ಹೊಸ ಹುಡುಗರ ಚಿತ್ರವೆಂದರೆ ಅದರಲ್ಲೊಂದು ಹೊಸತನದ ನಿರೀಕ್ಷೆ ಸಹಜ. ಅದಕ್ಕೆ ಪೂರಕವಾಗಿ ವಿಭಿನ್ನ ಪ್ರಯೋಗಕ್ಕೆ ಮುಂದಾಗಿದೆ ಚಿತ್ರತಂಡ. ಎಲ್ಲವೂ ಚಿತ್ರವಿಚಿತ್ರವಾಗಿರಬೇಕು ಎಂಬ ತೀರ್ಮಾನಕ್ಕೆ ಬಂದಂತಿದ್ದರು ಹೊಸ ನಿರ್ದೇಶಕ ಅರುಣ್.
ಶೀರ್ಷಿಕೆ ಸುಲಭವಾಗಿ ಅರ್ಥವಾಗದಂತೆ `4ಡಿ~ಯಲ್ಲಿ ಬರೆಸಿದ್ದರು. ಅವರ ಹೆಸರೂ ಬಾರ್‌ಕೋಡ್ ಶೈಲಿಯಲ್ಲಿತ್ತು. ಚಿತ್ರದ ಹೆಸರು `ಲೂಸುಗಳು~. ಕಲಾವಿದರನ್ನು ಹೊರತುಪಡಿಸಿ ತಾಂತ್ರಿಕವರ್ಗಕ್ಕೆ ಇದು ಮೊದಲನೇ ಚಿತ್ರ.
ಕಿತಾಪತಿ ಮಾಡಿದಾಗ ಪ್ರೀತಿಯಿಂದ ಲೂಸು ಎಂದು ಬೈಯುತ್ತಾರಲ್ಲ. ಹಾಗೆಯೇ ನಮ್ಮ ಕಥಾನಾಯಕ- ನಾಯಕಿಯರು ಇಲ್ಲಿ ಲೂಸುಗಳು ಎಂದು ವಿವರಣೆ ನೀಡಿದರು ಅರುಣ್. ಈಗಿನ ಟ್ರೆಂಡ್‌ಗೆ ತಕ್ಕ ಸಿನಿಮಾ ಮಾಡುವುದು ಅವರ ಉದ್ದೇಶ. ನೈಜತೆಗೆ ಹತ್ತಿರವಾಗಿದ್ದರೂ ಅಸಹಜ ಸಂಗತಿಗಳು ಚಿತ್ರದಲ್ಲಿವೆ.
ಇಲ್ಲಿ ಲೂಸುಗಳಾಗಿ ಕಾಣಿಸಿಕೊಳ್ಳುತ್ತಿರುವುದು ಶ್ರೀಮುರಳಿ- ರೇಖಾ (ಜಿಂಕೆಮರಿ), ಶ್ರೀಕಾಂತ್-ಶ್ರಾವ್ಯ ಹಾಗೂ ಅಕುಲ್ ಬಾಲಾಜಿ- ಐಶ್ವರ್ಯಾ ನಾಗ್ ಜೋಡಿ. ಒಳ್ಳೆಯ ಕೆಲಸದಲ್ಲಿ ಇರುವ ಈ ಸ್ನೇಹಿತರ ಗುಂಪು ಹುಚ್ಚುತನದ ಬೆನ್ನಹಿಂದೆ ಓಡುತ್ತದೆ. ಅವರ ಲೂಸುತನದ ಅನಾವರಣ ಪಯಣದ ಜೊತೆಯಲ್ಲಿ ತೆರೆದುಕೊಳ್ಳುತ್ತದೆ ಎಂದು ಕಥೆಯ ಎಳೆಯನ್ನು ಸ್ವಲ್ಪ ಸಡಿಲಗೊಳಿಸಿದರು. ಎಲ್ಲರಲ್ಲೂ `ಲೂಸುತನ~ ಇದ್ದೇ ಇರುತ್ತದೆ ಎನ್ನುವುದು ನಿರ್ದೇಶಕರ ಅಭಿಪ್ರಾಯ.
ಈ ಚಿತ್ರದ ಮೂಲಕ ವಿ.ಹರಿಕೃಷ್ಣ ಅವರ ಪತ್ನಿ ವಾಣಿ ಹರಿಕೃಷ್ಣ ಸಂಗೀತ ನಿರ್ದೇಶಕಿ ಪಟ್ಟಕ್ಕೇರಿದ್ದಾರೆ. ಚಿತ್ರಕ್ಕೆ ಬಂಡವಾಳ ಹೂಡುತ್ತಿರುವವರು ಸೈಯದ್ ಹುಸೇನ್. ಹೋಟೆಲ್ ಉದ್ಯಮಿಯಾಗಿರುವ ಅವರಿಗೆ ಬಾಲ್ಯದ ಬಯಕೆ ಈಡೇರುತ್ತಿದೆ ಎಂಬ ಖುಷಿ. ನಟಿ ರೇಖಾದಾಸ್ ಮತ್ತು ನಿರ್ದೇಶಕ ಓಂಪ್ರಕಾಶ್ ರಾವ್ ಅವರ ಪುತ್ರಿ ಶ್ರಾವ್ಯ ಚಿತ್ರರಂಗಕ್ಕೆ ಪರಿಚಯವಾಗುತ್ತಿದ್ದಾರೆ.
ಹೋಟೆಲ್‌ನಲ್ಲಿ ಕೆಲಸ ಮಾಡುವ ರಾಘವೇಂದ್ರ ಮತ್ತು ಆಟೋ ಚಾಲಕ ಮಂಜುನಾಥ್ ಎಂಬಿಬ್ಬರು ಚಿತ್ರಕ್ಕೆ ಹಾಡುಗಳನ್ನು ಬರೆಯುತ್ತಿರುವುದು ಮತ್ತೊಂದು ವಿಶೇಷ. ಆರು ಮಂದಿ ಹೊಸ ನೃತ್ಯ ನಿರ್ದೇಶಕರಿಗೆ ಅವಕಾಶ ನೀಡಲಾಗಿದೆ. ತಮ್ಮದು ಅತ್ಯಂತ ಕಷ್ಟಕರ ಪಾತ್ರ ಎನ್ನುವುದು ಶ್ರೀಮುರಳಿ ಅನುಭವಕ್ಕೆ ಬಂದಿದೆ.
ಚಿತ್ರಕ್ಕಾಗಿ ಗುಂಗುರು ಕೂದಲ ವಿಗ್ ಧರಿಸಿದ್ದ ಮುರಳಿಗೆ ಚಿತ್ರದ ಕಥೆ ತುಂಬಾ ಹಿಡಿಸಿತಂತೆ. ಒಲವೇ ಮಂದಾರ ಖ್ಯಾತಿಯ ಶ್ರೀಕಾಂತ್‌ಗೆ ಪಾತ್ರಗಳನ್ನು ಹದಗೊಳಿಸಿರುವ ಬಗೆ ತುಂಬಾ ಇಷ್ಟವಾಗಿದೆ. ನಟಿಸುವಂತೆ ಆಫರ್ ಇತ್ತ ನಿರ್ದೇಶಕ ಅರುಣ್ ಸರಿಯಾದ ಜಾಗಕ್ಕೇ ಬಂದಿದ್ದಾರೆ ಎಂಬುದು ಕಥೆ ಕೇಳಿದ ಕೂಡಲೇ ಅನಿಸಿತು ಎಂದು ನಕ್ಕರು ಅಕುಲ್ ಬಾಲಾಜಿ.
ಉಳಿದ ಐದು ಜನರಿಗಿಂತ ಹೆಚ್ಚು ಲೂಸಿನಂತೆ ಆಡುವುದು ನಾನೇ ಎಂದು ಹೆಮ್ಮೆಯಿಂದ ಹೇಳಿಕೊಂಡರು ನಟಿ ಐಶ್ವರ್ಯಾನಾಗ್. ಚಿತ್ರದ ತುಂಬೆಲ್ಲಾ ಅವರು ಮಾತನಾಡುತ್ತಲೇ ಇರುತ್ತಾರಂತೆ.
ತಮಿಳು ಚಿತ್ರಗಳು ಹಾಗೂ ಕಿರುಚಿತ್ರಗಳಿಗೆ ಕೆಲಸ ಮಾಡಿದ್ದ ಚಿದಾನಂದ್ ಮೊದಲ ಬಾರಿಗೆ ಸ್ವತಂತ್ರವಾಗಿ ಛಾಯಾಗ್ರಹಣದ ಜವಾಬ್ದಾರಿ ಹೊತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.