ADVERTISEMENT

ಪ್ರೀತಿ–ಪ್ರೇಮ ತೊಳಲಾಟಗಳ ‘ಬಿ-3’

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2013, 19:30 IST
Last Updated 5 ಡಿಸೆಂಬರ್ 2013, 19:30 IST

‘ಪ್ರೇಮ ವೈಫಲ್ಯದಿಂದ ಮಾನಸಿಕ ಸ್ಥಿಮಿತ ಕಳೆದುಕೊಳ್ಳುವ ಯುವಕನ ಪಾತ್ರದ ಮೂಲಕ ಸಂದೇಶ ನೀಡುವ ಪ್ರಯತ್ನ ಈ ಚಿತ್ರದ್ದು’ ಎಂದರು ನಟ ಶ್ರೀಕಾಂತ್‌. ಶ್ರೀಕಿ ಮತ್ತು ಹರ್ಷಿಕಾ ಪೂಣಚ್ಚ ಜೋಡಿಯ ‘ಬಿ–3 ಲವ್‌ ಯೂ’ ಈ ವಾರ ತೆರೆಕಾಣುತ್ತಿದೆ.

ಆಧುನಿಕ ಯುಗದ ಯುವಜನಾಂಗದ ತೊಳಲಾಟಗಳು, ಪ್ರೀತಿ ಪ್ರೇಮದ ನೆಪದಲ್ಲಿ ನಡೆಯುವ ದುರಂತಗಳು ನಿರ್ದೇಶಕ ಘನಶ್ಯಾಮ ಅವರ ಚಿತ್ರದ ವಸ್ತುವಾಗಿದೆ. ನಟ ಶ್ರೀಕಾಂತ್‌ ಅವರಿಗೆ ಕಥೆ ಹೆಣೆದಿರುವ ಬಗೆ ಮೆಚ್ಚುಗೆಯಾಗಿದೆ. ಪ್ರೇಮ ವೈಫಲ್ಯದಿಂದ ದುಶ್ಚಟಗಳಿಗೆ ಬಲಿಯಾಗುವುದು, ಆತ್ಮಹತ್ಯೆ ಮಾಡಿಕೊಳ್ಳುವುದು ದೊಡ್ಡ ಸಮಸ್ಯೆಯಾಗಿವೆ.

ಅಂಥಹದೇ ಘಟನೆಯೊಳಗೆ ನಾಯಕ ಸಿಲುಕಿಕೊಂಡು ಮಾನಸಿಕ ಸ್ಥಿಮಿತ ಕಳೆದುಕೊಂಡಿರುತ್ತಾನೆ ಎಂದು ತಮ್ಮ ಪಾತ್ರವನ್ನು ವಿವರಿಸಿದರು ಶ್ರೀಕಿ. ಒಂದೂವರೆ ವರ್ಷದ ಹಿಂದೆಯೇ ಚಿತ್ರೀಕರಣ ಪ್ರಾರಂಭಿಸಿದ್ದರೂ ಅಡಚಣೆಗಳು ನಿರಂತರವಾಗಿ ಎದುರಾಗಿದ್ದರಿಂದ ಚಿತ್ರ ಮುಗಿಯುವುದು ತಡವಾಯಿತು.

ನಾಯಕನ ಮಾನಸಿಕ ಅಸ್ವಸ್ಥತೆಗೆ ಕಾರಣವನ್ನು ಫ್ಲ್ಯಾಶ್‌ಬ್ಯಾಕ್‌ ಕಥನದ ಮೂಲಕ ಹೇಳಲಾಗಿದೆ ಎಂದರು ಘನಶ್ಯಾಮ. ಅನೂಪ್‌ ಸೀಳಿನ್‌ ಅವರ ಸಂಗೀತವನ್ನು ಮೆಚ್ಚಿಕೊಂಡಿರುವ ಘನಶ್ಯಾಮ, ಅವರೇ ಚಿತ್ರದ ನಿಜವಾದ ಹೀರೊ ಎಂದರು.

ಪ್ರೀತಿಯ ಜೊತೆಗೆ ಚಿತ್ರದಲ್ಲಿ ಹಿಂಸೆಯೂ ಇದೆ. ಆದರೆ ಅದನ್ನು ಸಂಗೀತದಲ್ಲಿಯೂ ವೈಭವೀಕರಿಸಲು ಹೋಗಿಲ್ಲ.  ಅದು ದೃಶ್ಯರೂಪದಲ್ಲಿ ವ್ಯಕ್ತವಾಗುವ ಹಿಂಸೆಯ ಪರಿಣಾಮವನ್ನು ಕಡಿಮೆ ಮಾಡುತ್ತದೆ ಎಂದರು ಅನೂಪ್‌ ಸೀಳಿನ್‌. ಹೊರರಾಜ್ಯದಲ್ಲಿದ್ದ ಕಾರಣ ನಾಯಕಿ ಹರ್ಷಿಕಾ ಪೂಣಚ್ಚ ಸುದ್ದಿಗೋಷ್ಠಿಯಲ್ಲಿ ಹಾಜರಿರಲಿಲ್ಲ. ಸುಮಾರು 70 ಚಿತ್ರಮಂದಿರಗಳಲ್ಲಿ ‘ಬಿ–3 ಲವ್‌ ಯೂ’ ತೆರೆಕಾಣುತ್ತಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.