ADVERTISEMENT

ತ್ರಿಭಾಷಾ ಸೂತ್ರ!

​ಪ್ರಜಾವಾಣಿ ವಾರ್ತೆ
Published 9 ಆಗಸ್ಟ್ 2012, 19:30 IST
Last Updated 9 ಆಗಸ್ಟ್ 2012, 19:30 IST

ಛಾಯಾಗ್ರಾಹಕ ಮತ್ತು ನಿರ್ಮಾಪಕರಾಗಿ ಹೆಸರು ಮಾಡಿದ ಅಣಜಿ ನಾಗರಾಜ್ ಇನ್ನೂ ಒಂದು ಹೆಜ್ಜೆ ಮುಂದಿಟ್ಟಿದ್ದಾರೆ. `ಭೀಮಾ ತೀರದಲ್ಲಿ~ ಎಂಬ ವಿವಾದಾತ್ಮಕ ಚಿತ್ರ ನಿರ್ಮಾಣದ ಬಳಿಕ ಅವರು ಕೈ ಹಾಕಿರುವುದು ತ್ರಿಭಾಷಾ ಹಾಗೂ ತ್ರಿಕೋನ ಪ್ರೇಮಕಥೆಯ ಚಿತ್ರಕ್ಕೆ. ಕನ್ನಡ, ತೆಲುಗು ಮತ್ತು ಹಿಂದಿ ಭಾಷೆಗಳಲ್ಲಿ ತಯಾರಾಗಲಿರುವ ಈ ಚಿತ್ರಕ್ಕೆ ಇನ್ನೂ ನಾಮಕರಣವಾಗಿಲ್ಲ.

ಹಿಂದಿ ಮತ್ತು ಮರಾಠಿ ಚಿತ್ರರಂಗದಲ್ಲಿ ಹೆಸರು ಮಾಡಿರುವ ಶ್ರೇಯಸ್ ತಲ್ಪಾಡೆ ಮೊದಲ ಬಾರಿಗೆ ಕನ್ನಡಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಚಿತ್ರದ ಎಲ್ಲಾ ಮೂರು ಭಾಷೆಗಳಲ್ಲಿಯೂ ಅವರು ನಟಿಸಲಿದ್ದಾರೆ.

ಮತ್ತೊಂದು ಪ್ರಮುಖ ಪಾತ್ರದಲ್ಲಿ ಶ್ರೀನಗರ ಕಿಟ್ಟಿ ಕಾಣಿಸಿಕೊಳ್ಳುತ್ತಿದ್ದಾರೆ. ಸಾಫ್ಟ್‌ವೇರ್ ಎಂಜಿನಿಯರ್ ಪಾತ್ರ ಅವರದು. ಪ್ರತಿ ಐದು ನಿಮಿಷದಲ್ಲೂ ಅಚ್ಚರಿ ಎದುರಾಗುವ ಚಿತ್ರವಿದು ಎನ್ನುವುದು ಅವರ ಮಾತು.

ಕಿಟ್ಟಿ ಪಾತ್ರವನ್ನು ತೆಲುಗಿನಲ್ಲಿ ತರುಣ್ ನಿರ್ವಹಿಸಲಿದ್ದರೆ, ಹಿಂದಿಯಲ್ಲಿ ಮಿಥುನ್ ಚಕ್ರವರ್ತಿ ಅವರ ಮಗ ನಿರ್ವಹಿಸಲಿದ್ದಾರೆ. ಟಿಯಾ ಬಾಜಪೇಯಿ ಮೂರೂ ಭಾಷೆಗಳಲ್ಲಿ ನಾಯಕಿ. ಬಾಲಿವುಡ್‌ನಲ್ಲಿ ಸುಮಾರು 12 ವರ್ಷ ಕೆಲಸ ಮಾಡಿರುವ ನವನೀತ್ ಕೌಶಿಕ್ ಹಾಗೂ ವಿಜಯ್ ಕಿರಣ್ ಇಬ್ಬರೂ ಸೇರಿ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಲಿದ್ದಾರೆ.

`ಅಪ್ನಾ ಸಪ್ನಾ ಮನಿ ಮನಿ~, `ಬಾಂಬೇ ಟು ಬ್ಯಾಂಕಾಕ್~, `ವೆಲ್‌ಕಂ ಟು ಸಜ್ಜನ್‌ಪುರ್~, `ಗೋಲ್‌ಮಾಲ್ ರಿಟರ್ನ್ಸ್~, `ಹೌಸ್‌ಫುಲ್~ ಮುಂತಾದ ಚಿತ್ರಗಳಲ್ಲಿ ನಟಿಸಿರುವ ಶ್ರೇಯಸ್ ಚಿತ್ರವನ್ನು ರೊಮ್ಯಾಂಟಿಕ್ ಥ್ರಿಲ್ಲರ್ ಎಂದು ಬಣ್ಣಿಸಿದರು.

ಕನ್ನಡ ಭಾಷೆಯಲ್ಲಿನ ಮಾಧುರ್ಯವನ್ನು ಅವರು ಮೆಚ್ಚಿಕೊಂಡರು. ಕನ್ನಡದ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಬೇಕು ಎಂಬ ಅಭಿಲಾಷೆ ವ್ಯಕ್ತಪಡಿಸಿದ ಅವರು, ಹೊಂದಿಕೆಯಾಗುವುದಾದರೆ ಸ್ವತಃ ಡಬ್ಬಿಂಗ್ ಕೂಡ ಮಾಡುವುದಾಗಿ ಹೇಳಿಕೊಂಡರು. `ಸಂಜು ವೆಡ್ಸ್ ಗೀತಾ~ ಚಿತ್ರದಲ್ಲಿ ಶ್ರೀನಗರ ಕಿಟ್ಟಿಯ ನಟನೆಯನ್ನು ಅವರು ಶ್ಲಾಘಿಸಿದರು.

ಹೆಚ್ಚಿನ ಚಿತ್ರೀಕರಣ ಜೋರ್ಡಾನ್ ಮತ್ತು ಬ್ಯಾಂಕಾಕ್‌ನಲ್ಲಿ ನಡೆಯಲಿದೆ. ಉಳಿದ ಚಿತ್ರೀಕರಣ ಬೆಂಗಳೂರಿನಲ್ಲಿ ನಡೆಸಲಾಗುವುದು ಎಂದು ಅಣಜಿ ನಾಗರಾಜ್ ತಿಳಿಸಿದರು. ಸುಮಾರು 15 ಕೋಟಿ ರೂ ಬಂಡವಾಳ ಬೇಕಾಗಬಹುದೆಂಬ ಲೆಕ್ಕಾಚಾರ ಅವರದ್ದು.

ಅರ್ಜುನ್ ಜನ್ಯಾ ಆರು ಹಾಡುಗಳಿಗೆ ಸಂಗೀತ ಹೊಸೆಯಲಿದ್ದಾರೆ. ಅದಕ್ಕೆ ಕವಿರಾಜ್ ಪದ ಜೋಡಿಸಲಿದ್ದಾರೆ. ಮಂಜು ಮಾಂಡವ್ಯ ಸಂಭಾಷಣೆ ಹೆಣೆಯಲಿದ್ದಾರೆ. 

 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.