ADVERTISEMENT

ಗೌರಿಪುತ್ರನ ಕಂಕಣಭಾಗ್ಯ!

​ಪ್ರಜಾವಾಣಿ ವಾರ್ತೆ
Published 26 ಜುಲೈ 2012, 19:30 IST
Last Updated 26 ಜುಲೈ 2012, 19:30 IST
ಗೌರಿಪುತ್ರನ ಕಂಕಣಭಾಗ್ಯ!
ಗೌರಿಪುತ್ರನ ಕಂಕಣಭಾಗ್ಯ!   

`ನನ್ನ ಚಿತ್ರದಲ್ಲಿ ಸೂಪರ್ ಸ್ಟಾರ್‌ಗಳಿಲ್ಲ. ಸೂಪರ್ ಥೀಮ್ ಇದೆ. ಒಳ್ಳೆ ಕಲಾವಿದರಿದ್ದಾರೆ. ಹೀಗಾಗಿ ಪೈಪೋಟಿಯನ್ನೆದುರಿಸಿ ಚಿತ್ರ ಗೆಲ್ಲುತ್ತದೆ~- ನಿರ್ದೇಶಕ ಮಂಜು ಮಸ್ಕಲ್ ಮಟ್ಟಿ ತಮ್ಮ ಚಿತ್ರದ ಬಗ್ಗೆ ಆತ್ಮವಿಶ್ವಾಸದಿಂದ ಹೇಳಿಕೊಂಡರು. ಅವರ `ಗೌರಿಪುತ್ರ~ ಈ ವಾರ ತೆರೆಕಾಣುತ್ತಿದೆ. ಇದೇ ವಾರ ಬಿಡುಗಡೆಯಾಗುತ್ತಿರುವ ದೊಡ್ಡ ಬಜೆಟ್‌ನ, ದೊಡ್ಡ ಸ್ಟಾರ್ ಇರುವ ಚಿತ್ರದಿಂದ `ಗೌರಿಪುತ್ರ~ನಿಗೆ ವಿಘ್ನ ಎದುರಾಗುವುದಿಲ್ಲವೇ ಎಂಬ ಪ್ರಶ್ನೆಗೆ ಮಂಜು ಪ್ರತಿಕ್ರಿಯಿಸಿದ್ದು ಹೀಗೆ.

ಬಹುತಾರಾಗಣದ `ಗೌರಿಪುತ್ರ~ ಇತ್ತೀಚೆಗೆ ವಿವಾದದ ಕಾರಣ ಸದ್ದು ಮಾಡಿತ್ತು. ನಾಯಕಿಯರಾದ ನಿಖಿತಾ ಮತ್ತು ನಿವೇದಿತಾ ಪ್ರಚಾರಕ್ಕೆ ಬರುತ್ತಿಲ್ಲ ಎಂದು ಮಂಜು ನಿರ್ಮಾಪಕರ ಸಂಘಕ್ಕೆ ದೂರು ನೀಡಿದ್ದರು. ಸುದ್ದಿಗೋಷ್ಠಿಯಲ್ಲೂ ಮಂಜು ಈ ಇಬ್ಬರ ವಿರುದ್ಧದ ಆಕ್ರೋಶವನ್ನೆಲ್ಲಾ ಹೊರಹಾಕಿದರು. ಆತ್ಮವಿಶ್ವಾಸವಿದ್ದರೂ ಜನ ಹೇಗೆ ಸ್ವೀಕರಿಸುತ್ತಾರೆ ಎಂಬ ಭಯ ಅವರನ್ನು ಕಾಡುತ್ತಿದೆಯಂತೆ.

ಮೊದಲ ಬಾರಿ ನಿರ್ಮಾಣ ಮಾಡಿ ಚಿತ್ರವನ್ನು ಬಿಡುಗಡೆ ಹಂತಕ್ಕೆ ತಂದಿರುವುದೇ ಒಂದು ಗೆಲುವು ಎಂದವರು ಹೇಳಿಕೊಂಡರು. ಪ್ರತಿ ಸನ್ನಿವೇಶದಲ್ಲೂ ಹೊಸತನವಿದೆ. ಇದುವರೆಗೆ ಯಾರೂ ಚಿತ್ರೀಕರಣ ನಡೆಸದ ಸ್ಥಳಗಳನ್ನೇ ಸಿನಿಮಾಕ್ಕೆ ಆಯ್ದುಕೊಳ್ಳಲಾಗಿತ್ತು ಎಂದರು.
ನಾಯಕರಲ್ಲೊಬ್ಬರಾದ ಅಕ್ಷಯ್, ಚಿತ್ರದಲ್ಲಿ ಉತ್ತಮ ಸಂದೇಶವಿದೆ ಎಂದು ಹೇಳಿದರು.
 
ಕುಟುಂಬವಿಡೀ ಒಟ್ಟಿಗೆ ಕೂತು ನೋಡಬಹುದಾದ, ನೋಡಲೇಬೇಕಾದ ಚಿತ್ರವಿದು. ಮದುವೆಗೆ ಮುನ್ನ ಹೆಣ್ಣು ಹೆತ್ತವರು ಹುಡುಗನ ಬಗ್ಗೆ ಏನೆಲ್ಲಾ ತಿಳಿದುಕೊಳ್ಳಬೇಕು ಎಂಬ ಮಾಹಿತಿಯೂ ಇದರಲ್ಲಿದೆ ಎಂದರು.

`ಗೌರಿಪುತ್ರ~- `ಆದರೂ ಹೆಣ್ಣು ಹುಡುಕುತ್ತಿದ್ದೇವೆ~- ಇದು ಚಿತ್ರದ ಅಡಿಬರಹ. ಈ ಅಡಿಬರಹವೇ ನನ್ನನ್ನು ಹೆಚ್ಚು ಆಕರ್ಷಿಸಿತು ಎಂದರು ನಟಿ ರೂಪಿಕಾ. ಅವರದು ಎಮೋಷನಲ್ ಹಳ್ಳಿ ಹುಡುಗಿಯ ಪಾತ್ರ. ಈಗಿನ ಸಮಾಜಕ್ಕೆ ಪ್ರಸ್ತುತವಾಗಿರುವ ಕತೆಯಿದು ಎಂದ ರೂಪಿಕಾ ಮಂಜು ಅವರ ಶ್ರಮವನ್ನು ಶ್ಲಾಘಿಸಿದರು.ಛಾಯಾಗ್ರಾಹಕ ರವಿ, ನಿರ್ಮಾಪಕ ತ್ರಯರಲ್ಲಿ ಒಬ್ಬರಾದ ಮಂಜುನಾಥ ಗೌಡ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.
 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.