ADVERTISEMENT

ತುಳುವಿನಲ್ಲಿ ಹಾರರ್‌ ಅಬ್ಬರ

​ಪ್ರಜಾವಾಣಿ ವಾರ್ತೆ
Published 13 ಜುಲೈ 2017, 19:30 IST
Last Updated 13 ಜುಲೈ 2017, 19:30 IST
ಸುವರ್ಣಾ ಶೆಟ್ಟಿ
ಸುವರ್ಣಾ ಶೆಟ್ಟಿ   

ಹಾರರ್‌ ಚಿತ್ರ ಮಾಡುವಾಗ ವಿಚಿತ್ರ ಅನುಭವವಾಗುತ್ತದೆ ಎಂಬ ಮಾತು ಜನಜನಿತ. ಅಂತಹ ಅನುಭವ ಹಂಚಿಕೊಳ್ಳಲು ‘ರಾ... ರಾ...’ ಚಿತ್ರತಂಡವೂ ಸಜ್ಜಾಗಿ ಬಂದಿತ್ತು. ತುಳುವಿನಲ್ಲಿ ಈಗ ಹಾಸ್ಯ ಪ್ರಧಾನ ಚಿತ್ರಗಳು ಹೆಚ್ಚಾಗಿ ಮೂಡಿಬರುತ್ತಿವೆ. ನಾಯಕಿ ಪ್ರಧಾನವಾದ ಹಾರರ್‌ ಚಿತ್ರದ ಮೂಲಕ ಜನರನ್ನು ರಂಜಿಸಲು ಹೊರಟಿದ್ದಾರೆ ನಿರ್ದೇಶಕಿ ಲಲಿತಾಶ್ರೀ. ಬಾಲ್ಯದಿಂದಲೂ ಸಿನಿಮಾ ಬಗ್ಗೆ ಕನಸು ಕಟ್ಟಿಕೊಂಡಿದ್ದ ಲಲಿತಾಶ್ರೀ ಅವರ ಮೊಗದಲ್ಲಿ ಮೊದಲ ಬಾರಿಗೆ ಸಿನಿಮಾ ನಿರ್ದೇಶಿಸಿದ ಸಂತಸ ಇತ್ತು.

‘ಹಲವು ವರ್ಷದಿಂದಲೂ ಅಣ್ಣನಿಗೆ ಸಿನಿಮಾ ಕೆಲಸಗಳಲ್ಲಿ ಸಹಾಯ ಮಾಡುತ್ತಿದ್ದೆ. ಭವಿಷ್ಯದಲ್ಲಿ ಕಲಾವಿದೆಯಾಗುತ್ತೇನೆಂಬ ನಂಬಿಕೆ ಚಿಗುರೊಡೆದಿತ್ತು. ಕೊನೆಗಾಲದಲ್ಲಿ ಅಮ್ಮನ ಆಸೆ ಈಡೇರಿಸಲು ನಿರ್ದೇಶಕಿಯಾಗಿದ್ದೇನೆ’ ಎಂದರು. ಚಿತ್ರೀಕರಣದ ವೇಳೆ ನಡೆದ ವಿಚಿತ್ರ ಅನುಭವಗಳ ಬಗ್ಗೆ ಹೇಳುವುದನ್ನು ಅವರು ಮರೆಯಲಿಲ್ಲ.

‘ತಾಳಿ ಕಟ್ಟುವ ಶುಭ ವೇಳೆ’ ಸಿನಿಮಾದ ಬಳಿಕ ಎನ್ನಾರ್‌ ಕೆ. ವಿಶ್ವನಾಥ್‌ ಸಿನಿರಂಗದಿಂದ ದೂರ ಉಳಿದಿದ್ದರು. ತುಳು ಸಿನಿಮಾದ ಮೂಲಕ ಮತ್ತೆ ಸಿನಿಯಾನ ಆರಂಭಿಸಿದ ಖುಷಿ ಅವರಲ್ಲಿತ್ತು.

ADVERTISEMENT

ಚಿತ್ರೀಕರಣದ ವೇಳೆ ಅವರು ಅನುಭವಿಸಿದ ಸಂಕಷ್ಟದ ಬಗ್ಗೆ ಎಳೆ ಎಳೆಯಾಗಿ ಬಿಡಿಸಿಟ್ಟರು. ಅವರ ಮಾತಿಗೆ ಅಕ್ಕಪಕ್ಕ ಕುಳಿತಿದ್ದ ಕಲಾವಿದರು ತಲೆಯಾಡಿಸಿದರು.

ರಂಗಾಯಣ ಹಿನ್ನೆಲೆಯ ಮನೋಜ್‌ ಪುತ್ತೂರು ಅವರಿಗೂ ಇದು ಮೊದಲ ಸಿನಿಮಾ. ರಂಗಭೂಮಿ, ಬೀದಿನಾಟಕಗಳಲ್ಲಿ ಅಭಿನಯಿಸಿದ ಅನುಭವ ಅವರ ಬೆನ್ನಿಗಿದೆ.

‘ಮೊದಲಿಗೆ ದೇವರ ಬಗ್ಗೆ ನಂಬಿಕೆ ಇರಲಿಲ್ಲ. ಸಿನಿಮಾದ ಚಿತ್ರೀಕರಣದ ವೇಳೆ ಆದ ಅನುಭವದಿಂದ ಈಗ ನಾನು ದೇವಸ್ಥಾನಗಳಿಗೆ ಹೋಗುತ್ತಿದ್ದೇನೆ’ ಎಂದು ನಿರ್ಮಾಪಕರ ಮಾತಿಗೆ ಧ್ವನಿಗೂಡಿಸಿದರು.

ಧಾರಾವಾಹಿಗಳಲ್ಲಿ ಅಭಿನಯಿಸಿ ಚಂದನವನಕ್ಕೆ ಹೆಜ್ಜೆ ಇಡಲು ಹಂಬಲಿಸುತ್ತಿದ್ದ ಸುವರ್ಣಾ ಶೆಟ್ಟಿಗೆ ಈ ಸಿನಿಮಾ ಹೊಸ ಅನುಭವ ನೀಡಿದೆಯಂತೆ. ‘ನಾನು ಹಲವು ಧಾರಾವಾಹಿಗಳಲ್ಲಿ ಅಭಿನಯಿಸಿದ್ದೇನೆ. ’ಪ್ರೀತಿಯಿಂದ’ ಧಾರಾವಾಹಿ ನನಗೆ ಒಳ್ಳೆಯ ಹೆಸರು ತಂದುಕೊಟ್ಟಿತು. ಈ ಚಿತ್ರವು ನನ್ನ ಸಾಮರ್ಥ್ಯಕ್ಕೆ ಕನ್ನಡಿ ಹಿಡಿದಿದೆ’ ಎಂದರು ಸುವರ್ಣಾ ಶೆಟ್ಟಿ.

ನಟ ದಿಲೀಪ್‌ ಪೈ ಅವರದು ಸಿನಿಮಾದಲ್ಲಿ ಅತಿಥಿ ಪಾತ್ರ. ‘ನನಗೆ ದೇವರ ಮೇಲೆ ನಂಬಿಕೆ ಇದೆ. ಆದರೆ, ಮೂಢನಂಬಿಕೆಗಳ ಮೇಲಿಲ್ಲ’ ಎಂದು ಮಾತು ಆರಂಭಿಸಿದ ಅವರೂ ವಿಚಿತ್ರ ಅನುಭವವನ್ನು ತೆರೆದಿಟ್ಟರು.

‘ಚಿತ್ರೀಕರಣ ಮುಗಿಸಿ ಬೆಂಗಳೂರಿಗೆ ಬಂದೆ. ಆಗ ಕಾಲಲ್ಲಿ ನೋವು ಕಾಣಿಸಿಕೊಂಡಿತು. ವೈದ್ಯರು ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುವಂತೆ ಸಲಹೆ ನೀಡಿದರು. ಕೊನೆಗೆ, ದೈವದ ಮೊರೆ ಹೋದೆ. ನಂತರ ಗುಣಮುಖನಾದೆ’ ಎಂದರು.

ಆಗಸ್ಟ್‌ನಲ್ಲಿ ಸಿನಿಮಾ ಬಿಡುಗಡೆಗೆ ಚಿತ್ರತಂಡ ಸಿದ್ಧತೆ ನಡೆಸಿದೆ. ಚೇತನ್‌ ರೈ, ಸೂರ್ಯೋದಯ್‌ ಪೆರಂಪಲ್ಲಿ, ರವೀಶ್‌ ತಂತ್ರಿ ಕುಂಟಾರ್‌, ಬ್ಯಾಂಕ್‌ ಜನಾರ್ದನ್‌ ತಾರಾಬಳಗದಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.