ADVERTISEMENT

ಬಾಲಿವುಡ್‌ನಿಂದ ಹಾಲಿವುಡ್‌ಗೆ `ಮಾನವ್' ಪ್ರಯಾಣ

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2012, 19:50 IST
Last Updated 12 ಡಿಸೆಂಬರ್ 2012, 19:50 IST

ಬಾಲಿವುಡ್‌ನ ಸಲ್ಮಾನ್ ಖಾನ್, ಹೃತಿಕ್ ರೋಷನ್, ಐಶ್ವರ್ಯ ರೈ ಬಚ್ಚನ್‌ಅವರಂತ ಮೊದಲ ದರ್ಜೆ ನಟ ನಟಿಯರಿಗೆ ವಸ್ತ್ರವಿನ್ಯಾಸ ಮಾಡಿರುವ ವಿನ್ಯಾಸಕಾರ ಮಾನವ್ ಗೋಸ್ವಾಮಿ ಅವರು ಇದೀಗ ಹಾಲಿವುಡ್‌ನತ್ತ ಹಾರಲು ಸಿದ್ಧತೆ ನಡೆಸಿದ್ದಾರೆ.

`ಒಂದೆಡೆ ನೆಲೆ ನಿಲ್ಲುವ ಅವಶ್ಯಕತೆಯಾದರೂ ಏನಿದೆ? ನಕ್ಷತ್ರಗಳ ಕನಸು ಕಂಡರೆ, ಕನಿಷ್ಠ ಚಂದ್ರನ ಮೇಲಾದರೂ ನೆಲ ಕಾಣಬಹುದು. ಆದರೆ ಆ ಚಂದ್ರನೇ ಭೂಮಿಗೆ ಬರಬೇಕೆಂಬ ಮಹತ್ವಾಕಾಂಕ್ಷೆ ನನ್ನದಲ್ಲ' ಎನ್ನುವುದು ಮಾನವ್ ಮಹತ್ವಾಕಾಂಕ್ಷೆ.

`ಎಕ್ಸ್‌ಕ್ಲೂಸಿವ್ ಬ್ರಾಂಡ್' ಎಂಬ ಹೆಸರಿನಲ್ಲಿ ಹಾಲಿವುಡ್‌ನತ್ತ ಪ್ರಯಾಣ ಬೆಳೆಸಿದ್ದಾರೆ. ಮಾನವ್ ತಮ್ಮಂದಿಗಿರುವ ಇತರ ವಿನ್ಯಾಸಕಾರರಂತೆ ತಮ್ಮ ಉತ್ಪನ್ನಗಳು ದೇಹ ಪ್ರದರ್ಶನವನ್ನು ಹೆಚ್ಚು ಬಿಂಬಿಸುವುದಿಲ್ಲವೆನ್ನುವುದನ್ನೇ ಬಿಚ್ಚಿ ಹೇಳುತ್ತಾರೆ.

`ಬೃಹತ್ ಎನ್ನಬಹುದಾದ ಹೊಸತೊಂದು ಸುದ್ದಿ ಸದ್ಯದಲ್ಲೇ ಹೊರಬೀಳಲಿದೆ. ಹಾಗೆಂದು ನಾನು ನನ್ನ ಉತ್ಪನ್ನಗಳ ಕುರಿತು ಹೆಚ್ಚು ಮಾತನಾಡುವವನಲ್ಲ' ಎಂದಿರುವ ಮಾನವ್ ಈ ಗುಣವನ್ನು ಅವರು ತಮ್ಮ ಗೆಳೆಯ ಝಾಯೆದ್ ಖಾನ್ ಅವರಿಂದ ಕಲಿತಿದ್ದಾಗಿ ಹೇಳಿಕೊಂಡಿದ್ದಾರೆ.

ಶತಕೋಟಿ ಡಾಲರ್‌ಗಳ ಒಡೆಯ ರಷ್ಯಾದ ವ್ಲಾಡಿಮಿರ್ ಡೊರೊನಿನ್ ಅವರ 50ನೇ ಹುಟ್ಟುಹಬ್ಬದ ಆಚರಣೆಗೆಂದು ಭಾರತಕ್ಕೆ ಬಂದಿದ್ದ ಬ್ರಿಟನ್ನಿನ ಪ್ರಖ್ಯಾತ ರೂಪದರ್ಶಿ ನಿಯೋಮಿ ಕ್ಯಾಂಪಬೆಲ್ ಅವರಿಗೆ ವಸ್ತ್ರ ವಿನ್ಯಾಸವನ್ನು ಮಾನವ್ ಮಾಡಿದ್ದರು. ಕೇವಲ ಸಿನಿಮಾ ತಾರೆಯರು ಹಾಗೂ ರೂಪದರ್ಶಿಯರು ಮಾತ್ರವಲ್ಲದೇ ರಾಜಕಾರಣಿಗಳಾದ ಪ್ರಿಯಾಂಕಾ ಗಾಂಧಿ, ಸ್ಮಿತಾ ಠಾಕ್ರೆ ಹಾಗೂ ಅಮರ್ ಸಿಂಗ್ ಅವರಿಗೂ ವಸ್ತ್ರ ವಿನ್ಯಾಸ ಮಾಡಿದ್ದಾರೆ.

ವರ್ಷಕ್ಕೆ ಒಂದೇ ಪ್ರದರ್ಶನದಲ್ಲಿ ಪಾಲ್ಗೊಳ್ಳುವ ಮಾನವ್ ಅತಿಯಾದ ಪ್ರದರ್ಶನ ಒಳ್ಳೆಯದಲ್ಲ ಎಂಬ ಅಭಿಪ್ರಾಯ ಹೊಂದಿರುವವರು. `ನನ್ನ ಉತ್ಪನ್ನಗಳು ಆಭರಣಗಳಿದ್ದಂತೆ. ಅವುಗಳನ್ನು ನಾನು ಮಗುವಿನಂತೆ ಆರೈಕೆ ಮಾಡುತ್ತೇನೆ. ನನ್ನ ವಿನ್ಯಾಸಗಳಲ್ಲಿ ಸದಾ ವಿಭಿನ್ನ ಹಾಗೂ ಹೊಸತನವನ್ನು ತುಂಬಲು ಪ್ರಯತ್ನಿಸುತ್ತಲೇ ಇರುತ್ತೇನೆ' ಎಂದು ಮಾನವ್ ತಮ್ಮ ಭುಜವನ್ನು ತಾವೇ ತಟ್ಟಿಕೊಂಡಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.