ADVERTISEMENT

ಪ್ರೇಮತ್ರಿವೇಣಿ

ಪಿ.ವಿ.ಪ್ರವೀಣ್‌ ಕುಮಾರ್‌
Published 13 ಜನವರಿ 2011, 13:35 IST
Last Updated 13 ಜನವರಿ 2011, 13:35 IST

ಮೂರು ವರ್ಷ ಸಿನಿಮಾ ರಂಗದಿಂದ ದೂರ ಉಳಿದಿದ್ದ ನಿರ್ದೇಶಕ ಕೋಡ್ಲು ರಾಮಕೃಷ್ಣ ಮತ್ತೆ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. ಹೆಚ್ಚು ಕಾದಂಬರಿ ಆಧರಿತ ಚಿತ್ರಗಳನ್ನು ತೆರೆಗೆ ತರುವ ಕೋಡ್ಲು ಅವರಿಗೆ, ಕನ್ನಡ ಚಿತ್ರರಂಗದ ಆಧುನಿಕ ವ್ಯಾಕರಣದ ಜತೆ ಪ್ರಯೋಗಕ್ಕೆ ಒಡ್ಡಿಕೊಳ್ಳುವ ಹುಮ್ಮಸ್ಸು. ತಾವೇ ಬೆಳ್ಳಿತೆರೆಗೆ ಪರಿಚಯಿಸಿದ ಮುದ್ದು ಮುಖದ ದಿಗಂತ್, ಆಕ್ಷನ್ ಹೀರೊ ಪ್ರಜ್ವಲ್ ದೇವರಾಜ್ ಹಾಗೂ ಮುಂಬೈ ಬೆಡಗಿ ಶೀತಲ್ ಅವರನ್ನು ಹಾಕಿಕೊಂಡು ತ್ರಿಕೋನ ಪ್ರೇಮ ಕಥೆಯೊಂದನ್ನು ಅವರು ‘ಮಿ. ಡ್ಯೂಪ್ಲಿಕೇಟ್’ ಚಿತ್ರದ ಮೂಲಕ ಹೇಳಲು ಹೊರಟಿದ್ದಾರೆ.

ಮಂಗಳೂರಿನ ಸೇಂಟ್ ಅಲೋಷಿಯಸ್ ಕಾಲೇಜಿನಲ್ಲಿ ಹಾಕಿದ್ದ ಸೆಟ್‌ನಲ್ಲಿ ಆಗ ತಾನೆ ಫೈಟಿಂಗ್ ದೃಶ್ಯವೊಂದಕ್ಕೆ ಕಟ್ ಹೇಳಿ ಬಂದ ಕೋಡ್ಲು, ತಮ್ಮ ಪ್ರಯತ್ನದ ಕುರಿತ ವಿವರಗಳನ್ನು ಸುದ್ದಿಗಾರರ ಜತೆ ಉತ್ಸಾಹದಿಂದಲೇ ಹಂಚಿಕೊಂಡರು. ‘ಕಳೆದ ಮೂರು ವರ್ಷಗಳಲ್ಲಿ ಚಿತ್ರರಂಗದ ಮುಖ್ಯವಾಹಿನಿಯಿಂದ ದೂರ ಉಳಿದಿದ್ದೆ. ಈ ಅವಧಿಯಲ್ಲಿ ‘ಬೆಟ್ಟದಪುರದ ದಿಟ್ಟ ಮಕ್ಕಳು’, ‘ಚಿಲಿಪಿಲಿ ಹಕ್ಕಿಗಳು’, ‘ಮಾನಸ’ ಚಿತ್ರ ಮಾಡಿದೆ.

ಪಕ್ಕಾ ಕಮರ್ಷಿಯಲ್ ಚಿತ್ರ ಯಾಕೆ ಪ್ರಯತ್ನಿಸಬಾರದು ಎಂದು ಅನಿಸತೊಡಗಿತ್ತು.ಅದೇ ಸಂದರ್ಭದಲ್ಲಿ ಇಪ್ಪತ್ತು ದಿನದ ಕಾಲ್‌ಶೀಟ್ ನೀಡಲು ದಿಗಂತ್ ಮುಂದಾದರು. ಅಷ್ಟರಲ್ಲಿ ದ್ವಾರ್ಕಿ ರಾಘವ್ ಅವರು ಇಬ್ಬರು ನಾಯಕರಿಗೆ  ಸಮಾನ ಅವಕಾಶ ಇರುವ ಪ್ರೇಮಕಥೆ ನೀಡಿದರು.

ಇನ್ನೊಬ್ಬ ಹೀರೊ ಪಾತ್ರಕ್ಕೆ ಪ್ರಜ್ವಲ್ ಹೆಚ್ಚು ಸೂಕ್ತ ಅನಿಸಿತು. ತಂದೆ-ಮಗ ಇಬ್ಬರೂ ಒಟ್ಟಾಗಿ ನಟಿಸುವ ಅವಕಾಶ ಈ ಕಥೆಯಲ್ಲಿತ್ತು.ಈ ಪಾತ್ರಗಳನ್ನು ಪ್ರಜ್ವಲ್ ಹಾಗೂ ದೇವರಾಜ್ ಒಪ್ಪಿಕೊಂಡಿದ್ದಾರೆ. ಕಾಮಿಡಿ ಪ್ರಧಾನವಾದ ಈ ಚಿತ್ರ ದಿಗಂತ್‌ಗೆ ಹೊಸ ಇಮೇಜ್ ನೀಡಲಿದೆ’ ಎಂದರು. ಚಿತ್ರದ ನಿರ್ಮಾಪಕ ಕಶ್ಯಪ್ ದಾಕೋಜ. ಮನೋಮೂರ್ತಿ ಸಂಗೀತ ನೀಡಿದ್ದಾರೆ. ಜಯಂತ ಕಾಯ್ಕಿಣಿ, ಯೋಗರಾಜ ಭಟ್ ಸಾಹಿತ್ಯ ಬರೆದಿದ್ದಾರೆ. ಡಿಫರೆಂಟ್ ಡ್ಯಾನಿ ಇಬ್ಬರು ಹೀರೊಗಳಿಗೂ ಅನ್ಯಾಯ ಆಗದಂತೆ ಸಾಹಸ ದೃಶ್ಯ ಪೋಣಿಸುವ ಪ್ರಯತ್ನ ಮಾಡಿದ್ದಾರೆ.  
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.