ADVERTISEMENT

ದುರ್ಬಲರತ್ತ ‘ಸಿಂಹ ಹಸ್ತ’

​ಪ್ರಜಾವಾಣಿ ವಾರ್ತೆ
Published 11 ಆಗಸ್ಟ್ 2016, 19:30 IST
Last Updated 11 ಆಗಸ್ಟ್ 2016, 19:30 IST
ದುರ್ಬಲರತ್ತ ‘ಸಿಂಹ ಹಸ್ತ’
ದುರ್ಬಲರತ್ತ ‘ಸಿಂಹ ಹಸ್ತ’   

‘ನಮ್ಮ ಈ ನಡೆಗೆ ವಿಷ್ಣುವರ್ಧನ್ ಅವರೇ ಪ್ರೇರಣೆ’. ‘ನಾಗರಹಾವು’ ಸಿನಿಮಾದ ಸುದ್ದಿಗೋಷ್ಠಿಯಲ್ಲಿ ವಿಷ್ಣುವರ್ಧನ್ ಅವರನ್ನು ನಿರ್ಮಾಪಕ ಸಾಜಿದ್‌ ಖುರೇಷಿ ನೆನೆಪಿಸಿಕೊಂಡಿದ್ದು ಹೀಗೆ. ಸರಳವಾದ ಕಾರ್ಯಕ್ರಮದಲ್ಲಿ, ಕ್ಯಾನ್ಸರ್‌ ಸೇರಿದಂತೆ ಹಲವು ಕಾಯಿಲೆಗಳಿಂದ ಬಳಲುತ್ತಿದ್ದ 10 ರೋಗಿಗಳಿಗೆ ‘ಸಿಂಹ ಹಸ್ತ’ ಟ್ರಸ್ಟ್‌ ಮೂಲಕ ತಲಾ ₹ 1 ಲಕ್ಷದ ನೆರವಿನ ಚೆಕ್ ಅನ್ನು ಅವರು ವಿತರಿಸಿದರು.

‘ರೋಗಿಗಳಿಗೆ ನೆರವು ನೀಡುವ ವಿಷಯವನ್ನು ಸುದ್ದಿ ಮಾಡುವುದು ನನಗಿಷ್ಟವಿರಲಿಲ್ಲ. ಅದೊಂದು ರೀತಿಯ ಅವಮಾನ ಎಂದು ಭಾವಿಸಿದ್ದೆ. ಇದನ್ನು ನಮ್ಮ ತಾಯಿಗೆ ತಿಳಿಸಿದಾಗ, ನೀನು ಸಹಾಯ ಮಾಡಿರುವುದು ಎಲ್ಲರಿಗೂ ಗೊತ್ತಾದರೆ, ಆ ಪೈಕಿ ಕೆಲವರಾದರೂ ಇದೇ ರೀತಿ ನೆರವು ನೀಡಲು ಮುಂದೆ ಬರಬಹುದು. ನೀನು ಮಾಡುತ್ತಿರುವುದು ಒಳ್ಳೆಯ ಕೆಲಸ ಎಂದು ಬೆನ್ನುತಟ್ಟಿದರು.

ಅವರ ಮಾತಿನಂತೆ ಈ ಕಾರ್ಯಕ್ರಮ ಹಮ್ಮಿಕೊಂಡಿರುವೆ’ ಎಂದು ಹೇಳಿದ ಸಾಜಿದ್, ಸದ್ಯದಲ್ಲೇ ನಡೆಯಲಿರುವ ಚಿತ್ರದ ಹಾಡುಗಳ ಸೀಡಿ ಬಿಡುಗಡೆ ಸಂದರ್ಭದಲ್ಲಿ ಮತ್ತಷ್ಟು ಜನರಿಗೆ ನೆರವು ನೀಡುವೆ ಎಂದರು.

ಸಾಜಿದ್ ಅವರ ಕಾರ್ಯಕ್ಕೆ ಬೆಂಬಲವಾಗಿ ಖ್ಯಾತ ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ ₹ 50 ಸಾವಿರ ಕಳುಹಿಸಿದ್ದಾರೆ. ಅಲ್ಲದೆ, ವಿಷ್ಣುಸೇನೆಯವರು ಕೂಡ ಅವರೊಂದಿಗೆ ಕೈ ಜೋಡಿಸಿದ್ದಾರೆ. ನೆರವಿನ ಚೆಕ್‌ ಪಡೆದ ರೋಗಿಗಳ ಕುರಿತ ವಿಡಿಯೋ ಕ್ಲಿಪ್ ಪ್ರದರ್ಶನ ಅಲ್ಲಿದ್ದವರ ಮನ ಕಲಕಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.