ADVERTISEMENT

ಭಯದ ಕಾಡಲ್ಲಿ ಅಗಮ್ಯ

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2012, 19:30 IST
Last Updated 22 ಮಾರ್ಚ್ 2012, 19:30 IST

ಭಾರತೀಯ ಚಿತ್ರರಂಗದಲ್ಲಿಯೇ ಇದೇ ಮೊದಲ ಬಾರಿಗೆ 60 ಜನ ನಿರ್ಮಾಪಕರು, 60 ಲಕ್ಷ ಬಜೆಟ್‌ನಲ್ಲಿ ಚಿತ್ರ ನಿರ್ಮಿಸಿದ್ದಾರೆ! ಚಿತ್ರದ ಹೆಸರು `ಅಗಮ್ಯ~.

ಸಸ್ಪೆನ್ಸ್- ಥ್ರಿಲ್ಲರ್ ಕತೆಯುಳ್ಳ ಚಿತ್ರದ ಮಾಹಿತಿಯನ್ನು ನೀಡಿದ ನಿರ್ದೇಶಕ ಉಮೇಶ್ ಗೌಡ ಮತ್ತವರ ಗೆಳೆಯರು ಚಿತ್ರಕ್ಕೆ ಹಣ ಹೂಡಿದ್ದಾರೆ. ಜೋಸೈಮನ್ ಅವರೊಂದಿಗೆ ಕೆಲಸ ಮಾಡಿದ ಅನುಭವವುಳ್ಳ ನಿರ್ದೇಶಕರು ಈಗಾಗಲೇ ಚಿತ್ರದ ಶೇ 70ರಷ್ಟು ಚಿತ್ರೀಕರಣ ಮುಗಿಸಿದ್ದಾರೆ. ಬೆಂಗಳೂರು ಮತ್ತು ಸಾಗರದಲ್ಲಿ ಬಹುತೇಕ ಚಿತ್ರದ ಚಿತ್ರೀಕರಣ ನಡೆದಿದ್ದು ಚಿತ್ರದಲ್ಲಿ ನಟಿಸಿರುವವರಲ್ಲಿ ಹೊಸಬರೇ ಹೆಚ್ಚು.

`ಆರು ಜನ ವಿದ್ಯಾರ್ಥಿಗಳು ಕಾಡ ನಡುವೆ ಇರುವ ಮನೆಗೆ ಹೋಗುತ್ತಾರೆ. ಅಲ್ಲಿ ಅವರಿಗೆ ಭಯದ ಅನುಭವವಾಗುತ್ತದೆ. ಒಬ್ಬೊಬ್ಬರಾಗಿ ಕಾಣೆಯಾಗುತ್ತಾ ಹೋಗಿ ಕೊನೆಯಲ್ಲಿ ಒಬ್ಬ ವಿದ್ಯಾರ್ಥಿ ಮಾತ್ರ ಉಳಿಯುತ್ತಾನೆ. ಅದಕ್ಕೆ ಕಾರಣವೇನು ಎಂಬುದನ್ನು ಚಿತ್ರದಲ್ಲಿ ನೋಡಿಯೇ ಅನುಭವಿಸಬೇಕು~ ಎಂದು ನಿರ್ದೇಶಕರು ವಿವರಿಸಿದರು.

ಕೃಷಿಯಲ್ಲಿ ಆಸಕ್ತಿಯಿರುವ ಸಂಗೀತ ನಿರ್ದೇಶಕ ಚಿನ್ಮಯ್ ಇದೇ ಮೊದಲ ಬಾರಿಗೆ ಸಂಗೀತದ ಕೃಷಿ ಮಾಡಿದ್ದಾರೆ. ಕಿರುತೆರೆ ಧಾರಾವಾಹಿ `ಪ್ರೀತಿಯಿಂದ~ಕ್ಕೆ ಶೀರ್ಷಿಕೆ ಗೀತೆ ಹಾಡಿದ ಮತ್ತು ಸಾಕಷ್ಟು ಭಕ್ತಿ ಗೀತೆಗಳಿಗೆ ರಾಗ ಸಂಯೋಜಿಸಿದ ಅನುಭವವುಳ್ಳ ಅವರು ನಿರ್ದೇಶಕರ ಆಶಯಕ್ಕೆ ತಕ್ಕಂತೆ `ಅಗಮ್ಯ~ ಚಿತ್ರಕ್ಕೆ ಕೆಲಸ ಮಾಡಿರುವುದಾಗಿ ಹೇಳಿದರು.

ಚಿತ್ರದ ಪ್ರಮುಖ ಪಾತ್ರಧಾರಿ ವಿಹಾನ್ ಗೌಡ ಮಾತನಾಡಿ, `ಹೊಸಬರಿಗೆ ದುಡ್ಡು ಹಾಕುವುದೇ ಕಷ್ಟವಾಗಿದೆ. ನಿರ್ಮಾಪಕರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡಿದ ತೃಪ್ತಿ ಇದೆ~ ಎಂದರು. ಮತ್ತೊಬ್ಬ ಪ್ರಮುಖ ಪಾತ್ರಧಾರಿ ಅಜಿತ್ ಚಿತ್ರದ ಬಗ್ಗೆ ಒಳ್ಳೆಯ ಮಾತನಾಡಿದರು.

ನಾಯಕಿ ದಿಶಾ ಪೂವಯ್ಯ ಅವರಿಗಿದು ಮೂರನೇ ಸಿನಿಮಾ. `ಸ್ಲಂ~, `ವೈದೇಹಿ~ ಚಿತ್ರಗಳ ನಂತರ ಥ್ರಿಲ್ಲರ್ ಅನುಭವ ಇರುವ ಚಿತ್ರದಲ್ಲಿ ನಟಿಸಿದ್ದು ಖುಷಿ ನೀಡಿತು ಎಂದರು. ಮತ್ತೊಬ್ಬ ನಾಯಕಿ ಪವಿತ್ರಾ ಗೌಡ, ಕಿರಣ್, ವಿದ್ಯಾಧರ್ ಮುಂತಾದವರು ಹಾಜರಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.