ADVERTISEMENT

ನಿಗೂಢ ನವನೀತ

​ಪ್ರಜಾವಾಣಿ ವಾರ್ತೆ
Published 24 ಜನವರಿ 2013, 19:59 IST
Last Updated 24 ಜನವರಿ 2013, 19:59 IST
ಅಜಿತ್ ಜಯರಾಜ್, ಪವಿತ್ರಾ ಗೌಡ, ರಮಣಿತು ಚೌಧರಿ, ವಿಹಾನ್ ಗೌಡ, ದಿಶಾ ಪೂವಯ್ಯ
ಅಜಿತ್ ಜಯರಾಜ್, ಪವಿತ್ರಾ ಗೌಡ, ರಮಣಿತು ಚೌಧರಿ, ವಿಹಾನ್ ಗೌಡ, ದಿಶಾ ಪೂವಯ್ಯ   

ಮೂರು ಜೋಡಿಗಳು ವಿಹಾರಕ್ಕೆಂದು ತೆರಳುತ್ತವೆ. ಅಲ್ಲೊಂದು ಬಂಗಲೆ. ಇನ್ನೇನು ಅನುರಾಗ ಅರಳಬೇಕು. ಆ ಹೊತ್ತಿನಲ್ಲಿ ವಿಕಾರ ದನಿಯೊಂದು ಕೇಳುತ್ತದೆ. `ಅಗಮ್ಯ' ಚಿತ್ರದ ಕಥಾ ಹಂದರ ಇದು. ಹೊಸ ಕಲಾವಿದರು ಹಾಗೂ ತಂತ್ರಜ್ಞರು ನಡೆಸಿದ ಸಾಹಸ ಯಾನವೇ ಅಗಮ್ಯ.

ಚಿತ್ರದ ಧ್ವನಿ ಮುದ್ರಿಕೆ ಬಿಡುಗಡೆ ಸಮಾರಂಭದಲ್ಲಿ ನಿರ್ದೇಶಕ ಉಮೇಶ್ ಗೌಡರು `ಅಗಮ್ಯ'ವನ್ನು ಜೀವಂತ ಶಿಲೆಗೆ ಹೋಲಿಸಿದರು. ಅದನ್ನು ಕಟೆದ ಪರಿಯನ್ನು ವಿವರಿಸಿದರು. ಕಷ್ಟಪಟ್ಟು ಮಾಡಿದ ಚಿತ್ರ ಇಷ್ಟಪಟ್ಟು ನೋಡಿ ಎಂಬ ಅಂಕಿತವನ್ನೂ ಸೇರಿಸಿದರು. ಕತೆ, ಚಿತ್ರಕತೆ ಕೂಡ ನಿರ್ದೇಶಕರದೇ. 

ಹದಿನೇಳು ವರ್ಷಗಳಿಂದ ಚಲನಚಿತ್ರವನ್ನೇ ನೋಡಿರದ ನಿರ್ಮಾಪಕ ಸಿದ್ದಮಾರಯ್ಯ ಅಚಾನಕ್ಕಾಗಿ ನಿರ್ಮಾಣಕ್ಕೆ ಕೈ ಹಾಕಿದರಂತೆ. ಹಾಡು ಹಾಗೂ ಕೆಲ ದೃಶ್ಯಗಳನ್ನು ಮರುಚಿತ್ರೀಕರಿಸಿದ್ದು ಅವರ ಹೆಗ್ಗಳಿಕೆ.  ನಿರ್ಮಾಪಕರು ಒಬ್ಬರೇ ಆದರೂ ಸುಮಾರು ಐವತ್ತು ಮಂದಿ ಹಣ ತೊಡಗಿಸಿರುವ ಚಿತ್ರ ಇದು. ಹೂಡಿಕೆಯ ಸಿಂಹಪಾಲು ಮಾತ್ರ ಸಿದ್ದಮಾರಯ್ಯ ಅವರಿಗೆ ಸೇರಿದ್ದು.

ವಿಹಾನ್ ಗೌಡ, ಅಜಿತ್ ಜಯರಾಜ್, ಕಿರಣ್ ಚಿತ್ರದ ನಾಯಕ ನಟರು. ಸಂಗೀತ ನಿರ್ದೇಶಕ ಚಿನ್ಮಯಿರಾವ್ ಅವರಿಗೆ ಇದು ಚೊಚ್ಚಿಲ ಕಾಣಿಕೆ. ಹತ್ತು ವರ್ಷದಿಂದ ಆಲ್ಬಂಗಳಿಗೆ ದುಡಿಯುತ್ತಿದ್ದ ತಮ್ಮನ್ನು ಗುರುತಿಸಿದ ಚಿತ್ರತಂಡಕ್ಕೆ ಅವರ ಕೃತಜ್ಞತೆ ಅರ್ಪಣೆಯಾಯಿತು. ಇಪ್ಪತ್ತೇಳು ಧ್ವನಿಮುದ್ರಿಕೆಗಳಿಗೆ ಸಂಗೀತ ನಿರ್ದೇಶಿಸಿದ ಅನುಭವ ರಾವ್ ಅವರ ಬೆನ್ನಿಗಿದೆ. ಚಿತ್ರದಲ್ಲಿರುವುದು ಎರಡೇ ಹಾಡು. ಆ ಎರಡರಲ್ಲೇ ತಮ್ಮ ಪ್ರತಿಭೆಯನ್ನು ಒರಗೆ ಹಚ್ಚುವ ಕೆಲಸ ಅವರದಾಗಿತ್ತು. ಇದರಲ್ಲಿ ಯಶ ಕಂಡ ತೃಪ್ತಿ ಅವರಿಗಿದೆ.

ಲಹರಿ ವೇಲು ಚಿತ್ರದ ಆಡಿಯೊ ಹಕ್ಕುಗಳನ್ನು ಹೊಂದಿದ್ದಾರೆ. ಚಿತ್ರದ ಅಡಿ ಬರಹ `ಭಯ ಎದುರಿಸು' ಎಂದು. `ತಂಡ ಕೂಡ ಭಯ ಎದುರಿಸಲೆಂದೇ ಚಿತ್ರರಂಗಕ್ಕೆ ಅಡಿ ಇಡುತ್ತಿದೆ. ಸಿನಿಮಾಕ್ಕಾಗಿ ಸಿನಿಮಾ ಮಾಡಿ. ಬೇರೆ ಉದ್ದೇಶಗಳಿಗೆ ಚಿತ್ರರಂಗಕ್ಕೆ ಬರಬೇಡಿ' ಎಂದು ಅವರು ಹೇಳಿದ್ದು ಚಿತ್ರರಂಗ ಪ್ರವೇಶಿಸುವ ಎಲ್ಲ ಹೊಸಬರಿಗೆ. ಕಳೆದ ವರ್ಷ ಮೂಡಿಬಂದ ನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ಯಶಸ್ವಿಯಾದದ್ದು ಬೆರಳೆಣಿಕೆಯಷ್ಟು ಚಿತ್ರಗಳು ಎಂಬುದು ಅವರ ಆತಂಕಕ್ಕೆ ಕಾರಣ. 

ನಾಯಕ ವಿಹಾನ್ ಗೌಡರಿಗೆ ಚಿಕ್ಕಂದಿನಿಂದಲೂ ಚಿತ್ರನಟನಾಗಬೇಕೆಂಬ ಆಸೆ. ಓದು ಮುಗಿದ ಬಳಿಕ ಏನಾದರೂ ಮಾಡಿಕೋ ಎಂಬ ಪೋಷಕರ ಕಿವಿಮಾತಿನಂತೆ ಅವರು ಸಿನಿಮಾಕ್ಕೆ ಇಳಿದಿದ್ದಾರೆ. ಅಜಿತ್ ಜಯರಾಜ್ ಹೊಸಬರ ಯತ್ನವನ್ನು ಪ್ರೇಕ್ಷಕರು ಸ್ವೀಕರಿಸುವ ಭರವಸೆ ಹೊಂದಿದ್ದಾರೆ. ಕಿರಣ್ ಗೌಡ ತಮ್ಮ ವಿಶೇಷ ಹಾವಭಾವಗಳ ಮೂಲಕ ನಿರ್ದೇಶಕರನ್ನು ಸೆಳೆದವರು.

ರಮಣಿತು ಚೌಧರಿ, ದಿಶಾ ಪೂವಯ್ಯ, ಪವಿತ್ರಾ ಗೌಡ ನಾಯಕಿಯರಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಸಾಧು ಕೋಕಿಲ, ಮಿಮಿಕ್ರಿ ಗೋಪಿ ಮುಂತಾದವರು ಪ್ರೇಕ್ಷಕರನ್ನು ರಂಜಿಸಲಿದ್ದಾರೆ. ಕಳೆದ ಒಂದು ವರ್ಷದಿಂದ ತಯಾರಾಗುತ್ತಿರುವ ಚಿತ್ರ ಫೆಬ್ರುವರಿ ಅಥವಾ ಮಾರ್ಚ್ ತಿಂಗಳಲ್ಲಿ ತೆರೆಗೆ ಬರಲಿದೆ. ನಿರ್ಮಾಪಕ ಕೆ. ಮಂಜು, ಬೆಂಗಳೂರು ಮೇಯರ್ ವೆಂಕಟೇಶಮೂರ್ತಿ ಮತ್ತಿತರರು ಸಮಾರಂಭದಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.