ADVERTISEMENT

ದಾಮಿನಿಗೆ ದೆವ್ವದ ಪೋಷಾಕು!

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2013, 19:59 IST
Last Updated 21 ಫೆಬ್ರುವರಿ 2013, 19:59 IST
ಮೋಹನ್, ನವ್ಯಾ
ಮೋಹನ್, ನವ್ಯಾ   

ಅತ್ಯಾಚಾರಕ್ಕೆ ಒಳಗಾದ ಹುಡುಗಿ ದೆವ್ವವಾಗಿ ಬಂದರೆ ಏನಾಗಬಹುದು? ಈ ಕಲ್ಪನೆಯ ಸಾಕಾರವೇ `ಕಾಜಲ್.5' ಸಿನಿಮಾ.
`ಕಾಜಲ್.5' ಚಿತ್ರದ ನಿರ್ದೇಶಕ ಕೃಷ್ಣ. ಕಾಜಲ್ ಎಂಬುದು ನಾಯಕಿಯ ಹೆಸರಾದರೆ, `ಡಾಟ್' 5 ಎಂಬುದು ಐವರು ಖಳನಾಯಕರನ್ನು ಸೂಚಿಸುತ್ತದಂತೆ.

ಮುಹೂರ್ತ ಮುಗಿಸಿ ಪತ್ರಿಕಾಗೋಷ್ಠಿಗೆ ಎದುರಾಗಿದ್ದ ಚಿತ್ರತಂಡದ ಮುಂಚೂಣಿಯಲ್ಲಿ ನಿರ್ದೇಶಕರೇ ನಿಂತಿದ್ದರು. `ದೆಹಲಿಯ ಅತ್ಯಾಚಾರ ಪ್ರಕರಣದ ಎಳೆ ಇಟ್ಟುಕೊಂಡು ಕತೆ ರಚಿಸಲಾಗಿದೆ. ಅತ್ಯಾಚಾರಕ್ಕೆ ಒಳಗಾದ ನಾಯಕಿ ಪ್ರೇತವಾಗಿ ಬರುತ್ತಾಳೆ. ಚಿತ್ರದ ಅಡಿಬರಹದಲ್ಲಿ `ಅದೇ ರಾಗ ಅದೇ ಹಾಡು-2' ಎಂಬ ಬರಹ ಇದ್ದರೂ ಆ ಚಿತ್ರಕ್ಕೂ ಇದಕ್ಕೂ ಸಂಬಂಧವಿಲ್ಲ. ಪ್ರೇಮ, ದೇವರು, ದೆವ್ವ ಚಿತ್ರದ ಪ್ರಮುಖ ಅಂಶಗಳು.

ಮುಂದಿನ ತಿಂಗಳು ಚಿತ್ರೀಕರಣ ಆರಂಭವಾಗಲಿದೆ' ಎಂದರು. ಕಾಜಲ್ ಮೂಲಕ ಕೃಷ್ಣ ಸ್ವತಂತ್ರ ನಿರ್ದೇಶಕರಾಗುತ್ತಿದ್ದರೂ, ಈ ಮೊದಲು ಕೆಲವು ಚಿತ್ರಗಳಿಗೆ ಸಹಾಯಕ ನಿರ್ದೇಶಕರಾಗಿ ದುಡಿದ ಅನುಭವ ಅವರಿಗಿದೆ.

ಚಿತ್ರದ ಪೋಸ್ಟರ್‌ನಲ್ಲಿ `ನಿರ್ಮಾಪಕರು- ಪ್ರೇಕ್ಷಕರು' ಎಂಬ ಬರಹ ಇತ್ತು. ಅದರ ಬಗ್ಗೆ ಮಾತನಾಡಿದ ನಿರ್ದೇಶಕರು- `ನಮ್ಮ ಸಿನಿಮಾದ ಆಡಿಯೋ ಸೀಡಿ ಜೊತೆ ನೂರು ರೂಪಾಯಿಗಳ ಕೂಪನ್ ಮಾರಾಟ ಮಾಡುತ್ತೇವೆ. ಕೂಪನ್ ಖರೀದಿಸಿದವರು ನಮ್ಮ ಚಿತ್ರವನ್ನು ಕರ್ನಾಟಕದ ಯಾವ ಥಿಯೇಟರ್‌ನಲ್ಲಾದರೂ ವೀಕ್ಷಿಸಬಹುದು. ಆ ಹಣದಲ್ಲಿ ಶೇ 20ರಷ್ಟನ್ನು ಬೆಂಗಳೂರಿನ ಬಸವನಗುಡಿಯಲ್ಲಿ ಇರುವ ಅನಾಥ ಶಿಶು ನಿವಾಸಕ್ಕೆ ನೀಡುತ್ತೇವೆ.

ಉಳಿದ ಹಣದಲ್ಲಿ ಸಿನಿಮಾ ನಿರ್ಮಾಣ ಮಾಡುತ್ತೇವೆ. ಸಿನಿಮಾದಿಂದ ಬಂದ ಲಾಭವನ್ನು ಸಂಪೂರ್ಣವಾಗಿ ಅನಾಥಾಶ್ರಮಕ್ಕೆ ಕೊಡುತ್ತೇವೆ. ಆದ್ದರಿಂದ ಕೂಪನ್ ಖರೀದಿಸಿದವರೇ ನಮ್ಮ ಚಿತ್ರದ ನಿರ್ಮಾಪಕರಾಗಲಿದ್ದಾರೆ' ಎಂದು ಸಿನಿಮಾ ನಿರ್ಮಾಣದ ಹಿಂದಿನ ಬಂಡವಾಳದ ಗುಟ್ಟು ರಟ್ಟು ಮಾಡಿದರು. 

ಹೊಸಬರಿಗೆ ಹಣ ಹೂಡಲು ನಿರ್ಮಾಪಕರು ಮುಂದೆ ಬರುತ್ತಿಲ್ಲವಾದ್ದರಿಂದ ಕೂಪನ್ ಮಾರಾಟದ ಯೋಜನೆಯನ್ನು ಕೃಷ್ಣ ಹಮ್ಮಿಕೊಂಡಿದ್ದಾರೆ. ಒಂದು ಲಕ್ಷ ಕೂಪನ್ ಮಾರಾಟ ಮಾಡುವ ಮೂಲಕ ಒಂದು ಕೋಟಿ ರೂಪಾಯಿ ಸಂಗ್ರಹಿಸುವ ಗುರಿ ಅವರದು.

`ಸಾರ್ವಜನಿಕರಿಂದ ಈ ರೀತಿ ಹಣ ಸಂಗ್ರಹಿಸುವುದು ಸರಿಯೇ...' ಎನ್ನುವ ಜಿಜ್ಞಾಸೆ ಸುದ್ದಿಗೋಷ್ಠಿಯಲ್ಲಿ ಶುರುವಾದಾಗ, ಚಿತ್ರತಂಡ ತಬ್ಬಿಬ್ಬಾಯಿತು. `ಗಿಮಿಕ್ಕಿಗಾಗಿ ನಿರ್ಮಾಪಕರು- ಪ್ರೇಕ್ಷಕರು ಎಂದು ಬರೆದಿದ್ದೇವೆ ಅಷ್ಟೇ. ನಮ್ಮದೇ ಹಣದಲ್ಲಿ ಚಿತ್ರೀಕರಣ ಮುಗಿಸಿ ಬಿಡುಗಡೆಯ ಸಂದರ್ಭದಲ್ಲಿ ಕೂಪನ್ ಮಾರಾಟ ಮಾಡುವ ಉದ್ದೇಶ ಇದೆ' ಎಂದು ನಿರ್ದೇಶಕರು ಸ್ಥಳದಲ್ಲೇ ಚಿತ್ರಕಥೆ ಬದಲಿಸಿದರು.

`ಕಾಜಲ್.5' ಚಿತ್ರದ ನಾಯಕನಾಗಿ ಮೋಹನ್ ನಟಿಸುತ್ತಿದ್ದಾರೆ. ಚಿತ್ರದ ನಾಯಕಿಯಾಗಿ ನವ್ಯಾ ನಟಿಸುತ್ತಿದ್ದಾರೆ. ಅವರು ಹಿರಿಯ ಸಹನಟಿ ಸರೋಜಮ್ಮ ಅವರ ಪುತ್ರಿಯಂತೆ. ನವ್ಯಾ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.