ADVERTISEMENT

ನಾನು ಸಿಂಹ ಹುಲಿ ಅಲ್ಲ

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2012, 19:30 IST
Last Updated 19 ಏಪ್ರಿಲ್ 2012, 19:30 IST

`ಸಂಗೊಳ್ಳಿ ರಾಯಣ್ಣ~ನ ಬಗ್ಗೆ ಮಾತನಾಡಲು ಕುಳಿತ ದರ್ಶನ್ ತಮ್ಮ ಬಗ್ಗೆಯೇ ಹೇಳಿಕೊಂಡರು. ಬೇರೆಯವರು ಬೇಟೆಯಾಡಿ ಬಿಟ್ಟದ್ದನ್ನು ತಿನ್ನಲು ಕಲಿತಿರುವ ನರಿ ತಾವೆನ್ನುವುದು ಅವರ ಬಣ್ಣನೆ.

`ನಾನು ಚಿತ್ರರಂಗದಲ್ಲಿ ಎಂದಿಗೂ ಸಿಂಹ ಅಥವಾ ಹುಲಿ ಆಗಿರಲೇ ಇಲ್ಲ. ನಾನು ನರಿ ಇದ್ದಂತೆ. ಬೇರೆಯವರು ಬೇಟೆ ಆಡಿ ಬಿಟ್ಟದ್ದನ್ನು ತಿನ್ನಲು ಕಲಿತಿದ್ದೇನೆ!~.
ನಟ ದರ್ಶನ್ ಚಿತ್ರರಂಗದ ತಮ್ಮ ನಡೆಯನ್ನು ಸ್ವವಿಮರ್ಶೆಗೆ ತೊಡಗಿಸಿಕೊಂಡರು.

ತಾವು ಬೆಳೆದದ್ದೇ ಬೇರೆಯವರು ಮಾಡದೇ ಬಿಟ್ಟ ಪಾತ್ರಗಳನ್ನು ಮಾಡಿದ್ದರಿಂದ ಎಂಬುದು ಅವರ ಮಾತಿನ ಅರ್ಥ. ಅವರ ಈ ಮಾತುಗಳು ಹೊರಬಂದದ್ದು `ಸಂಗೊಳ್ಳಿ ರಾಯಣ್ಣ~ ಚಿತ್ರದ ಸುದ್ದಿಗೋಷ್ಠಿಯಲ್ಲಿ.

ಸಂಗೊಳ್ಳಿ ರಾಯಣ್ಣನ ಪಾತ್ರಕ್ಕೆ ನಾನು ಅರ್ಹನೇ ಎಂಬ ಯೋಚನೆ ನನ್ನನ್ನು ಹಲವು ಬಾರಿ ಕಾಡಿತು. ನಿರ್ಮಾಪಕ ಆನಂದ ಅಪ್ಪುಗೋಳ ಅವರಿಗೆ ಯೋಚಿಸುವಂತೆ ಹಲವು ಬಾರಿ ಹೇಳಿದೆ. ಆದರೆ ಅವರು ಬಿಡಲಿಲ್ಲ. ನೀವೇ ಈ ಪಾತ್ರ ಮಾಡಬೇಕೆಂದು ಹಟ ಮಾಡಿದರು. ತಡವಾದರೂ ಚಿತ್ರ ಚೆನ್ನಾಗಿ ಮೂಡಿಬಂದಿದೆ ಎಂದರು ದರ್ಶನ್. ಯುದ್ಧ ಸನ್ನಿವೇಶದ ಚಿತ್ರೀಕರಣಕ್ಕೆ ಕುದುರೆ ಮತ್ತು ಆನೆಗಳನ್ನು ಬಳಸಿಕೊಂಡದ್ದರ ಅನುಭವಗಳನ್ನು ಹಂಚಿಕೊಂಡರು.

ದೀರ್ಘ ಕಾಲದ ಬಳಿಕ ಚಿತ್ರ ಮುಗಿಸಿದ ಖುಷಿಯಲ್ಲಿದ್ದ ನಿರ್ದೇಶಕ ನಾಗಣ್ಣ ಅವರ ಮಾತುಗಳೂ ದೀರ್ಘವಾಗಿದ್ದವು. ಈಗಿನ ಜನರಿಗೆ ಕಾಣಲು ಸಾಧ್ಯವಾಗದಿದ್ದ ಸಂಗೊಳ್ಳಿ ರಾಯಣ್ಣನನ್ನು ಚಿತ್ರದ ಮೂಲಕ ತೋರಿಸುವ ಪ್ರಯತ್ನ ತಮ್ಮದು ಎಂದರು.

ಈಗಿನ ಟ್ರೆಂಡ್ ಬಿಟ್ಟು ಐತಿಹಾಸಿಕ ಚಿತ್ರ ಮಾಡುತ್ತಿರುವುದು ನಾಗಣ್ಣನವರ ಖುಷಿಗೆ ಮತ್ತೊಂದು ಕಾರಣ. ಹೆಚ್ಚು ಬಜೆಟ್ ಬಯಸುವ ಈ ಚಿತ್ರ ಮುಂದೆ ಏನಾಗುವುದೋ ಎಂಬ ಭಯ ಅವರನ್ನು ಕಾಡಿತ್ತಂತೆ. ಆದರೆ ಸಂಗೊಳ್ಳಿ ರಾಯಣ್ಣನ ಪರಮ ಅಭಿಮಾನಿಯಾದ ನಿರ್ಮಾಪಕರು ಧೈರ್ಯ ತುಂಬಿದರಂತೆ. ತಮ್ಮ ಕೊನೆಯ ಪಾತ್ರ ಮುಗಿಸಿ ಡಬ್ಬಿಂಗ್ ಪೂರ್ಣಗೊಳಿಸಿದ ಕರಿಬಸವಯ್ಯ ನಮ್ಮಿಂದಲೂ ದೂರ ಹೋಗಿಬಿಟ್ಟರು ಎಂದು ನಾಗಣ್ಣ ಭಾವುಕರಾದರು.

ನಟರಾದ ಅವಿನಾಶ್, ರಮೇಶ್ ಭಟ್, ಶಶಿಕುಮಾರ್, ಶಿವಕುಮಾರ್, ನಿರ್ಮಾಪಕಿ ವಿಜಯಲಕ್ಷ್ಮೀ, ವಿತರಕ ಗಂಗರಾಜು ಮಾತಿನ ಮಳೆ ಸುರಿಸಿದರು.

ಚೆನ್ನಮ್ಮನ ಆಶೀರ್ವಾದ

ರಾಜ್ಯಸಭೆಗೆ ಆಯ್ಕೆಯಾದಾಗ ಮೊದಲ ಬಾರಿಗೆ ಕಿತ್ತೂರು ಚೆನ್ನಮ್ಮನ ಪ್ರತಿಮೆ ನೋಡಿ ನಮಸ್ಕರಿಸಿದ್ದೆ. ಮುಂದೆ ಅದೇ ಚೆನ್ನಮ್ಮನ ಪಾತ್ರ ಮಾಡುತ್ತೇನೆ ಎಂಬುದನ್ನು ಊಹಿಸಲೂ ಇರಲಿಲ್ಲ ಎಂದರು ಜಯಪ್ರದಾ.

ಬಹುಶಃ ಚೆನ್ನಮ್ಮನ ಆಶೀರ್ವಾದವೇ ಇರಬೇಕು ನನ್ನಲ್ಲಿ ಹೋರಾಟದ ಮನೋಭಾವ ಬೆಳೆಯಿತು. ಆಕೆಯ ಸಾಹಸಿ ಗುಣ ನನ್ನೊಳಗೆ ಸಂಚಲನ ಉಂಟು ಮಾಡಿದೆ. ಎರಡು ದಶಕಕ್ಕೂ ಹೆಚ್ಚು ಕಾಲ ಚಿತ್ರರಂಗದಲ್ಲಿ ಕೆಲಸ ಮಾಡಿದ್ದೇನೆ. ಈ ಅವಧಿಯ ಎಲ್ಲಾ ಪ್ರಮುಖ ನಟರೊಂದಿಗೂ ನಟಿಸಿದ್ದೇನೆ.

ಕನ್ನಡದಲ್ಲಿ ಅನೇಕ ಪೌರಾಣಿಕ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದೆ. ಆದರೆ ಐತಿಹಾಸಿಕ, ಅದರಲ್ಲೂ ಚೆನ್ನಮ್ಮನ ಪಾತ್ರಕ್ಕೆ ಬಣ್ಣ ಹಚ್ಚಿದ್ದು ಕನಸೊಂದು ನನಸಾದಂತೆ ಎಂದು ಅವರು ಬಣ್ಣಿಸಿದರು. ಜನ ನನ್ನನ್ನು ಜಯಪ್ರದಾ ಎಂಬುದಕ್ಕಿಂತ ಚೆನ್ನಮ್ಮ ಎಂದೇ ಗುರುತಿಸುತ್ತಾರೆ ಎಂಬ ಭರವಸೆ ನನ್ನದು ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT