ADVERTISEMENT

ಭಟ್ಟರ ನಾಸ್ಟಾಲ್ಜಿಯಾ

ವಿಶಾಖ ಎನ್.
Published 17 ಮಾರ್ಚ್ 2011, 19:30 IST
Last Updated 17 ಮಾರ್ಚ್ 2011, 19:30 IST
ಭಟ್ಟರ ನಾಸ್ಟಾಲ್ಜಿಯಾ
ಭಟ್ಟರ ನಾಸ್ಟಾಲ್ಜಿಯಾ   

ವಾಲ್‌ಪೋಸ್ಟರ್‌ನಲ್ಲಿ ರಮೇಶ್ ಭಟ್ ಮುಖ ದೊಡ್ಡದಾಗಿ ಕಂಡು ಅದೆಷ್ಟು ಕಾಲವಾಗಿತ್ತೋ. ಒಂದು ಕಾಲದಲ್ಲಿ ನಾಯಕನಟನಾಗಿ ಗಮನಸೆಳೆಯುವಂತೆ ಅವರನ್ನು ಬೆಳೆಸಿದ್ದ ಶಂಕರ್‌ನಾಗ್ ಈಗ ಇಲ್ಲ. ಆದರೆ, ಮಧುರ ನೆನಪುಗಳಿನ್ನೂ ಜೀವಂತ. ‘ಉಯ್ಯಾಲೆ’ ಚಿತ್ರದಲ್ಲಿ ಫುಲ್‌ಲೆಂಗ್ತ್ ಅಪ್ಪನ ಪಾತ್ರದಲ್ಲಿ ನಟಿಸಿರುವ ರಮೇಶ್ ಭಟ್ ಚಹರೆ ಪೋಸ್ಟರ್‌ಗಳಲ್ಲಿ ಈಗ ದೊಡ್ಡದಾಗಿದೆ. ಅಪರೂಪಕ್ಕೆಂಬಂತೆ ಅವರು ಮಾತಿನ ಮಂಟಪ ಕಟ್ಟಿದರು; ತುಂಬಾ ನಾಸ್ಟಾಲ್ಜಿಕ್ ಕೂಡ ಆಗಿದ್ದರು. ಹಳೆಯ ನೆನಪುಗಳ ನೇವರಿಕೆ, ಹೊಸ ಕಷ್ಟಗಳ ಕುರಿತ ಬೇಸರ ಎಲ್ಲವನ್ನೂ ಅವರ ಮಾತುಗಳಲ್ಲೇ ಕೇಳೋಣ...

ಆಗ ಸಿನಿಮಾ ಅಂದರೆ ಎಲ್ಲರಿಗೂ ಪ್ರೀತಿ. ಯಾರೋ ಪುಣ್ಯಾತ್ಮರು ಬಂದು ಮೊದಲೇ ಡಿಸ್ಟ್ರಿಬ್ಯೂಷನ್ ತೆಗೆದುಕೊಳ್ಳೋರು. ಹಣ ಕೊಟ್ಟು ಶೂಟಿಂಗ್‌ಗೂ ಅನುಕೂಲ ಮಾಡಿಕೊಡೋರು. ನಾಯಕರಿಗಂತೂ ತಮ್ಮದೇ ಸಿನಿಮಾ ಎಂಬಷ್ಟು ಪ್ರೀತಿ. ಪ್ರಚಾರಕ್ಕೆ ತಪ್ಪಿಸಿಕೊಳ್ಳುತ್ತಿರಲಿಲ್ಲ. ಸಿನಿಮಾ ಸೋಲು ತಮ್ಮದೂ ಸೋಲು ಎಂಬ ಭಾವನೆ ಇತ್ತು.

ಈಗ ಎಲ್ಲಾ ಬದಲಾಗಿದೆ. ಹಣ ಸಿಕ್ಕರಾಯಿತು; ನಿರ್ದೇಶಕ ಹೇಳಿದ್ದನ್ನೇ ಮಾಡುತ್ತಾರೆ. ಸಿನಿಮಾ ಚೆನ್ನಾಗಿ ಬರಲಿ ಎಂದು ತಲೆಕೆಡಿಸಿಕೊಳ್ಳುವುದಿಲ್ಲ. ತಮ್ಮ ಬಟ್ಟೆ-ಬರೆ ಸರಿಯಾಗಿರದಿದ್ದರೆ ಕೊಸರಾಡುತ್ತಾರೆಯೇ ವಿನಾ ಚಿತ್ರಕಥೆ ಸರಿಯಿಲ್ಲ ಎಂದೇನೂ ಹೇಳುವುದಿಲ್ಲ. ಪ್ಯಾಕಪ್ ಆದರಾಯಿತು.

ಇನ್ನು ಸಂಭಾವನೆಯ ವಿಷಯ. ಈಗ ಟಿವಿ ಚಾನೆಲ್‌ಗಳು ಒಳ್ಳೆ ಹಣ ಕೊಟ್ಟು ರೈಟ್ಸ್ ಖರೀದಿಸುತ್ತವೆ. ಯಾವ ನಾಯಕನ ಚಿತ್ರಕ್ಕೆ ಎಷ್ಟು ಹಣ ಕೊಡುತ್ತವೆಯೋ, ಅಷ್ಟೂ ಹಣ ಆ ನಾಯಕನ ಸಂಭಾವನೆಯಾಗಿರುತ್ತದೆ. ’ನೀವೇನು ಕೈಯಿಂದ ಕೊಡ್ತೀರಾ, ರೈಟ್ಸ್ ಬರುತ್ತಲ್ಲ’ ಎಂದು ನೇರವಾಗಿ ಉಚಾಯಿಸಿಯೇ ಕೇಳುತ್ತಾರೆ. ಹಿಂದೆ ಒಂದು ಸಿನಿಮಾ ಸೋತರೆ, ಇನ್ನೊಂದು ಚಿತ್ರವನ್ನು ಹಣ ಪಡೆಯದೆ ಮಾಡಿಕೊಡಲು ನಾಯಕರು ಸಿದ್ಧರಾಗಿರುತ್ತಿದ್ದರು.

ಸಿನಿಮಾದವರು ಹಾಡು ಕೊಟ್ಟರೆ ಆಗ ಆಕಾಶವಾಣಿಯವರು ಹಣ ಕೊಡುತ್ತಿದ್ದರು. ಈಗಲೂ ಆ ಕಾಲದ ಹಾಡುಗಳಿಗೆ ಹಣ ಪಡೆಯುವವರು ಇದ್ದಾರೆ. ಆದರೀಗ ಎಫ್‌ಎಂ ಚಾನೆಲ್‌ಗಳು ಸಿನಿಮಾದವರಿಂದಲೇ ಪೀಕುತ್ತವೆ. ಪ್ಯಾಕೇಜ್ ಸಿಸ್ಟಂ ಮಾಡಿಬಿಟ್ಟಿವೆ. ಹದಿನೈದು ನಿಮಿಷಕ್ಕೊಮ್ಮೆ ನಿಮ್ಮ ಸಿನಿಮಾ ಹಾಡು ಬರಬೇಕೆಂದರೆ ಇಷ್ಟು, ದಿನಕ್ಕೆ ಐದು ಸಲ ಬರಬೇಕೆಂದರೆ ಇಷ್ಟು, ಹಾಡುಗಳ ಜೊತೆಗೆ ಸಿನಿಮಾ ಪ್ರಮೋಷನ್ನೂ ಆಗಬೇಕಾದರೆ ಇಷ್ಟು ಎಂದು ನಿಗದಿಪಡಿಸಿವೆ. ಈಗ ಎಫ್‌ಎಂನಲ್ಲಿ ಪ್ರಚಾರ ಪಡೆಯಲೂ ಲಕ್ಷಗಟ್ಟಲೆ ಹಣ ಕೊಡುವ ದುರ್ಗತಿ ಬಂದಿದೆ.

ನಾಯಕರಿಗೆ ಮಾರುಕಟ್ಟೆಯಷ್ಟೇ ಮುಖ್ಯ. ನಿರ್ದೇಶಕರಿಗೆ ಅವರನ್ನು ಮೆಚ್ಚಿಸುವ ತುರ್ತು.  ಇಂಥ ಪರಿಸ್ಥಿತಿಯಲ್ಲಿ ಪರಭಾಷಾ ಚಿತ್ರಗಳ ದಾಂಗುಡಿ. ಅವುಗಳ ನಡುವೆ ಸ್ಪರ್ಧಿಸಿ ನಮ್ಮ ಚಿತ್ರಗಳೂ ಓಡಬೇಕು. ನಾವು ಬಡವರು.
ಪರಭಾಷೆಯವರು ಶ್ರೀಮಂತರು. ಆಗೊಬ್ಬ ಶಂಕರ್‌ನಾಗ್ ಇದ್ದ. ಈಗ ಮಾಡಬಹುದಾದ ಸಿನಿಮಾಗಳನ್ನು ಕಡಿಮೆ ಬಜೆಟ್‌ನಲ್ಲಿ ಆಗಲೇ ಅವನು ಮಾಡಿದ್ದ. ಅಷ್ಟೊಂದು ವಿಶನ್ ಅವನಲ್ಲಿ ಇತ್ತು. ಈಗ ಅಂಥ ವಿಶನ್ ಇರುವವರಿಗಾಗಿ ಹುಡುಕಾಡಬೇಕಾಗಿದೆ. ಅದೇ ದುರಂತ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.