮ ಶಿಷ್ಯನ ಹೆಸರಿನ ಹಿಂದೆ `ಮಂಡ್ಯದ ಗಂಡು~ ಬಿರುದು ಅಂಟಿಕೊಂಡಿರುವುದು ಅವರಿಗೆ ಖುಷಿ.

“ಈತನ ಅಣ್ಣಂದಿರು ಚೆನ್ನಾಗಿ ಓದಿ ಡಾಕ್ಟರ್, ಎಂಜಿನಿಯರ್‌ಗಳಾಗಿದ್ದಾರೆ. ಈತ ಪಿಯುಸಿಗೇ ಓದು ಬಿಟ್ಟು ಸಿನಿಮಾ ಕಡೆ ಹೋದ. ಅಲ್ಲಿ ಚೆನ್ನಾಗಿ ಬೆಳೆದ, ಮಂಡ್ಯದಿಂದ ಸಂಸದನಾದ, ಕೇಂದ್ರದಲ್ಲಿ ಸಚಿವನಾದ. ಇದು ಕಡಿಮೆ ಸಾಧನೆಯೇನಲ್ಲ. ಬಡವರಿಗೆ ದಾನ ಮಾಡುತ್ತಾನೆ ಎನ್ನುವುದನ್ನು ಕೇಳಿದ್ದೇನೆ. ದೇವರು ಅವನಿಗೆ ಮತ್ತು ಅವನ ಕುಟುಂಬದವರಿಗೆ ಒಳ್ಳೆಯದು ಮಾಡಲಿ”. ಮಾತು ಮುಗಿಯಿತು ಎನ್ನುವಂತೆ ಮೇಷ್ಟ್ರು ಕಣ್‌ಮುಚ್ಚಿಕೊಂಡರು.

ಪಿಯುಸಿ ಫೇಲಾದವನು ಫೇಮಸ್!
`ಪಿಯುಸಿಯಲ್ಲಿ ಫೇಲ್ ಆದವ್ನ ಇಷ್ಟೊಂದ್ ಫೇಮಸ್ ಆಯ್ತನೆ ಅಂಥ ಯಾರ‌್ಗೆ ಗೊತ್ತಿತ್ತು~- ಇದು ರೆಬಲ್ ಸ್ಟಾರ್ ಅಂಬರೀಷ್ ಅಣ್ಣ ಆನಂದ್‌ಕುಮಾರ್ ಅವರ ಮಾತು.
`ಅಂಬರೀಷ್ ಬಾಲ್ಯದ ದಿನಗಳ ಫೋಟೊಗಳು ಇವೆಯೇ?~ ಎಂದು ಕೇಳಿದಾಗ, `ಇಷ್ಟೊಂದು ಫೇಮಸ್ ಆಗ್ತಾನೆಂದು ಗೊತ್ತಿದ್ದರೆ ಖಂಡಿತಾ ಫೋಟೊಗಳನ್ನು ಇಡುತ್ತಿದ್ದೆವು. ನಮ್ಮ ಮನೆಯಲ್ಲಿ ಎಂಜಿನಿಯರ್‌ಗಳು, ಡಾಕ್ಟರ್ ಇದ್ದಾರೆ. ನಮ್ಮ ಜೊತೆಗೆ ಇವನೊಬ್ಬ ಆ್ಯಕ್ಟರ್~ ಎಂದು ತಮಾಷೆ ಮಾಡಿದರು ಆನಂದ್‌ಕುಮಾರ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.