ADVERTISEMENT

ಪ್ರಿಯಾಂಕಾ ಜಾಗತಿಕ ಮುಖ!

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2013, 19:30 IST
Last Updated 1 ಡಿಸೆಂಬರ್ 2013, 19:30 IST

ಇತ್ತೀಚೆಗೆ ನ್ಯೂಯಾರ್ಕ್‌ಗೆ ಹೋಗಿದ್ದಾಗ ಪ್ರಿಯಾಂಕಾ ಚೋಪ್ರಾ ನಿಯತಕಾಲಿಕೆಗಳನ್ನು ಕೈಗೆತ್ತಿಕೊಂಡು, ಪುಟಗಳ ತಿರುವಿಹಾಕತೊಡಗಿದರು. ಒಂದು ನಿಯತಕಾಲಿಕೆಯ ಮೊದಲ ಪುಟದಲ್ಲಿ ನಟಿ ಜೂಲಿಯಾ ರಾಬರ್ಟ್ಸ್‌ ಚಿತ್ರ. ಕೊನೆಯ ಪುಟದಲ್ಲಿ ಖುದ್ದು ತಮ್ಮದೇ ಚಿತ್ರ. ಅದನ್ನು ಕಂಡು ಪ್ರಿಯಾಂಕಾಗೆ ಆದ ಸಂತೋಷ ಅಷ್ಟಿಷ್ಟಲ್ಲ. ಜಾಗತಿಕ  ಫ್ಯಾಷನ್‌ ಉತ್ಪನ್ನಗಳ ಬ್ರಾಂಡ್‌ ‘ಗೆಸ್‌’ನ ರೂಪದರ್ಶಿಯಾದ ಬಾಲಿವುಡ್‌ನ ಮೊದಲ ನಟಿ ಎಂಬ ಅಗ್ಗಳಿಕೆ ಅವರದ್ದು.

‘ಗೆಸ್‌ ರೂಪದರ್ಶಿ ಎನಿಸಿಕೊಳ್ಳುವುದು ನನಗೆ ಹೆಮ್ಮೆಯ ಸಂಗತಿ. ವಿಶ್ವದ ಹಲವು ಪ್ರತಿಷ್ಠಿತ ಸುಂದರಿಯರು ಆ ಸಾಲಿನಲ್ಲಿ ಇದ್ದಾರೆ. ಜಗತ್ತಿನ ಅತಿ ದೊಡ್ಡ ಬ್ರಾಂಡ್‌ಗಳಲ್ಲಿ ಗೆಸ್‌ ಕೂಡ ಒಂದು’ ಎಂದು ಮೂವತ್ತೊಂದು ವರ್ಷ ವಯಸ್ಸಿನ ಪ್ರಿಯಾಂಕಾ ಪ್ರತಿಕ್ರಿಯಿಸಿದ್ದಾರೆ.
ಉತ್ಪನ್ನದ ಪ್ರಚಾರಕ್ಕೆ ಬ್ರಯಾನ್‌ ಆ್ಯಡಮ್ಸ್‌ ತಮ್ಮ ಚಿತ್ರಗಳನ್ನು ತೆಗೆಯುತ್ತಾರೆ ಎಂದಾಗ ಪ್ರಿಯಾಂಕಾ ಅದು ಬೇರೆಯದೇ ಬ್ರಯಾನ್‌ ಇರಬೇಕು ಎಂದುಕೊಂಡಿದ್ದರಂತೆ. ಖುದ್ದು ಅಂತರರಾಷ್ಟ್ರೀಯ ಖ್ಯಾತಿಯ ಗಾಯಕ ಬ್ರಯಾನ್‌ ಅವರನ್ನು ಕಂಡಾಗ ಅವರಿಗೆ ಬೆರಗು. ಒಬ್ಬ ಹಾಡುಗಾರ ಅಷ್ಟು ಒಳ್ಳೆಯ ಫೋಟೊಗ್ರಾಫರ್‌ ಕೂಡ ಆಗುವುದು ಹೇಗೆ ಸಾಧ್ಯ ಎನಿಸಿತಂತೆ. ಬ್ರಯಾನ್‌ ಪದೇಪದೇ ಭಾರತಕ್ಕೆ ಭೇಟಿ ನೀಡುತ್ತಿರುವುದರಿಂದ ಅವರು ಅರ್ಧ ಭಾರತೀಯರೇ ಆಗಿದ್ದಾರೆ ಎಂಬುದು ಪ್ರಿಯಾಂಕಾ ಅಭಿಪ್ರಾಯ.

‘ಇನ್‌ ಮೈ ಸಿಟಿ’ ಎಂಬ ಏಕೈಕ ಹಾಡಿನ ಆಲ್ಬಂ ಮೂಲಕ ಗಾಯಕಿಯಾಗಿ ಸುದ್ದಿ ಮಾಡಿದ ಅವರು ಆಮೇಲೆ ‘ಎಕ್ಸಾಟಿಕ್‌’ ಎಂಬ ಗೀತೆಗೆ ದನಿಯಾದರು. ಈಗ ಮೂರನೇ ಗೀತೆಯ ಸಿದ್ಧತೆಯಲ್ಲಿ ಮುಳುಗಿದ್ದಾರೆ. ಬಾಲಿವುಡ್‌ನಲ್ಲಿ ಯಶ್‌ರಾಜ್‌ ಫಿಲ್ಮ್ಸ್‌ ನಿರ್ಮಾಣದ ‘ಗುಂಡೇ’ ಚಿತ್ರದಲ್ಲಿ ಅವರು ನಟಿಸುತ್ತಿದ್ದಾರೆ.

ತಾವು ಮದುವೆಯಾಗುವ ಹುಡುಗ ತಮ್ಮದೇ ವ್ಯಕ್ತಿತ್ವದವನಾಗಿರಬೇಕು ಎಂದು ಬಯಸುವ ಅವರು, ಆತ ಸಜ್ಜನನೂ, ಸಾಧಕನೂ, ಹಾಸ್ಯಪ್ರಜ್ಞೆ ಇರುವವನೂ, ಜಾಣನೂ ಆಗಿರಬೇಕು ಎಂದು ಅಪೇಕ್ಷಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.