ADVERTISEMENT

ಪಾರ್ವತಮ್ಮನ ಮಗಳು!

ಹರಿಪ್ರಿಯಾ 25ನೇ ಸಿನಿಮಾ ಡಾಟರ್ ಆಫ್ ಪಾರ್ವತಮ್ಮ

ಪದ್ಮನಾಭ ಭಟ್ಟ‌
Published 29 ಏಪ್ರಿಲ್ 2018, 6:24 IST
Last Updated 29 ಏಪ್ರಿಲ್ 2018, 6:24 IST
ಸುಮಲತಾ ಮತ್ತು ಹರಿಪ್ರಿಯಾ
ಸುಮಲತಾ ಮತ್ತು ಹರಿಪ್ರಿಯಾ   

ಪಾರ್ವತಮ್ಮ ಅವರ ಮಗಳು ಸಿನಿಮಾ ಮಾಡುತ್ತಿದ್ದಾರಾ ಎಂದು ಹುಬ್ಬೇರಿಸಬೇಡಿ. ಖಂಡಿತ ಇಲ್ಲ. ‘d/o ಪಾರ್ವತಮ್ಮ’ ಇದು ಇತ್ತೀಚೆಗೆ ಇತ್ತೀಚೆಗೆ ಸೆಟ್ಟೇರಿರುವ ಸಿನಿಮಾ ಒಂದರ ಹೆಸರು! ಶಂಕರ್ ನಿರ್ದೇಶಿಸುತ್ತಿರುವ ಈ ಚಿತ್ರದಲ್ಲಿ ಹರಿಪ್ರಿಯಾ ಪಾರ್ವತಮ್ಮನ ಮಗಳಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಪಾರ್ವತಮ್ಮನಾಗಿ ಸುಮಲತಾ ಅಂಬರೀಶ್‌ ನಟಿಸುತ್ತಿದ್ದಾರೆ. ಇನ್ನೂ ಒಂದು ವಿಶೇಷವೆಂದರೆ, ಇದು ಹರಿಪ್ರಿಯಾ ಅವರ 25ನೇ ಕನ್ನಡ ಸಿನಿಮಾ!

ಇಷ್ಟೆಲ್ಲ ವೈಶಿಷ್ಟ್ಯಗಳನ್ನು ಹೊಂದಿರುವ ‘d/o ಪಾರ್ವತಮ್ಮ’ ಸಿನಿಮಾ ಶೀರ್ಷಿಕೆ ಭಾನುವಾರ (ಏ. 29) ಬಿಡುಗಡೆಯಾಗಿದೆ. ಈಗಾಗಲೇ ಚಿತ್ರೀಕರಣದಲ್ಲಿ ತೊಡಗಿಕೊಂಡಿರುವ ಹರಿಪ್ರಿಯಾ ಈ ಸಿನಿಮಾದ ಕುರಿತು ಉತ್ಸಾಹದಿಂದಲೇ ಮಾತನಾಡುತ್ತಾರೆ. ಶೀರ್ಷಿಕೆಯೇ ಸೂಚಿಸುವಂತೆ ಇದು ನಾಯಕಿ ಪ್ರಧಾನ ಚಿತ್ರ.

‘ಈ ಶೀರ್ಷಿಕೆಗೂ ಪಾರ್ವತಮ್ಮನಿಗೂ ಯಾವುದೇ ಸಂಬಂಧವಿಲ್ಲ’ ಎಂದು ಹೇಳಿಕೊಂಡೇ ಅವರು ಮಾತನ್ನು ಮುಂದುವರಿಸುತ್ತಾರೆ. ‘ಅಮ್ಮ ಮಗಳ ಸಂಬಂಧವೇ ಇಲ್ಲಿ ಮುಖ್ಯವಾದ ಕಥಾವಸ್ತು. ಹೊರಗಡೆಯ ಜನರೂ ನಾಯಕಿಯನ್ನು ಪಾರ್ವತಮ್ಮನ ಮಗಳಲ್ವಾ ನೀನು ಎಂದೇ ಗುರ್ತಿಸುತ್ತಾರೆ. ಕಥೆಗೂ ಈ ಶೀರ್ಷಿಕೆ ಸೂಕ್ತ ಅನಿಸಿದ್ದರಿಂದ ಈ ಶೀರ್ಷಿಕೆ ಇಟ್ಟಿದ್ದಾರೆ’ ಎನ್ನುವ ವಿವರಣೆ ಅವರದ್ದು.

ADVERTISEMENT

ಇದು ತನ್ನ ನಟನೆಯ 25ನೇ ಕನ್ನಡ ಸಿನಿಮಾ ಎನ್ನುವುದು ಸಿನಿಮಾ ಒಪ್ಪಿಕೊಳ್ಳುವಾಗ ಹರಿಪ್ರಿಯಾ ಅವರಿಗೂ ಗೊತ್ತಿರಲಿಲ್ಲವಂತೆ. ಕೊನೆಗೆ ನಿರ್ಮಾಪಕರು ಹೇಳಿದ ಮೇಲೆಯೇ ಗೊತ್ತಾಗಿದ್ದು. ‘ನಿರ್ಮಾಪಕ ಶಶಿಧರ್ ಅವರು ಹೇಳಿದಾಗಲೇ ಇದು ಕನ್ನಡದಲ್ಲಿ ನನ್ನ 25ನೇ ಸಿನಿಮಾ ಎನ್ನುವುದು ತಿಳಿದಿದ್ದು. ತುಂಬ ಖುಷಿಯಾಯ್ತು’ ಎನ್ನುತ್ತಾರೆ ಹರಿಪ್ರಿಯಾ.

ಈ ಸಿನಿಮಾದಲ್ಲಿ ಅವರು ತನಿಖಾ ಅಧಿಕಾರಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ‘ತನಿಖಾಧಿಕಾರಿ ಅಂದಾಕ್ಷಣ ಫೈಟ್, ಜಂಪಿಂಗ್‌ ಅಂತೆಲ್ಲ ಏನಿರುವುದಿಲ್ಲ. ಇಡೀ ಕಥೆ ಒಂದು ಪ್ರಕರಣದ ತನಿಖೆ ಮಾಡುವುದರ ಮೂಲಕವೇ ಬೆಳೆಯುತ್ತ ಹೋಗುತ್ತದೆ. ಹಾಗೆಂದು ತುಂಬ ಗಂಭೀರವಾಗಿಯೇ ಇರುವುದಿಲ್ಲ. ಹಲವು ಆಪ್ತ ಸನ್ನಿವೇಶಗಳಿದ್ದರೂ ಅದರ ಜತೆಗೆ ಹಾಸ್ಯ, ಅಮ್ಮ ಮಗಳ ಭಾವುಕ ಸಂಬಂಧ ಎಲ್ಲವೂ ಇರುತ್ತದೆ’ ಎಂದು ವಿವರಿಸುತ್ತಾರೆ.

‘ನನಗೆ ಹೊಸ ಹೊಸ ರೀತಿಯ ಪಾತ್ರಗಳ ಮೂಲಕ ಪ್ರಯೋಗಕ್ಕೆ ಒಡ್ಡಿಕೊಳ್ಳಬೇಕು ಎನ್ನುವುದು ನನ್ನ ಆಸೆ. ಈ ಚಿತ್ರವೂ ಆ ಹಂಬಲದ ಮುಂದುವರಿದ ಭಾಗ. ಈ ಚಿತ್ರದ ಪಾತ್ರಕ್ಕಾಗಿ ನಿರ್ದೇಶಕರ ಜತೆ ಸಾಕಷ್ಟು ಚರ್ಚಿಸಿ ಮಾನಸಿಕವಾಗಿ ಸಿದ್ಧಗೊಂಡಿದ್ದೇನೆ’ ಎಂದೂ ಅವರು ವಿವರಿಸುತ್ತಾರೆ.

ಈ ಚಿತ್ರದಲ್ಲಿ ಹರಿಪ್ರಿಯಾ ತಮ್ಮ ಲುಕ್‌ ಕೂಡಾ ಬದಲಿಸಿಕೊಳ್ಳುತ್ತಿದ್ದಾರೆ. ಮುಂದಿನ ವಾರ ಅವರ ಫಸ್ಟ್‌ ಲುಕ್‌ ಬಿಡುಗಡೆ ಮಾಡಲು ಯೋಜಿಸಿಕೊಂಡಿದ್ದಾರೆ. ಈ ಚಿತ್ರದ ನಿರ್ದೇಶಕ ಶಂಕರ್ ಪವನ್ ಒಡೆಯರ್ ಅವರ ಬಳಿ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡುತ್ತಿದ್ದವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.