ADVERTISEMENT

ನವ್ಯಾ ನವನವೀನ

ಎಚ್.ಎಸ್.ರೋಹಿಣಿ
Published 2 ಫೆಬ್ರುವರಿ 2012, 19:30 IST
Last Updated 2 ಫೆಬ್ರುವರಿ 2012, 19:30 IST
ನವ್ಯಾ ನವನವೀನ
ನವ್ಯಾ ನವನವೀನ   

`ಭಾವನೆಗಳ ಉತ್ಕರ್ಷ ಇಲ್ಲದವರು ಕಲಾವಿದರಾಗಲು ಸಾಧ್ಯವೇ ಇಲ್ಲ~ ಎನ್ನುತ್ತಾರೆ ನವ್ಯಾ. ಯಾವುದೇ ತರಬೇತಿ ಮತ್ತು ಹಿನ್ನೆಲೆ ಇಲ್ಲದೆ ಬಣ್ಣದ ಬದುಕಿಗೆ ಕಾಲಿಟ್ಟ ತಮಗೂ ಇದ್ದ ಒಂದೇ ಅರ್ಹತೆ ಎಂದರೆ ಅದು ಭಾವುಕತೆ ಎಂಬುದು ಅವರ ಅನಿಸಿಕೆ. 

ಉದಯ ಟೀವಿಯ `ತಂಗಾಳಿ~ ಮತ್ತು ಕಸ್ತೂರಿಯ `ಜೂಟಾಟ~ ಧಾರಾವಾಹಿಗಳಲ್ಲಿ ನಟಿಸುತ್ತಿರುವ ನವ್ಯಾ, ಝೀ ಕನ್ನಡ ವಾಹಿನಿಯ `ಒಗ್ಗರಣೆ ಡಬ್ಬಿ~ ಅಡುಗೆ ಕಾರ್ಯಕ್ರಮದ ರೂವಾರಿ ಕೂಡ.

ನವ್ಯಾ ಅವರನ್ನು ಪರಿಚಯಿಸಲು `ಲಕುಮಿ~ ಧಾರಾವಾಹಿಯ ಪೂರ್ವಿ ಪಾತ್ರದ ಹೆಸರನ್ನು ಬಳಸಲೇಬೇಕು. ಅವರೇ ಹೇಳುವಂತೆ ತಮ್ಮನ್ನೇ ಹೋಲುವ ನೇರ ಸ್ವಭಾವದ ಹುಡುಗಿ `ಪೂರ್ವಿ~ಯಾಗಿ ಅವರು ಜನಪ್ರಿಯರಾದವರು. 

ಆದರೆ ಧಾರಾವಾಹಿಯಲ್ಲಿ ತಮ್ಮ ಪೂರ್ವಿ ಪಾತ್ರ ಮೃತಪಟ್ಟಿದ್ದನ್ನು ಪ್ರಚಾರಕ್ಕಾಗಿ ದಿನಪತ್ರಿಕೆಗಳಲ್ಲಿ ಜಾಹೀರಾತು ನೀಡಿದ್ದು ತಮಗೆ ತಿಳಿದಿರಲಿಲ್ಲ ಎಂದು ನೊಂದುಕೊಳ್ಳುವ ನವ್ಯಾ, `ಜಾಹೀರಾತು ನೀಡುವ ಬಗ್ಗೆ ನನಗೆ ತಿಳಿದಿರಲಿಲ್ಲ. ನಂತರ ಕೂಡ ಸಂಬಂಧಪಟ್ಟವರು ಸರಿಯಾಗಿ ಪ್ರತಿಕ್ರಿಯಿಸಲಿಲ್ಲ~ ಎಂದು ಬೇಸರ ವ್ಯಕ್ತಪಡಿಸುತ್ತಾರೆ.

ನವ್ಯಾ ಮೈಸೂರಿನ ಚೆಲುವೆ. ಶಿಕ್ಷಣ ಮುಗಿಸಬೇಕೆಂಬ ತಂದೆಯ ಷರತ್ತಿಗೆ ಮಣಿದು ಬಿಬಿಎಂ ಪದವಿ ಗಳಿಸಿದರೂ, ಶಾಲಾ ಕಾಲೇಜು ದಿನಗಳಿಂದಲೂ ಅಭಿನಯವನ್ನೇ ಹೆಚ್ಚು ಇಷ್ಟಪಟ್ಟವರು. ನಿರೂಪಕಿಯಾಗಿ ವೃತ್ತಿ ಆರಂಭಿಸಿದ ನವ್ಯಾಗೆ ಸಿನಿಮಾದಿಂದ ಅವಕಾಶ ಬಂತು. ದಿನೇಶ್ ಬಾಬು ನಿರ್ದೇಶನದ ಅನಂತನಾಗ್, ಸುಹಾಸಿನಿ ಅವರಂಥ ಹಿರಿಯ ನಟರು ಅಭಿನಯಿಸಿದ್ದ `ಎರಡನೇ ಮದುವೆ~ ಸಿನಿಮಾದಲ್ಲಿ ನಟಿಸಿದರು.
 
ನಂತರ ಕಿರುತೆರೆಯ ಕಡೆ ಹೊರಳಿಕೊಂಡ ಅವರು ಮತ್ತೆ ಸಿನಿಮಾ ಕಡೆ ತಿರುಗಿ ನೋಡುವುದು ಬೇಡ ಎಂದುಕೊಂಡಿದ್ದಾರೆ. ಕಾರಣ, ಕಿರುತೆರೆಯಲ್ಲಿ ಹೆಚ್ಚು ಹೆಚ್ಚು ಬಿಜಿಯಾಗಿರುವುದು ಮತ್ತು ಕಿರುತೆರೆ ನೀಡಿರುವ ಕಂಫರ್ಟ್.

ಸಿನಿಮಾದಿಂದ ಕರೆ ಬಂದಾಗ ಓದು ಮತ್ತು ನಟನೆ ಎರಡನ್ನೂ ತೂಗಿಸಿಕೊಂಡು, ಪದವಿ ಕೈಗೆ ಬಂದ ತಕ್ಷಣ ನಟನೆಯನ್ನೇ ವೃತ್ತಿಯಾಗಿ ಆರಿಸಿಕೊಂಡವರು ನವ್ಯಾ. ನಟನೆಗಾಗಿ ಯಾವುದೇ ತರಬೇತಿ ಪಡೆಯದಿದ್ದರೂ ಪೂರ್ವಿಯಾಗಿ ನಟಿಸಿ ಎಲ್ಲರ ಮನಸೂರೆಗೊಂಡ ನವ್ಯಾ ಸಹನಟರನ್ನು ಮತ್ತು ಜನರನ್ನು ಗಮನಿಸುವುದರಿಂದಲೂ ತಮಗೆ ನಟನೆ ಸಿದ್ಧಿಸಿದೆ ಎನ್ನುತ್ತಾರೆ.

ನವ್ಯಾ ನಟಿಸಿದ ಮೊದಲ ಧಾರಾವಾಹಿ `ಕಲ್ಯಾಣಿ~. ನಂತರ `ಜೋಕಾಲಿ~, `ಲಕುಮಿ~ ಹೀಗೆ ಅವಕಾಶಗಳು ದೊರಕುತ್ತಾ ಹೋದವು. ಜೊತೆಗೆ ಕಿರುತೆರೆಯೂ ಇಷ್ಟವಾಗುತ್ತಾ ಹೋಯಿತು.

`ಸಿನಿಮಾ ನನ್ನ ಪಾಲಿನ ಚಹವಲ್ಲ~ ಎಂದು ನಂಬಿರುವ, ನಟಿಯಾಗಿ ಕಿರುತೆರೆಯಲ್ಲಿಯೂ ಹೆಸರು ಮಾಡಬಹುದು ಎಂಬುದನ್ನು ತೋರಿಸಿದವರು ನವ್ಯಾ. ಕಾಲೇಜು ಹುಡುಗಿ, ಬಡ ಹುಡುಗಿ, ನೇರ ಸ್ವಭಾವದ ಹುಡುಗಿಯಾಗಿ ಇದುವರೆಗೆ ನಟಿಸಿರುವ ಅವರಿಗೆ ಖಳನಟಿಯಾಗಿ ನಟಿಸುವಾಸೆ. `ನಟನೆಗೆ ಹೆಚ್ಚು ಸ್ಕೋಪ್ ಇರುವುದು ಖಳನಾಯಕಿಗೆ~ ಎನ್ನುತ್ತಾರೆ. ಇದರೊಂದಿಗೆ ಹಳ್ಳಿ ಶೈಲಿಯ ಸಂಭಾಷಣೆ ಇರುವ ಪಾತ್ರವೂ ಅವರಿಗೆ ಅಚ್ಚುಮೆಚ್ಚು.

ಪ್ರಸ್ತುತ `ತಂಗಾಳಿ~ ಧಾರಾವಾಹಿಯ ತುಳಸಿ ಪಾತ್ರಕ್ಕೆ ಸಿಗುತ್ತಿರುವ ಮೆಚ್ಚುಗೆಯಿಂದ ಖುಷಿಯಾಗಿರುವ ಅವರು ಇಂದಿಗೂ ಲಂಗ ದಾವಣಿ ಇಷ್ಟಪಡುವ ಮತ್ತು ತೊಡುವ ಹುಡುಗಿಯರಿದ್ದಾರೆ ಎಂದು ತಮ್ಮ ಪಾತ್ರವನ್ನು ಸಮರ್ಥಿಸಿಕೊಳ್ಳುತ್ತಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.