ADVERTISEMENT

ನಿರ್ಮಾಪಕರಿಗೆ ರಕ್ಷೆ

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2012, 19:50 IST
Last Updated 12 ಡಿಸೆಂಬರ್ 2012, 19:50 IST
ನಿರ್ಮಾಪಕರಿಗೆ ರಕ್ಷೆ
ನಿರ್ಮಾಪಕರಿಗೆ ರಕ್ಷೆ   

ನಿರ್ಮಾಪಕರು ಸುರಕ್ಷಿತವಾಗಿದ್ದರೆ ಚಿತ್ರರಂಗ ಸುರಕ್ಷಿತವಾಗಿರುತ್ತದೆ. ನಿರ್ಮಾಪಕರಿಗೆ ವಿಮೆ ಸೌಲಭ್ಯ ದೊರೆತರೆ ಚಿತ್ರರಂಗಕ್ಕೂ ದೀರ್ಘಾಯಸ್ಸು ಎಂಬುದನ್ನು ನೆಚ್ಚಿ ನಡೆದ ಕಾರ್ಯಕ್ರಮವದು. ಖಾಸಗಿ ವಿಮಾ ಕಂಪೆನಿ ಹಾಗೂ ಚಲನಚಿತ್ರ ನಿರ್ಮಾಪಕರ ಸಂಘ ಯೋಜನೆಯ ರೂವಾರಿಗಳು. ಅದರ ಫಲವಾಗಿ ಹಿರಿಯರು, ಕಿರಿಯರು ಎನ್ನದೆ ಸುಮಾರು 150ಕ್ಕೂ ಹೆಚ್ಚು ನಿರ್ಮಾಪಕರು ವಿಮಾದಾರರಾದರು.

ಈ ಸಂದರ್ಭದಲ್ಲಿ `ನಾನು ನಿರ್ಮಾಪಕರ ನಟ' ಎನ್ನುತ್ತ ಮಾತಿಗಿಳಿದ ಅಂಬರೀಷ್, ಸಂಕಷ್ಟದಲ್ಲಿರುವ ನಿರ್ಮಾಪಕರಿಗೆ ವಿಮೆ ಹೇಗೆ ಸಹಾಯಕವಾಗಲಿದೆ ಎಂಬುದನ್ನು ವಿವರಿಸಿದರು. `ಆಗೆಲ್ಲಾ ಅನೇಕ ಚಿತ್ರಮಂದಿರಗಳಲ್ಲಿ ಕನ್ನಡ ಸಿನಿಮಾಗಳು ರಾರಾಜಿಸುತ್ತಿದ್ದವು. ಆದರೆ ಈಗ ಪರಿಸ್ಥಿತಿ ಹದಗೆಟ್ಟಿದೆ.

ಮೊದಲಿನಿಂದಲೂ ಬೆಂಗಳೂರಿನ ಎಂ.ಜಿ.ರಸ್ತೆ ಸುತ್ತಮುತ್ತ ಕನ್ನಡ ಚಿತ್ರಗಳು ಪ್ರದರ್ಶನಗೊಳ್ಳಲೇ ಇಲ್ಲ' ಎಂದು ಕನ್ನಡ ಚಿತ್ರರಂಗದ ಸ್ಥಿತಿಯನ್ನು ಅವರು ವಿವರಿಸಿದ್ದು ಕನ್ನಡ ಚಿತ್ರಗಳಿಗೂ ವಿಮೆ ಬೇಕಿದೆಯೇ ಎಂಬ ಪ್ರಶ್ನೆ ಹುಟ್ಟುಹಾಕಿತ್ತು. ಅದೇನೇ ಇರಲಿ, ಅಂಬರೀಷ್ ಅಧ್ಯಕ್ಷರಾಗಿರುವ ಚಲನಚಿತ್ರ ಕಲಾವಿದರ ಸಂಘ ಕೂಡ ತನ್ನ ಸದಸ್ಯರಿಗೆ ವಿಮೆ ಸೌಲಭ್ಯ ನೀಡಲು ಉತ್ಸಾಹ ತೋರಿದೆ.

ನಿರ್ಮಾಪಕರ ಸಂಘದ ಸಂಸ್ಥಾಪಕ ಅಧ್ಯಕ್ಷ ಎಚ್‌ಎಂಕೆ ಮೂರ್ತಿ ಅವರಂತಹ ಹಿರಿಯರಿಗೆ ಮೊದಲ ವಿಮೆ ಪಾಲಿಸಿ ನೀಡಿ ಸಂಘ ಗೌರವ ಸೂಚಿಸಿತು. ನಿರ್ಮಾಪಕರಾದ ಓಂ ಸಾಯಿಪ್ರಕಾಶ್, ರಾಜೇಂದ್ರಸಿಂಗ್ ಬಾಬು ಸೇರಿದಂತೆ ಹಲವು ಗಣ್ಯರು ವಿಮೆಯ ಪ್ರಯೋಜನ ಪಡೆದರು.

ಸಂಘದ ಅಧ್ಯಕ್ಷ ಮುನಿರತ್ನ, `ಇದಿನ್ನೂ ಮೊದಲ ಹಂತ. ಎಲ್ಲಾ ಸದಸ್ಯರು ವಿಮೆಯ ಪ್ರಯೋಜನ ಪಡೆಯುವಂತೆ ಮಾಡುವುದು ನಮ್ಮ ಗುರಿ' ಎಂದರು.
ನಟ ಸುದೀಪ್, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಬಿ. ವಿಜಯಕುಮಾರ್, ಮಂಡಳಿಯ ಮಾಜಿ ಅಧ್ಯಕ್ಷ ಕೆ.ಸಿ.ಎನ್. ಚಂದ್ರಶೇಖರ್, ಸುವರ್ಣ ಸುದ್ದಿ ವಾಹಿನಿಯ ಸಂಪಾದಕ ವಿಶ್ವೇಶ್ವರ ಭಟ್, ಪಬ್ಲಿಕ್‌ಟಿವಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಚ್.ಆರ್. ರಂಗನಾಥ್ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.