ADVERTISEMENT

ಜರಾಸಂಧನ ಮರುಹುಟ್ಟು

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2011, 19:30 IST
Last Updated 10 ಫೆಬ್ರುವರಿ 2011, 19:30 IST

ಹಾಲಿವುಡ್ ಚಿತ್ರದ ಮುಖವಿಲ್ಲದ ಪ್ರಾಣಿಯನ್ನೇ ಹೋಲುವ ಪೋಸ್ಟರ್. ‘ಜರಾಸಂಧ’ ಎನ್ನುವುದನ್ನು ಹೊರತುಪಡಿಸಿದರೆ ತಂತ್ರಜ್ಞರ ಬರಹವೆಲ್ಲಾ ಇಂಗ್ಲಿಷ್‌ನಲ್ಲಿ. ಆ ಪ್ರಾಣಿ ಚಿತ್ರದ ಪಾತ್ರವಾ ಎಂಬ ಪ್ರಶ್ನೆ ಸುಳಿಯುವ ಮೊದಲೇ ‘ಇಲ್ಲ’ ಎಂಬ ಉತ್ತರ ಹೊಮ್ಮಿತು. ಸುದ್ದಿಮಿತ್ರರಿಂದ ಎದುರಾಗಬಹುದಾದ ಪ್ರಶ್ನೆಗಳನ್ನು ಖುದ್ದು ತಾವೇ ಎತ್ತುತ್ತಾ, ಅಡ್ಡಗೋಡೆ ಮೇಲೆ ದೀಪ ಇಡುವಂಥ ಎಂದಿನ ಶೈಲಿಯ ಉತ್ತರ ಕೊಡುತ್ತಾ ಸಾಗಿದವರು ನಿರ್ದೇಶಕ ‘ಶಶಾಂಕ್’.

ಅದಕ್ಕೂ ಕೆಲವೇ ನಿಮಿಷ ಮುಂಚೆ ‘ದಿ ಕ್ಲಬ್’ನ ಆವರಣದಲ್ಲಿ ನಟರಾದ ವಿಜಯ್, ರಂಗಾಯಣ ರಘು, ಸ್ವಯಂವರ ಚಂದ್ರು ಎಲ್ಲರೂ ಸ್ಪರ್ಧೆಗೆ ಬಿದ್ದವರಂತೆ ಮೌನವಾಗಿ ಸಿಗರೇಟು ಹೊಗೆಯನ್ನು ಬಿಡುತ್ತಾ ಕೂತಿದ್ದರು. ಒಳಗಡೆ ನಿರ್ದೇಶಕರು ಮಾತ್ರ ಸಿದ್ಧತೆಯಲ್ಲಿ ಮುಳುಗಿದ್ದರು.

ಆ್ಯಕ್ಷನ್ ಚಿತ್ರ ಮಾಡಬೇಕೆಂಬ ಬಾಲ್ಯದ ತಮ್ಮ ಕನಸನ್ನು ಶಶಾಂಕ್ ನನಸಾಗಿಸಿಕೊಳ್ಳುತ್ತಿರುವ ಈ ಚಿತ್ರದ ಹೆಸರು ‘ಜರಾಸಂಧ’. ಸೀಳಿದರೂ ಒಂದುಗೂಡುತ್ತಿದ್ದ ದೇಹದ, ಮಹಾಭಾರತದ ಪಾತ್ರವಾದ ‘ಜರಾಸಂಧ’ನನ್ನು ಅವರು ಇಡೀ ಚಿತ್ರದಲ್ಲಿ ಸಂಕೇತವಾಗಿ ಬಳಸಲಿದ್ದಾರೆ.

ಈ ‘ಜರಾಸಂಧ’ ದುಬಾರಿ. ಯಾಕೆಂದರೆ, ಇದುವರೆಗೆ ತಾವು ಹಾಗೂ ವಿಜಯ್ ಮಾಡಿರುವ ಎಲ್ಲಾ ಚಿತ್ರಗಳ ಬಜೆಟ್‌ಗಿಂತ ಇದು ಹೆಚ್ಚು ಹಣವನ್ನು ಖರ್ಚು ಮಾಡಿಸಲಿರುವ ಚಿತ್ರ ಎಂದು ಖುದ್ದು ಶಶಾಂಕ್ ಹೇಳಿಕೊಂಡರು.

‘ಗೆಳೆಯ’, ‘ಶೌರ್ಯ’ ಚಿತ್ರಗಳ ಮೇಲೆ ದೊಡ್ಡ ಮೊತ್ತದ ಹಣ ಹೂಡಿ ಅಭ್ಯಾಸವಿರುವ ಬಿ.ಬಸವರಾಜ್ ಹಾಗೂ ಬಿ.ಕೆ.ಗಂಗಾಧರ್ ‘ಜರಾಸಂಧ’ನ ಮೇಲೆ ವಿಶ್ವಾಸವಿಟ್ಟು ನಿರ್ಮಾಣಕ್ಕಿಳಿದಿದ್ದಾರೆ.

ಒಟ್ಟು 75 ದಿನಗಳ ಸತತ ಚಿತ್ರೀಕರಣ. ಬೆಂಗಳೂರು, ಮುಲ್ಕಿ ಬಳಿಯ ಬಪ್ಪನಾಡ್‌ನ ಜಾತ್ರೆ, ಚಾಲುಕುಡಿ ಜಲಪಾತ ಈಗ ಚಿತ್ರೀಕರಣಕ್ಕೆ ನಿಗದಿಯಾಗಿರುವ ಸ್ಥಳಗಳು. ಇನ್ನೂ ಕೆಲವು ಲೊಕೇಷನ್‌ಗಳ ಹುಡುಕಾಟ ಮುಂದುವರಿದಿದೆ. ಒಂದು ಹಾಡಿಗಾಗಿ ಉತ್ತರ ಭಾರತದ ಕಡೆ ಹೋಗುವ ಸಾಧ್ಯತೆ ಇದೆ. 80 ಕಲಾವಿದರು ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ‘ಪೊರ್ಕಿ’ ಚಿತ್ರದಲ್ಲಿ ನಟಿಸಿದ್ದ ಪ್ರಣೀತಾ ನಾಯಕಿ. ರಂಗಾಯಣ ರಘು, ರೂಪಾದೇವಿ, ದೇವರಾಜ್, ಸ್ವಯಂವರ ಚಂದ್ರು ಮೊದಲಾದವರಲ್ಲದೆ ಮಂಗಳೂರು ಕಡೆಯ ರಂಗ ಕಲಾವಿದರ ಬಳಕೆ ಈ ಚಿತ್ರದಲ್ಲಿ ಆಗಲಿದೆ.

ಬಲವಾದ ಒಂದು ಸ್ಟೇಟ್‌ಮೆಂಟ್ ಚಿತ್ರದಲ್ಲಿದ್ದು, ಕಟ್ಟಕಡೆಯ ದೃಶ್ಯದಲ್ಲಿ ಸ್ಫೋಟಗೊಳ್ಳಲಿದೆ; ಜನಪ್ರಿಯ ಸಂದೇಶವೊಂದಕ್ಕೆ ಸಂಪೂರ್ಣ ವಿರುದ್ಧವಾದ ಸ್ಟೇಟ್‌ಮೆಂಟ್ ಅದು- ಇವಿಷ್ಟೂ ಚಿತ್ರದ ಬಗ್ಗೆ ಶಶಾಂಕ್ ಒಂದೇ ಉಸಿರಿನಲ್ಲಿ ಕೊಟ್ಟ ಮಾಹಿತಿ.

ಚಿತ್ರೀಕರಣ ಪ್ರಾರಂಭವಾಗಿ ಐದು ದಿನಗಳಾಗಿತ್ತು. ಆದರೆ, ವಿಜಯ್ ಸೆಟ್‌ಗೆ ಕಾಲಿಟ್ಟ ಮೊದಲ ದಿನ ಅದು. ಚಿತ್ರದ ಏಕಸಾಲಿನ ಕಥೆ ಕೇಳಿ ವಿಜಯ್‌ಗೆ ನೆನಪಿಗೆ ಬಂದದ್ದು ‘ತಾರೆ ಜಮೀನ್ ಪರ್’. ಅಂದರೆ, ಆ ಚಿತ್ರ ಕೊಟ್ಟ ಥ್ರಿಲ್ಲನ್ನೇ ಈ ಚಿತ್ರದ ಕಥೆಯೂ ಕೊಡಲಿದೆ ಎಂದು ತಕ್ಷಣ ಅವರಿಗೆ ಅನ್ನಿಸಿತಂತೆ. ಫೈಟ್, ಡಾನ್ಸ್, ಹಾಡು ಎಂಬ ಸೂತ್ರಗಳಿಗೆ ಹೊರತಾದ ಚಿತ್ರದಲ್ಲಿ ಅವಕಾಶ ಸಿಕ್ಕಿರುವುದು ವಿಜಯ್‌ಗೆ ಖುಷಿ ತಂದಿದೆ.

ಶಶಾಂಕ್ ಅವರನ್ನು ಅವರ ಮೂಲ ಹೆಸರಾದ ಉಮೇಶ್ ಎಂದೇ ಸಂಬೋಧಿಸುತ್ತಿದ್ದ ರಂಗಾಯಣ ರಘು ಥೇಟ್ ಸಿನಿಮಾ ಸಂಭಾಷಣೆ ಹೇಳುವ ರೀತಿಯಲ್ಲೇ ಮಾತನಾಡಿದರು. ‘ನಾವು ಹರಿಯುವ ನೀರು. ಕೆಲವೊಮ್ಮೆ ಕೊಚ್ಚೆ ಆಗಬೇಕಾಗುತ್ತೆ. ಇನ್ನು ಕೆಲವೊಮ್ಮೆ ಸೋರಿಹೋಗಬೇಕಾಗುತ್ತದೆ. ಆದರೂ ಆಗಾಗ ಸರಿಯಾದ ಜಾಗದಲ್ಲೇ ಹರೀತೀವಿ. ಈ ಚಿತ್ರ ಕೂಡ ಅಂಥ ಜಾಗವೇ’ ಎಂದ ರಘು, ಹುಚ್ಚು ಹಿಡಿಸಿಕೊಂಡು ಕೆಲಸ ಮಾಡುವ ಶಶಾಂಕ್ ಹೊಗಳಿಕೆಗೆ ತಮ್ಮ ಮಾತಿನಲ್ಲಿ ಹೆಚ್ಚು ಪಾಲಿಟ್ಟರು.

ಚಿತ್ರಕ್ಕೆ ಕ್ಯಾಮೆರಾ ಕಣ್ಣಾಗಲಿರುವ ಶೇಖರ್ ಚಂದ್ರು, ಸ್ಕ್ರಿಪ್ಟ್ ಹಂತದಿಂದಲೇ ತಮ್ಮನ್ನೂ ಕೂರಿಸಿಕೊಂಡು ಶಶಾಂಕ್ ಸಿದ್ಧರಾಗುವ ರೀತಿಯನ್ನು ಹೆಮ್ಮೆಯಿಂದ ಹೇಳಿಕೊಂಡರು. ಅರ್ಜುನ್ ಚಿತ್ರದ ಹಾಡುಗಳಿಗೆ ಸಂಗೀತ ಸಂಯೋಜನೆ ಮಾಡಿದ್ದಾರೆ.

’ಅಗ್ನಿಪಥ್’, ’ಶೋಲೆ’, ’ದೀವಾರ್’ ತರಹದ ಹಿಂದಿ ಚಿತ್ರಗಳನ್ನು ನೋಡಿ, ಮಾಡಿದರೆ ಅಂಥ ಸಿನಿಮಾಗಳನ್ನೇ ಮಾಡಬೇಕು ಎಂದುಕೊಂಡ ಶಶಾಂಕ್ ಕೊನೆಯದಾಗಿ ಹೇಳಿದ್ದು- ‘ಇದು ಅದ್ಭುತವಾದ ಚಿತ್ರವಾಗಲಿದೆ’- ಎಂದು. ಅವರ ಈ ಆತ್ಮವಿಶ್ವಾಸ ಇದುವರೆಗೆ ಅವರನ್ನು ಗೆಲ್ಲಿಸಿರುವುದಂತೂ ಸುಳ್ಳಲ್ಲ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.