ADVERTISEMENT

ತಿಪ್ಪಜ್ಜಿಗೆ ಬೆಳ್ಳಿರಂಗು

ಗಾಣಧಾಳು ಶ್ರೀಕಂಠ
Published 5 ಸೆಪ್ಟೆಂಬರ್ 2013, 19:59 IST
Last Updated 5 ಸೆಪ್ಟೆಂಬರ್ 2013, 19:59 IST

ತಿಹಾಸಿಕ ನಗರ ಚಿತ್ರದುರ್ಗದ ಪ್ರಖ್ಯಾತ ವೃತ್ತ ತಿಪ್ಪಜ್ಜಿ ಸರ್ಕಲ್‌ನ ಕಥೆಯನ್ನು ಬೆಳ್ಳಿತೆರೆಗೆ ತರುತ್ತಿದ್ದಾರೆ ನಿರ್ಮಾಪಕರಾದ ಸಿದ್ದರಾಮು ಮತ್ತು ಡಾ. ಸುರೇಶ್ ಶರ್ಮಾ. ಇದು ಲೇಖಕ ಬಿ.ಎಲ್. ವೇಣು ಅವರ ಕಥೆಯನ್ನು ಆಧರಿಸಿದ ಸಿನಿಮಾ. ಚಿತ್ರದುರ್ಗದ ವೆಂಕಟೇಶ್ವರ ದೇಗುಲದಲ್ಲಿ ಕಳೆದ ವಾರ ಚಿತ್ರದ ಮುಹೂರ್ತ ಸಮಾರಂಭ ನಡೆಯಿತು. ಮೊದಲ ಶಾಟ್‌ನಲ್ಲಿ ಚಿತ್ರದ ನಾಯಕಿ ಮಳೆ ಹುಡುಗಿ ಪೂಜಾಗಾಂಧಿ ಕ್ಯಾಮೆರಾಗೆ ಎದುರಾದರು.

‘ತಿಪ್ಪಜ್ಜಿ ಸರ್ಕಲ್ ಕಲಾತ್ಮಕ ಚಿತ್ರ. ಆದರೆ ಸಿನಿಮಾವನ್ನು ಪ್ರಶಸ್ತಿಗಾಗಿ ಮಾಡ್ತಿಲ್ಲ. ಜನರಿಗೆ ತಲುಪಬೇಕು. ಸಾಮಾಜಿಕ ಪರಿವರ್ತನೆಗಾಗಿ ಮಾಡ್ತಿದ್ದೀನಿ' ಎಂದು ಸುದ್ದಿಗೋಷ್ಠಿಯಲ್ಲಿ ಉಮೇದಿನಿಂದ ಹೇಳಿದರು ನಿರ್ದೇಶಕ ಆದಿತ್ಯ ಚಿಕ್ಕಣ್ಣ. ಅವರ ಮಾತು ಪೂರ್ಣಗೊಳ್ಳುವ ಮೊದಲೇ, ‘ನನಗಂತೂ ಈ ಸಿನಿಮಾಕ್ಕೆ ರಾಷ್ಟ್ರಪ್ರಶಸ್ತಿ ಬರಬೇಕು ಎನ್ನಿಸುತ್ತಿದೆ. ಕಥೆ ಅಷ್ಟು ಅದ್ಭುತವಾಗಿದೆ.

ಪಾತ್ರಗಳಂತೂ ಎಲ್ಲವೂ ಚೆನ್ನಾಗಿವೆ’ ಎಂದು ಕಣ್ಣರಳಿಸಿಕೊಂಡೇ ಮಾತಿಗಿಳಿದರು ಪೂಜಾಗಾಂಧಿ. ಇವರಿಬ್ಬರ ಮಾತಿನ ನಡುವೆ ‘ತಿಪ್ಪಜ್ಜಿ ಸರ್ಕಲ್’ ಸಿನಿಮಾದ ಕಥೆಯ ತುಣುಕುಗಳನ್ನು ಹಂಚಿಕೊಂಡರು ವೇಣು.

ಸತ್ಯಕಥೆ ಆಧಾರಿತ ಚಿತ್ರ...
ಇದು ಸತ್ಯಕಥೆ ಆಧಾರಿತ ಚಿತ್ರ. ತಿಪ್ಪಜ್ಜಿ ಎನ್ನುವ ದೇವದಾಸಿಯ ಯೌವನ, ಮಧ್ಯ ವಯಸ್ಸು, ನಂತರ ಮುಪ್ಪಿನ ಬದುಕು ಈ ಚಿತ್ರದ ಕಥಾವಸ್ತು. ಆಕೆ ತನ್ನ ಇಬ್ಬರು ಹೆಣ್ಣು ಮಕ್ಕಳ ಮದುವೆ ಮಾಡಿಕೊಡಲು ಇದ್ದ ಎರಡು ಮನೆಗಳನ್ನು ಮಾರಾಟ ಮಾಡಿ, ಪೆಟ್ಟಿಗೆ ಅಂಗಡಿಯಲ್ಲಿ ಬದುಕು ದೂಡುತ್ತಾರೆ. ಮುಪ್ಪಿನಲ್ಲಿ ತಿಪ್ಪಜ್ಜಿಗೆ ಹತ್ತಿರವಾಗುವ ಟಾಂಗಾ ಓಡಿಸುವ ಕರೀಂ ಸಾಬ್‌ನ ಅಂತಃಕರಣ, ಕೋಮು ಸೌಹಾರ್ದ ಎಲ್ಲವೂ ಚಿತ್ರದಲ್ಲಿದೆ ಎಂದರು ವೇಣು.

‘ಕಥೆ ಕೇಳಿದಾಕ್ಷಣ ಇಷ್ಟವಾಯ್ತು. ಉತ್ತರ ಕರ್ನಾಟಕದಲ್ಲಿ ದೇವದಾಸಿಯರ ಪುನರ್ವಸತಿ ಕುರಿತು ಕೆಲಸ ಮಾಡಿದ್ದೇನೆ. ಅವರ ಬದುಕನ್ನು ಬಹಳ ಹತ್ತಿರದಿಂದ ನೋಡಿದ್ದೇನೆ. ಈ ಚಿತ್ರದಲ್ಲಿರುವ ಪಾತ್ರ ಕೂಡ ಅಂಥದ್ದೇ ವಿಚಾರವನ್ನೊಳಗೊಂಡಿದೆ. ಇದೊಂದು ಚಾಲೆಂಜಿಂಗ್ ಪಾತ್ರ’ ಎಂದು ಪೂಜಾ ಮುಂಗುರುಳನ್ನು ಸರಿಸುತ್ತಾ, ನಗೆ ಬೀರಿದರು.

‘ಚಿತ್ರದಲ್ಲಿ ಆರು ಹಾಡುಗಳಿವೆ. ವಿ.ನಾಗೇಂದ್ರ ಪ್ರಸಾದ್, ಗೌಸ್‌ಪೀರ್ ಗೀತೆಗೆ ಸಾಹಿತ್ಯ ನೀಡಿದ್ದಾರೆ. ಭರಣಿಶ್ರೀ ಅವರ ಸಂಗೀತವಿದೆ. ಸಂಕಲನ ದೀಪು ಎಸ್. ಕುಮಾರ್, ಪಿ.ಕೆ.ಎಚ್. ದಾಸ್ ಅವರ ಕ್ಯಾಮೆರಾ ಕೈ ಚಳಕವಿದೆ’ ಸಿನಿಮಾ ಕುರಿತು ವಿವರ ನೀಡಿದರು ನಿರ್ದೇಶಕ ಚಿಕ್ಕಣ್ಣ.
–ಗಾಣಧಾಳು ಶ್ರೀಕಂಠ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.