ADVERTISEMENT

ಪಾಟೀಲ್ ಸ್ಪೆಷಲ್

​ಪ್ರಜಾವಾಣಿ ವಾರ್ತೆ
Published 30 ಜೂನ್ 2011, 19:30 IST
Last Updated 30 ಜೂನ್ 2011, 19:30 IST
ಪಾಟೀಲ್ ಸ್ಪೆಷಲ್
ಪಾಟೀಲ್ ಸ್ಪೆಷಲ್   

ಮಿಲಿಟರಿ ಹಸಿರು ಬಣ್ಣದ ಬುಲೆಟ್ ಬೈಕ್‌ನಲ್ಲಿ ಸಾಮಾನ್ಯರಂತೆ ಬಂದ ನಟ ಕಿಶೋರ್‌ಗೆ ಈ ವಾರ ತೆರೆಕಾಣುತ್ತಿರುವ `9-12~ ಸಿನಿಮಾ ಬಗ್ಗೆ ನಿರೀಕ್ಷೆಗಳಿದ್ದವು.
ಚಿತ್ರ ಬಿಡುಗಡೆಯಾಗುತ್ತಿದೆ ಎಂಬ ಸಂತೋಷ ಹಂಚಿಕೊಳ್ಳಲು ಕರೆದಿದ್ದ ಗೋಷ್ಠಿ ಸಂವಾದದ ಸ್ವರೂಪ ಪಡೆದುಕೊಂಡಿತು.
 
ನಿರ್ದೇಶಕ ಅಶೋಕ್ ಪಾಟೀಲರು ಇತ್ತೀಚಿನ ಕನ್ನಡ ಚಿತ್ರಗಳ ಗುಣಮಟ್ಟದ ಟೀಕೆಗೆ ನಿಂತರು. ಚೆನ್ನಾಗಿರುವ ಕೆಲವು ಚಿತ್ರಗಳನ್ನೂ ಉದಾಹರಿಸಿದರು. ಪಾಟೀಲರು ಈ ಹಿಂದಿನ `ಶಾಪ~,

`ಜೋಕ್‌ಫಾಲ್ಸ್~ ಚಿತ್ರಗಳು ಬಿಡುಗಡೆಯಾದಾಗ ಬೆಂಗಳೂರಿನಲ್ಲಿ ಇರಲಿಲ್ಲ. ಆಗ ಬಿಡುಗಡೆಯ ಕಷ್ಟದ ಅರಿವೇ ಅವರಿಗೆ ಆಗಿರಲಿಲ್ಲ. ಈಗ ಭಯ, ಉದ್ವೇಗ, ಕುತೂಹಲ, ಆತಂಕ ಎಲ್ಲವೂ ಆಗುತ್ತಿದೆ.

ಕಳೆದ ಹದಿನೈದು ಇಪ್ಪತ್ತು ದಿನಗಳಲ್ಲಿ ಅವರು ಪಟ್ಟಾಗಿ ಕೂತು ಅನೇಕ ಕನ್ನಡ ಚಿತ್ರಗಳನ್ನು ನೋಡಿದ್ದಾರೆ. `ಸಂಜು ವೆಡ್ಸ್ ಗೀತಾ~, `ಹುಡುಗರು~, `ರಾಜಧಾನಿ~ ಚಿತ್ರಗಳ ತಾಂತ್ರಿಕ ಅಂಶಗಳು ಅವರಿಗೆ ಮೆಚ್ಚಾಗಿದೆ.
 
ಹಾಗಿದ್ದೂ ಶೇಕಡಾ 60ಕ್ಕಿಂತ ಹೆಚ್ಚು ಚಿತ್ರಗಳಲ್ಲಿ ಮೂಲಜ್ಞಾನದ ಕೊರತೆ ಕಾಣುತ್ತಿರುವುದು ಇಡೀ ಚಿತ್ರರಂಗವನ್ನು ಬೇರೆಯವರು ಆಡಿಕೊಳ್ಳಲು ಕಾರಣವಾಗಿದೆ ಅಂತಾರೆ ಅಶೋಕ್ ಪಾಟೀಲ್. ತಮ್ಮ ಚಿತ್ರ ಸಿನಿಮಾ ಜ್ಞಾನಕ್ಕೆ ಉದಾಹರಣೆಯಾಗಬಲ್ಲದು ಎಂಬ ವಿಶ್ವಾಸ ಅವರಿಗಿದೆ.

ಮೂರು ವರ್ಷ ಸ್ಕ್ರಿಪ್ಟ್ ತಿದ್ದಿದ ಅವರು ಆಮೇಲೆ ಸುಮಾರು ನೂರು ಜನರಿಗೆ ಕಥೆ ಹೇಳಿದರಂತೆ. ನೂರು ಅಂಕದಲ್ಲಿ ಎಷ್ಟು ಕೊಡುವಿರಿ ಎಂದು ಕೇಳಿದಾಗ, ಅಷ್ಟೂ ಜನರಿಂದ ಸಿಕ್ಕ ಸರಾಸರಿ ಅಂಕ 80.

ಸಿನಿಮಾ ಮಾಡಿದ ನಂತರ 200 ಮಂದಿಗೆ ತೋರಿಸಲಾಗಿ, ಆಗ 88-90 ಅಂಕ ಸಿಕ್ಕಿದೆ. `ಸಿನಿಮಾ ಓಡುವುದೋ ಬಿಡುವುದೋ ಗೊತ್ತಿಲ್ಲ. ಆದರೆ, ನನ್ನ ಕೆಲಸವನ್ನು ತುಂಬಾ ಅಚ್ಚುಕಟ್ಟಾಗಿ ಮಾಡಿದ್ದೇನೆ.
 
ಸಿನಿಮಾ ಬಿಡುಗಡೆಯ ಕಷ್ಟವನ್ನೂ ಈ ಬಾರಿ ಹತ್ತಿರದಿಂದ ನೋಡಿದ್ದೇನೆ~ ಎನ್ನುವ ಅಶೋಕ್ ಪ್ರಕಾರ `9-12~ನಲ್ಲಿ ನಾಲ್ಕು ವಿಶೇಷಗಳಿವೆ. ಒಂದು- ಜಂಪ್ ಕಟ್ಸ್ (ಉದಾಹರಣೆಗೆ, ಕನ್ನಡಕ ಹಾಕಿಕೊಳ್ಳುವ ದೃಶ್ಯವನ್ನು ಇಡಿಯಾಗಿ ತೋರಿಸುವ ಬದಲು ಕನ್ನಡಕ ಎತ್ತಿಕೊಳ್ಳುವುದು ತೋರಿಸಿ, ಮುಂದಿನ ಶಾಟ್‌ನಲ್ಲಿ ಅದು ಕಣ್ಣಿಗಲಂಕರಿಸಿದಂತೆ ತೋರಿಸುವುದು),

ಎರಡು- ರೆಡ್ ಹೇರಿಂಗ್ ಸ್ಕ್ರೀನ್ ಪ್ಲೇ ತಂತ್ರ (ಪ್ರೇಕ್ಷಕರನ್ನು ಹಾದಿ ತಪ್ಪಿಸುವಂಥ ಕಥಾ ನಿರೂಪಣೆ), ಮೂರು- ಹಾಲಿವುಡ್‌ಗೆ ರೀಮೇಕ್ ಆಗಲಿರುವ ಕನ್ನಡದ ಮೊದಲ ಸಿನಿಮಾ, ನಾಲ್ಕು- ಹಾಸ್ಯ, ಭಾವುಕತೆಯನ್ನು ಹದವಾಗಿ ಬೆರೆಸಿದ ಸಸ್ಪೆನ್ಸ್ ಥ್ರಿಲ್ಲರ್.

ಸ್ಕ್ರೀನ್‌ಪ್ಲೇ ಹಂತದಲ್ಲೇ ತಪ್ಪುಗಳನ್ನು ತಿದ್ದಿಕೊಳ್ಳುವ ಧೋರಣೆ ಇರುವ ನಿರ್ದೇಶಕ ಅಶೋಕ್ ಪಾಟೀಲ್ ಆಗಿರುವುದರಿಂದ ಈ ಚಿತ್ರ ಹೆಚ್ಚು ಉತ್ತಮವಾಗಿರುತ್ತದೆಂಬುದು ಕಿಶೋರ್ ಅಂಬೋಣ. ಜಗತ್ತಿನ ಯಾವುದೇ ಕೆಳಮಧ್ಯಮ ವರ್ಗಕ್ಕೆ ಹೊಂದಿಸಬಹುದಾದ ಕಥೆ ಇರುವುದರಿಂದ ಇದು `ಯೂನಿವರ್ಸಲ್ ಸಿನಿಮಾ~ ಎಂದೂ ಅವರು ಸರ್ಟಿಫಿಕೇಟ್ ಕೊಟ್ಟರು.

ಹಿರಿಯ ನಟ ಮನ್‌ದೀಪ್ ರೈ, `ರೀಮೇಕ್ ಆದರೂ ಪರವಾಗಿಲ್ಲ, ಒಳ್ಳೆಯ ಸಿನಿಮಾಗಳು ಬರಲಿ~ ಎಂದು ವಿಷಯಾಂತರ ಮಾಡಿದರು. ಬರೀ ರೀಮೇಕೇ ಆದರೂ ಸರಿಯಲ್ಲ ಎಂದು ಕಿಶೋರ್, ಅಶೋಕ್ ಪಾಟೀಲರು ಅವರನ್ನು ನಯವಾಗಿಯೇ ಟೀಕಿಸಿದರು.

ತಡವಾಗಿ ಗೋಷ್ಠಿ ಸೇರಿಕೊಂಡ ನಟಿ ಸ್ಮಿತಾ ಕೂಡ ಚರ್ಚಾಸ್ಪರ್ಧೆಗೆ ಇಳಿದವರಂತೆ ಮಾತನಾಡಲು ಮುಂದಾದರು. ಅವರಿಗೂ ಸಿನಿಮಾ ಇಷ್ಟವಾಗಿದೆ.

ಬೆಂಗಳೂರಿನಲ್ಲಿ ತ್ರಿಭುವನ್ ಸೇರಿದಂತೆ ರಾಜ್ಯದಾದ್ಯಂತ ಕೆಲವು ಚಿತ್ರಮಂದಿರಗಳಲ್ಲಿ `9-12~ ಇಂದು ತೆರೆಕಾಣುತ್ತಿದೆ. ತಮ್ಮನ ಖುಷಿಯ ಬಗ್ಗೆ ಮಾತನಾಡಲು ಬಿ.ಸಿ.ಪಾಟೀಲರೇ ಬಂದಿರಲಿಲ್ಲ. ಚಿತ್ರದಲ್ಲಿ ಅವರೂ ಮುಖ್ಯವಾದ ಪಾತ್ರ ನಿರ್ವಹಿಸಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.