ADVERTISEMENT

ಭೂಗತ ಜಗತ್ತೂ ಕರಿಹಾವೂ...!

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2013, 19:30 IST
Last Updated 11 ಡಿಸೆಂಬರ್ 2013, 19:30 IST

‘ಬ್ಲ್ಯಾಕ್ ಕೋಬ್ರ’ ಬಿರುದು ಪಡೆದುಕೊಂಡಿದ್ದ ನಟ ದುನಿಯಾ ವಿಜಯ್ ಅದನ್ನು ಸಾಕಾರಗೊಳಿಸಲು ಕೋಬ್ರ ಅವತಾರ ಎತ್ತುತ್ತಿದ್ದಾರೆ. ಚಿತ್ರದ ಶೀರ್ಷಿಕೆಯನ್ನೇ ವಿಜಿ ಅವರಿಗೆ ಪಾತ್ರವಾಗಿಸಿದ್ದರೂ, ನಿರ್ದೇಶಕ ಎಚ್. ವಾಸು ಅವರ ಪ್ರಕಾರ ಚಿತ್ರದ ನಿಜವಾದ ಹೀರೊ ಮಾಹಿನ್.

ಮಾಹಿನ್, ಈ ಹಿಂದೆ ‘ನಂದ’ ಎಂಬ ಚಿತ್ರ ನಿರ್ಮಿಸಿದ್ದವರು. ‘ಕೋಬ್ರ’ಕ್ಕೆ ಬಂಡವಾಳ ಹೂಡುವುದರ ಜೊತೆಗೆ ಮುಖ್ಯಪಾತ್ರವೊಂದರಲ್ಲಿಯೂ ಅವರು ಕಾಣಿಸಿಕೊಳ್ಳುತ್ತಿದ್ದಾರೆ. ಕಥೆ ಮತ್ತು ಚಿತ್ರಕಥೆ ಕೂಡ ಅವರದ್ದೇ. ‘ಬಾಲ್ಯದಲ್ಲಿ ತಪ್ಪೆಸಗುವ ಮಗುವನ್ನು ಒಳ್ಳೆಯ ಮಾತುಗಳಿಂದ ತಿದ್ದದೆ ಪದೇ ಪದೇ ಅದನ್ನು ದೂಷಿಸುತ್ತಿದ್ದರೆ ಆ ಮಗು ನಕಾರಾತ್ಮಕ ಮನೋಭಾವವನ್ನು ತನ್ನೊಳಗೆ ರೂಢಿಸಿಕೊಳ್ಳುತ್ತದೆ. ಮುಂದೆ ಅದೇ ಅಪರಾಧ ಕೃತ್ಯಗಳಿಗೆ ಪ್ರೇರಣೆ ನೀಡುತ್ತದೆ’– ಇದು ನಿರ್ದೇಶಕ ವಾಸು ಚಿತ್ರದ ಕಥೆಗೆ ಬಳಸಿಕೊಂಡಿರುವ ಎಳೆ. ‘ಕೋಬ್ರ’ ಚಿತ್ರದ ಒಟ್ಟಾರೆ ಸಾರವನ್ನು ಅವರು ಬಣ್ಣಿಸಿದ್ದು ‘ಜೀವನಕ್ಕಾಗಿ ನಡೆಯುವ ಹೋರಾಟದ ಚಿತ್ರಣ’ ಎಂದು.

ಭೂಗತ ಜಗತ್ತಿನ ಕಥನವನ್ನು ಒಳಗೊಂಡಿರುವ ‘ಕೋಬ್ರ’ದ ಅದ್ದೂರಿ ಮುಹೂರ್ತ ಸಮಾರಂಭಕ್ಕೆ ಚಾಲನೆ ನೀಡಿದ್ದು ನಿವೃತ್ತ ಪೊಲೀಸ್ ಅಧಿಕಾರಿ ಸಾಂಗ್ಲಿಯಾನ.

ಚಿತ್ರದಲ್ಲಿ ದುನಿಯಾ ವಿಜಯ್ ಮತ್ತು ಮಾಹಿನ್ ಬಾಲ್ಯದ ಗೆಳೆಯರಾಗಿ, ಬಳಿಕ ವೈರಿಗಳಾಗಿ ಕಾಣಿಸಿಕೊಳ್ಳುತ್ತಾರೆ. ಆದರೆ ನಿಜಜೀವನದಲ್ಲಿ ತಮಗೆ ಹಿಂದಿನಿಂದಲೂ ಮಾಹಿನ್ ಉತ್ತಮ ಸ್ನೇಹಿತರು ಎಂದರು ವಿಜಿ.

ಹಿಂದೆ ಭೂಗತ ಜಗತ್ತಿನ ನಂಟು ಹೊಂದಿದ್ದ ಮಾಹಿನ್, ಈಗ ಅದರಿಂದ ಸಂಪೂರ್ಣ ಹೊರಗೆ ಬಂದಿರುವುದಾಗಿ ಹೇಳಿಕೊಂಡರು. ಚಿತ್ರರಂಗದಲ್ಲಿಯೇ ನನ್ನ ಬದುಕು ಕಂಡುಕೊಳ್ಳುವ ಬಯಕೆ ಇದೆ. ಬಾಲಿವುಡ್‌ನಲ್ಲಿ ಸಿನಿಮಾ ಮಾಡುವ ಆಸೆಯೂ ಇದೆ ಎಂದು ತಮ್ಮ ಗುರಿ ಹಂಚಿಕೊಂಡರು ಮಾಹಿನ್.
ಸಾಂಗ್ಲಿಯಾನ ಭೂಗತ ಲೋಕ, ಸಿನಿಮಾ ಮತ್ತು ಪೊಲೀಸ್ ಇಲಾಖೆಯ ತಮ್ಮ ಅನುಭವಗಳನ್ನು ಮೆಲುಕು ಹಾಕಿದರು.

ಧರ್ಮವಿಶ್ ಐದು ಹಾಡುಗಳಿಗೆ ಸಂಗೀತ ಹೊಸೆಯುತ್ತಿದ್ದಾರೆ. ಹೊಡೆದಾಟದ ಕಥನ ಚಿತ್ರದ ಮೂಲವಾಗಿದ್ದರೂ ಚಿತ್ರದ ತುಂಬೆಲ್ಲಾ ಮಾಧುರ್ಯದ ಗೀತೆಗಳೇ ಇರುತ್ತದೆ ಎಂದರು ಅವರು. ಚಿತ್ರದ ನಾಯಕಿಯ ಪಾತ್ರಕ್ಕೆ ಸೂಕ್ತ ನಟಿಯ ಹುಡುಕಾಟದಲ್ಲಿದ್ದಾರೆ ನಿರ್ದೇಶಕ ವಾಸು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.