ADVERTISEMENT

ಗೆಲುವಿನ ಪಯಣದ ನಿಲ್ದಾಣಗಳು...

ವಿಶಾಖ ಎನ್.
Published 28 ಡಿಸೆಂಬರ್ 2017, 19:30 IST
Last Updated 28 ಡಿಸೆಂಬರ್ 2017, 19:30 IST
ಬಾಹುಬಲಿ 2
ಬಾಹುಬಲಿ 2   

ಈ ವರ್ಷ ಗಲ್ಲಾಪೆಟ್ಟಿಗೆಯಲ್ಲಿ ಅತಿ ಹೆಚ್ಚು ಹಣ ಮಾಡಿದ ಹಿಂದಿ ಸಿನಿಮಾ ಯಾವುದು? - ಹೀಗೊಂದು ಪ್ರಶ್ನೆ ಹಾಕಿ, ಕೆಲವು ಕ್ಷಣ ಸುಮ್ಮನಿರಿ. ಹೊಮ್ಮುವ ಬಹುತೇಕ ಊಹಾತ್ಮಕ ಉತ್ತರಗಳು ತಪ್ಪಾಗಿಯೇ ಇರುತ್ತವೆ.

ಈ ವರ್ಷ ‘ಬಾಹುಬಲಿ-ದಿ ಕನ್‌ಕ್ಲೂಷನ್’ನ ಹಿಂದಿ ಆವೃತ್ತಿ 500 ಕೋಟಿ ರೂಪಾಯಿಗೂ ಹೆಚ್ಚು ಹಣ ಬಾಚಿ ಹಾಕಿತೆಂದರೆ ಬಾಲಿವುಡ್ ಪಂಡಿತರೂ ಹುಬ್ಬೇರಿಸಿಯಾರು. ಹಿಂದಿ ತಾರಾನಟರ ಯಾವ ಚಿತ್ರವೂ ಈ ವರ್ಷ ಅದರ ಸಮಕ್ಕೂ ಸುಳಿಯಲು ಆಗಲಿಲ್ಲ. ವಾಣಿಜ್ಯಿಕ ಚಿತ್ರಗಳು ಹಾಗೂ ಪ್ರಯೋಗಾತ್ಮಕ ಸಿನಿಮಾಗಳ ನಡುವಿನ ಗೆರೆ ಇನ್ನೂ ತೆಳುವಾಗಿರುವ ಸೂಚನೆಯನ್ನು ಈ ವರ್ಷ ದಾಟಿಸಿರುವುದರ ಜೊತೆಗೆ, ಬಾಲಿವುಡ್ ಹಾಗೂ ದಕ್ಷಿಣ ಭಾರತೀಯ ಚಿತ್ರಗಳ ಧ್ರುವೀಕರಣದ ಸಾಧ್ಯತೆಯೊಂದನ್ನು ದೊಡ್ಡ ಮಟ್ಟದಲ್ಲಿ ಸಾರಿದೆ. ಅದಕ್ಕೆ ಕಾರಣ ‘ಬಾಹುಬಲಿ’ಯ ಕಲೆಕ್ಷನ್.

ಪ್ರಶ್ನೆಯನ್ನು ಹಾಗೇ ಮುಂದುವರಿಸಿ, ಗಳಿಕೆಯಲ್ಲಿ ಎರಡನೇ ಸ್ಥಾನದಲ್ಲಿ ನಿಲ್ಲುವ ಸಿನಿಮಾ ಯಾವುದೆಂದು ಕೇಳಿಕೊಂಡರೆ ಮತ್ತೊಂದು ಅಚ್ಚರಿ ಎದುರಾಗುತ್ತದೆ. ಶಾರುಖ್ ಖಾನ್, ಸಲ್ಮಾನ್ ಖಾನ್, ಅಮೀರ್ ಖಾನ್, ಅಜಯ್ ದೇವಗನ್, ಅಕ್ಷಯ್ ಕುಮಾರ್ ಇವರೆಲ್ಲರ ಸ್ಟಾರ್ ಗಿರಿಯನ್ನೂ ಮೀರಿದ ಲೆಕ್ಕಾಚಾರಗಳನ್ನು ಈ ಸಲದ ಗಳಿಕೆಯ ವರದಿ ನೀಡಿದೆ. ಅಜಯ್ ದೇವಗನ್ ನಟಿಸಿಯೂ ಬಹುತಾರಾಗಣದ ಚಿತ್ರವಾಗಿ ಗಲ್ಲಾಪೆಟ್ಟಿಗೆಯಲ್ಲಿ ಸಂಚಲನ ಮೂಡಿಸಿದ ಚಿತ್ರ ‘ಗೋಲ್ ಮಾಲ್ ಎಗೇನ್’. ಪರಿಣೀತಿ ಚೋಪ್ರಾ, ತಬು, ಶ್ರೇಯಸ್ ತಲ್ಪಾಡೆ, ಅರ್ಷದ್ ವಾರ್ಸಿ, ತುಷಾರ್ ಕಪೂರ್ ಅಭಿನಯದ ಈ ಸಿನಿಮಾ ತನ್ನ ಟೈಮ್‌ಪಾಸ್ ಗುಣದಿಂದಾಗಿಯೇ ಜನಮನ ಗೆದ್ದಿತು. ರೋಹಿತ್ ಶೆಟ್ಟಿ ಕೇವಲ 80 ಕೋಟಿ ರೂಪಾಯಿ ವೆಚ್ಚದಲ್ಲಿ ಸಿದ್ಧಪಡಿಸಿಕೊಟ್ಟ ಈ ಸಿನಿಮಾ ಮುನ್ನೂರೊಂಬತ್ತೂಕಾಲು ಕೋಟಿ ರೂಪಾಯಿ ಗಳಿಸಿದ್ದು ಪ್ರೇಕ್ಷಕರ ‘ಬೇಕು’ ಯಾವುದೆನ್ನುವುದನ್ನು ಸ್ಪಷ್ಟಪಡಿಸುತ್ತದೆ. ಇದರಷ್ಟು ಹಣವನ್ನು ಶಾರುಖ್ ಖಾನ್ ಅಭಿನಯದ ‘ರಯೀಸ್’ (ದರ ಗಳಿಕೆ ಅಂದಾಜು 308.21 ಕೋಟಿ ರೂಪಾಯಿ) ಕೂಡ ಮಾಡಲು ಆಗಲಿಲ್ಲ ಎನ್ನುವುದು ಗಮನಿಸಬೇಕಾದ ಸಂಗತಿ.

ADVERTISEMENT


ಸೀಕ್ರೆಟ್‌ ಸೂಪರ್‌ಸ್ಟಾರ್‌

ಡೇವಿಡ್ ಧವನ್ ನಿರ್ದೇಶನದ ಬ್ರೇನ್‌ಲೆಸ್ ಕಾಮಿಡಿ ‘ಜುಡ್ವಾ 2’, ಸರ್ಕಾರಿ ಯೋಜನೆಯ ಮುಖವಾಣಿಯಂತಿದ್ದ ‘ಟಾಯ್ಲೆಟ್-ಏಕ್ ಪ್ರೇಮ್ ಕಥಾ’, ಕಬೀರ್ ಖಾನ್-ಸಲ್ಮಾನ್ ಖಾನ್ ಮತ್ತೆ ಜೊತೆಯಾದರೆಂಬ ಕಾರಣಕ್ಕೆ ನಿರೀಕ್ಷೆ ಮೂಡಿಸಿದ್ದ ‘ಟ್ಯೂಬ್ ಲೈಟ್’, ಹೃತಿಕ್ ರೋಷನ್ ಕುರುಡನ ಪಾತ್ರದಲ್ಲಿ ಗಮನ ಸೆಳೆದ ‘ಕಾಬಿಲ್’, ಇನ್ನೊಂದು ಹಾಸ್ಯಪ್ರಧಾನ ಚಿತ್ರ ‘ಬದ್ರಿನಾಥ್ ಕಿ ದುಲ್ಹನಿಯಾ’-ಇವೆಲ್ಲವೂ ಬಾಕ್ಸಾಫೀಸ್ ಗಳಿಕೆಯ ದೃಷ್ಟಿಯಿಂದ ಅನುಕ್ರಮಣಿಕೆಯಲ್ಲಿ ಪಟ್ಟಿ ಮಾಡಬಹುದಾದ ಚಿತ್ರಗಳು. ಇವೆಲ್ಲವುಗಳ ಗಳಿಕೆ ತಲಾ 200 ಕೋಟಿ ರೂಪಾಯಿಗೂ ಹೆಚ್ಚು.

ವಸ್ತುಗಳ ದೃಷ್ಟಿಯಿಂದ ಈ ಚಿತ್ರಗಳಲ್ಲಿ ಗಮನಿಸಬೇಕಾದದ್ದು ‘ಟಾಯ್ಲೆಟ್’ ಹಾಗೂ ‘ಟ್ಯೂಬ್ ಲೈಟ್’. ಶ್ರೀ ನಾರಾಯಣ್ ಸಿಂಗ್ ನಿರ್ದೇಶನದ ‘ಟಾಯ್ಲೆಟ್’ ಹಳ್ಳಿಗಾಡಿನ ನವಿರು ಕಥನವಾಗಿ, ಸೂಕ್ಷ್ಮಗಳನ್ನು ಒಳಗೊಂಡು ಸಾಗುತ್ತದೆ. ಆದರೆ, ಉತ್ತರಾರ್ಧದಲ್ಲಿ ಅದು ಸರ್ಕಾರಿ ಸಾಕ್ಷ್ಯಚಿತ್ರದ ಲಕ್ಷಣಗಳನ್ನು ಒಪ್ಪಿಕೊಂಡಿರುವುದರಿಂದ ನಿರ್ದೇಶಕರು ತಮ್ಮ ಕೃತಿಯನ್ನು ತಾವೇ ಕೆಡಿಸಿದಂತಾಗಿದೆ. ಸಲ್ಮಾನ್ ತಾರಾ ವರ್ಚಸ್ಸನ್ನು ಬದಿಗಿಟ್ಟು ಕಬೀರ್ ಖಾನ್ ಕಟ್ಟಿಕೊಟ್ಟ ‘ಟ್ಯೂಬ್ ಲೈಟ್’ ಅಷ್ಟೇನೂ ಪ್ರಕಾಶಮಾನವಾಗಿ ಹೊತ್ತಿಕೊಳ್ಳಲಿಲ್ಲ. ಅದು ‘ಟ್ಯೂಬ್ ಲೈಟ್’ ಎಂಬ ಸಹಜ ಮೂದಲಿಕೆಯ ರೂಪಕದಂತೆ ಉಳಿದುಬಿಟ್ಟಿತು.

ಪ್ರಯೋಗಗಳು ಸಾರ್ ಪ್ರಯೋಗಗಳು…

ಕುಶನ್ ನಂದಿ ನಿರ್ದೇಶಿಸಿ, ನವಾಜುದ್ದೀನ್ ಸಿದ್ದಿಕಿ ಅಭಿನಯಿಸಿದ ‘ಬಾಬುಮೋಶಾಯ್ ಬಂದೂಕ್ ಬಾಜ್’ ಜನಮೆಚ್ಚುಗೆಗೆ ಪಾತ್ರವಾದ ಕ್ರೈಮ್ ಡ್ರಾಮಾ. ಅಲಂಕೃತ ಶ್ರೀವಾಸ್ತವ ಹೆಣ್ಣುಕಣ್ಣಿನಿಂದ ಕಟ್ಟಿಕೊಟ್ಟ ಹೆಚ್ಚೇ ಕಚ್ಚಾ ಎನ್ನಬಹುದಾದ ‘ಲಿಪ್ ಸ್ಟಿಕ್ ಅಂಡರ್ ಮೈ ಬುರ್ಖಾ’ ಸಡಿಲ ಶಿಲ್ಪದ ಹೊರತಾಗಿಯೂ ಹೆಚ್ಚು ಬೋಲ್ಡ್ ಎಂಬ ಕಾರಣಕ್ಕೆ ಸದ್ದು ಮಾಡಿತು. ಅನುರಾಗ್ ಬಸು ದಶಕಗಳ ಗೀತನಾಟಕದ ಕನಸು ಸಾಕಾರಗೊಂಡದ್ದು ‘ಜಗ್ಗಾ ಜಾಸೂಸ್’ ಮೂಲಕ. ಉಗ್ಗುವ ನಾಯಕ ಹಾಡುಗಳಿಂದಲೇ ಮಾತನಾಡುತ್ತಾ, ಜನಪದದ ಸೊಗಡನ್ನು ತುಳುಕಿಸುವ ಈ ಚಿತ್ರ ಎದ್ದುಕಾಣುವ ಪ್ರಯೋಗವೇ ಆಗಿತ್ತಾದರೂ ಬಹುಪಾಲು ಪ್ರೇಕ್ಷಕರಿಗೆ ಇಷ್ಟವಾಗಲಿಲ್ಲ.


‘ಟಾಯ್ಲೆಟ್‌...’  ಚಿತ್ರದ ದೃಶ್ಯ

ಸಂಬಂಧಗಳ ತಾಕಲಾಟಗಳು, ಸಂಕಟ ಸಮಯದ ನಿರ್ವಹಣೆಯನ್ನೇ ವಸ್ತುವಾಗಿಸಿ ಕೊಂಕಣಾ ಸೆನ್ ಶರ್ಮ ನಿರ್ದೇಶಿಸಿದ ‘ದಿ ಡೆತ್ ಇನ್ ದಿ ಗುಂಜ್’ ಉಲ್ಲೇಖನಾರ್ಹ ಸಿನಿಮಾ. ಕನ್ನಡದಲ್ಲಿ ಪಿ. ಶೇಷಾದ್ರಿ, ಕಾಶಿಯಲ್ಲಿ ಸಾವಿನ ಮನೆಯಲ್ಲಿ ದಿನಗಳನ್ನು ದೂಡುವವರ ಕಥಾನಕವಿದ್ದ ‘ವಿಮುಕ್ತಿ’ಯನ್ನು ಗಂಭೀರ ಧಾಟಿಯಲ್ಲಿ ತೋರಿಸಿದ್ದರು. ಶುಭಾಂಶಿಶ್ ಭುತಿಯಾನಿ ಅದೇ ವಸ್ತುವನ್ನು ನವಿರು ಹಾಸ್ಯದ ಶೈಲಿಯ ಚಿತ್ರಕಥೆಯಾಗಿ ತೋರಿದ್ದು ‘ಮುಕ್ತಿ ಭವನ್’. ನೀಲಾ ಮಧಬ್ ಪಾಂಡಾ ಪರಿಸರ ಕಾಳಜಿ ಇಟ್ಟುಕೊಂಡು ನಿರ್ದೇಶಿಸಿದ ‘ಕಡ್ವಿ ಹವಾ’, ಮದುವೆ ಹಾಗೂ ಭಾರತೀಯ ತಾಯಿಯರ ಮನೋನಂದನದ ಮಂಥನ ಎನ್ನಬಹುದಾದ ‘ಬರೈಲಿ ಕಿ ಬರ್ಫಿ’ (ನಿರ್ದೇಶನ: ಅಶ್ವಿನಿ ಅಯ್ಯರ್ ತಿವಾರಿ) ಪ್ರಯೋಗಶೀಲತೆಯ ಇನ್ನೆರಡು ಸಣ್ಣ ಮಿಂಚುಗಳು.

ಆಸ್ಕರ್ ಅಂಗಳಕ್ಕೆ ಬಾಲಿವುಡ್‌ನಿಂದ ಹೋದ ‘ನ್ಯೂಟನ್’ ಸಮಕಾಲೀನ ರಾಜಕೀಯ ಸ್ಥಿತಿಯ ವಿಡಂಬನೆಯನ್ನು ತಣ್ಣಗಿನ ದನಿಯಲ್ಲಿ ಮಾಡಿದ ಸಿನಿಮಾ. ಅಮಿತ್ ವಿ. ಮಸೂರ್ ಕರ್ ನಿರ್ದೇಶಿಸಿ, ರಾಜ್ ಕುಮಾರ್ ರಾವ್ ಅಭಿನಯಿಸಿದ ಚಿತ್ರವಿದು.

ಶಾರುಖ್ ಖಾನ್ ತಮ್ಮ ಇಮೇಜಿನ ಹಂಗು ತೊರೆದು ಇಮ್ತಿಯಾಜ್ ಅಲಿ ಗರಡಿ ಪ್ರವೇಶಿಸಲು ನಿರ್ಧರಿಸಿದ್ದೇ ಅಚ್ಚರಿ. ಅದರ ಫಲವೇ ‘ಜಬ್ ಹ್ಯಾರಿ ಮೆಟ್ ಸೆಜಲ್’. ಪಯಣದ ಭಾವಗೀತಾತ್ಮಕ ಕಥನ ಎನ್ನಬಹುದಾದ ಈ ಚಿತ್ರದಲ್ಲಿ ಇಮ್ತಿಯಾಜ್ ಅಲಿಯ ಫಾರ್ಮ್ ಅವರ ಹಳೆಯ ಚಿತ್ರಗಳಷ್ಟು ಉತ್ತಮವಾಗಿರಲಿಲ್ಲ. ಚಿತ್ರ ಹಿಡಿದಿಟ್ಟುಕೊಂಡ ರಸಿಕರ ಸಂಖ್ಯೆಯೂ ಕಡಿಮೆ.

ಅಮೀರ್ ಖಾನ್ ಸಹಾಯಕನಾಗಿ ಕೆಲಸ ಮಾಡಿ, ಸಿನಿಮಾದ ಪಟ್ಟುಗಳನ್ನೂ ಅರಿತ ಅದ್ವೈತ್ ಚಂದನ್ ಚೊಚ್ಚಿಲ ನಿರ್ದೇಶನದ ‘ಸೀಕ್ರೆಟ್ ಸೂಪರ್ ಸ್ಟಾರ್’ ವರ್ಷದ ಇನ್ನೊಂದು ಯಶಸ್ವಿ ಪ್ರಯೋಗ, ಸಾಮಾಜಿಕ ಜಾಲತಾಣದ ಸಂಪರ್ಕ ಹಾಗೂ ಮಧ್ಯಮವರ್ಗದ ಮುಸ್ಲಿಂ ಹೆಣ್ಣುಮಗಳ ಸ್ವಾತಂತ್ರ್ಯದ ದನಿಯಾಗಿ ಕಣ್ಣೀರು ಜಿನುಗಿಸುವ ‘...ಸೂಪರ್ ಸ್ಟಾರ್’ ನಟ-ನಟಿಯರ ತೂಕದ ಅಭಿನಯ ಹಾಗೂ ಬಿಗಿಯಾದ ಸ್ಕ್ರಿಪ್ಟ್‌ನಿಂದ ಗಳಿಕೆಯಲ್ಲೂ ಯಶಸ್ವಿಯಾಯಿತು.

ಕೇರಳದ ಹುಡುಗ ಸುರೇಶ್ ತ್ರಿವೇಣಿ ವರ್ಷಗಳಿಂದ ವಿದ್ಯಾ ಬಾಲನ್ ಅಭಿಮಾನಿ. ಅವರನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಸಿದ್ಧಪಡಿಸಿದ ‘ತುಮ್ಹಾರಿ ಸುಲು’ ಕೂಡ ಮಧ್ಯಮವರ್ಗದ ಮಹಿಳೆಯ ಯಶೋಗಾಥೆಯನ್ನು ಸಮಕಾಲೀನ ಚೌಕಟ್ಟಿನಲ್ಲಿ ಬಿಂಬಿಸುವ ಪ್ರಯೋಗ. ನಿರೂಪಣೆಯಲ್ಲಿ ಹೆಚ್ಚು ಸರ್ಕಸ್ ಮಾಡದ ಈ ಸರಳ ಚಿತ್ರ ಸಹೃದಯರ ಮನಗೆದ್ದಿತು.

ತನುಜಾ ಚಂದ್ರ ದೀರ್ಘಾವಧಿಯ ನಂತರ ನಿರ್ದೇಶಿಸಿದ ‘ಕರೀಬ್ ಕರೀಬ್ ಸಿಂಗಲ್’ ಆಧುನಿಕ ಸಂದರ್ಭದಲ್ಲಿ ಮದುವೆಯಿಂದ ದೂರವೇ ಉಳಿದ ಹೆಣ್ಣುಮಗಳ ಪ್ರೇಮ ಕಥನವನ್ನು ನವಿರಾಗಿ ಹೇಳಿದ ಸಿನಿಮಾ. ಇರ್ಫಾನ್ ಖಾನ್ ಹಾಗೂ ಮಲಯಾಳಂ ನಟಿ ಪಾರ್ವತಿ ಅಭಿನಯದ ಜುಗಲ್‌ಬಂದಿಯಾಗಿಯೂ ಇದು ಗಮನಾರ್ಹ.

ಬಾಲಿಶ ಕಥಾನಕಗಳು ಒಂದು ಕಡೆ ದುಡ್ಡು ಮಾಡಿರುವುದು, ಪ್ರಯೋಗಮುಖಿಗಳಿಗೆ ಇನ್ನೊಂದು ಕಡೆ ದೊಡ್ಡ ಅವಕಾಶ ದಕ್ಕಿರುವುದು- ಬಾಲಿವುಡ್ ವೇದಿಕೆಯಲ್ಲಿ ಭಿನ್ನ ದನಿಗಳ ಸಾಧ್ಯತೆಯನ್ನು ದೊಡ್ಡದು ಮಾಡಿದೆ. ಸ್ಟಾರ್‌ಗಳೂ ಹೊಸತನ ಹೊಸೆಯುವವರ ಬಳಿಗೆ ಧಾವಿಸುವ ಮನಸ್ಥಿತಿ ಮೂಡಿರುವುದು ಚೇತೋಹಾರಿ. 

***

‘ಟೈಗರ್ ಜಿಂದಾ ಹೈ’
 

ನಾಯಕ ನಾನೇ…

‘ಟೈಗರ್ ಜಿಂದಾ ಹೈ’ ಹಿಂದಿ ಸಿನಿಮಾದ ಮೊದಲ ದಿನದ ಗಳಿಕೆ ಮೂವತ್ತೂಕಾಲು ಕೋಟಿ ರೂಪಾಯಿ. ‘ಟ್ಯೂಬ್ ಲೈಟ್’ ಮಿಣುಕಿ ಮಿಣುಕಿ ಸುಸ್ತಾದ ನಂತರ ಸಲ್ಮಾನ್ ಖಾನ್ ಮತ್ತೆ ತಮ್ಮ ಮಾರುಕಟ್ಟೆಯ ಖದರನ್ನು ಕೊಡವಿ ತೋರಿರುವ ಸಿನಿಮಾ ಇದು. ಒಂದು ವೇಳೆ ಇದು ಈ ವರ್ಷದ ಬೇರೆ ಚಿತ್ರಗಳ ಗಳಿಕೆಯನ್ನು ಹಿಂದಿಕ್ಕಿದರೆ ಸಲ್ಮಾನ್ ಮತ್ತೆ ನಂಬರ್ ಒನ್ ನಟ ಎನಿಸಿಕೊಳ್ಳುವರು.

‘ಟಾಯ್ಲೆಟ್’, ‘ಜಾಲಿ ಎಲ್ ಎಲ್ ಬಿ-2’ ಗಳಿಕೆಯ ಕಾರಣಕ್ಕೆ ಅಕ್ಷಯ್ ಕುಮಾರ್ ಸ್ಥಿರತೆ ಮುಂದುವರಿದಿದೆ. ‘ಜುಡ್ವಾ 2’ ಹಾಗೂ ತೆಲುಗಿನ ರೀಮೇಕ್ ‘ಬದ್ರಿನಾಥ್ ಕಿ ದುಲ್ಹನಿಯಾ’ ಗಳಿಕೆಯಿಂದಾಗಿ ವರುಣ್ ಧವನ್ ಕೂಡ ಸ್ಟಾರ್ ಸ್ಥಾನಕ್ಕೆ ಏರಿದ ವರ್ಷವಿದು. ‘ರಯೀಸ್’ನ ಸಮಾಧಾನಕರ ಗಳಿಕೆ ಹಾಗೂ ‘ಜಬ್ ಹ್ಯಾರಿ ಮೆಟ್ ಸೆಜಲ್’ನ ಹೊಸತನದಿಂದಾಗಿ ಶಾರುಖ್ ಕಡೆಗೂ ಕಣ್ಣು ಹೊರಳಿಸಬಹುದು.

ಹೊಸಬರ ಬೆನ್ನುತಟ್ಟುವ ತಮ್ಮ ಹಳೆಯ ಚಾಳಿಯನ್ನು ಅಮೀರ್ ಖಾನ್ ಮುಂದುವರಿಸಿರುವುದಕ್ಕೆ ‘ಸೀಕ್ರೇಟ್ ಸೂಪರ್ ಸ್ಟಾರ್’ ಉದಾಹರಣೆ.

***
ನಾಯಕಿಯರೆಂಬ ಮಿಂಚುಗಳು

‘ರಂಗೂನ್’, ‘ಸಿಮ್ರನ್’ ಸೋತರೂ ಕಂಗನಾ ರನೋಟ್ ಆಯ್ಕೆಯ ಕುರಿತು ಯಾವ ಅನುಮಾನಗಳೂ ಉಳಿದಿಲ್ಲ. ‘ಪದ್ಮಾವತಿ’ ತೆರೆಕಂಡಿದ್ದಿದ್ದರೆ ದೀಪಿಕಾ ಪಡುಕೋಣೆಯ ಅಧಿಪತ್ಯ ಮುಂದುವರಿಯುತ್ತಿತ್ತೋ ಏನೋ? ಅನುಷ್ಕಾ ಶರ್ಮ, ಭೂಮಿ, ಅಲಿಯಾ ಭಟ್, ಪರಿಣೀತಿ, ಸೋನಾಕ್ಷಿ ಸಿನ್ಹಾ (ಇತ್ತೆಫಾಕ್) ಎಲ್ಲರೂ ತಕ್ಕಮಟ್ಟಿಗೆ ಬ್ಯುಸಿಯಾಗೇ ಇದ್ದಾರೆ. ಪ್ರಿಯಾಂಕಾ ಚೋಪ್ರಾ ಅಂತರರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡುತ್ತಿದ್ದಾರೆ. ಎಲ್ಲರನ್ನೂ ಮಿಂಚುಗಳು ಎನ್ನಲಡ್ಡಿಯಿಲ್ಲ. ಮಲಯಾಳಂ ನಟಿಯರಾದ ಪದ್ಮಪ್ರಿಯ (ಶೆಫ್) ಹಾಗೂ ಪಾರ್ವತಿ (ಕರೀಬ್ ಕರೀಬ್ ಸಿಂಗಲ್) ಬಾಲಿವುಡ್ ಮಂದಿಗೂ ಗುರುತಾಗಿರುವುದು ವರ್ಷದ ಉಲ್ಲೇಖಾರ್ಹ ಬೆಳವಣಿಗೆ.

***
‘ಪದ್ಮಾವತಿ’ ವಿವಾದವು

‘ಪದ್ಮಾವತಿ’

ರಜಪೂತರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುತ್ತದೆ ಎಂಬ ಕಾರಣಕ್ಕೆ ಕರ್ಣಿ ಸೇನಾದವರು ಉತ್ತರ ಭಾರತದ ಕೆಲವು ರಾಜ್ಯಗಳಲ್ಲಿ ನಡೆಸಿದ ಪ್ರತಿಭಟನೆ ಹಾಗೂ ತಲೆ ಕತ್ತರಿಸುವುದಾಗಿ ರಾಜಕಾರಣಿಯೊಬ್ಬರು ಆಡಿದ ಮಾತು ‘ಪದ್ಮಾವತಿ’ ಸಿನಿಮಾ ತೆರೆಕಾಣಲು ಬಿಡಲಿಲ್ಲ. ಡಿಸೆಂಬರ್ ಮೊದಲ ವಾರ ತೆರೆಕಾಣಬೇಕಿದ್ದ ಈ ಸಿನಿಮಾ ಚಿತ್ರೀಕರಣದ ಹಂತದಿಂದಲೂ ಹಿಂಸಾಚಾರ ಎದುರಿಸುತ್ತಾ ಬಂದಿದೆ. ಈ ಚಿತ್ರದ ಫಲಿತಾಂಶ ಏನಾದೀತು ಎಂಬ ಕುತೂಹಲ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ, ದೀಪಿಕಾ ಪಡುಕೋಣೆ ಇಬ್ಬರಿಗೂ ಇರಲಿಕ್ಕೆ ಸಾಕು.

***
ಅಗಲಿದವರು
ಸ್ಟೈಲಿಶ್ ನಟ ಶಶಿಕಪೂರ್, ಪ್ರಯೋಗಶೀಲತೆಗೆ ಸದಾ ತೆರೆದುಕೊಂಡ ಅಭಿನಯ ವಯ್ಯಾಕರಣಿ ಓಂಪುರಿ, ಒಂದು ಕಾಲದ ಸ್ಟಾರ್ ನಟ ವಿನೋದ್ ಖನ್ನಾ, ಆಧುನಿಕ ಅಮ್ಮನೆಂದೇ ಹೆಸರಾದ ರೀಮಾ ಲಾಗೂ ಈ ವರ್ಷ ಅಗಲಿದವರಲ್ಲಿ ಮುಖ್ಯರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.