ADVERTISEMENT

ನೆನೆದಷ್ಟೂ ಪ್ರೀತಿ!

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2011, 18:30 IST
Last Updated 3 ಫೆಬ್ರುವರಿ 2011, 18:30 IST

ಬಡವ-ಶ್ರೀಮಂತರ ನಡುವೆ ಪ್ರೀತಿಗೆ ಎಲ್ಲಿದೆ ಬೆಲೆ? ಎಂದು ಪ್ರಶ್ನಿಸುವ ಕತೆ ‘ನೆನೆಯುವೆ ನಿನ್ನ’ ಚಿತ್ರದ್ದು. ಈ ಪ್ರೇಮಕಥೆಯೊಂದಿಗೆ ಹಲವು ವೈದ್ಯಕೀಯ ಮಾಹಿತಿಗಳೂ ಚಿತ್ರದಲ್ಲಿವೆಯಂತೆ. ಈ ವಿಭಿನ್ನತೆಯೇ ಚಿತ್ರದ ದೊಡ್ಡ ಶಕ್ತಿ ಎನ್ನುವುದು ಚಿತ್ರದ ನಿರ್ಮಾಪಕ ಬಸವರಾಜು ಅವರ ಅನಿಸಿಕೆ.

ಬಸವರಾಜು ವೃತ್ತಿಯಿಂದ ಗುತ್ತಿಗೆದಾರರು. ಹಾಡು ಬರೆಯುವ ಹವ್ಯಾಸವೂ ಅವರಿಗಿದೆ. ತುರುವೇಕೆರೆಯವರಾದ ಅವರು ಸಿನಿಮಾ ನಿರ್ಮಾಣ ಮಾಡುವಾಸೆಯಿಂದ ಗಾಂಧಿನಗರಕ್ಕೆ ಬಂದವರು. ಅನುಭವಿ ನಿರ್ದೇಶಕ ಎಸ್.ಉಮೇಶ್ ಅವರಿಂದ ಸಿನಿಮಾ ಮಾಡಿಸಲು ನಿರ್ಧರಿಸಿ, ತಮ್ಮ ಚಿತ್ರಕ್ಕೆ ಹಾಡನ್ನೂ ಬರೆದಿದ್ದಾರೆ.

‘ನೆನೆಯುವೆ ನಿನ್ನ’ ಚಿತ್ರ ತೆರೆಗೆ ಸಿದ್ಧವಾಗುತ್ತಿದ್ದು, ಫೆಬ್ರುವರಿ ಅಥವಾ ಮಾರ್ಚ್ ವೇಳೆಗೆ ಚಿತ್ರ ಬಿಡುಗಡೆ ಮಾಡುವ ಉತ್ಸಾಹ ಅವರದ್ದು. ತಮ್ಮ ಚೊಚ್ಚಿಲ ಪ್ರಯತ್ನ ಗೆಲ್ಲುವ ಬಗ್ಗೆ ಸಂಪೂರ್ಣ ಭರವಸೆ ಇದೆ.

ನವೀನ್ ಕೃಷ್ಣ, ರಂಜಿತಾ, ಜಾಹ್ನವಿ ಚಿತ್ರದ ಪ್ರಧಾನ ಭೂಮಿಕೆಯಲ್ಲಿದ್ದು, ಚಿತ್ರಕ್ಕೆ ಡಿಟಿಎಸ್, ಆಪ್ಟಿಕಲ್ ಮತ್ತು ಸಿಜಿ ವರ್ಕ್ ನಡೆಯುತ್ತಿದೆಯಂತೆ.

2009ರಲ್ಲಿ ಆರಂಭವಾದ ಈ ಚಿತ್ರ ತಡವಾಗಲು ಕಲಾವಿದರ ಡೇಟ್ ಸಮಸ್ಯೆಗಳೇ ಕಾರಣ ಎನ್ನುವ ಬಸವರಾಜು ಅವರು ಚಿತ್ರಕ್ಕೆ ಒಂದೂಕಾಲು ಕೋಟಿ ರೂಪಾಯಿ ಖರ್ಚು ಮಾಡಿದ್ದಾರೆ. ಮೈಸೂರು, ಹುಣಸೂರು, ಪಿರಿಯಾಪಟ್ಟಣ, ಚಿಕ್ಕಮಗಳೂರು, ಕುದುರೆಮುಖ, ಕೆಮ್ಮಣ್ಣುಗುಂಡಿ, ಬೆಂಗಳೂರಿನ ಪಿವಿಆರ್ ಸ್ಟುಡಿಯೋ ಮುಂತಾದ ಕಡೆ ಚಿತ್ರೀಕರಣ ನಡೆದಿದೆ. ಸಂಗೀತ ನಿರ್ದೇಶಕಿ ಸಿ.ಆರ್.ಬಾಬಿ ಅವರು ರಾಗ ಸಂಯೋಜಿಸಿರುವ ತಮ್ಮ ಚಿತ್ರದ ಹಾಡುಗಳು ಈಗಾಗಲೇ ಜನಪ್ರಿಯವಾಗಿವೆ ಎನ್ನುತ್ತಾರೆ ಅವರು.

‘ನಾನೂ ಉದ್ಯಮಕ್ಕೆ ಹೊಸಬ. ಅದರಿಂದ ‘ತುಂಬಿದ ಮನೆ’, ‘ಅವಳೇ ನನ್ನ ಹೆಂಡ್ತಿ’, ‘ಅವನೇ ನನ್ನ ಗಂಡ’ ಚಿತ್ರಗಳ ನಿರ್ದೇಶಕ ಉಮೇಶ್ ಅವರಿಂದ ಚಿತ್ರ ಮಾಡಿಸಿದ್ದೇನೆ. ಈ ವಾರ ಚಿತ್ರದ ಪ್ರಥಮ ಪ್ರತಿ ಬರುತ್ತದೆ. ಸೆನ್ಸಾರ್ ಮಾಡಿಸಬೇಕಿದೆ’ ಎನ್ನುವ ಬಸವರಾಜು ಚಿತ್ರಕ್ಕೆ ಬರುವ ಪ್ರತಿಕ್ರಿಯೆಗಳಿಗೆ ಕಾದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.