ADVERTISEMENT

ಜಟಾಪಟಿಗೆ ಅರ್ಥವಿಲ್ಲ

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2013, 19:59 IST
Last Updated 4 ಆಗಸ್ಟ್ 2013, 19:59 IST

1982ರಲ್ಲಿ ತೆರೆಕಂಡು ಜನಪ್ರಿಯಗೊಂಡ `ಅರ್ಥ್' ಸಿನಿಮಾ ಇದೀಗ ಮತ್ತೊಮ್ಮೆ ಸುದ್ದಿಯಲ್ಲಿದೆ. ಕುಲ್ಜಿತ್ ಪಾಲ್ ನಿರ್ಮಿಸಿ, ಮಹೇಶ್ ಭಟ್ ನಿರ್ದೇಶಿಸಿದ್ದ ಈ ಚಿತ್ರದಲ್ಲಿ ಶಬಾನಾ ಅಜ್ಮಿ, ಕುಲಭೂಷಣ ಕರಬಂಧ ಮುಂತಾದವರು ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದರು.

ಈ ಚಿತ್ರವನ್ನು ಉರ್ದುವಿನಲ್ಲಿ ಪುನರ್‌ನಿರ್ಮಾಣ ಮಾಡಲು ಮಹೇಶ್ ಭಟ್ ತಮ್ಮದೇನೂ ಅಭ್ಯಂತರವಿಲ್ಲ ಎಂದಿರುವುದು ಕುಲಜಿತ್ ಪಾಲ್ ಅವರ ತಪ್ಪು ಗ್ರಹಿಕೆ ಹಾಗೂ ಆಕ್ರೋಶಕ್ಕೆ ಕಾರಣವಾಗಿದೆ. ಈ ಸಿಟ್ಟು ಸಾರ್ವಜನಿಕವಾಗಿ ವ್ಯಕ್ತವಾಗುತ್ತಿದ್ದು, ಮಾತಿನ ಚಕಮಕಿಗೆ ಕಾರಣವಾಗಿದೆ. “ಭಾರತೀಯ ಚಿತ್ರರಂಗದ ಉನ್ನತ ಚಿತ್ರವನ್ನು ಪುನರ್‌ನಿರ್ಮಾಣ ಮಾಡಲು ಭಟ್ ಒಪ್ಪಿಗೆ ಸೂಚಿಸಿರುವುದು ಅಕ್ಷಮ್ಯ. `ಅರ್ಥ್' ಸಿನಿಮಾ ಮಾಡಲು ಪಾಕಿಸ್ತಾನದ ನಿರ್ಮಾಪಕರಿಗೆ ಒಪ್ಪಿಗೆ ಸೂಚಿಸಿರುವುದು ತಪ್ಪು. ಕಾನೂನುಬದ್ಧವಾಗಿ ಆ ಸಿನಿಮಾದ ಹಕ್ಕು ನಮ್ಮದು” ಎಂದು ಅವರು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

ಇದಕ್ಕೆ ಪತ್ಯುತ್ತರ ನೀಡಿರುವ ಮಹೇಶ್ ಭಟ್, “ಕುಲ್ಜಿತ್ ಅವರು ಊಹೆಯ ಮೇಲೆ ಪಬ್ಲಿಕ್ ನೋಟಿಸ್ ನೀಡಿದಂತಿದೆ. ನಾನು `ಅರ್ಥ್' ಸಿನಿಮಾದ ಹಕ್ಕನ್ನು ಪಾಕಿಸ್ತಾನದ ನಿರ್ಮಾಪಕರಿಗೆ ಮಾರಿದ್ದೇನೆ ಎಂದು ಅವರು ತಪ್ಪು ಭಾವಿಸಿದ್ದಾರೆ. ನಿಜಾಂಶ ತಿಳಿಯದೆ ಕುಲ್ಜಿತ್ ನೋಟಿಸ್ ಜಾರಿ ಮಾಡಿದ್ದಾರೆ. ಆದರೆ ವಾಸ್ತವವೇ ಬೇರೆ. ಶಾನ್ ನನ್ನನ್ನು ಭೇಟಿಯಾಗಿ ಅರ್ಥ್ ಸಿನಿಮಾವನ್ನು ಉರ್ದುವಿನಲ್ಲಿ ನಿರ್ಮಾಣ ಮಾಡಲು ಒಪ್ಪಿಗೆ ಕೇಳಿದರು.

ಮೂಲ ಸಿನಿಮಾದ ಸ್ಕ್ರಿಪ್ಟ್ ಹಾಗೂ ಅರ್ಥವನ್ನು ಉಳಿಸಿಕೊಂಡು ಸಿನಿಮಾ ಮಾಡಲು ನನ್ನ ತಕರಾರು ಏನೂ ಇಲ್ಲ ಎಂದು ತಿಳಿಸಿದ್ದೇನೆ ಅಷ್ಟೆ. ಇದರಿಂದ ಭಾರತ-ಪಾಕಿಸ್ತಾನದ ಸಂಬಂಧ ವೃದ್ಧಿಯಾಗುತ್ತದೆ ಎಂಬುದಷ್ಟೇ ನನ್ನ ಉದ್ದೇಶ. ಇದರಲ್ಲಿ ಯಾವುದೇ ವ್ಯಾವಹಾರಿಕ ಉದ್ದೇಶ ಇಲ್ಲ” ಎಂದು ಪ್ರತಿಯಾಗಿ ಉತ್ತರಿಸಿದ್ದಾರೆ. 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.