ಹರಿಪ್ರಿಯಾ ಮಹತ್ವಾಕಾಂಕ್ಷೆಯ ‘ರಿಕ್ಕಿ’ ಇಂದು (ಜ.22) ತೆರೆ ಕಾಣುತ್ತಿದೆ. ಈ ಚಿತ್ರದಲ್ಲಿ ಹರಿಪ್ರಿಯಾ ಪ್ರೇಮಿಯಾಗಿ ಹಾಗೂ ಹೋರಾಟಗಾರ್ತಿಯಾಗಿ ಕಾಣಿಸಿಕೊಂಡಿದ್ದಾರಂತೆ. ‘ರಿಕ್ಕಿ’ಯ ಅವರ ಪಯಣದ ನೆನಪುಗಳು ಈ ಸಂದರ್ಶನದಲ್ಲಿವೆ.
ರಿಕ್ಕಿ’ ಚಿತ್ರತಂಡ ಪ್ರಚಾರದ ಸಂದರ್ಭದಲ್ಲಿ ನಿಮ್ಮ ಪಾತ್ರಕ್ಕೆ ಹೆಚ್ಚು ಮಹತ್ವ ನೀಡುತ್ತಿರುವಂತಿದೆ. ಯಾಕಾಗಿ ಈ ಮಹತ್ವ?
ನಾಯಕಿಯರು ಎಂದ ತಕ್ಷಣ ಗ್ಲಾಮರ್ ಎನ್ನುವ ದೃಷ್ಟಿ ಸಿನಿಮಾ ಜಗತ್ತಿನಲ್ಲಿ ಇದೆ. ಗ್ಲಾಮರ್ ಬೇಡ ಎಂದಲ್ಲ. ಆದರೆ ಅದೇ ಅಂತಿಮವಲ್ಲ. ಕಲ್ಪನಾ, ಆರತಿ ಅವರು ನಟಿಸುತ್ತಿದ್ದ ದಿನಗಳಲ್ಲಿ ನಾಯಕನಷ್ಟೇ ಸಮಾನಾಂತರವಾದ ಪಾತ್ರ ಅವರಿಗೂ ಇರುತ್ತಿತ್ತು. ನಂತರ ದಿನಗಳಲ್ಲಿ ನಾಯಕನೇ ಪ್ರಧಾನ ಎನ್ನುವಂತೆ ಆಯಿತು. ಇಂಥ ಚಿತ್ರ ಗಳಲ್ಲಿ ನಾನೂ ಅಭಿನಯಿಸಿದ್ದೇನೆ. ಆದರೆ ‘ರಿಕ್ಕಿ’ಯಲ್ಲಿ ನಾಯಕ ಮತ್ತು ನಾಯಕಿಗೆ ಸಮಾನಾಂತರ ಪಾತ್ರವಿದೆ. ರಾಧಾ ಮತ್ತು ಕೃಷ್ಣನ ನಡುವಿನ ಪ್ರೇಮಕಥೆಯೇ ‘ರಿಕ್ಕಿ’. ಚಿತ್ರದಲ್ಲಿ ನನ್ನದು ಎರಡು ಆಯಾಮಗಳ ಪಾತ್ರ. ರಾಧೆಯಲ್ಲಿ ಒಬ್ಬ ಸಹಜ ಪ್ರೇಮಿ–ಪ್ರೇಯಸಿ ಕಾಣಿಸಿದರೆ, ಸೀತೆಯಲ್ಲಿ ನಕ್ಸಲ್ ಹೋರಾಟಗಾರ್ತಿ ಇದ್ದಾಳೆ.
ನಕ್ಸಲ್ ಪಾತ್ರ ನಿರ್ವಹಿಸಿರುವ ಕಾರಣಕ್ಕೆ ಭಿನ್ನ ಎನ್ನುತ್ತಿದ್ದೀರಾ?
ಸವಾಲು ಎನ್ನಿಸುವ ಪಾತ್ರಗಳು ಸಿಕ್ಕುವುದು ಕಷ್ಟ. ಆ ಪಾತ್ರದಲ್ಲಿ ನನ್ನನ್ನು ನಾನು ಕಲ್ಪಿಸಿಕೊಳ್ಳುವುದಕ್ಕೂ ಸಾಧ್ಯವಿರಲಿಲ್ಲ. ಮುಂದೆ ನಕ್ಸಲ್ ಪಾತ್ರ ಮಾಡುತ್ತೇನೋ ಇಲ್ಲವೋ ಗೊತ್ತಿಲ್ಲ. ‘ರಿಕ್ಕಿ’ ಚಿತ್ರದಲ್ಲಿ ಬಂದೂಕು ಹಿಡಿಯುವುದು, ಕಾಡಿನ ಜರ್ನಿ ಇತ್ಯಾದಿ ಅನುಭವಗಳಾಗಿವೆ. ನನಗೆ ಬಂದೂಕು ಹಿಡಿಯಲು ಬರುತ್ತಿರಲಿಲ್ಲ. ಚಿಕ್ಕಂದಿನಲ್ಲಿ ಅಪ್ಪನ ಪೊಲೀಸ್ ಸ್ನೇಹಿತರ ಬಂದೂಕು ಮುಟ್ಟಿದ್ದೆ ಅಷ್ಟೆ.
ಟ್ರೇಲರ್ ನೋಡಿದರೆ ನಕ್ಸಲ್ ಆಯಾಮದ ನಿಮ್ಮ ಪಾತ್ರದಿಂದಲೇ ಸಿನಿಮಾಕ್ಕೆ ತಿರುವು ಎನಿಸುತ್ತದೆ?
ಈ ಬಗ್ಗೆ ಏನೂ ಹೇಳುವುದಿಲ್ಲ. ಚಿತ್ರ ನೋಡಿ. ಒಬ್ಬ ಅಮಾಯಕ ಹುಡುಗಿ ಪ್ರತಿಭಟನೆಯ ಮಾರ್ಗ ಹಿಡಿಯಲು ಏನು ಕಾರಣ ಎನ್ನುವುದನ್ನು ತೆರೆಯಲ್ಲಿ ನೋಡಬೇಕು. ಇದು ನಕ್ಸಲ್ ಅಥವಾ ಆಫ್ ಬೀಟ್ ಸಿನಿಮಾ ಅಲ್ಲ. ನಕ್ಸಲ್ ಹೇಗೆ ಹುಟ್ಟಿತು, ಅದರ ಪರಿಣಾಮಗಳೇನು ಎನ್ನುವುದನ್ನು ಹೇಳುತ್ತಿಲ್ಲ. ‘ರಿಕ್ಕಿ’ ಪೂರ್ಣ ಲವ್ ಸ್ಟೋರಿಯ ಕಥೆ. ಪ್ರೇಮಕಥೆಗೆ ಹೇಗೆ ನಕ್ಸಲ್ ಸ್ಪರ್ಶವಿರುತ್ತದೆ ಎನ್ನುವುದೇ ಚಿತ್ರದ ವಿಶೇಷ. ರಾಧೆಯನ್ನು ಪಡೆಯಲು ಕೃಷ್ಣ ಏನೆಲ್ಲ ಪ್ರಯತ್ನ ಮಾಡುತ್ತಾನೆ ಎನ್ನುವುದೂ ಮುಖ್ಯವಾಗಿದೆ. ವಿಶೇಷ ಆರ್ಥಿಕ ವಲಯದ (ಎಸ್‌ಇಝೆಡ್) ಒಂದು ನೈಜ ಅಂಶ ಸಹ ‘ರಿಕ್ಕಿ’ಯಲ್ಲಿದೆ.
ಅಂದರೆ, ‘ರಿಕ್ಕಿ’ ವ್ಯವಸ್ಥೆಯ ವಿರುದ್ಧದ ಒಂದು ಹೋರಾಟದ ರೂಪದ ಚಿತ್ರವಾಗಿಯೂ ಇರುವಂತಿದೆ, ಅಲ್ಲವೇ?
ಓಹ್... ‘ರಿಕ್ಕಿ’ ಸಿನಿಮಾದ ಬಗ್ಗೆ ಹಲವರು ಹಲವು ರೀತಿಯಲ್ಲಿ ಯೋಚನೆ ಮಾಡಿದ್ದಾರೆ. ಬೇರೆಯವರ ತಲೆಗೆ ಒಂದು ಕೆಲಸವನ್ನು ಕೊಟ್ಟಿದೆಯಲ್ಲ– ಇದೇ ‘ರಿಕ್ಕಿ’ಯ ವಿಶೇಷ. ಈ ಬಗ್ಗೆ ಹೆಚ್ಚು ಹೇಳುವುದಿಲ್ಲ.
‘ನೀರ್ ದೋಸೆ’ಯಲ್ಲಿ ಗ್ಲಾಮರ್ ಆಗಿ ಕಾಣಿಸಿಕೊಂಡಿದ್ದೀರಿ. ಆ ಚಿತ್ರದ ಭಾಗವಾಗಿದ್ದು ಹೇಗೆ?
‘ನೀರ್ ದೋಸೆ’ ವೈಯಕ್ತಿಕವಾಗಿ ನನಗೆ ಮಹತ್ವದ ಚಿತ್ರ. ರಮ್ಯಾ ಅವರು ಕಾಲ್‌ಗರ್ಲ್ ಪಾತ್ರದಲ್ಲಿ ನಟಿಸುತ್ತಿದ್ದಾರೆ ಎಂದು ಕೇಳಿದಾಗಲೇ ಆ ಚಿತ್ರ ಹೇಗೆ ಬರುತ್ತದೆ ಎನ್ನುವ ಕುತೂಹಲವಿತ್ತು. ಅವರು ಕಾರಣಾಂತರಗಳಿಂದ ದೂರ ಉಳಿದರು. ನನಗೆ ಆ ಪಾತ್ರ ಸಿಕ್ಕಿತು. ನಿರ್ದೇಶಕ ವಿಜಯ್ ಪ್ರಸಾದ್ ಈ ಪಾತ್ರಕ್ಕೆ ಆಯ್ಕೆ ಮಾಡಿದಾಗ ತುಂಬಾ ಉದ್ವೇಗಕ್ಕೆ ಒಳಗಾಗಿದ್ದೆ. ಈ ಮೊದಲೂ ಗ್ಲಾಮರ್ ಪಾತ್ರಗಳನ್ನು ಮಾಡಿದ್ದೇನೆ. ಆದರೆ ಇದು ಸ್ಪೆಷಲ್. ಕಾಲ್‌ಗರ್ಲ್‌ಗಳ ಬದುಕು ಹೇಗೆ ಇರುತ್ತದೆ ಎನ್ನುವ ಕಥೆ ಇದಲ್ಲ. ಎಲ್ಲರೂ ಒಂದು ವೃತ್ತಿಯಲ್ಲಿ ಇರುವಂತೆ ಅವಳೂ ಆ ವೃತ್ತಿಯಲ್ಲಿ ಇರುತ್ತಾಳೆ. ಅವಳಿಗೆ ನಾಲ್ಕು ಜನರು ಸ್ನೇಹಿತರು. ಎಲ್ಲರೂ ಬೇರೆ ಬೇರೆ ಕ್ಷೇತ್ರದವರು. ಇಲ್ಲಿ ಗ್ಲಾಮರ್ ಆಗಿ ಕಂಡರೂ ತೀವ್ರವಾದ ಭಾವುಕತೆ ಇದೆ. ಪ್ರತಿಯೊಬ್ಬರ ಜೀವನದಲ್ಲೂ ನಡೆದಿದೆ ಎನ್ನುವಂಥ ಸನ್ನಿವೇಶಗಳು ಇವೆ.
ಗ್ಲಾಮರ್ ಆಗಿದ್ದರೂ ‘ನೀರ್‌ದೋಸೆ’ಯಲ್ಲಿ ಭಾವುಕತೆ ಇದೆ ಎನ್ನುತ್ತೀರಿ?
ಹೌದು. ನನ್ನ ಪಾತ್ರವಷ್ಟೇ ಅಲ್ಲ, ಇಡೀ ಸಿನಿಮಾ ಭಾವುಕವಾಗಿ ಸಾಗುತ್ತ ಮನರಂಜನೆಗೆ ಕನೆಕ್ಟ್ ಆಗುತ್ತದೆ. ಸಸ್ಪೆನ್ಸ್ ಸಹ ಚಿತ್ರದಲ್ಲಿದೆ.
‘ರಿಕ್ಕಿ’ – ‘ನೀರ್ ದೋಸೆ’ ಚಿತ್ರಗಳ ಪಾತ್ರಗಳು ಕಲಾವಿದೆಯಾಗಿ ನಿಮ್ಮ ಜಿಗಿತವೇ?
ನಾನು ಯಾವುದೇ ತಯಾರಿ ಇಲ್ಲದೆ ಸಿನಿಮಾ ರಂಗಕ್ಕೆ ಬಂದವಳು. ಪ್ರೀತಿ ಪ್ರೇಮದ ಚಿತ್ರಗಳು ಸಿನಿಮಾದ ಆರಂಭಿಕ ವ್ಯಾಕರಣ ಕಲಿಸಿಕೊಟ್ಟಿವೆ. ನಿಜವಾದ ಚಾಲೆಂಜ್ ಎಂದರೆ ಭಿನ್ನ ಪಾತ್ರಗಳನ್ನು ಮಾಡುವುದು. ಈ ರೀತಿ ಪಾತ್ರಗಳನ್ನು ಒಪ್ಪಲು ನನಗೂ ಧೈರ್ಯಬೇಕು. ಹತ್ತು ಸಿನಿಮಾ ಆದ ಮೇಲೆ ನನ್ನ ಪಾತ್ರಗಳಲ್ಲಿ ಏಕತಾನತೆ ಇದೆ ಎನಿಸಿದರೆ ನನಗೂ ಅದು ಸರಿ ಎನಿಸುವುದಿಲ್ಲ, ನಿರ್ದೇಶಕರ ಕಣ್ಣಿಗೂ ಬ್ರಾಂಡ್ ಆಗುವೆ. ತೆರೆಗೆ ಬರುವ ಹಂತದಲ್ಲಿರುವ ‘ರಣತಂತ್ರ’ದಲ್ಲೂ ಬೇರೆಯದ್ದೇ ಬಗೆಯ ಪಾತ್ರ ಇದೆ. ಲವ್ ಮತ್ತು ಥ್ರಿಲ್ಲರ್ ಕಥೆ ಅದು. ನನ್ನ ಪಾತ್ರಗಳ ಬಗ್ಗೆ ಒಂದಿಷ್ಟು ಚರ್ಚೆ ಆಗುವಂತಿದ್ದರೆ ಒಳ್ಳೆಯದೇ.
‘ಮಂಜಿನ ಹನಿ’ ಸಿನಿಮಾ ಕಥೆ ಎಲ್ಲಿಗೆ ಬಂದಿತು?
ಇದನ್ನು ರವಿಚಂದ್ರನ್ ಸರ್ ಅವರನ್ನೇ ಕೇಳಬೇಕು. ಐದು ವರ್ಷಗಳ ಮೇಲಾಯಿತು. ಸದ್ಯದ ಆ ಚಿತ್ರದ ಸ್ಥಿತಿ ಹೇಗಿದೆ ಎನ್ನುವುದು ಗೊತ್ತಿಲ್ಲ.
ಕನ್ನಡದಲ್ಲಿ ಪ್ರವರ್ಧಮಾನಕ್ಕೆ ಬರುತ್ತಿರುವ ಪ್ರಮುಖ ನಟಿಯಾಗುತ್ತಿದ್ದೀರಿ. ತಮಿಳು–ಮಲೆಯಾಳಂ ಚಿತ್ರಗಳಲ್ಲೂ ನಟಿಸುತ್ತಿದ್ದೀರಿ. ಈ ಪಯಣ ಹೇಗಿದೆ?
ಪ್ರಸ್ತುತ ನನ್ನ ಪ್ರಬುದ್ಧತೆಯ ಮಟ್ಟ ಕೊಂಚ ಹೆಚ್ಚಿದೆ ಎಂದು ಆತ್ಮವಿಶ್ವಾಸದಿಂದ ಹೇಳುವೆ. ಬೇರೆ ಬೇರೆ ಚಿತ್ರತಂಡಗಳ ಜೊತೆ ಕೆಲಸ ಮಾಡಿರುವೆ. ಇದರಿಂದಾಗಿ ನನ್ನ ಆಲೋಚನೆಯ ಮಟ್ಟ ವಿಸ್ತರಿಸಿದೆ. ಬದುಕಿನ ಬಗ್ಗೆ ಪ್ರಾಕ್ಟಿಕಲ್ ಆಗಿದ್ದೇನೆ. ಸಕಾರಾತ್ಮಕವಾಗಿ ಯೋಚಿಸಿದರೂ ಜತೆಯಲ್ಲಿ ನಕಾರಾತ್ಮಕ ಸ್ಥಿತಿಯ ಬಗ್ಗೆಯೂ ಚಿಂತಿಸುವೆ. ಇದರಿಂದ ಬದುಕನ್ನು ಎದುರಿಸುವ ಧೈರ್ಯ ಬರುತ್ತದೆ. ನಾಯಕಿ ಎನಿಸಿಕೊಳ್ಳುವುದಕ್ಕಿಂತ ಉತ್ತಮ ನಟಿಯಾಗಬೇಕು ಎನ್ನುವ ಮನಸ್ಥಿತಿ ನನ್ನದು.
ಇದೇ ಸಂದರ್ಭದಲ್ಲಿ ನೀವು ನಿರ್ದೇಶಕರ ಸಂಪರ್ಕಕ್ಕೆ ಸಿಗುವುದಿಲ್ಲ ಎನ್ನುವ ಮಾತು ಕೇಳುತ್ತಿದೆ?
ಈ ಬಗ್ಗೆ ತಪ್ಪು ಕಲ್ಪನೆ ಇದೆ. ‘ನೀರ್ ದೋಸೆ’ ಬಿಟ್ಟರೆ ಬೇರೆ ಯಾವುದೇ ಚಿತ್ರವನ್ನು ನಾನು ಒಪ್ಪಿಕೊಂಡಿಲ್ಲ. ನನ್ನನ್ನು ಯಾವಾಗಲಾದರೂ ಯಾವ ನಿರ್ದೇಶಕರು ಬೇಕಾದರೂ ಸಂಪರ್ಕಿಸಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.