ADVERTISEMENT

ಬಾಗಿಲು ತೆರೆದ `ಭಾರತ್ ಸ್ಟೋರ್ಸ್‌'

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2013, 19:59 IST
Last Updated 4 ಏಪ್ರಿಲ್ 2013, 19:59 IST

`ದೊಡ್ಡ ಮೀನು ಸಣ್ಣಮೀನನ್ನು ನುಂಗಿದವು. ಈಗ ದೊಡ್ಡ ಮೀನನ್ನು ನುಂಗಲು ತಿಮಿಂಗಲಗಳು ಬರುತ್ತಿವೆ...'ಚಿಲ್ಲರೆ ವಹಿವಾಟಿನಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆಗೆ ಕೇಂದ್ರ ಸರ್ಕಾರ ಅನುಮತಿ ನೀಡಿರುವ ಕುರಿತು ನಿರ್ದೇಶಕ ಪಿ. ಶೇಷಾದ್ರಿ ಅವರ ಅಭಿಪ್ರಾಯವಿದು. ಈ ವಸ್ತುವನ್ನಾಧರಿಸಿ ಅವರು ನಿರ್ದೇಶಿಸಿದ ರಾಷ್ಟ್ರ ಪ್ರಶಸ್ತಿ ವಿಜೇತ ಚಿತ್ರ `ಭಾರತ್ ಸ್ಟೋರ್ಸ್‌' ಈ ವಾರ ತೆರೆಕಾಣುತ್ತಿದೆ. ಎಫ್‌ಡಿಐ ಪರ ಅಥವಾ ವಿರುದ್ಧದ ವಾದವನ್ನು ಈ ಚಿತ್ರದಲ್ಲಿ ಮಂಡಿಸುತ್ತಿಲ್ಲ. ಬದಲಾಗಿ ಒಬ್ಬ ಸಾಮಾನ್ಯ ಚಿಲ್ಲರೆ ವ್ಯಾಪಾರಿಯ ಬದುಕಿನ ಚಿತ್ರಣದ ಮೂಲಕ ಒಂದು ಆಯಾಮದಲ್ಲಿ ಪ್ರತಿಕ್ರಿಯಿಸುವ ಪ್ರಯತ್ನ ಇದು ಎಂದರು ಶೇಷಾದ್ರಿ.

ಕಳೆದೆರಡು ದಶಕಗಳಲ್ಲಿ ವ್ಯಾಪಾರ ವಹಿವಾಟು ಜಗತ್ತಿನ ಸ್ಥಿತ್ಯಂತರವನ್ನು ಕಂಡಿರುವ ಶೇಷಾದ್ರಿ ಸಿನಿಮಾದಲ್ಲಿ ಅದನ್ನು ದಾಖಲಿಸಿದ್ದಾರೆ. ಸತತ ಏಳನೇ ಬಾರಿಗೆ ರಾಷ್ಟ್ರಪ್ರಶಸ್ತಿ ಮುಡಿಗೇರಿಸಿಕೊಂಡ ಸಂಭ್ರಮ ಅವರದು. ವಿಶೇಷವೆಂದರೆ, ಕಲಾತ್ಮಕ ಚಿತ್ರಗಳನ್ನು ಜನ ನೋಡುತ್ತಿಲ್ಲ ಎಂಬ ಕೊರಗಿನ ನಡುವೆಯೂ ಅವರ ಚಿತ್ರಗಳಿಗೆ ಉತ್ತಮ ಪ್ರತಿಕ್ರಿಯೆ ಬಂದಿರುವುದು. ಕಳೆದ ವರ್ಷ `ಬೆಟ್ಟದ ಜೀವ' ನಿರೀಕ್ಷೆಗೂ ಮೀರಿ ಲಾಭ ತಂದುಕೊಟ್ಟಿತ್ತು. ಅದೇ ಭರವಸೆ ಮೇಲೆ `ಭಾರತ್ ಸ್ಟೋರ್ಸ್‌' 9 ಚಿತ್ರಮಂದಿರಗಳಲ್ಲಿ ತೆರೆಕಾಣುತ್ತಿದೆ.

ಸಮಕಾಲೀನ ಸನ್ನಿವೇಶಕ್ಕೆ ಕಲಾವಿದನೊಬ್ಬನ ಸ್ಪಂದನೆ ಈ ಸಿನಿಮಾ ಎಂದರು ನಟ ದತ್ತಣ್ಣ. ಕಲಾತ್ಮಕ ಚಿತ್ರಗಳನ್ನು ಎಲ್ಲರಿಗೂ ತಲುಪಿಸಬೇಕು ಎಂಬ ಬೇಡಿಕೆ ಸರಿಯಲ್ಲ ಎನ್ನುವುದು ಅವರ ಅಭಿಪ್ರಾಯ. ಕುವೆಂಪು ಅವರ `ರಾಮಾಯಣ ದರ್ಶನಂ' ಕೃತಿಯನ್ನು ಹೇಗೆ ಎಲ್ಲೆಡೆ ವ್ಯಾಪಾರ ಮಾಡಲು ಸಾಧ್ಯವಿಲ್ಲವೋ ಹಾಗೆಯೇ ಕಲಾತ್ಮಕ ಚಿತ್ರಗಳನ್ನು ಎಲ್ಲಾ ಕಡೆ ತಲುಪಿಸಲು ಸಾಧ್ಯವಿಲ್ಲ. ಕಲಾತ್ಮಕ ಮತ್ತು ಕಮರ್ಷಿಯಲ್ ಎರಡೂ ವಿಭಿನ್ನ ವರ್ಗದ ಚಿತ್ರಗಳು. ಅವುಗಳಿಗೆ ಪ್ರತ್ಯೇಕ ಪ್ರೇಕ್ಷಕ ವರ್ಗ ಮತ್ತು ಅವರನ್ನು ತಲುಪುವ ವಿಧಾನಗಳಿವೆ.

ಅದು ಹಾಗೆಯೇ ತಲುಪುವುದು ಸೂಕ್ತ ಎಂದರು. ಉತ್ತಮ ನಟ ಪ್ರಶಸ್ತಿ ಬರಲಿಲ್ಲ ಎಂಬ ಬೇಸರವಿದೆಯೇ ಎಂಬ ಪ್ರಶ್ನೆಗೆ ದತ್ತಣ್ಣ ನೀಡಿದ ಉತ್ತರ `ಪ್ರಶಸ್ತಿ ಬರುವವರೆಗೂ ನಟಿಸುತ್ತೇನೆ'.

`ಬೆಟ್ಟದ ಜೀವ' ಚಿತ್ರಕ್ಕೆ ಹಣ ಹೂಡುವಾಗ ಭಯ ಕಾಡುತ್ತಿತ್ತು. ಸತತ ಐದು ಬಾರಿ ಪ್ರಶಸ್ತಿ ಪಡೆದಿದ್ದ ನಿರ್ದೇಶಕ ಪಿ. ಶೇಷಾದ್ರಿ ಅವರ ಪ್ರಶಸ್ತಿ ಸರಪಳಿ ಈ ಚಿತ್ರದಿಂದ ತುಂಡಾದರೆ ಎಂಬ ಭಯವದು. ಆದರೆ ಅದನ್ನೂ ಮೀರಿ ಮತ್ತೂ ಒಂದು ಚಿತ್ರ ಪ್ರಶಸ್ತಿ ಪಡೆದಿದೆ' ಎಂದು `ಭಾರತ್ ಸ್ಟೋರ್ಸ್‌' ನಿರ್ಮಾಪಕ ಬಸಂತಕುಮಾರ್ ಪಾಟೀಲ್ ಸಂತಸ ವ್ಯಕ್ತಪಡಿಸಿದರು.

ಛಾಯಾಗ್ರಾಹಕ ಮಹೇಂದ್ರ ಸಿಂಹ ಮತ್ತು ಸಂಕಲನಕಾರ ಬಿ.ಎಸ್. ಕೆಂಪರಾಜು `ಭಾರತ್ ಸ್ಟೋರ್ಸ್‌' ನಿರ್ಮಾಣ ಸಂದರ್ಭದಲ್ಲಿನ ತಮ್ಮ ಅನುಭವ ಹಂಚಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.