ADVERTISEMENT

ನೃತ್ಯ ಆಧಾರಿತ ಕಥನ

​ಪ್ರಜಾವಾಣಿ ವಾರ್ತೆ
Published 15 ಮಾರ್ಚ್ 2018, 19:30 IST
Last Updated 15 ಮಾರ್ಚ್ 2018, 19:30 IST
ಶಿಲ್ಪಾ ಲಡ್ಡಿಮಠ್‌
ಶಿಲ್ಪಾ ಲಡ್ಡಿಮಠ್‌   

ಡಾನ್ಸ್‌ ಆಧಾರಿತ ಸಿನಿಮಾಗಳು ವಿರಳ. ‘ಬಿಂದಾಸ್‌ ಗೂಗ್ಲಿ’ ಇದಕ್ಕೆ ಅಪವಾದ. ನೃತ್ಯವೇ ಈ ಚಿತ್ರದ ಜೀವಾಳ ಎಂದರು ನಿರ್ದೇಶಕ ಸಂತೋಷ್‌ಕುಮಾರ್.

ಕಾಲೇಜೊಂದರಲ್ಲಿ ನಡೆಯುವ ಡಾನ್ಸ್‌ ಸ್ಪರ್ಧೆಯ ಅಂಶವಿಟ್ಟುಕೊಂಡು ಚಿತ್ರಕಥೆ ಹೆಣೆದಿದ್ದಾರಂತೆ. ಪ್ರತಿಯೊಬ್ಬರಲ್ಲೂ ಬಿಂದಾಸ್‌ ಆದ ವ್ಯಕ್ತಿತ್ವ ಇರುತ್ತದೆ. ಹಾಗಾಗಿ, ಚಿತ್ರಕ್ಕೆ ‘ಬಿಂದಾಸ್‌ ಗೂಗ್ಲಿ’ ಎಂದು ಹೆಸರಿಡಲಾಗಿದೆ ಎಂಬುದು ಚಿತ್ರತಂಡದ ವಿವರಣೆ. ಬೆಳಗಾವಿ ಸುತ್ತಮುತ್ತ ಶೂಟಿಂಗ್ ನಡೆಸಿ ಹಾಡಿನ ಭಾಗದ ಚಿತ್ರೀಕರಣವನ್ನಷ್ಟೇ ಬಾಕಿ ಉಳಿಸಿಕೊಂಡಿರುವ ಚಿತ್ರತಂಡ ಈ ಬಗ್ಗೆ ಮಾಹಿತಿ ಹಂಚಿಕೊಳ್ಳಲು ಪತ್ರಿಕಾಗೋಷ್ಠಿಗೆ ಸಜ್ಜಾಗಿ ಬಂದಿತ್ತು.

ಸಂತೋಷ್‌ಕುಮಾರ್‌ ಓದಿರುವುದು ಹೋಟೆಲ್‌ ಮ್ಯಾನೇಜ್‌ಮೆಂಟ್‌. ಅವರನ್ನು ಸೆಳೆದಿದ್ದು ಸಿನಿಮಾ. ಮೊದಲ ಚಿತ್ರದಲ್ಲಿಯೂ ‘ಸ್ಟೂಡೆಂಟ್‌’ಗಳ ಬೆನ್ನು ಹತ್ತಿದ್ದ ಅವರು ಎರಡನೇ ಚಿತ್ರದಲ್ಲಿಯೂ ಕಾಲೇಜಿನ ಹುಡುಗರ ಹಿಂದೆ ಬಿದ್ದಿದ್ದಾರೆ. ‘ಚಿತ್ರದಲ್ಲಿ ಸಂದರ್ಭಕ್ಕೆ ಅನುಗುಣವಾಗಿ ಹಾಡುಗಳಿವೆ. ಪ್ರತಿಯೊಂದು ದೃಶ್ಯದಲ್ಲೂ ಸಂದೇಶ ಹೇಳುವ ಪ್ರಯತ್ನ ಮಾಡಿದ್ದೇನೆ’ ಎಂದರು.

ADVERTISEMENT

ನಾಯಕ ಕೀರ್ತಿ ಧರ್ಮರಾಜ್, ‘ಗುರುಕುಲದ ಮೇಲೆ ಡಾನ್ಸ್‌ ಎಷ್ಟು ಪರಿಣಾಮಕಾರಿ ಬೀರುತ್ತದೆ ಎನ್ನುವುದನ್ನು ಚಿತ್ರ ಕಟ್ಟಿಕೊಡಲಿದೆ’ ಎಂದರು.

ಈ ಚಿತ್ರದ ಮತ್ತೊಬ್ಬ ನಾಯಕ ಆಕಾಶ್‌ ವಿಜಯ್‌ ಅಣ್ವೇಕರ್. ನಟನೆಗಾಗಿ ಅವರು ಮುಂಬೈನಲ್ಲಿ ತರಬೇತಿ ಕೂಡ ಪಡೆದಿದ್ದಾರಂತೆ. ‘ಸಿನಿಮಾದಲ್ಲಿ ನಟಿಸುವುದು ನನ್ನ ಕನಸು. ಅದು ಈಗ ಈಡೇರಿದೆ’ ಎಂದರು.

ಮಗನ ಕನಸಿಗೆ ಬಂಡವಾಳ ಹೂಡಿರುವ ವಿಜಯ್‌ ಕುಮಾರ್‌ ಅಣ್ವೇಕರ್‌, ‘ಚಿತ್ರದಲ್ಲಿ ಉತ್ತಮ ಹಾಡುಗಳಿವೆ. ಜನರಿಗೆ ಇಷ್ಟವಾಗುವ ಸಿನಿಮಾ ಮಾಡಿರುವ ಖುಷಿಯಿದೆ’ ಎಂದರು.

ಮಮತಾ ರಾವುತ್, ಶಿಲ್ಪಾ ಲಡ್ಡಿಮಠ್‌ ಮತ್ತು ನಿಮಿಕಾ ರತ್ನಾಕರ್‌ ಈ ಚಿತ್ರದ ನಾಯಕಿಯರು. ಬೆಳಗಾವಿ ಲೋಕಸಭಾ ಕ್ಷೇತ್ರದ ಸಂಸದ ಸುರೇಶ್‌ ಅಂಗಡಿ ಡಾನ್ಸ್‌ ತರಬೇತುದಾರರಾಗಿ ಕಾಣಿಸಿಕೊಂಡಿದ್ದಾರಂತೆ. ಮ್ಯಾಥ್ಯುರಾಜನ್‌ ಅವರ ಛಾಯಾಗ್ರಹಣ ಚಿತ್ರಕ್ಕಿದೆ. ಚಿತ್ರದಲ್ಲಿ ಐದು ಹಾಡು ಮತ್ತು ಎರಡು ಬಿಟ್ಸ್‌ಗಳಿದ್ದು, ವಿನುಮನಸು ಸಂಗೀತ ಸಂಯೋಜಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.