ADVERTISEMENT

ಗರಿಗೆದರಿದ ಪರಿ

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2011, 19:35 IST
Last Updated 3 ಮಾರ್ಚ್ 2011, 19:35 IST

ನಾಟಕ ಬರೆಯುವ ಗೀಳಿನಿಂದ ಚಿತ್ರಸಾಹಿತ್ಯದ ಕಡೆಗೆ ಹೊರಳಿ ಯಶಸ್ವಿಯಾಗಿದ್ದ ಸುಧೀರ್ ಅತ್ತಾವರ್ ಈಗ ನಿರ್ದೇಶಕರ ಕುರ್ಚಿ ಏರಿದ್ದಾರೆ. ಕೆ.ಎಸ್.ನರಸಿಂಹಸ್ವಾಮಿಯವರ ‘ನಿನ್ನ ಪ್ರೇಮದ ಪರಿಯ ನಾನರಿಯೆ ಕನಕಾಂಗಿ...’ ಪದ್ಯದ ‘ಪರಿ’ ಪದವನ್ನೇ ಅವರು ಚಿತ್ರಕ್ಕೆ ಶೀರ್ಷಿಕೆಯಾಗಿ ಇಟ್ಟಿದ್ದಾರೆ. ಕಥೆಗೆ ಅದೇ ಸೂಕ್ತವೆಂಬುದು ಅವರ ಅಂಬೋಣ.

ಈ ಸಿನಿಮಾ ಆಗುತ್ತಿರುವುದರ ಹಿಂದೆಯೇ ಒಂದು ಸಿನಿಮೀಯ ಕಥೆ ಇದೆ. ‘ಸವಾರಿ’ ಚಿತ್ರದ ‘ಮರಳಿ ಮರೆಯಾಗಿ’ ಹಾಡನ್ನು ಸುಧೀರ್ ಅತ್ತಾವರ್ ಬರೆದಿದ್ದರು. ಅದಕ್ಕೆ ಕೆಲವು ಪ್ರಶಸ್ತಿಗಳೂ ಬಂತೆನ್ನಿ. ಆ ಹಾಡು ಬರೆದ ಗೆಳೆಯನನ್ನು ನಿಧನಿಧಾನವಾಗಿ ಗುರುತಿಸಿದವರಲ್ಲಿ ಚಂದ್ರ ಸಿಂದೋಗಿ, ಅರುಣ್ ತುಮಾಟಿ, ವಾಷಿಂಗ್ಟನ್‌ನಲ್ಲಿರುವ ರಾಮಕೃಷ್ಣಭಟ್, ಕ್ಯಾಲಿಫೋರ್ನಿಯಾ ನಿವಾಸಿ ಎಂ.ಸಿ.ಗೌಡ, ದಿವಿಜ ಕೆ., ಮೋಗನ್ ಬಾಬು ಹಾಗೂ ನಿತ್ಯಾನಂದ್ ಎನ್. ಮುಖ್ಯರು. ದಾವಣಗೆರೆಯ ಬಿಡಿಟಿ ಎಂಜಿನಿಯರಿಂಗ್ ಕಾಲೇಜಿನ ಈ ಸಹಪಾಠಿಗಳಿಗೆ ಸಾಹಿತಿರೂಪದ ಗೆಳೆಯನನ್ನು ಪತ್ತೆಹಚ್ಚಿದ ಖುಷಿ. ಹದಿನೆಂಟು ವರ್ಷದ ಹಿಂದೆ ಒಟ್ಟಿಗೆ ಓದುತ್ತಿದ್ದಾಗಿನ ನೆನಪುಗಳಿಗೆ ರೆಕ್ಕೆಹಚ್ಚುವ ತವಕದಲ್ಲೇ ಹೊಸ ಸಿನಿಮಾ ಮಾಡುವ ಬಯಕೆಯೂ ಮೂಡಿತು. ಜಗತ್ತಿನ ವಿವಿಧೆಡೆಯ ಐಟಿ ಕಂಪೆನಿಗಳಲ್ಲಿ ಕೆಲಸ ಮಾಡಿದ ಅನುಭವ ಇರುವ ಗೆಳೆಯರೆಲ್ಲಾ ಸೇರಿ ಸುಧೀರ್ ಅತ್ತಾವರ್‌ಗೆ ನಿರ್ದೇಶಕನ ಪಟ್ಟ ಕಟ್ಟಿಯೇ ಬಿಟ್ಟರು. ‘ಪರಿ’ ಗರಿಗೆದರಿತು.

‘ಪರಿ’ ಕಾದಂಬರಿ ಆಧಾರಿತ ಚಿತ್ರ. ಸಂಪನ್ನ ಮುತಾಲಿಕ್ ಬರೆದ ‘ಭಾರದ್ವಾಜ’ ಕಾದಂಬರಿಯ ವಸ್ತು ಸುಧೀರ್ ಅತ್ತಾವರ್ ಅವರಿಗೆ ಹಿಡಿಸಿದ್ದು, ಅದನ್ನೇ ಅವರು ಸಿನಿಮಾ ಮಾಡುತ್ತಿದ್ದಾರೆ. 2006ರಲ್ಲಿ ‘ಅಕ್ಕ’ (ಅಮೆರಿಕ ಕನ್ನಡ ಕೂಟಗಳ ಆಗರ) ನಡೆಸಿದ ಕಾದಂಬರಿ ಸ್ಪರ್ಧೆಯಲ್ಲಿ ಬಹುಮಾನ ಪಡೆದಿದ್ದ ಈ ಕಾದಂಬರಿ ‘ಕಳ್ಳಬಟ್ಟಿ’ ಮದ್ಯದ ಸಂಗತಿಯನ್ನು ಮಾನವೀಯ ನೆಲೆಗಟ್ಟಿನಲ್ಲಿ ಹೇಳುವ ಕಥಾನಕವನ್ನು ಒಳಗೊಂಡಿದೆ.

ರಂಗಭೂಮಿಯ ನಂಟೂ ಇರುವ ಅತ್ತಾವರ್ 25 ನಾಟಕಗಳನ್ನು ಬರೆದವರು. ಹಿರಿಯ ನಿರ್ದೇಶಕ ಎಂ.ಎಸ್.ಸತ್ಯು ಅವರೊಟ್ಟಿಗೆ ಒಂಬತ್ತು ವರ್ಷ ಕೆಲಸ ಮಾಡಿದ ಅನುಭವವೂ ಬೆನ್ನಿಗಿದೆ. ಇದೇ ಕಾರಣಕ್ಕೆ ‘ಪರಿ’ ಚಿತ್ರದ ಕಲಾ ನಿರ್ದೇಶನವನ್ನು ಎಂ.ಎಸ್.ಸತ್ಯು ಅವರೇ ಮಾಡಲಿದ್ದಾರೆ. ಸತ್ಯಜಿತ್ ರೇ ಚಿತ್ರಗಳಲ್ಲಿ ಸ್ಟಿಲ್ ಫೋಟೋಗ್ರಾಫರ್ ಆಗಿ ಕೆಲಸ ಮಾಡಿರುವ ನಿಮಯ್ ಘೋಷ್ ಈ ಚಿತ್ರದಲ್ಲಿ ಅದೇ ಕೆಲಸ ನಿರ್ವಹಿಸುತ್ತಿರುವುದು ವಿಶೇಷ. ವೀರ್ ಸಮರ್ಥ್ ಸಂಗೀತ ನೀಡಿದ್ದಾರೆ.

ಚಿತ್ರದ ಹಾಡೊಂದನ್ನು ಏಳು ಗಾಯಕ-ಗಾಯಕಿಯರು ಹಾಡಲಿದ್ದಾರೆ. ಅವರಲ್ಲಿ ಹಿರೀಬಾಯಿ, ಕಾಳೀಬಾಯಿ ಎಂಬ ಜಾನಪದ ಗಾಯಕಿಯರುಂಟು.

ಅಲ್ಲದೆ ಎ.ಆರ್.ರೆಹಮಾನ್ ಮಟ್ಟುಗಳ ಅನೇಕ ಹಾಡುಗಳನ್ನು ಹಾಡಿರುವ ಮಾಣಿಕ್ಯ ವಿನಾಯಗಂ ಕಂಠವೂ ಇರಲಿದೆ. ಸಂಪನ್ನ ಮುತಾಲಿಕ್ ಅವರೊಟ್ಟಿಗೆ ಪತ್ರಕರ್ತ ವಿಜಯ್ ಭರಮಸಾಗರ ಸಂಭಾಷಣೆ ಬರೆದಿದ್ದಾರೆ. ಅನಂತ್ ಅರಸ್ ಛಾಯಾಗ್ರಹಣದ ಜವಾಬ್ದಾರಿ ಹೊತ್ತಿದ್ದಾರೆ.

ರಾಕೇಶ್, ನಾಗಕಿರಣ್, ಹರ್ಷಿಕಾ ಪೂಣಚ್ಚ, ನಿವೇದಿತಾ ಉರುಫ್ ಸ್ಮಿತಾ (ಅವ್ವ ಚಿತ್ರದ ನಾಯಕಿ), ಉಷಾ ಉತ್ತುಪ್. ಸರ್ದಾರ್ ಸತ್ಯ, ಶರತ್ ಲೋಹಿತಾಶ್ವ ಮುಂತಾದವರು ತಾರಾಬಳಗದಲ್ಲಿದ್ದಾರೆ.

ಮುಹೂರ್ತದ ಮುಖ್ಯ ಅತಿಥಿಗಳಲ್ಲಿ ಒಬ್ಬರಾಗಿದ್ದ ನಟ ರಮೇಶ್, ‘ಎಂಜಿನಿಯರುಗಳು ಬುದ್ಧಿವಂತರು. ಬಜೆಟ್, ಮಾರುಕಟ್ಟೆಯ ಮಿತಿಯನ್ನು ಅರಿತು ಒಳ್ಳೆಯ ಚಿತ್ರವನ್ನು ಕೊಡಲಿ’ ಎಂಬ ಕಿವಿಮಾತು ಹಾಕಿದರು. ಮಿಂಚುತ್ತಿದ್ದ ಕ್ಯಾಮೆರಾಗಳಿಗೆ ತಾರಾಬಳಗ ಒಡ್ಡಿಕೊಂಡಿತು. ಹಿರಿಯರಾದ ವಿ.ಕೆ.ಮೂರ್ತಿ ಕೂಡ ಎಲ್ಲರೊಳಗೆ ಒಂದಾಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT